ಬ್ರಾಹ್ಮಣ ಅಭಿವೃದ್ಧಿ ಮಂಡಳಿ; ಸಾಂದೀಪನಿ ಶಿಷ್ಯ ವೇತನ ಮಾಹಿತಿ
ಬೆಂಗಳೂರು, ಫೆಬ್ರವರಿ 22; ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ 'ಸಾಂದೀಪನಿ ಶಿಷ್ಯ ವೇತನ' ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಅವಧಿ ವಿಸ್ತರಣೆ ಮಾಡಲಾಗಿದೆ. ಯೋಜನೆಯ ಮಾಹಿತಿ ಅರ್ಜಿ ಸಲ್ಲಿಕೆಯ ಮಾಹಿತಿ ಇಲ್ಲಿದೆ.
ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ 'ಸಾಂದೀಪನಿ ಶಿಷ್ಯ ವೇತನ' ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವನ್ನು ಸಕಾಲದಲ್ಲಿ ನೀಡುವ ಮೂಲಭೂತ ಉದ್ದೇಶವನ್ನು ಹೊಂದಿದೆ.

ಮಂಡಳಿಗೆ ಮಂಜೂರಾದ 'ಸಾಂದೀಪನಿ ಶಿಷ್ಯ ವೇತನ' ಯೋಜನೆಯನ್ನು ಮಾನ್ಯ ಅಧ್ಯಕ್ಷರ ಸೂಚನೆ ಮೇರೆಗೆ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜಾರಿಗೊಳಿಸಲಾಗಿದೆ.
ಎಷ್ಟು ಶಿಷ್ಯ ವೇತನ: 'ಸಾಂದೀಪನಿ ಶಿಷ್ಯ ವೇತನ' ಯೋಜನೆಯಡಿ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅಂದರೆ ಪಥಮ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ರೂ. 15,000ಗಳನ್ನು ನೀಡಲಾಗುತ್ತದೆ.
'ಸಾಂದೀಪನಿ ಶಿಷ್ಯ ವೇತನ' ಯೋಜನೆಯ ಮುಂದುವರೆದ ಭಾಗವಾಗಿ UG/ PG ವಿವಿಧ ಕೋರ್ಸ್ ಗಳಿಗೆ (CET ಅಥವಾ PG entrance exams) ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಅರ್ಹತೆ ಪಡೆದು ದಾಖಲಾದ ವಿದ್ಯಾರ್ಥಿಗಳು ದಾಖಲಾತಿಗೆ ಪಾವತಿಸಿರುವ ಶುಲ್ಕದ ಮೊತ್ತದ 2/3 ಭಾಗವನ್ನು ಗರಿಷ್ಠ ಮೊತ್ತ ರೂ.1 ಲಕ್ಷಗಳಿಗೆ ಮಿತಿಗೊಳಿಸಿ ಪಾವತಿ ಮಾಡಲಾಗುವುದು.
ಸದರಿ ಯೋಜನೆಯಡಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 01/03/2024 ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ಅರ್ಜಿದಾರರು ಕೂಡಲೇ ಮಂಡಳಿಯ ವೆಬ್ ಸೈಟ್ State Scholarship Portalನ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಆಸಕ್ತರು ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 080 29605888ಗೆ. ಇ-ಮೇಲ್ ವಿಳಾಸ [email protected]/ [email protected]
ಕೆಲವು ದಿನಗಳ ಹಿಂದೆ ಕಂದಾಯ ಸಚಿವ ಕೃಷ್ಣ ಬೈರೇಗೌಡ 'ಸಾಂದೀಪನಿ ಶಿಷ್ಯ ವೇತನ' ಮತ್ತು 'ಸ್ವಾವಲಂಬಿ' ಯೋಜನೆಯಡಿ ಡಿಬಿಟಿ ಪ್ರಕ್ರಿಯೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, "ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳು ಸ್ವಯಂ ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳಿಗಾಗಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದಲ್ಲಿ ಸಾಲದ ಪೈಕಿ ಶೇ 20ರಷ್ಟು ಹಣವನ್ನು ಸರ್ಕಾರ ಸ್ವಾವಲಂಬಿ ಯೋಜನೆ ಅಡಿಯಲ್ಲಿ ಸಹಾಯಧನವಾಗಿ ನೀಡಲಿದೆ" ಎಂದು ಹೇಳಿದ್ದರು.
'ಸ್ವಾವಲಂಬಿ' ಯೋಜನೆಯಡಿ ಗರಿಷ್ಠ 5 ಲಕ್ಷದ ತನಕ ಸಹಾಯಧನ ನೀಡಲಾಗುತ್ತದೆ. ವ್ಯಾಪಾರ, ಅಂಗಡಿ, ಹೈನುಗಾರಿಕೆ, ಹೊಲಿಗೆ ವೃತ್ತಿ, ಆಟಿಕೆ ತಯಾರಿಕೆ, ಮೊಬೈಲ್ ಅಂಗಡಿ, ಗುಡಿ ಕೈಗಾರಿಕೆ ಸೇರಿದಂತೆ ಹೆಚ್ಚಿನ ಘಟಕ ವೆಚ್ಚ ಇರುವ ಲಾಭದಾಯಕ ಉದ್ಯಮಗಳನ್ನು ಸ್ಥಾಪಿಸಲು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಪಡೆದವರು ಯೋಜನೆಗೆ ಅರ್ಹರು.












Click it and Unblock the Notifications