School Holidays: ಕರ್ನಾಟಕದ ಈ ಜಿಲ್ಲೆಯ ಶಾಲೆಗಳಿಗೆ ಡಿ. 26 ಮತ್ತು ಡಿ.27ಕ್ಕೆ ರಜೆ, ಕಾರಣವೇನು
ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲು ರಜೆ ಘೋಷಣೆ ಮಾಡಲಾಗಿದೆ. ಬುಧವಾರ ಕ್ರಿಸ್ಮಸ್ ರಜೆ ಇತ್ತು. ಮುಂದುವರಿದು ಇನ್ನೆರಡು ದಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಬೆಳಗಾವಿ ತಾಲ್ಲೂಕಿನ ಶೈಕ್ಷಣಿಕ ವಲಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶ ಹೊರಡಿಸಿದ್ದಾರೆ. ಬೆಳಗಾವಿ ನಗರ ಮತ್ತು ತಾಲ್ಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಈ ರಜೆ ಅನ್ವಯವಾಗಲಿದೆ.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭದ ಅಂಗವಾಗಿ ಬೆಳಗಾವಿ ನಗರದಲ್ಲಿ ಡಿಸೆಂಬರ್ 26 ಹಾಗೂ ಡಿಸೆಂಬರ್ 27ಕ್ಕೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸವಿನನಪಿಗಾಗಿ ಡಿಸೆಬರ್ 27ರಂದು ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಗಾಂಧಿ ಭಾರತ ವಿಶೇಷ ಸಮಾರಂಭ ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಎಲ್ಲಾ ಶಾಲೆಗಳಿಗೆ ಡಿಸೆಂಬರ್26 ಹಾಗೂ ಡಿಸೆಂಬರ್ 27ಕ್ಕೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಗಣ್ಯರು, ಸ್ಟಾತಂತ್ರ್ಯ ಹೋರಾಟಗಾರರು, ಸಾರ್ವಜನಿಕರು, ಮಹಿಳೆಯರು ಹಾಗೂ ವೃದ್ಧರು ಸೇರಿದಂತೆ ಲಕ್ಷಾಂತರ ಜನ ಭಾಗವಹಿಸುವ ಸಾಧ್ಯತೆ ಇದೆ. ಅಲ್ಲದೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗುವ ಸಂಭವವಿರುವ ಕಾರಣ ಶಾಲಾಮಕ್ಕಳ ಸುರಕ್ಷತಾ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿ.ಎನ್.ಎಸ್.ಎಸ್) 2023 ರ ಕಲಂ 163 ರಡಿಯಲ್ಲಿ ರಜೆ ಘೋಷಿಸಲಾಗಿದೆ.
ಬೆಳಗಾವಿ ತಾಲ್ಲೂಕು ಶೈಕ್ಷಣಿಕ ವಲಯ (ಗ್ರಾಮೀಣ & ನಗರ)ದ ಎಲ್ಲಾ ಸರಕಾರಿ ಬೆಳಗಾವಿ ತಾಲ್ಲೂಕಿನ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಹಾಗೂ ನಗರ ಯೋಜನೆ ಹಾಗೂ ಗ್ರಾಮೀಣ ಯೋಜನೆಯ ಎಲ್ಲಾ ಅಂಗನವಾಡಿಗಳಿಗೆ ಡಿಸೆಂಬರ್ 26 ಹಾಗೂ ಡಿಸೆಂಬರ್ 27ಕ್ಕೆ ರಜೆ ಘೋಷಿಸುವುದು ಅವಶ್ಯವಿರುವುದರಿಂದ ರಜೆ ಘೋಷಣೆ ಮಾಡಿರುವುದಾಗಿ ಡಿಸಿ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಈ ರಜೆ ದಿನಗಳನ್ನು ನಗರ ಯೋಜನೆ ಹಾಗೂ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ(ದ) ಅವರು ಹಾಗೂ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಳಗಾವಿ ಅವರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಲಾಗಿದೆ. ಅಲ್ಲದೆ ಈ ರಜಾ ಅವಧಿಯನ್ನು ಮುಂದಿನ ದಿನಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಈ ರಜೆಯು ರಾಜ್ಯದ ಬೆಳಗಾವಿ ತಾಲ್ಲೂಕಿಗೆ ಮಾತ್ರ ಅನ್ವಯವಾಗಲಿದೆ. ಉಳಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಎಂದಿನಂತೆ ಶಾಲೆಗಳು ಇರಲಿವೆ ಎಂದು ಹೇಳಲಾಗಿದೆ.












Click it and Unblock the Notifications