Saalumarada Thimmakka: ಸಾಲುಮರದ ತಿಮ್ಮಕ್ಕ ಇಂದು ವಿಧಿವಶ, ಗಣ್ಯರ ಸಂತಾಪ
Saalumarada Thimmakka News: ನಾಡಿನ ಹಸಿರು ಹೆಚ್ಚಿಸಿದ, ಪರಿಸರ ಮೇಲೆ ಅಪಾರ ಕಾಳಜಿ ಹೊಂದಿದ್ದ ಸಾಲು ಮರ ತಿಮ್ಮಕ್ಕ (Saalumarada Thimmakka) ಅವರು ಇಂದು ಅನಾರೋಗ್ಯ ಕಾರಣದಿಂದ 114 ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಶುಕ್ರವಾರ ವಿಧಿವಶರಾಗಿದ್ದಾರೆ. ಇವರ ನಿಧನಕ್ಕೆ ರಾಜಕೀಯ ಗಣ್ಯರು ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಾಲುಮರದ ತಿಮ್ಮಕ್ಕ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ನವೆಂಬರ್ 14ರಂದು ನಿಧನರಾದರು. 2023 ರ ಅಕ್ಟೋಬರ್‌ನಲ್ಲಿ ಶ್ವಾಸನಾಳದ ಆಸ್ತಮಾದ ತೀವ್ರ ಉಲ್ಬಣದಿಂದಾಗಿ ಅಕ್ಟೋಬರ್ 3 ರಂದು ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಲುಮರದ ತಿಮ್ಮಕ್ಕರನ್ನು ದಾಖಲಾಗಿತ್ತು. ಅಲ್ಲಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ, ಆಂಜಿಯೋಗ್ರಾಮ್ ಮಾಡಲಾಗಿದ್ದು ಎಡ ಮುಂಭಾಗದ ಅಪಧಮನಿ ನಿರ್ಬಂಧಿತವಾಗಿರುವುದು ಪತ್ತೆಯಾಗಿತ್ತು. ಇದರ ನಂತರ ಆಂಜಿಯೋಪ್ಲ್ಯಾಸ್ಟಿ ನಡೆಸಲಾಯಿತು. ತೀವ್ರ ಅನಾರೋಗ್ಯದಿಂದಾಗಿ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರ ನಮ್ಮನ್ನ ಅಗಲಿದ್ದಾರೆ.

114 ವರ್ಷದ ಸಾಲುಮರದ ತಿಮ್ಮಕ್ಕ ಅವರು ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ಗಿಡ ನೆಟ್ಟು ಬೆಳೆಸಿದ್ದಾರೆ. ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ (ಹಿಂದಿನ ರಾಮನಗರ) ಜಿಲ್ಲೆಯ ಮಾಗಡಿ ಬಳಿ ಸಾಲು ಮರಗಳನ್ನು ಬೆಳೆಸಿದ್ದಾರೆ. ಮಕ್ಕಳಿರದ ಸಾಲು ಮರದ ತಿಮ್ಮಕ್ಕಳ ಅವರು ರಸ್ತೆ ಅಕ್ಕ ಪಕ್ಕ ಬೆಳೆಸಿದ್ದ ಮರಗಳಲ್ಲಿ, ಆ ಪರಿಸರದಲ್ಲಿ ತನ್ನ ಮಕ್ಕಳನ್ನು ಕಂಡಿದ್ದರು. ಗಿಡಗಳನ್ನು ಮಕ್ಕಳಂತೆ ನೋಡಿಕೊಂಡರು. ನಿತ್ಯವು ನೀರು ಹಾಕಿ ಪೋಷಿಸಿದ್ದರು.
ಅವರ ಈ ನಿಸ್ವಾರ್ಥದ ಕಾರ್ಯ, ಸಾಧನೆ ಹಿನ್ನೆಲೆಯಲ್ಲಿ ಅವರನ್ನು ಸಾಲು ಮರದ ತಿಮ್ಮಕ್ಕ ಅಂತಲೇ ಕರೆಯಲಾಗುತ್ತಿತ್ತು. ಅವರ ಸಾಧನೆ ಕಂಡು ಕೇಂದ್ರ ಸರ್ಕಾರದಿಂದ ನೀಡಲಾಗುವ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು, ಸನ್ಮಾನ, ಗೌರವಗಳು ಅವರನ್ನು ಹುಡುಕಿಕೊಂಡು ಬಂದವು.
