ಗಲ್ಲು ಕುಣಿಕೆಯಿಂದ ವಿಕೃತಕಾಮಿ ಉಮೇಶ್ ರೆಡ್ಡಿ ಪಾರು, ಆದರೆ ಜೈಲೇ ಗತಿ..!
ಬೆಂಗಳೂರು. ನ.4. ಮಹಿಳೆಯರ ಪಾಲಿಗೆ ರಕ್ಕಸನಂತಾಗಿದ್ದ ವಿಕೃತ ಕಾಮಿ, ಸರಣಿ ಹಂತಕ ಬಿ.ಎ.ಉಮೇಶ್ ಅಲಿಯಾಸ್ ಉಮೇಶ್ ರೆಡ್ಡಿ ನೇಣು ಕುಣಿಕೆಯಿಂದ ಪರಾಗಿದ್ದಾನೆ. ಅರ್ಥಾತ್ ಆತನಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ.
ಆದರೆ, ಸದ್ಯ ಬೆಳಗಾವಿಯ ಹಿಂಡಲಗ ಕಾರಾಗೃಹದಲ್ಲಿರುವ ಉಮೇಶ್ ರೆಡ್ಡಿ ಅಲ್ಲಿ ಏಕಾಂಗಿ ಸೆರೆವಾಸದಲ್ಲಿ ಕೊಳೆಯಬೇಕಾಗುತ್ತದೆ. ಏಕೆಂದರೆ ಉಮೇಶ್ ರೆಡ್ಡಿ ಕನಿಷ್ಠ 30 ವರ್ಷಗಳ ಸೆರೆವಾಸ ಅನುಭವಿಸಬೇಕು ಮತ್ತು ಒಂದು ವೇಳೆ ಆತನ ಪರವಾಗಿ ಶಿಕ್ಷೆ ಕಡಿತಕ್ಕೆ ಮನವಿ ಸಲ್ಲಿಸಿದರೆ ಅದನ್ನು 30 ವರ್ಷಗಳ ನಂತರ ಪರಿಗಣಿಸಬಹುದು ಎಂದು ನ್ಯಾಯಪೀಠ ಆದೇಶಿಸಿದೆ.
ರೆಡ್ಡಿಗೆ ಜೀವಾವಧಿ ಶಿಕ್ಷೆ ಅಂದರೆ ಸಾಯುವವರೆಗೂ ಜೈಲಿನಲ್ಲಿಯೇ ಕೊಳೆಯಬೇಕಾದ ಶಿಕ್ಷೆಯನ್ನು ವಿಧಿಸಲಾಗಿದೆ. ಹಾಗಾಗಿ ಉಮೇಶ್ ರೆಡ್ಡಿ ಜೀವಕ್ಕೆ ಕುತ್ತಿಲ್ಲ, ಆದರೆ ಜೀವ ಇರುವವರೆಗೂ ಬಹುತೇಕ ಕಾರಾಗೃಹದಲ್ಲಿ ಇರಬೇಕಾಗುತ್ತದೆ.

ಕರ್ನಾಟಕ ಹೈಕೋರ್ಟ್ ಗಲ್ಲುಶಿಕ್ಷೆ ಕಾಯಂಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್. ನರಸಿಂಹ ಅವರಿದ್ದ ತ್ರಿಸದಸ್ಯಪೀಠ ಶುಕ್ರವಾರ ಈ ಮಹತ್ವದ ತೀರ್ಪು ನೀಡಿದೆ.
ಏಕಾಂಗಿ ಸೆರೆವಾಸ:
ಸುಪ್ರೀಂಕೋರ್ಟ್ ಮಹತ್ವದ ಸುನಿಲ್ ಬಾತ್ರಾ ಪ್ರಕರಣದಲ್ಲಿ 10 ವರ್ಷಕ್ಕಿಂತ ಹೆಚ್ಚಿನ ಸಮಯ ಸಾಲಿಟರಿ ಕನ್‌ಫೈನ್‌ಮೆಂಟ್ ನಲ್ಲಿಡುವಂತಿಲ್ಲ ಎಂದು ಹೇಳಿದೆ. ಸದ್ಯ 2006ರಿಂದಲೂ ಉಮೇಶ್ ರೆಡ್ಡಿ ಏಕಾಂತ ವಾಸದಲ್ಲಿದ್ದಾರೆ. ಹಾಗಾಗಿ ಅದು ಸುಪ್ರೀಂ ನೀಡಿರುವ ತೀರ್ಪಿನ ಉಲ್ಲಂಘನೆಯಾಗುತ್ತದೆ. ಹಾಗಾಗಿ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಾಡು ಮಾಡಿದೆ.
