ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ಕುಮಾರ್‌ಗೆ ಟಿಕೆಟ್ ಪಕ್ಕಾ: ಬಿಜೆಪಿ ಕಥೆ ಏನು?
ನಟ ಶಿವಣ್ಣ ಅವರ ಕುಟುಂಬದಿಂದ ಮತ್ತೊಮ್ಮೆ ಚುನಾವಣೆಗೆ ತಯಾರಿ ಆರಂಭವಾಗಿದ್ದು, ಇದೀಗ ಶಿವರಾಜ್‌ಕುಮಾರ್ ಅವರ ಪತ್ನಿ, ಗೀತಾ ಶಿವರಾಜ್‌ಕುಮಾರ್‌ಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕನ್ಫರ್ಮ್ ಆಗಿದೆ. ಹೀಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಗೀತಾ ಶಿವರಾಜ್‌ಕುಮಾರ್ ಅವರು ಚುನಾವಣಾ ಅಖಾಡ ಪ್ರವೇಶ ಮಾಡುತ್ತಿದ್ದು, ಈ ಮೂಲಕ ಮತ್ತೊಮ್ಮೆ ಶಿವಮೊಗ್ಗಕ್ಕೆ ಸಿನಿಮಾ ತಾರೆಯರ ರಂಗು ಸಿಗುವುದು ಗ್ಯಾರಂಟಿ ಆಗಿದೆ.
ನಟ ಶಿವರಾಜ್‌ಕುಮಾರ್ ಕುಟುಂಬ ರಾಜಕೀಯದಿಂದ ದೂರವೇ ಉಳಿದಿತ್ತು, ಆದ್ರೆ ಅವರು ಮದುವೆ ಆಗಿದ್ದು ರಾಜಕೀಯ ಕುಟುಂಬದಿಂದ. ದಿವಂಗತ ಬಂಗಾರಪ್ಪ ಅವರ ಕುಟುಂಬದ ಗೀತಾ ಶಿವರಾಜ್‌ಕುಮಾರ್ ಅವರನ್ನು ಶಿವಣ್ಣ ವಿವಾಹವಾದ ನಂತರ ರಾಜಕೀಯದ ನಂಟು ಬೆಳೆಯಿತು. ಈ ಮೂಲಕ ಸಕ್ರಿಯ ರಾಜಕೀಯ ಸೇರದೇ ಇದ್ದರೂ, ನಟ ಶಿವರಾಜ್‌ಕುಮಾರ್ ಅವರಿಗೆ ಪರೋಕ್ಷವಾಗಿ ಕರ್ನಾಟಕದ ರಾಜಕೀಯ ನಂಟು ಬೆಸೆದಿತ್ತು. ಅದರಲ್ಲೂ, ಗೀತಾ ಶಿವರಾಜ್‌ಕುಮಾರ್ ಅವರು ಲೋಕಸಭೆಗೆ ಸ್ಪರ್ಧೆ ಮಾಡಿದ ನಂತರ ಶಿವಣ್ಣ ಕೂಡ ಪ್ರಚಾರ ಮಾಡಬೇಕಾಗಿ ಬಂತು. ಈ ಬಾರಿ ಕೂಡ ಅವರ ಪತ್ನಿಗೆ ಟಿಕೆಟ್ ಕೊಟ್ಟಿದೆ ಕಾಂಗ್ರೆಸ್.