ವೃಕ್ಷಮಾತೆ ನಿಧನಕ್ಕೆ ಗಣ್ಯರ ಸಂತಾಪ
ವೃಕ್ಷಮಾತೆ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದ ಸಾಲು ಮರದ ತಿಮ್ಮಕ್ಕ ಅವರ ನಿಧನಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಲುಮರದ ತಿಮ್ಮಕ್ಕ ಕರ್ನಾಟಕದ ಹೆಮ್ಮೆಯ ಪರಿಸರ ಪ್ರಚಾರಕರಾಗಿದ್ದರು. ಮಕ್ಕಳಿಲ್ಲದ ಈ ಮಹಾತಾಯಿ ಮರಗಳನ್ನೇ ಮಕ್ಕಳಂತೆ ಬೆಳೆಸುವ ಮೂಲಕ ಹಸಿರಿನ ಮಹತ್ವವನ್ನು ಜಗತ್ತಿಗೆ ಸಾರಿದ್ದರು ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಅನಕ್ಷರಸ್ಥರಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿ ಗೌರವ ಡಾಕ್ಟರೇಟ್ ಗೆ ಪಾತ್ರರಾಗಿದ್ದ ಅವರಿಗೆ ಪದ್ಮಶ್ರೀ ಸೇರಿದಂತೆ ಅತ್ಯುನ್ನತ ಪ್ರಶಸ್ತಿಗಳು ಲಭಿಸಿದ್ದವು. ತಿಮ್ಮಕ್ಕನವರು ಎಷ್ಟು ಮುಗ್ಧರಾಗಿದ್ದರೆಂದರೆ, ತಮಗೆ ಪ್ರಶಸ್ತಿ ನೀಡಿದ ರಾಷ್ಟ್ರಪತಿಗಳ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದರು. ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕೂಡ ಅಷ್ಟೇ ಮುಗ್ದತೆಯಿಂದ ಅವರ ಆಶೀರ್ವಾದ ಸ್ವೀಕರಿಸಿದ್ದರು ಎಂದು ಸ್ಮರಿಸಿದರು.
ಹುಲಿಕಲ್ ಗೆ ಬಂದು ನೆಲೆಸಿದ್ದ ತಿಮ್ಮಕ್ಕ: ಸಚಿವ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾಗಿದ್ದ ತಿಮ್ಮಕ್ಕನವರು, ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದ ಬಿಕ್ಕಲ ಚಿಕ್ಕಯ್ಯ ಅವರನ್ನು ವರಿಸಿದ ಬಳಿಕ ಹುಲಿಕಲ್ ಗೆ ಬಂದು ನೆಲೆಸಿದರು. ಬಹುಕಾಲ ಮಕ್ಕಳಾಗದ ದಂಪತಿ ತಮ್ಮ ನೋವು ಮರೆಯಲು ಕುದೂರಿನಿಂದ ಹುಲಿಕಲ್ ತನಕವಿರುವ ರಾಜ್ಯ ಹೆದ್ದಾರಿ 94ರಲ್ಲಿ ಇವರು ಬೆಳಸಿದ 385 ಆಲದ ಮರಗಳು ಇಂದಿಗೂ ನೂರಾರು ಪಕ್ಷಿಗಳಿಗೆ ಆಶ್ರಯ ನೀಡಿದೆ. ಬಿಸಲಲ್ಲಿ ಬಳಲಿ ಬಂದವರಿಗೆ ನೆರಳಾಗಿವೆ. ಇವರಿಂದ ಪ್ರೇರಣೆ ಪಡೆದು ನೂರಾರು ಯುವಕರು ವೃಕ್ಷ ಸಂವರ್ಧನೆ ಮಾಡಿದ್ದಾರೆ. ನಮ್ಮ ಇಲಾಖೆ ಸಾಲು ಮರದ ತಿಮ್ಮಕ್ಕ ಅವರ ಹೆಸರಲ್ಲಿ ವೃಕ್ಷೋದ್ಯಾನಗಳನ್ನು ನಿರ್ಮಿಸಿದೆ ಎಂದರು.