ಪ್ರಕರಣದ ಹಿನ್ನೆಲೆ:
ಕರ್ನಾಟಕದಲ್ಲಿ ಸುಮಾರು 17 ಕೊಲೆ ಹಾಗೂ 20ಕ್ಕೂ ಹೆಚ್ಚು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಉಮೇಶ್ ರೆಡ್ಡಿ ವಿರುದ್ಧ ದಾಖಲಾಗಿದ್ದವು. ಆ ಪ್ರಕರಣಗಳಿಂದ ಖುಲಾಸೆಯಾಗಿದ್ದ ಉಮೇಶ್ ರೆಡ್ಡಿಗೆ, ಬೆಂಗಳೂರಿನಲ್ಲಿ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1999ರಲ್ಲಿ ವಿಧವೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣದಲ್ಲಿ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ 2006ರಲ್ಲಿ ಗಲ್ಲುಶಿಕ್ಷೆ ವಿಧಿಸಿತ್ತು.
ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ವಿ.ಜಿ. ಸಭಾಹಿತ್ ಮತ್ತು ಆರ್.ಬಿ.ನಾಯಕ್ ಅವರ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತ್ತು. ನ್ಯಾ.ಸಭಾಹಿತ್ ಅವರು ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆ ಕಾಯಂಗೊಳಿಸಿದರೆ, ನ್ಯಾ.ಆರ್.ಬಿ.ನಾಯಕ್, ಗಲ್ಲಿನಿಂದ ಕೆಲವೇ ಕ್ಷಣದಲ್ಲಿಶಿಕ್ಷೆ ಪಡೆಯುತ್ತಾನೆ. ಇದರಿಂದ ಆರೋಪಿಗೆ ತಕ್ಕ ಶಿಕ್ಷೆಯಾಗಬಾದರೆ ಸಾಯೋವರೆಗೂ ಜೈಲುವಾಸ ಮಾಡಬೇಕು ಎಂದು ೨೦೦೭ರಲ್ಲಿತೀರ್ಮಾನಿಸಿದ್ದರು. ಇದರಿಂದ ಪ್ರಕರಣವು ಮತ್ತೊಂದು ಏಕ ಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಲಾಗಿತ್ತು.
ನಂತರ ನ್ಯಾಯಮೂರ್ತಿ ಎಸ್.ಆರ್. ಬನ್ನೂರುಮಠ ಅವರ ನೇತೃತ್ವದ ನ್ಯಾಯಪೀಠ, ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆ ಕಾಯಂಗೊಳಿಸಿ 2009ರಲ್ಲಿಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಉಮೇಶ್ ರೆಡ್ಡಿ, ಸುಪ್ರೀ ಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಅದನ್ನು 2011ರಲ್ಲಿಸುಪ್ರಿಂ ಕೋರ್ಟ್ ವಜಾಗೊಳಿಸಿತ್ತು.
ಇದರಿಂದ ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆಯಿಂದ ಕ್ಷಮಾದಾನ ಕೋರಿ ಆತನ ತಾಯಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ಮತ್ತೊಂದಡೆ ತೀರ್ಪು ಮರು ಪರಿಶೀಲಿಸುವಂತೆ ಕೋರಿ ಉಮೇಶ್ ರೆಡ್ಡಿ ಸುಪ್ರೀಂ ಕೊರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ರಾಜ್ಯಪಾಲರು 2012ರಲ್ಲಿಮತ್ತು ರಾಷ್ಟ್ರಪತಿಗಳು 2013ರಲ್ಲಿ ಕ್ಷಮದಾನ ಅರ್ಜಿ ತಿರಸ್ಕರಿಸಿದ್ದರು. 2016ರಲ್ಲಿ ಸುಪ್ರಿಂ ಕೋರ್ಟ್ ಮರು ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿತ್ತು.
