ಗುಜರಾತ್‌ನಲ್ಲಿ ಕಾಂಗ್ರೆಸ್ ಸೋಲಿಗೆ ಆಮ್ ಆದ್ಮಿ ಪಕ್ಷ ಕಾರಣ: ಸತೀಶ್ ಜಾರಕಿಹೊಳಿ
ಬೆಳಗಾವಿ,ಡಿಸೆಂಬರ್ 9: ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷದಿಂದ ಕಾಂಗ್ರೆಸ್‌ಗೆ ಸೋಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.13ರಷ್ಟು ಕಾಂಗ್ರೆಸ್ ಮತಗಳನ್ನು ಆಮ್ ಆದ್ಮಿ ಪಾರ್ಟಿ ಪಡೆದುಕೊಂಡಿದೆ. ಗುಜರಾತ್‌ನಲ್ಲಿ ಇಷ್ಟು ಕಡಿಮೆ ಸ್ಥಾನ ಬರಬಹುದು ಎಂದು ನಾವು ನಿರೀಕ್ಷೆ ಕೂಡ ಮಾಡಿರಲಿಲ್ಲ. ಗುಜರಾತ್‌ನಲ್ಲಿ ಕಾಂಗ್ರೆಸ್ ಹಿನ್ನಡೆಗೆ ಆಮ್ ಆದ್ಮಿ ಪಕ್ಷ ಕಾರಣ, ಬಿಜೆಪಿ ಕಾರಣವಲ್ಲ, ಆಪ್ ಪಕ್ಷ ಈ ಬಾರಿ ಗುಜರಾತ್‌ನಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ಅನ್ನು ಪಡೆದಿದೆ. ಇದರಿಂದ ನಮಗೆ ನೇರವಾಗಿ ಹೊಡೆತ ಬಿದ್ದಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷ 60 ರಿಂದ 70 ಕ್ಷೇತ್ರಗಳಲ್ಲಿ ಗೆಲ್ಲಬೇಕಿತ್ತು. ಗುಜರಾತ್ ಫಲಿತಾಂಶ ಮೋದಿ ಮ್ಯಾಜಿಕ್ ಅಲ್ಲ, ಅಭಿವೃದ್ಧಿ ಮ್ಯಾಜಿಕ್ ಕೂಡ ಅಲ್ಲ ಎಂದರು.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿಗೆ ಅಲ್ಲಿನ ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ ಕಾರಣ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಂಕಾ ಗಾಂಧಿ ಮತ್ತು ಕಾಂಗ್ರೆಸ್ ಚುನಾವಣಾ ಉಸ್ತುವಾರಿಗಳು ಅಲ್ಲಿ ಚುನಾವಣಾ ತಂತ್ರಗಳನ್ನು ಹೆಣೆದು ಭರ್ಜರಿ ಪ್ರಚಾರ ನಡೆಸಿದ್ದರಿಂದ ಕಾಂಗ್ರೆಸ್ ಪಕ್ಷ 40 ಸೀಟು ಪಡೆದು ಗೆಲುವು ಸಾಧಿಸಿದೆ ಎಂದರು.

ಗಡಿ ವಿವಾದ ಮಹಾರಾಷ್ಟ್ರದ ರಾಜಕೀಯ ಗಿಮಿಕ್
ಇನ್ನೂ ಗಡಿವಿವಾದದ ಕುರಿತು ಮಾತನಾಡಿದ ಅವರು, ಬೆಳಗಾವಿ ಗಡಿಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದಲ್ಲಿರುವ ಜತ್, ಅಕ್ಕಲಕೋಟೆಯ ಜನ ಕರ್ನಾಟಕಕ್ಕೆ ಬರುವುದಗಾಗಿ ಹೇಳಿದ್ದಾರೆ. ಅವರು ಇಲ್ಲಿ ಬರೋಕೆ ಆಗಲ್ಲ. ನಾವು ಅಲ್ಲಿ ಹೋಗೊಕ್ಕೆ ಆಗಲ್ಲ. ಅದು ಕೇವಲ ಚರ್ಚೆಗೆ ಸೀಮಿತವಾಗುತ್ತದೆ. ಒಂದು ಬಾರಿ ವಿಭಜನೆಯಾದರೆ ಅಂತಿಮ ಚರ್ಚೆ. ಈ ಭಾಗದ ಜನರಿಗೆ ಕುಡಿಯುವ ನೀರು ಕೊಡದೆ ಇರುವುದು ಮಹಾರಾಷ್ಟ್ರದ ರಾಜಕೀಯ ಗಿಮಿಕ್ ಎಂದರು.
