ಶ್ರೀಗಂಧ ಬೆಳೆಯುವ ರೈತರ ಕನಸು ನನಸು: ರಾಜ್ಯ ಶ್ರೀಗಂಧದ ನೀತಿಗೆ ಅನುಮೋದನೆ
ಬೆಂಗಳೂರು, ನವೆಂಬರ್, 18: ಶ್ರೀಗಂಧ ನೀತಿಗೆ ಗುರುವಾರ ಅನುಮೋದನೆ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರ, ತಮ್ಮ ಜಮೀನುಗಳಲ್ಲಿ ಶ್ರೀಗಂಧ ಬೆಳೆಯಬೇಕು ಎಂಬ ಕನಸು ಕಂಡಿದ್ದ, ಇದಕ್ಕಾಗಿ ಪಟ್ಟು ಹಿಡಿದಿದ್ದ ಎಷ್ಟೋ ರೈತರಿಗೆ ಖುಷಿ ನೀಡಿದೆ.
ರೈತರಿಗೆ ಮತ್ತು ರಾಜ್ಯದ ಬೊಕ್ಕಸಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರವು ರಾಜ್ಯದಲ್ಲಿ ಶ್ರೀಗಂಧದ ಮರವನ್ನು ಬೆಳೆಯಲು ಮತ್ತು ಮಾರಾಟ ಮಾಡಲು ಇರುವ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಿದೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಕರ್ನಾಟಕ ರಾಜ್ಯ ಶ್ರೀಗಂಧ ನೀತಿ 2022ಕ್ಕೆ ಅನುಮೋದನೆ ನೀಡಿದ್ದು, ಸರ್ಕಾರವು ಶೀಘ್ರದಲ್ಲೇ ಜಾರಿಗೆ ತರಲು ಉದ್ದೇಶಿಸಿದೆ.
ಈ ನೀತಿಯು ಶ್ರೀಗಂಧ ಬೆಳೆಯಲು ಇರುವ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುತ್ತದೆ. ಜೊತೆಗೆ ಜನರು ಖಾಸಗಿ ಭೂಮಿಯಲ್ಲಿ ಶ್ರೀಗಂಧವನ್ನು ಬೆಳೆಯಲು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ.
ಪ್ರಸ್ತುತ, ಶ್ರೀಗಂಧವನ್ನು ಬೆಳೆಯಲು, ರೈತರು ವ್ಯಾಪ್ತಿಯ ಅರಣ್ಯ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬೇಕು. ರೈತರು ತಾವು ನೆಡಲು ಉದ್ದೇಶಿಸಿರುವ ಸಸಿಗಳ ಸಂಖ್ಯೆಯ ವಿವರಗಳನ್ನು ನೀಡಬೇಕು ಮತ್ತು ಮರಗಳನ್ನು ಕಡಿಯಲು ಇಲಾಖೆಯಿಂದ ಅನುಮತಿ ಪಡೆಯಬೇಕು. ಅರಣ್ಯ ಇಲಾಖೆ ನಡೆಸುವ ಡಿಪೋಗಳಲ್ಲಿ ಮಾತ್ರ ಶ್ರೀಗಂಧದ ಮರದ ದಿಮ್ಮಿಗಳನ್ನು ಮಾರಾಟ ಮಾಡಲು ರೈತರಿಗೆ ಅವಕಾಶವಿದೆ.
ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಕೆ. ಸುಧಾಕರ್, ಶ್ರೀಗಂಧಕ್ಕೆ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಶ್ರೀಗಂಧದ ಎಣ್ಣೆಯನ್ನು ಬಳಸಿ ಸಾಬೂನು ಮತ್ತು ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಕೂಡ ಆಸ್ಟ್ರೇಲಿಯಾದಿಂದ ಮರವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

"ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಹೆಚ್ಚಿನ ರೈತರನ್ನು ಶ್ರೀಗಂಧವನ್ನು ಬೆಳೆಯಲು ಪ್ರೋತ್ಸಾಹಿಸಲು ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ. ಇದರಿಂದ ರೈತರಿಗೆ ಆರ್ಥಿಕವಾಗಿಯೂ ನೆರವಾಗಲಿದೆ' ಎಂದು ಸುಧಾಕರ್ ಹೇಳಿದ್ದಾರೆ.
ಹೊಸ ನೀತಿಯ ಪ್ರಕಾರ ಶ್ರೀಗಂಧದ ಮರಗಳು ಕಳ್ಳತನವಾಗುವುದನ್ನು ತಡೆಯಲು ಅರಣ್ಯ ಇಲಾಖೆ ರಕ್ಷಣೆ ನೀಡಲಿದೆ. ಮರಗಳಲ್ಲಿ ಮೈಕ್ರೊಚಿಪ್ ಅಳವಡಿಸಿ ಕಳ್ಳತನವಾದರೂ ಪತ್ತೆ ಹಚ್ಚಲು ನೆರವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಮನಗರ ಪಟ್ಟಣದ ಸಮೀಪದ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ಆರ್‌ಜಿಯುಎಚ್‌ಎಸ್) 600 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಕ್ಯಾಂಪಸ್ ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.












Click it and Unblock the Notifications