ಇದರಿಂದ ನೇಣು ಕುಣಿಕೆಗೆ ತಲೆ ಒಡ್ಡುವುದು ಅನಿವಾರ್ಯ ಎಂದುಕೊಳ್ಳುತ್ತಿರುವಾಗಲೇ ಅಂತಿಮ ಪ್ರಯತ್ನವಾಗಿ ಉಮೇಶ್ ರೆಡ್ಡಿ, ಕ್ಷಮಾದಾನ ಅರ್ಜಿ ವಿಲೇವಾರಿ ವಿಳಂಬ ಮಾಡಿದ್ದ ರಾಷ್ಟ್ರಪತಿಗಳ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ. ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆ ಜಾರಿ ಮಾಡುವುದಕ್ಕೆ ಹೈಕೋರ್ಟ್‌ನ ವಿಭಾಗೀಯ ಪೀಠ 2016ರ ಅ.20ರಂದು ತಡೆಯಾಜ್ಞೆ ನೀಡಿತ್ತು. ತದನಂತರ ವಿಚಾರಣೆ ನಡೆಸಿಕೊಂಡು ಬಂದಿದ್ದು, ಕಾಲ ಕಾಲಕ್ಕೆ ತಡೆಯಾಜ್ಞೆ ಆದೇಶವನ್ನು ಮುಂದುವರಿಸಿತ್ತು.
ಗಲ್ಲು ಕಾಯಂ ಮಾಡಿದ್ದ ಹೈಕೋರ್ಟ್:
ಅಂತಿಮವಾಗಿ ಹೈಕೋರ್ಟ್ 2021ರ ಸೆ.29ರಂದು ವಿಧವೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣದಲ್ಲಿ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ವಿಧಿಸಲಾಗಿರುವ ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿತ್ತು.
ಗಲ್ಲುಶಿಕ್ಷೆಯಿಂದ ಕ್ಷಮಾದಾನ ನೀಡುವಂತೆ ಕೋರಿದ್ದ ಅರ್ಜಿಯ ವಿಲೇವಾರಿಯಲ್ಲಿರಾಷ್ಟ್ರಪತಿಗಳು ಎರಡು ವರ್ಷ ಮೂರು ತಿಂಗಳ ಕಾಲ ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂದು ಕೋರಿ ಉಮೇಶ್ ರೆಡ್ಡಿ 2016ರಲ್ಲಿಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಅರವಿಂದ ಕುಮಾರ್ ಮತ್ತು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ವಿಭಾಗೀಯ ಪೀಠ ತೀರ್ಪು ಪ್ರಕಟಿಸಿತ್ತು.
ಕ್ಷಮಾದಾನ ಅರ್ಜಿ ವಿಲೇವಾರಿ ಮಾಡುವಲ್ಲಿ ರಾಷ್ಟ್ರಪತಿಗಳು ತುಂಬಾ ವಿಳಂಬ ಮಾಡಿಲ್ಲ. ವಿಲೇವಾರಿ ಮಾಡಲು ಆಗಿದೆ ಎನ್ನಲಾದ ಎರಡು ವರ್ಷ ಮೂರು ತಿಂಗಳ ವಿಳಂಬದಿಂದ ಆರೋಪಿಗೆ ಸಂವಿಧಾನದ ಪರಿಚ್ಛೇದ 21ರಡಿಯಲ್ಲಿಲಭ್ಯವಾಗಿರುವ ಹಕ್ಕು ಉಲ್ಲಂಘನೆಯಾಗಿದೆ ಎಂದು ಭಾವಿಸಲಾಗದು ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಅರ್ಜಿ ವಜಾಗೊಳಿಸಿತು. ಅಲ್ಲದೆ, ಗಲ್ಲುಶಿಕ್ಷೆಗೆ 2016ರ ಅ.20ರಂದು ನೀಡಲಾಗಿದ್ದ ತಡೆಯಾಜ್ಞೆ ತೆರವುಗೊಳಿಸಿ ತೀರ್ಪು ನೀಡಿತು.
ಉಮೇಶ್ ರೆಡ್ಡಿ ವಾದವೇನಿತ್ತು?
ರಾಷ್ಟ್ರಪತಿಗಳು ನಿಯಮದ ಪ್ರಕಾರ 90 ದಿನಗಳಲ್ಲಿಕ್ಷಮಾದಾನ ಅರ್ಜಿಯನ್ನು ಇತ್ಯರ್ಥಪಡಿಸಬೇಕು. ಆದರೆ ಉಮೇಶ್ ರೆಡ್ಡಿಯ ಕ್ಷಮದಾನ ಅರ್ಜಿಯ ವಿಲೇವಾರಿ ಮಾಡಲು ಎರಡು ವರ್ಷ ಮೂರು ತಿಂಗಳು (830) ದಿನಗಳನ್ನು ತೆಗೆದುಕೊಂಡಿದ್ದಾರೆ. ಆ ಮೂಲಕ ಅರ್ಜಿ ವಿಲೇವಾರಿ ವಿಳಂಬ ಮಾಡಿದ್ದಾರೆ. ಆರೋಪಿ ಸತತವಾಗಿ ಒಟ್ಟು 18 ವರ್ಷಗಳಿಂದ ಜೈಲುವಾಸ ಅನುಭವಿಸಿದ್ದಾನೆ. ಆ ಪೈಕಿ 10 ವರ್ಷ ಏಕಾಂತ ಸೆರೆಮನೆವಾಸ ಅನುಭವಿಸಿದ್ದಾನೆ. ಈ ಅವಧಿಯಲ್ಲಿಸಾಕಷ್ಟು ಈ ಮಾನಸಿಕ ಕ್ಷೋಭೆ ಹಾಗೂ ಖಿನ್ನತೆಗೆ ಗುರಿಯಾಗಿ ಸಾವಿಗೆ ಸಮನಾದ ಶಿಕ್ಷೆ ಪಡೆದಿದ್ದಾನೆ. ಈ ಅಂಶವನ್ನು ವೈದ್ಯರು ಹಾಗೂ ಜೈಲು ಅಧಿಕಾರಿಗಳೂ ಅದನ್ನು ದೃಢೀಕರಿಸಿದ್ದಾರೆ. ಇನ್ನೂ ಜೈಲುವಾಸ ಅವಧಿಯಲ್ಲಿನಡತೆಯು ತೃಪ್ತಿದಾಯಕವಾಗಿದೆ. ಈ ಅಂಶಗಳನ್ನು ಕ್ಷ ಮಾದಾನ ಅರ್ಜಿ ಇತ್ಯರ್ಥಪಡಿಸುವ ಸಂದರ್ಭದಲ್ಲಿರಾಷ್ಟ್ರಪತಿ ಪರಿಗಣಿಸಿಲ್ಲಮತ್ತು ಅರ್ಜಿ ವಜಾಗೊಸಿರುವುದಕ್ಕೆ ಸಕಾರಣ ನೀಡಿಲ್ಲ. ಇದು ಗಲ್ಲುಶಿಕ್ಷೆ ಜಾರಿಗೆ ಇರುವ ತಾಂತ್ರಿಕ ಅಡ್ಡಿ ಹಾಗೂ ಸಂವಿಧಾನದ ಪರಿಚ್ಛೇಧನ 21ರ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕು ಎಂಬುದು ಉಮೇಶ್ ರೆಡ್ಡಿ ಪರ ವಕೀಲರ ವಾದವಾಗಿತ್ತು.
2011ರಲ್ಲಿಬೆಳಗಾವಿ ಕೇಂದ್ರ ಕಾರಾಗೃಹದ ವೈದ್ಯಾಧಿಕಾರಿ ನೀಡಿರುವ ಪತ್ರವನ್ನು ಉಲ್ಲೇಖಿಸಿರುವ ನ್ಯಾಯಾಲಯ, ಆದರಂತೆ 2006ರ ಅಕ್ಟೋಬರ್ ನಿಂದಲೂ ಆತನನ್ನು ಏಕಾಂತ ಸೆರೆವಾಸದಲ್ಲಿಯೇ ಇಡಲಾಗಿದೆ. ಜತೆಗೆ ಆತ ಅತಿಸಾರ, ಜ್ವರ, ಶೀತ, ತಲೆನೋವು ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದಾನೆ ಎಂದು ಹೇಳಿದ್ದಾರೆ. ಜತೆಗೆ 2011ರ ನ.8ರಂದು ಬೆಳಗಾವಿ ಕೇಂದ್ರ ಕಾರಾಗೃಹದ ಎಡಿಜಿಪಿ ನೀಡಿರುವ ಪತ್ರದಲ್ಲಿ ಉಮೇಶ್ ರೆಡ್ಡಿ ಮಾನಸಿಕ ರೋಗಿಯಾಗಿದ್ದಾರೆಂದು ತಿಳಿಸಿದ್ದಾರೆ. ಈ ಎಲ್ಲಅಂಶಗಳನ್ನು ಪರಿಗಣಿಸಿ ತೀರ್ಪು ನೀಡಲಾಗಿದೆ.












Click it and Unblock the Notifications