ಸತೀಶ್ ಜಾರಕಿಹೊಳಿ ನೆಕ್ಟ್ಸ್ ಸಿಎಂ? ಬೆಳಗಾವಿ ರಾಜಕೀಯದಲ್ಲಿ ಮತ್ತೆ ಧ್ರುವೀಕರಣದ ಗಾಳಿ, ಒಂದಾಗ್ತಾರಾ ಬ್ರದರ್ಸ್!
ಬೆಂಗಳೂರು, ಅಕ್ಟೋಬರ್ 24: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸದ್ಯ ಬೂದಿ ಮುಚ್ಚಿದ ಕೆಂಡಂದಂತಾಗಿದೆ. ನವೆಂಬರ್ ಕ್ರಾಂತಿ ಉಂಟಾಗಲಿದೆ ಎಂದು ರಾಜ್ಯ ಕೈ ಪಾಳಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿ ಬಗ್ಗೆ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ರಾಜಕೀಯವಾಗಿ ಕೊನೆಗಾಲದಲ್ಲಿದ್ದಾರೆ ಎಂಬ ಅರ್ಥದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಹೇಳಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರಷ್ಟೇ ಸೈದ್ದಾಂತಿಕ ಬದ್ದತೆ, ವೈಚಾರಿಕತೆ ಸತೀಶ್ ಜಾರಕಿಹೊಳಿ ಅವರಿಗೆ ಇದೆ. ಅವರಿಗೆ ನಾಯಕತ್ವವನ್ನು ನೀಡಿ, ಮುನ್ನೆಡಸುವ ಶಕ್ತಿ, ಸಾಮರ್ಥ್ಯ ಇದೆ ಎಂದು ಹೇಳಿರುವ ಹೇಳಿಕೆಯು ಸಿದ್ದರಾಮಯ್ಯಗೆ ಸತೀಶ್ ಜಾರಕಿಹೊಳಿ ರಾಜಕೀಯ ಉತ್ತರಾಧಿಕಾರಿಯಾಗಲು ಬೆಂಬಲ ನೀಡಿದಂತೆ ಆಗಿದೆ. ಹೀಗಾಗಿ ಸಿದ್ದರಾಮಯ್ಯ ನಂತರ ಅವರ ಬೆಂಬಲ ಸತೀಶ್ ಜಾರಕಿಹೊಳಿ ಅವರಿಗೆ ಸಿಗುತ್ತಿದೆಯೇ ಎಂಬ ಚರ್ಚೆ ಕೂಡ ರಾಜ್ಯ ರಾಜಕೀಯ ವಲಯದಲ್ಲಿ ಶುರುವಾಗಿದೆ.

ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಬಡಿದಾಟ ಸರ್ಕಾರ ರಚನೆಯ ಆರಂಭದಿಂದಲೂ ಶುರುವಾಗಿದೆ ದೊಡ್ಡವರು, ಹಿರಿಯರು, ಅನುಭವಸ್ಥರು ಎನ್ನುವ ಪೈಪೋಟಿ ಆರಂಭವಾಗಿದೆ. ಈ ನಡುವೆ ಸಿಎಂ ರೇಸ್‌ನಲ್ಲಿ ಸತೀಶ್ ಜಾರಕಿಹೊಳಿ ಹೆಸರು ಮುನ್ನಲೆಗೆ ಬಂದಿದ್ದು, ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎನ್ನುವ ಅಭಿಯಾನ ಶುರುವಾಗಿದೆ. ಕೈ ಪಾಳಯದಲ್ಲಿ ಸಿಎಂ ಕುರ್ಚಿಗಾಗಿ ಕಾದಾಟ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದೆ. ಪಕ್ಷದ ಹಿರಿಯರು ಹಾಗೂ ಅನುಭವಸ್ಥರ ನಡುವೆ ಪೈಪೋಟಿ ಶುರುವಾಗಿದೆ. ಅಲ್ಲದೇ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಡಿ ಕೆ ಶಿವಕುಮಾರ್ ಅವರು ಸಿಎಂ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಸಿದ್ರೆ, ಇತ್ತ ಎಂಬಿ.ಪಾಟೀಲ್, ಪರಮೇಶ್ವರ್ ಬಳಿಕ ಇದೀಗ ಸಿಎಂ ರೇಸ್ ನಲ್ಲಿ ಸತೀಶ್ ಜಾರಕಿಹೊಳಿಯವರ ಹೆಸರು ಕೂಡ ಕೇಳಿ ಬರುತ್ತಿದೆ.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಹೇಳಿಕೆಯ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡ ಇದೆ ಎನ್ನುವ ಮಾತು ಕೇಳಿ ಬಂದಿದ್ದು, ಬಹುತೇಕ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎನ್ನಲಾಗಿದೆ. ಅಲ್ಲದೇ 2028ಕ್ಕೆ ನಾನೇ ಮುಖ್ಯಮಂತ್ರಿ ಎಂದು ಬಹುದಿನಗಳಿಂದ ಸತೀಶ್ ಜಾರಕಿಹೊಳಿ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದ್ದು, ಇದೀಗ ಯತೀಂದ್ರ ಅವರ ಹೇಳಿಕೆಯಿಂದ ಬಹುತೇಕ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ಹೇಳಲಾಗಿದೆ.
ಇತ್ತ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎನ್ನುವ ಚರ್ಚೆ ನಡುವೆ ಬೆಳಗಾವಿ ರಾಜಕೀಯದಲ್ಲಿ ಮತ್ತೆ ಧ್ರುವೀಕರಣದ ಗಾಳಿ ಜೋರಾಗಿದ್ದು, ಮತ್ತೆ ಸತೀಶ್ ಜಾರಕಿಹೊಳಿ ಬ್ರದರ್ಸ್ ಒಂದಾಗಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾದರೇ ಬೆಳಗಾವಿಯ ರಾಜಕೀಯ ಚಿತ್ರಣವೇ ಬದಲಾಗಲಿದೆ.












Click it and Unblock the Notifications