ಗೆಲ್ಲುವ ಹಾಗೆ ಇದ್ದರೆ ಮಾತ್ರ ಹಿರಿಯರಿಗೆ ಟಿಕೆಟ್ ನೀಡಲಿ
ಸ್ಟ್ರ್ಯಾಟಜಿ ಮಾಡದೆ ರಾಜ್ಯದಲ್ಲಿ ನಾವು ಚುನಾವಣೆ ಗೆಲ್ಲಲು ಆಗಲ್ಲ. ಆದರೆ, ನಮ್ಮಲ್ಲಿ ಸೋಲುತ್ತಾರೆ ಎಂದು ಗೊತ್ತಿದ್ದರೂ ಟಿಕೆಟ್ ನೀಡುತ್ತಾರೆ. ಸೀನಿಯರ್ ಅಂತಾ ಟಿಕೆಟ್ ನೀಡುತ್ತೇವೆ. ಗೆಲ್ಲುವ ಹಾಗೆ ಇದ್ದರೆ ಮಾತ್ರ ಹಿರಿಯರಿಗೆ ಟಿಕೆಟ್ ನೀಡಲಿ. ಜಾತಿ ಯುಗ ಮುಗಿದಿದೆ, ಕೆಲಸ ಮಾಡುವುದನ್ನು ಜನ ನೋಡ್ತಾರೆ. ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆ ಶಿವಕುಮಾರ್ ಒದ್ದಾಡುತ್ತಿದ್ದಾರೆ ಎಂಬ ಡಾ ಜಿ ಪರಮೇಶ್ವರ್ ಹೇಳಿಕೆ ವಿಚಾರವಾಗಿ ಮಾತನಾಡಿ, ಡಿಕೆ ಶಿವಕುಮಾರ್ ರಾತ್ರಿ-ಹಗಲು ಪಕ್ಷಕ್ಕಾಗಿ ಕೆಲಸ ಮಾಡ್ತಿದ್ದಾರೆ. ಡಿ ಕೆ ಶಿವಕುಮಾರ್ ಆ್ಯಕ್ಟಿವ್ ಇದ್ದಾರೆ, ಸಾಕಷ್ಟು ಕೆಲಸ ಮಾಡಿದ್ದಾರೆ. ಕೆಲವೊಂದು ಸಾರಿ ಲೆಕ್ಕಾಚಾರಗಳು ತಪ್ಪಾಗುತ್ತದೆ. ಹುದ್ದೆ ದೊಡ್ಡದಲ್ಲ. ಹೀಗಾಗಿ ಸಪೋರ್ಟ್ ಮಾಡಬೇಕಾಗುತ್ತದೆ. ಒಂದೊಂದು ಸಾರಿ ಏನೋ ತಪ್ಪಿರಬಹುದು. ನಾವೆಲ್ಲರೂ ನಿಮ್ಮ ಜೊತೆಗೆ ಇರುತ್ತೇವೆ ಎಂದರು.
ಬೆಳಗಾವಿ ಮತ್ತು ಇಡೀ ರಾಜ್ಯಕ್ಕೆ ಬದಲಾವಣೆ ಮಾಡಬೇಕು ಅಂತಾ ನನ್ನ ಅನಿಸಿಕೆ. ಇದರಿಂದ 20 ಸೀಟ್ ಹೆಚ್ಚು ಗೆಲ್ಲಬಹುದು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಅಂತಾ ಜನ ನೋಡ್ತಿದ್ದಾರೆ. ಸಿದ್ದರಾಮಯ್ಯ ಕಾಲದ ಸಾಕಷ್ಟು ಯೋಜನೆ ಸ್ಥಗಿತ ಮಾಡಿದ್ದು ಜನರಿಗೆ ಗೊತ್ತಿದೆ ಎಂದ ಅವರು, ಕುಟುಂಬಸ್ಥರಿಗೆ ಟಿಕೆಟ್ ನೀಡುವಂತೆ ಹಲವು ನಾಯಕರ ಅರ್ಜಿ ಹಾಕಿದ್ದು, ಕುಟುಂಬ ರಾಜಕಾರಣದಲ್ಲಿ ಗೆಲ್ಲುವ ಕೆಪ್ಯಾಸಿಟಿ ಇದ್ರೇ ಕೊಡಬಹುದು. ಅವರು ಗೆಲ್ತಾರೆ ಅಂದ್ರೇ ಒಂದೇ ಕುಟುಂಬಕ್ಕೆ ಎರಡು ಮೂರು ಟಿಕೆಟ್ ಕೊಡಬಹುದು ಎಂದರು.












Click it and Unblock the Notifications