7 ಕ್ಷೇತ್ರಗಳಿಗೆ ಅಭ್ಯರ್ಥಿ ಫೈನಲ್
ಅಷ್ಟಕ್ಕೂ ಕಾಂಗ್ರೆಸ್ ರಾಜ್ಯದ 7 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಣೆ ಮಾಡಿದೆ. ಮೊದಲನೇ ಪಟ್ಟಿಯಲ್ಲಿ ಒಟ್ಟು 39 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಘೋಷಿಸಿದ್ದು, ಇದರಲ್ಲಿ ಕರ್ನಾಟಕದ 7 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಕೂಡ ಇದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಿಸುವ ಮೊದಲೇ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನ ಘೋಷಿಸಿದ್ದು, ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಈ ಪೈಕಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೂ ಅಭ್ಯರ್ಥಿಯ ಹೆಸರು ಫೈನಲ್ ಆಗಿದೆ. ನಟ ಶಿವರಾಜ್‌ಕುಮಾರ್ ಅವರ ಪತ್ನಿ ಹಾಗೂ ದಿವಂಗತ ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರಿ ಗೀತಾ ಅವರಿಗೆ ಟಿಕೆಟ್ ನೀಡಿ, ಬಿಜೆಪಿಗೆ ಠಕ್ಕರ್ ಕೊಟ್ಟಿದೆ.
ಶಿವಮೊಗ್ಗದ ಗೆಲುವು ಯಾರಿಗೆ?
2019ರ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಂಡಿದ್ದ ಕಾಂಗ್ರೆಸ್, ರಾಜ್ಯದಲ್ಲಿ 1 ಕ್ಷೇತ್ರದಲ್ಲಿ ಮಾತ್ರ ಗೆಲುವು ಕಂಡಿತ್ತು. ಆದರೆ ಈ ಬಾರಿ, 20-25 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಇದೇ ಕಾರಣಕ್ಕೆ ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡಿದ್ದು, ಶಿವಮೊಗ್ಗ ಗೆಲುವಿಗಾಗಿ ಕಾಂಗ್ರೆಸ್ ನಾಯಕರು ಪಣತೊಟ್ಟಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಇದೀಗ ಶಿವಮೊಗ್ಗದಲ್ಲಿ ಬಿಜೆಪಿ ಪಕ್ಷದಿಂದ ಗೆಲ್ಲುವ ಮೂಲಕ ಹಾಲಿ ಸಂಸದರಾಗಿದ್ದಾರೆ. ಹೀಗಾಗಿ ಅವರಿಗೆ ಮತ್ತೆ ಬಿಜೆಪಿಯ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಹೀಗಿದ್ದಾಗ ನಟ ಶಿವಣ್ಣ ಅವರ ಪತ್ನಿಗೆ, ಮತ್ತೊಮ್ಮೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ನಾಯಕರು ಚೆಕ್‌ಮೇಟ್ ಹೇಳಿದ್ದಾರೆ.
ಹೇಗಿದೆ ಕರ್ನಾಟಕದ ಅಖಾಡ?
ಬಿಜೆಪಿ 2014ರಲ್ಲಿ ಮೊದಲನೆಯ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು ಅಲ್ಲಿಂದ ಈವರೆಗೆ ಒಟ್ಟಾರೆ 10 ವರ್ಷ ಆಡಳಿತದಲ್ಲಿ ಮತ್ತಷ್ಟು ಪ್ರಬಲವಾಗಿ ಬೆಳೆದಿದೆ. ಅದರಲ್ಲೂ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ, ಬಿಜೆಪಿ ಭರ್ಜರಿ ಗೆಲುವುನ್ನ ದಾಖಲಿಸುತ್ತದೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಭರ್ಜರಿ ದಿಗ್ವಿಜಯ ಸಿಗುವುದು ಗ್ಯಾರಂಟಿ, ಅಂತಾ ಹೇಳಲಾಗುತ್ತಿದೆ. ಸಮೀಕ್ಷೆಗಳು ಈ ರೀತಿಯಾಗಿ ಭವಿಷ್ಯ ನುಡಿಯುತ್ತಿವೆ.

ಹೀಗಾಗಿ ಬಿಜೆಪಿಯ ಕೇಂದ್ರದ ನಾಯಕರಿಗೆ ಕೂಡ ಮತ್ತಷ್ಟು ಹುಮ್ಮಸ್ಸು ಬಂದಂತಾಗಿದೆ. ಆದರೆ ಇದನ್ನೆಲ್ಲಾ, ಇದೀಗ ಬುಡಮೇಲು ಮಾಡಬೇಕು ಎಂಬುದು ಕಾಂಗ್ರೆಸ್ ನಾಯಕರ ರಣತಂತ್ರವಾಗಿದೆ. ಹೀಗಾಗಿಯೆ ಇದೀಗ ಅಳೆದು & ತೂಗಿ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರು 7 ಅಭ್ಯರ್ಥಿಗಳಿಗೆ ಟಿಕೆಟ್ ಫೈನಲ್ ಮಾಡಿದ್ದಾರೆ.
ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು?
ಲೋಕಸಭೆ ಚುನಾವಣೆ ಅಖಾಡ ರಂಗು ರಂಗಾಗಿದೆ ಜಯ ಒಂದೇ ಮಂತ್ರ ಅಂತ, ಈಗ ಕಾಂಗ್ರೆಸ್ & ಬಿಜೆಪಿ ನಾಯಕರು ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲೂ, ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷ ಕೈಜೋಡಿಸಿ ಎನ್‌ಡಿಎ ಒಕ್ಕೂಟಕ್ಕೆ ಸೇರಿದೆ. ಈ ಕಾರಣ ವಾತಾವರಣ ಬಹುತೇಕ ಬದಲಾಗಿ ಹೋಗಿದೆ. ಇದೀಗ ಹೊರಬಿದ್ದಿರುವ ಕೆಲವು ಸಮೀಕ್ಷೆಗಳ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಕರ್ನಾಟಕದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ 22-28 ಸ್ಥಾನಗಳ ಗೆಲ್ಲಬಹುದು ಎನ್ನಲಾಗುತ್ತಿದೆ. ಹೀಗಾಗಿ ಚುನಾವಣೆಗೆ ಮೊದಲೇ ಕುತೂಹಲ ಡಬಲ್ ಆಗಿದ್ದು, ಕಾಂಗ್ರೆಸ್ ರಾಜ್ಯ ನಾಯಕರು ಕೂಡ ಹೊಸ ತಂತ್ರದ ಮೊರೆ ಹೋದಂತೆ ಕಾಣುತ್ತಿದೆ.












Click it and Unblock the Notifications