ವೃಕ್ಷೋ ರಕ್ಷತಿ ರಕ್ಷಿತಃ ಎಂದು ಹೇಳುತ್ತಾರೆ. ಮರಗಳನ್ನು ರಕ್ಷಿಸಿದ ತಿಮ್ಮಕ್ಕನವರು ಇಂದು ವಿಶ್ವ ಮಾನ್ಯರಾಗಿದ್ದಾರೆ. ಬಿಬಿಸಿ ಸುದ್ದಿವಾಹಿನಿ ನಡೆಸಿದ ಜಗತ್ತಿನ 100 ಪ್ರಭಾವಿ ಮಹಿಳೆಯರ ಸಮೀಕ್ಷೆಯಲ್ಲಿ ಸಾಲು ಮರದ ತಿಮ್ಮಕ್ಕ ಸ್ಥಾನ ಪಡೆದಿದ್ದರು. ತಿಮ್ಮಕ್ಕ ಅವರ ಜೀವನ, ಸೇವೆಯ ಮೇಲೆ ಅಧ್ಯಯನ ನಡೆಸಿ ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟರೇಟ್ ಸಹ ಪಡೆದಿದ್ದಾರೆ. ಅಗಲಿದ ಹಿರಿಯ ಜೀವಕ್ಕೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಓಂ. ಶಾಂತಿ ಎಂದು ಅವರು ತಿಳಿಸಿದ್ದಾರೆ.
ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಸಲಹಿದ ತಿಮ್ಮಕ್ಕನವರು ತಮ್ಮ ಬಹುಪಾಲು ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟವರು.
— Siddaramaiah (@siddaramaiah) November 14, 2025
ಇಂದು ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ಅವರನ್ನು ಚಿರಸ್ಥಾಯಿಯಾಗಿಸಿದೆ.… pic.twitter.com/4xYdXQyZUa
'ಮರಗಳೇ ಅವರ ಮಕ್ಕಳು': ವಿಪಕ್ಷ ನಾಯಕ ಸಂತಾಪ
ರಸ್ತೆ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು 'ಮರಗಳೇ ನನ್ನ ಮಕ್ಕಳು' ಎಂದು ಘೋಷಿಸಿದ ವೃಕ್ಷಮಾತೆ, ನಮ್ಮ ಹೆಮ್ಮೆಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಸಾಲುಮರದ ತಿಮ್ಮಕ್ಕ ಅವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ ಎಂದು ಆರ್.ಅಶೋಕ್ ಅವರ ಎಕ್ಸ್ ಪೋಸ್ಟ್ ಮಾಡಿದ್ದಾರೆ. ತಿಮ್ಮಕ್ಕನವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಪರಿಸರ ಸೇವೆಯನ್ನೇ ಮಾದರಿಯಾಗಿಸಿಕೊಂಡು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉಳಿಸಿ, ಬೆಳೆಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ತಿಳಿಸಿದ್ದಾರೆ.
ಉಸಿರು ಚೆಲ್ಲಿದ "ವೃಕ್ಷಮಾತೆ': ಡಿಸಿಎಂ
ಮರಗಳನ್ನೇ ತಮ್ಮ ಮಕ್ಕಳಂತೆ ಸಾಕಿ ಸಲಹಿದ ʻವೃಕ್ಷಮಾತೆʼ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರು ನಿಧನರಾದ ಸುದ್ದಿ ಅತೀವ ದುಖಃ ನೀಡಿದೆ. ನಿಸರ್ಗ ಪ್ರೀತಿಯ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಿದ್ದ ಅವರ ಅಸಾಮಾನ್ಯ ಬದುಕು ಮತ್ತು ಪರಿಸರಕ್ಕೆ ಅವರ ಕೊಡುಗೆ ಚಿರಸ್ಮರಣೀಯ. ವೃಕ್ಷಮಾತೆ ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕಾರ್ಯ ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿ ಉಳಿಯಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಬದುಕನ್ನೇ ಪ್ರಕೃತಿ ಮುಡಿಪಿಟ್ಟ ತಾಯಿ: ಎಚ್‌ಡಿಕೆ
ಪರಿಸರಕ್ಕಾಗಿ ತಮ್ಮ ಇಡೀ ಬದುಕನ್ನೇ ಮುಡಿಪಿಟ್ಟು ಪ್ರಕೃತಿಗಾಗಿಯೇ ಬದುಕಿ ಬಾಳಿದ ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ನಾಡಿಗೆ ಅವರು ನೀಡಿರುವ ಕೊಡುಗೆ, ಅವರಿಂದ ದೊರೆತಿರುವ ಪ್ರೇರಣೆ ಅಜರಾಮರ. ಅಗಲಿದ ಆ ಚೇತನಕ್ಕೆ ಚಿರಶಾಂತಿ ದೊರೆಯಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಅವರು ಎಕ್ಸ್‌ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ವೃಕ್ಷಮಾತೆಗೆ ಭಾವಪೂರ್ಣ ಶ್ರದ್ಧಾಂಜಲಿ!
