ಬೇಸಿಗೆ ರಜೆ ಮುಕ್ತಾಯ; ರಾಜ್ಯದಲ್ಲಿನ ಶಾಲೆಗಳಿಗೆ ಶಿಕ್ಷಣ ಇಲಾಖೆ ನೀಡಿದ ಸೂಚನೆಗಳೇನು?
School Open: ಬೇಸಿಗೆ ರಜೆ ಮುಕ್ತಾಯವಾಗಿ ಇಂದಿನಿಂದ ಅಂದರೆ ಮೇ 29ರಿಂದ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಲಿವೆ. ಈ ಹಿನ್ನೆಲೆ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಹಾಗಾದ್ರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದಲ್ಲಿ ಮೇ 29ರಿಂದ ಅಂದರೆ ಇಂದಿನಿಂದ ಶಾಲೆಗಳು ಪುನರಾರಂಭ ಆಗುತ್ತಿರುವ ಹಿನ್ನೆಲೆ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಶಿಕ್ಷಕರು, ಮುಖ್ಯ ಶಿಕ್ಷಕರು ಮತ್ತು ಇತರೆ ಸಿಬ್ಬಂದಿ ಹಾಜರಾಗಬೇಕು. ಶಾಲಾ ಆವರಣ, ಕೊಠಡಿಗಳು, ಶೌಚಾಲಯ, ಮೇಲ್ಛಾವಣಿ ಹಾಗೂ ಬಿಸಿಯೂಟದ ಪರಿಕರಣಗಳನ್ನು ಸ್ವಚ್ಛಗೊಳಿಸಬೇಕು. ತಳಿರು ತೋರಣ, ರಂಗೋಲಿ ಬಿಡಿಸಿ ಶಾಲೆಗಳನ್ನು ಅಲಂಕರಿಸಬೇಕು. ಮೇ 30ರಂದು ಮಕ್ಕಳನ್ನು ಸ್ವಾಗತಿಸಲು ಎಲ್ಲಾ ಶಾಲೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಬಿಸಿಯೂಟಕ್ಕೆ ಅಗತ್ಯವಾದ ಪಡಿತರಗಳಾದ ಬೇಳೆ, ತರಕಾರಿ, ಮೊಟ್ಟೆ ಶೇಖರಿಸಬೇಕು. ಶುದ್ಧ ಕುಡಿಯುವ ನೀರನ್ನು ಸಂಗ್ರಹ ಮಾಡಬೇಕು. ಅಡುಗೆ ಸಿಬ್ಬಂದಿ, ಸಹಾಯಕ ಆರೋಗ್ಯ ತಪಾಸಣೆ ನಡೆಸಬೇಕು. ಮಕ್ಕಳಿಗೆ ಸಿಹಿ ಊಟದ ಜೊತೆ ಮೊದಲ ದಿನವೇ ಬೇಯಿಸಿದ ಮೊಟ್ಟೆ ವಿತರಣೆ ಮಾಡಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಇನ್ನು ಬೆಂಗಳೂರಿನ ಆಡುಗೋಡಿಯ ಪಟೇಲ್ ಮುನಿ ಚಿನ್ನಪ್ಪ ಪ್ರೌಢಶಾಲೆ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದು ಶಾಲಾ ಪ್ರಾರಂಭೋತ್ಸವ ಉದ್ಘಾಟನೆ ಮಾಡಲಿದ್ದಾರೆ. ಮತ್ತೊಂದೆಡೆ ಭಾರೀ ಮಳೆ ಹಿನ್ನೆಲೆ ಮಕ್ಕಳ ಹಿತದೃಷ್ಟಿಯಿಂದ ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ಜಿಲ್ಲಾಡಳಿತಗಳು ರಜೆ ಘೋಷಣೆ ಮಾಡಿವೆ. ಹಾಗೆಯೇ ಇಂದು ಮತ್ತು ನಾಳೆ ಕೊಡಗು ಜಿಲ್ಲೆಯಲ್ಲಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಪ್ರತಿಭಟನೆ ಹವಾಮಾನ ವೈಪರಿತ್ಯ ಸಂದರ್ಭಗಳಲ್ಲಿ ಮಕ್ಕಳ ಹಿತದೃಷ್ಟಿಯಿಂದ ಆಯಾ ಜಿಲ್ಲಾಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ. ಹಾಗೆಯೇ ಭಾರೀ ಮಳೆ ಮುಂದುವರೆದ ಪರಿಣಾಮ ಇದೀಗ ಇದೇ ನಿರ್ಧಾರವನ್ನು ಕೊಡಗು ಜಿಲ್ಲಾಡಳಿತ ತೆಗೆದುಕೊಂಡಿದೆ.
2025-26ನೇ ಸಾಲಿನ ಶಾಲಾ ಕರ್ತವ್ಯದ ದಿನಗಳು: ಮೊದಲನೇ ಅವಧಿಯು 2025 ಮೇ 29ರಿಂದ ಸೆಪ್ಟೆಂಬರ್ 19ರ ವರೆಗೆ. ಎರಡನೇ ಅವಧಿಯು 2025 ಅಕ್ಟೋಬರ್ 8ರಿಂದ 2026 ಏಪ್ರಿಲ್ 10 ರವರೆಗೆ.
ರಜಾ ದಿನಗಳು: ದಸರಾ ರಜೆಯು 2025 ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರ ವರೆಗೆ. ಬೇಸಿಗೆ ರಜೆಯು 2026 ಏಪ್ರಿಲ್ 11ರಿಂದ 2026 ಮೇ 5ರ ವರೆಗೆ ಇರಲಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಒಟ್ಟು 123 ರಜೆ ದಿನಗಳು ಇವೆ. ಉಳಿದಂತೆ 242 ದಿನ ಶಾಲೆಗಳು ತೆರೆಯಲಿವೆ. ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನ, ಪಠ್ಯೇತರ ಚಟುವಟಿಕೆ, ಪಠ್ಯ ಚಟುವಟಿಕೆ, ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ 22 ದಿನ, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನ, ಶಾಲಾ ಸ್ಥಳೀಯ ರಜೆಗಳಿಗೆ 4 ದಿನ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯಕ್ಕೆ 178 ದಿನಗಳನ್ನು ಮೀಸಲಿಡಲಾಗಿದೆ.












Click it and Unblock the Notifications