caste census: ಜಾತಿ ಗಣತಿ ವರದಿ ಜಾರಿ ಯಾವಾಗ? ಸತೀಶ್ ಜಾರಕಿಹೊಳಿ ಮಹತ್ವದ ಅಪ್ಡೇಟ್
ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ವರದಿ ಜಾರಿ ವಿಚಾರವು ತಲೆಬಿಸಿ ನೀಡಿದೆ. ಇದನ್ನು ಜಾರಿ ಮಾಡೇ ಮಾಡ್ತೀವಿ ಎನ್ನುತ್ತಾ ಸಿದ್ದರಾಮಯ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ತಗೋತೀವಿ ಎಂದು ಸಮಯ ಮುಂದೂಡುತ್ತಲೇ ಇದೆ. ಮತ್ತೊಂದೆ ಈ ವರದಿ ಜಾರಿಗೆ ವಿರೋಧವೂ ದೊಡ್ಡಮಟ್ಟದಲ್ಲಿದೆ. ಈ ಬಗ್ಗೆ ಮಹತ್ವದ ಮಾಹಿತಿ ನೀಡಿರುವ ಕಾಂಗ್ರೆಸ್ ಸಚಿವ ಸತೀಶ್ ಜಾರಕಿಹೊಳಿ ಅವರು ವರದಿ ಜಾರಿಯಾಗುವುದು ಯಾವಾಗ ಎಂಬುದನ್ನೂ ಬಹಿರಂಗಪಡಿಸಿದ್ದಾರೆ.
ಜಾತಿ ಗಣತಿ ವರದಿಯು ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಇನ್ನೂ ಒಂದು ವರ್ಷ ಬೇಕಾಗಬಹುದು. ಈ ವರದಿಯಲ್ಲಿ ಶಿಫಾರಸು ಮಾಡಿರುವಂತೆ ಮೀಸಲಾತಿ ಪ್ರಮಾಣ ಹೆಚ್ಚಿಸುವುದು ಸದ್ಯಕ್ಕೆ ಸಾಧ್ಯವಿಲ್ಲದ ಮಾತು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. 10 ವರ್ಷಗಳ ಬಳಿಕ ಈ ವರದಿ ಸಲ್ಲಿಕೆಯಾಗಿದೆ. ವರದಿ ಸಲ್ಲಿಕೆಯಾದ ಒಂದು ವರ್ಷದ ನಂತರ ಮಂಡನೆಯಾಗಿದೆ ಎಂದಿದ್ದಾರೆ.

ಈಗ ಹಲವು ಜಾತಿಗಳು ತಮ್ಮ ಜನಸಂಖ್ಯೆಯ ಕುರಿತಾಗಿ ಆಕ್ಷೇಪ ಎತ್ತಿದ್ದಾರೆ. ಕೇವಲ ಒಂದಲ್ಲ, 800 ಜಾತಿಗಳು ಧ್ವನಿ ಎತ್ತಿವೆ. ಹಾಗಾಗಿ ಈ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದಿಂದ ಈ ಜಾತಿಗಣತಿ ವರದಿ ಜಾರಿ ಮಾಡಲು ಕನಿಷ್ಠ ಇನ್ನೂ ಒಂದು ವರ್ಷವಾದರೂ ಆಗಬಹುದು ಎಂದು ಹೇಳಿದ್ದಾರೆ.
ಕುರ್ಚಿ ಉಳಿಸಿಕೊಳ್ಳಲು ಮಹಾ ನಾಟಕ
ಜಾತಿ ಗಣತಿ ವರದಿ ಜಾರಿಗೆ ಒಂದು ವರ್ಷ ಸಮಯ ತೆಗೆದುಕೊಳ್ಳಬಹುದು. ನಾಳೆ ವರದಿ ಜಾರಿ ಆಗುತ್ತದೆ ಅಂತ ನಿರೀಕ್ಷಿಸಬೇಡಿ ಎಂದು ಸಿದ್ದರಾಮಯ್ಯ ಅವರ ಆಪ್ತ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳುವ ಮುಖೇನ ಜಾತಿಗಣತಿ ಸಿದ್ದರಾಮಯ್ಯ ಅವರ ಕುರ್ಚಿ ಉಳಿಸಲು ನಡೆಸಿದ ಮಹಾ ನಾಟಕ ಎಂಬುದು ಬಯಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಜಾತಿಗಣತಿಗೆ ತಳಪಾಯ ಹಾಕಿ, ಈಗ ಎರಡನೇ ಅವಧಿ ಮುಗಿಯುತ್ತಿದ್ದಂತೆ 10 ವರ್ಷದ ಹಿಂದಿನ ವರದಿಯನ್ನು ಮುನ್ನೆಲೆಗೆ ತಂದು ಕುರ್ಚಿ ಉಳಿಸಲು ಯತ್ನಿಸಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಸರ್ಕಾರ ಜಾತಿಗಣತಿಗೆ ಸಂಬಂಧಿಸಿದಂತೆ ನಡೆಸಿದ ಕ್ಯಾಬಿನೆಟ್ ಚರ್ಚೆ ಸಹ ಅಪೂರ್ಣವಾಗಿದೆ. ಸಂಪುಟ ಸಭೆಯಲ್ಲೇ ಒಕ್ಕಲಿಗ ಸಚಿವರು, ಲಿಂಗಾಯತ ಸಚಿವರು ಹಾಗೂ ಹಿಂದುಳಿದ ವರ್ಗದ ಸಚಿವರ ನಡುವೆಯೇ ದೊಡ್ಡ ಜಟಾಪಟಿ ನಡೆದಿದೆ. ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರೇ ಈ ವರದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ತನ್ನ ಸ್ವಾರ್ಥಕ್ಕಾಗಿ ಮಾಡಿರುವ ಜಾತಿಗಣತಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯವನ್ನು ಮುಂದಿನ ದಿನಗಳಲ್ಲಿ ನಾಶಪಡಿಸಲಿದೆ ಎಂದು ಎಚ್ಚರಿಸಿದೆ.
ಬೆಲೆ ಏರಿಕೆ, ಕುಸಿದಿರುವ ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಶೂನ್ಯತೆ ಬಗ್ಗೆ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿರುವ ಜನಾಕ್ರೋಶದ ಕಿಚ್ಚಿನಿಂದ ತಪ್ಪಿಸಿಕೊಳ್ಳಲು ಜಾತಿ ಜನಗಣತಿ ವರದಿಯನ್ನ ಮುನ್ನೆಲೆಗೆ ತಂದಿರುವ ಸಿಎಂ ಸಿದ್ದರಾಮಯ್ಯನವರು ತಮ್ಮ ಸರ್ಕಾರದ ವಿರುದ್ಧ ಎದ್ದಿರುವ ಜನಾಕ್ರೋಶದ ಜ್ವಾಲೆ ಕಡಿಮೆಯಾಗುವವರೆಗೆ ಜಾತಿ ಜನಗಣತಿ ಜಪ ಮಾಡುತ್ತಲೇ ಇರುವ ನಿರ್ಧಾರ ಮಾಡಿದಂತಿದೆ ಎಂದು ಬಿಜೆಪಿ ನಾಯಕ ಆರ್.ಅಶೋಕ್ ಕೂಡ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications