ಕನ್ನಡ ಬಳಸಿದ್ರೆ ಸೈಬರ್ ವಂಚಕರಿಂದ ಸೇಫ್: ಪೊಲೀಸ್ ಅಧಿಕಾರಿ ಸಲಹೆ ವೈರಲ್
ಸೈಬರ್ ಕಳ್ಳರಿಂದ ತಪ್ಪಿಸಿಕೊಳ್ಳುವ ಅತ್ಯಂತ ಸುಲಭ ಮಾರ್ಗವೊಂದನ್ನು ಪೊಲೀಸ್ಅಧಿಕಾರಿಯೊಬ್ಬರು ನೀಡಿದ್ದು, ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ. ಸೈಬರ್ ವಂಚಕರ ಕ್ರಿಮಿನಲ್ ಬುದ್ಧಿ, ವಂಚನೆಗೆ ಇತ್ತೀಚಿನ ದಿನಗಳಲ್ಲಿ ಅವಿದ್ಯಾವಂತರು ಬಿಡಿ, ವಿದ್ಯಾವಂತರೇ ಸಿಲುಕುತ್ತಿದ್ದಾರೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೈಬರ್ ವಂಚಕರ ಹಾವಳಿ ಮಿತಿ ಮೀರುತ್ತಿದೆ.
ಸೈಬರ್ ಪೊಲೀಸರು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ, ಸೈಬರ್ ಕಳ್ಳರು ಹೊಸ ಹೊಸ ಮಾರ್ಗದಲ್ಲಿ ಜನರನ್ನು ಯಾಮಾರಿಸುವ ವಿದ್ಯೆಗಳನ್ನು ಕಲಿಯುತ್ತಿದ್ದಾರೆ. ಸೈಬರ್ ಕಳ್ಳರು ಅನುಸರಿಸುವ ಮಾರ್ಗಗಳಿಂದ ಯಾವ ರೀತಿ ತಪ್ಪಿಸಿಕೊಳ್ಳಬೇಕು ಎನ್ನುವುದನ್ನು ಪೊಲೀಸ್ ಅಧಿಕಾರಿಯೊಬ್ಬರು ಸರಳವಾಗಿ ಹೇಳಿದ್ದಾರೆ.

ಸೈಬರ್ ಕ್ರೈಮ್ ನಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ
ಸೈಬರ್ ಕ್ರೈಮ್ ಕೃತ್ಯಗಳಿಂದ ತಪ್ಪಿಸಿಕೊಳ್ಳಲು ನೀವು ಕನ್ನಡದಲ್ಲಿ ಮಾತನಾಡಿ ಸಾಕು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೌದು ಸೈಬರ್ ವಂಚನೆ, ಮೋಸ ಜಾಲದಲ್ಲಿ ತೊಡಗಿಸಿಕೊಂಡಿರುವವರಲ್ಲಿ ಉತ್ತರ ಭಾರತೀಯರೇ ಹೆಚ್ಚು.
ಉತ್ತರ ಭಾರತದಿಂದ ಕರ್ನಾಟಕ ಹಾಗೂ ದಕ್ಷಿಣ ಭಾರತದ ರಾಜ್ಯದ ಜನರಿಗೆ ಕರೆ ಮಾಡುವ ಸೈಬರ್ ಖದೀಮರು ಸಾಮಾನ್ಯವಾಗಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ. ಬೆಂಗಳೂರಿನಲ್ಲಿ ಹಲವರು ದ್ವಿಭಾಷೆಗಿಂತ ಹೆಚ್ಚು ಭಾಷೆಯನ್ನು ಮಾತನಾಡುತ್ತಾರೆ. ಬಹುತೇಕರಿಗೆ ಸಾಮಾನ್ಯ ಇಂಗ್ಲಿಷ್ ಅಥವಾ ಹಿಂದಿ ಮಾತನಾಡಲು ಅಲ್ಪಸ್ವಲ್ಪ ಬರುತ್ತದೆ.

ಇದು ಸೈಬರ್ ಕಳ್ಳರಿಗೆ ವರದಾನವಾಗಿ ಪರಿಣಮಿಸುತ್ತಿದೆ. ಉತ್ತರ ಭಾರತದ ಭಾಗದಿಂದ ಕರೆ ಮಾಡುವ ಈ ಸೈಬರ್ ಕಳ್ಳರಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯೇ ಪ್ರಧಾನವಾಗಿರುತ್ತವೆ. ಈ ಭಾಷೆಗಳಲ್ಲಿ ಮಾತನಾಡುವ ಕಳ್ಳರು ಜನರನ್ನು ಸುಲಭವಾಗಿ ಯಾಮಾರಿಸುತ್ತಾರೆ.
ಸೈಬರ್ ಕಳ್ಳರಿಂದ ತಪ್ಪಿಸಿಕೊಳ್ಳಲು ನೀವು ಕನ್ನಡದಲ್ಲಿ ಮಾತನಾಡಿದರೆ ಸಾಕು ಅವರು ಕಾಲ್ ಕಟ್ ಮಾಡಿ ಹೋಗುತ್ತಾರೆ.
ನೀವು ಸೈಬರ್ ಖದೀಮರಿಂದ ಬಚಾವ್ ಆಗಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಪೊಲೀಸ್ ಅಧಿಕಾರಿ ನೀಡಿರುವ ಈ ಸಲಹೆಯನ್ನು ಹಲವರು ತಮ್ಮ ವಾಟ್ಸ್ಆ್ಯಪ್ ಸ್ಟೇಟಸ್ ಮಾಡಿಕೊಂಡಿದ್ದಾರೆ.
ಬ್ಯಾಂಕ್‌ನಿಂದ ಅಥವಾ ಯಾವುದೇ ಸೇವೆಯಾಗಿರಲಿ ಕರ್ನಾಟಕದಲ್ಲಿ ಕನ್ನಡವೇ ಪ್ರಧಾನ ಭಾಷೆ. ಯಾವುದಾದರೂ ಬ್ಯಾಂಕ್‌ನಿಂದ ಕರೆ ಮಾಡಿ ಮಾತನಾಡುತ್ತಿದ್ದೇವೆ ಎಂದು ಹೇಳಿದರೆ, ನೀವು ಕನ್ನಡದಲ್ಲಿ ಮಾತನಾಡಿ ಎಂದು ಕೇಳಬಹುದು. ಉತ್ತರ ಭಾರತದ ಸೈಬರ್ ಕಳ್ಳರಿಗೆ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳು ತಿಳಿಯದೆ ಇರುವುದರಿಂದ ಕರೆ ಕಟ್ ಮಾಡುತ್ತಾರೆ.
ಪೊಲೀಸ್ ಅಧಿಕಾರಿ ಹೇಳಿರುವ ವಿಡಿಯೋದಲ್ಲಿ ಏನಿದೆ ?
ಪೊಲೀಸ್ ಅಧಿಕಾರಿಯೊಬ್ಬರು ಸೈಬರ್ ಕ್ರೈಮ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಸಾರ್ವಜನಿಕರು ಸೈಬರ್ ಕ್ರೈಮ್ ವಿಚಾರಗಳಲ್ಲಿ ಜಾಗೃತರಾಗಿರಬೇಕು.
ಇತ್ತೀಚಿನ ದಿನಗಳಲ್ಲಿ ಡ್ರಗ್ಸ್‌ಗಿಂತಲೂ ಸೈಬರ್ ಕ್ರೈಮ್ ಹೆಚ್ಚಳವಾಗುತ್ತಿದೆ. ಸೈಬರ್ ಬಗ್ಗೆ ಯಾರೇ ಕರೆ ಮಾಡಿದರೂ ನೀವು ಕನ್ನಡದಲ್ಲಿ ಮಾತನಾಡಿ ನೀವು 100% ಸೇಫ್ ಆಗ್ತೀರ. ಯಾರೂ ಕನ್ನಡದವರು ಸೈಬರ್ ಬಗ್ಗೆ ನಿಮಗೆ ಕಾಲ್ ಮಾಡಲ್ಲ. ನಾರ್ಥ್ ಇಂಡಿಯನ್ಸ್ ಹಿಂದಿ ಇಲ್ಲ, ಇಂಗ್ಲಿಷ್‌ನಲ್ಲಿ ಮಾತನಾಡ್ತಾರೆ. ನೀವು ಕನ್ನಡದಲ್ಲಿಯೇ ಮಾತನಾಡಿದರೆ ಸೈಬರ್ ಕಳ್ಳರು ನಿಮ್ಮ ಕರೆಯನ್ನು ಕಟ್ ಮಾಡ್ತರೆ. ಇದರಿಂದ ಒಂದು ರೂ. ನಿಮಗೆ ನಷ್ಟವಾಗುವುದಿಲ್ಲ.
ಸೈಬರ್ ವಂಚಕರೊಂದಿಗೆ ನೀವು ಕನ್ನಡದಲ್ಲಿ ಮಾತನಾಡುವುದರಿಂದ ಆಗುವ ಮತ್ತೊಂದು ಉಪಾಯವೆಂದರೆ, ನೀವು ಸೈಬರ್ ವಂಚಕರ ದಾಳಿಯಿಂದ ತಪ್ಪಿಸಿಕೊಳ್ಳಬಹುದು ಎಂದು ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಹೆಚ್ಚಿದ ಸೈಬರ್ ಕ್ರೈಮ್
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸೈಬರ್ ಕ್ರೈಮ್ ಅಪರಾಧ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಬೆಂಗಳೂರಿನ ಆರ್. ಆರ್ ನಗರದಲ್ಲಿ ನಿತ್ಯವೂ ಸೈಬರ್ ಕ್ರೈಮ್ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ, ಜನ ಎಚ್ಚರಿಕೆಯಿಂದ ಇರಬೇಕು. ಕನ್ನಡ ಬಳಸಿ, ಸೈಬರ್ ವಂಚಕರಿಂದ ಸೇಫ್ ಆಗಿ ಎನ್ನುವ ಪೊಲೀಸ್ ಅಧಿಕಾರಿಯ ಸಲಹೆಯನ್ನು ಫಾಲೋ ಮಾಡಿ, ಸೇಫ್ ಆಗಿರಿ.












Click it and Unblock the Notifications