Santosh Lad Profile: ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದ ಸಂತೋಷ್ ಲಾಡ್
ಕಲಘಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ನಾಯಕರಾಗಿರುವ ಸಂತೋಷ್ ಲಾಡ್ ಅವರು ಈವರೆಗೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎರಡನೇ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಚಿವ ಸ್ಥಾನ ನಿರ್ವಹಿಸಿದ ಅನುಭವ ಇರುವ ಸಂತೋಷ್ ಲಾಡ್ ಅವರ ಜೀವನ ಪರಿಚಯ ಇಲ್ಲಿದೆ.
ಕ್ರೀಡೆಯಲ್ಲಿ ಆಸಕ್ತಿ ಉಳ್ಳವರಾಗಿರುವ ಇವರು ಗಣಿಗಾರಿಕೆಯ ಉದ್ಯಮದಲ್ಲಿ ತೊಡಗಿದ್ದವರು. ಇವರು 2013ರ ಇದೇ ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ ಮಾಹಿತಿ ಮತ್ತು ಮೂಲಸೌಕರ್ಯ ಖಾತೆ ಸಚಿವರಾಗಿ ಜವಾಬ್ದಾರಿ ನಿಭಾಯಿಸಿದ್ದರು. ಅವರು ಸತತ ಮೂರನೇ ಭಾರಿಗೆ 2023ನೇ ಚುನಾವಣೆಯಲ್ಲಿ 85,761 ಪಡೆದು ಗೆದ್ದು ಬೀಗಿದ್ದಾರೆ.

ಸಂತೋಷ್ ಲಾಡ್ ಆರಂಭಿಕ ಜೀವನ
ಬಳ್ಳಾರಿಯ ಜಿಲ್ಲೆಯ ಸೊಂಡೂರು ತಾಲೂಕಿನ ಶಿವಾಜಿ ಲಾಡ್ ಮತ್ತು ಶೈಲಜಾ ಲಾಡ್ ದಂಪತಿಯ ಪುತ್ರನಾಗಿ 1975ರ ಫೆಬ್ರುವರಿ 27ರಂದು ಜನಿಸಿದರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು ಸಂಡೂರ್ ಎಜುಕೇಶನ್ ಸೊಸೈಟಿಯ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು.
ಬಳ್ಳಾರಿಯಲ್ಲಿ ಲಾಡ್ ಕುಟುಂಬವು 1950ರಿಂದಲೂ ಗಣಿಗಾರಿಕೆಯಲ್ಲಿ ತೊಡಗಿದ್ದರಿಂದ ಆರ್ಥಿಕವಾಗಿ ಉತ್ತಮವಾಗಿದ್ದರು. ಸಂತೋಷ್ ಕ್ರೀಡಾ ಸಮುದಾಯದ ಸಕ್ರಿಯ ಸದಸ್ಯರಾಗಿದ್ದರಲ್ಲದೇ, ಸ್ಥಳೀಯ ಪಂದ್ಯಾವಳಿಗಳು ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಸಕ್ರಿಯವಾಗಿದ್ದರು.
ಸಂತೋಷ್ ಲಾಡ್ ವೈಯಕ್ತಿಕ ಜೀವನ
ಸಂತೋಷ್ ಲಾಡ್ ಅವರು ತಮ್ಮ 16ನೇ ವಯಸ್ಸಿನಲ್ಲಿ ತಂದೆ ಶಿವಾಜಿ ಲಾಡ್ ಅವರನ್ನು ಕಳೆದುಕೊಂಡರು. ನಂತರ ಕೀರ್ತಿ ಲಾಡ್ ಅವರನ್ನು ವಿವಾಹಗಿರುವ ಸಂತೋಷ್ ಲಾಡ್ ಅವರಿಗೆ ಓರ್ವ ಪುತ್ರನಿದ್ದಾರೆ. ಗಣಿಗಾರಿಕೆ ಜೊತೆಗೆ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು ಸಂಡೂರಿನಿಂದಲೇ ರಾಜಕೀಯವನ್ನು ಪ್ರಾರಂಭಿಸಿದರು. ಸಾಮಾಜಿಕ ಕಳಕಳಿ, ಕ್ಷೇತ್ರ ಜನರ ಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿದವರಾಗಿದ್ದಾರೆ.

ಸಂತೋಷ್ ಲಾಡ್ ರಾಜ್ಯಕೀಯ ಜೀವನ
ಸಂತೋಷ್ ಲಾಡ್ ಮೊದಲು ತಾಲೂಕು ಪಂಚಾಯಿತಿ ಮಟ್ಟದ ಚುನಾವಣೆಯಲ್ಲಿ ಸ್ಪರ್ಧಿಸಿದ ಅವರಿಗೆ ಮೊದಲು ಹಿನ್ನಡೆ ಆಯಿತು. ನಂತರ ಜಾತ್ಯಾತೀತ ಜನತಾದಳ (JDS) ಮೂಲಕ ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದರು. ಸಂಡೂರು ಭಾಗದಲ್ಲಿ ಚುನಾವಣೆಯಲ್ಲಿ ಗೆದ್ದ ಅತಿ ಕಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಆಗ ಅವರಿಗೆ ಕೇವಲ 29 ವರ್ಷ ವಯಸ್ಸಾಗಿತ್ತು. ಜೆಡಿಎಸ್ ಸರ್ಕಾರ ರಚನೆಗೆ ತಮ್ಮದೇ ಆದ ಕೊಡುಗೆ ನೀಡಿದರು.
ನಂತರ ಕಾಂಗ್ರೆಸ್ ಸೇರಿದ ಸಂತೋಷ್ ಲಾಡ್ 2008 ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ 49,733 ಮತಗಳನ್ನು ಪಡೆದು ಗೆದ್ದರು. ನಂತರ 2013ರಲ್ಲಿ ಸಹ ಅದೇ ಕ್ಷೇತ್ರದಲ್ಲಿ ಕೆಜೆಪಿ ವಿರುದ್ಧ 76802 ಬಹುಮತ ಪಡೆದು ವಿಜಯ ಪತಾಕೆ ಹಾರಿಸಿದರು.
2018ರಲ್ಲಿ ಅವರ ಅದೃಷ್ಟ ಕೈ ಕೊಟ್ಟಿದ್ದು ಬಿಜೆಪಿ ವಿರುದ್ಧ ಸೋತರು. ಇದೀಗ 2023ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜ್ಯ ಕಾಂಗ್ರೆಸ್ ಪರಿಪೂರ್ಣ ಬಹುಮತಕ್ಕೆ ಕೊಡುಗೆ ನೀಡಿದ್ದಾರೆ. ಇದುವರೆಗೆ ಅವರು ಒಟ್ಟು ನಾಲ್ಕು ಬಾರಿ ಕಾಂಗ್ರೆಸ್‌ನಿಂದ ಚುನಾವಣೆ ಎದುರಿಸಿದ್ದು, ಅದರಲ್ಲಿ ಮೂರು ಭಾರಿ ಹ್ಯಾಟ್ರಿಕ್ ಬಾರಿಸಿದ್ದಾರೆ.
2013ರಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿಯೇ ಸಿಎಂ ಆಗಿರುವ ಸಿದ್ದರಾಮಯ್ಯನವರು, ಈ ಬಾರಿ 2023ರಲ್ಲಿ ಸಹ ವರುಣಾದಲ್ಲಿ ಸ್ಪರ್ಧಿಸಿ ಎರಡನೇ ಬಾರಿ ಸಿಎಂ ಆಗಿದ್ದಾರೆ. ವಿಪರ್ಯಾಸವೆಂದರೆ ಸಂತೋಷ್ ಲಾಡ್ ಸಹ 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವರಾಗುವ ಭಾಗ್ಯ ಸಿಕ್ಕಿತ್ತು. ಇದೀಗ ಮತ್ತೆ ಸಿಎಂ ಸಿದ್ದರಾಮಯ್ಯನವರ ಸಂಪುಟದಿಂದಲೇ ಮತ್ತೆ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವುದು ವಿಶೇಷ ಎನ್ನಲಾಗಿದೆ.












Click it and Unblock the Notifications