— Tejasvi Surya (@Tejasvi_Surya) November 14, 2025
ಮರಗಳನ್ನೇ ತಮ್ಮ ಮಕ್ಕಳಂತೆ ಪೋಷಿಸಿ, ಪರಿಸರಕ್ಕೆ ಜೀವ ತುಂಬಿದ 'ವೃಕ್ಷಮಾತೆ' ಪದ್ಮಶ್ರೀ ಡಾ. ಸಾಲು ಮರದ ತಿಮ್ಮಕ್ಕ ಅವರು ನಿಧನರಾದ ಸುದ್ದಿ ಕೇಳಿ ಅತೀವ ದುಃಖವಾಯಿತು.
ಅವರ ಪರಿಸರ ಪ್ರೀತಿ, ಜೀವಪರ ಕಾಳಜಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಅಜರಾಮರ. ಅವರ ಆದರ್ಶಗಳು ನಮ್ಮೆಲ್ಲರಿಗೂ ಸದಾ… pic.twitter.com/fpazbJK1jF
ಶತಾಯುಷಿ, ಪರಿಸರವಾದಿ ನಿಧನಕ್ಕೆ ಜೋಶಿ ಸಂತಾಪ
ದೇಶದ ಹೆಮ್ಮೆಯ ಪರಿಸರವಾದಿ, ಶತಾಯುಷಿ, ನಾಡೋಜ- ಪದ್ಮಶ್ರೀ ಪುರಸ್ಕೃತರಾದ ಅತ್ಯಂತ ಸರಳಜೀವಿಯಾಗಿದ್ದ ಸಾಲುಮರದ ತಿಮ್ಮಕ್ಕ ಅವರ ಅಗಲಿಕೆ ತೀವ್ರ ನೋವುಂಟು ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಾಪ ವ್ಯಕ್ತಪಡಿಸಿದ್ದಾರೆ. ರಸ್ತೆ ಬದಿ ಗಿಡ-ಮರಗಳನ್ನು ನೆಟ್ಟು ಮಕ್ಕಳಂತೆ ಸಲಹಿದ ಈ ವೃಕ್ಷಮಾತೆಯ ಪರಿಸರ ರಕ್ಷಣೆ ಕೈಂಕರ್ಯ ನಿಜಕ್ಕೂ ಅಭೂತಪೂರ್ವ ಮತ್ತು ಐತಿಹಾಸಿಕ. ಭವಿಷ್ಯದ ಪೀಳಿಗೆಗೆ ಮಾದರಿ. ಪರಿಸರ ಪ್ರೀತಿ-ವಾತ್ಸಲ್ಯದ ಪ್ರತೀಕದಂತಿದ್ದ ತಿಮ್ಮಕ್ಕ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು ಎಕ್ಸ್‌ಪೋಸ್ಟ್ ಮಾಡಿದ್ದಾರೆ.
ಪರಿಸರ ಪ್ರೇಮ ಚಿರಸ್ಥಾಯಿ ಆಗಿಸಿದೆ: ಸಿಎಂ
ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಸಲಹಿದ ತಿಮ್ಮಕ್ಕನವರು ತಮ್ಮ ಬಹುಪಾಲು ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟವರು. ಇಂದು ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ಅವರನ್ನು ಚಿರಸ್ಥಾಯಿಯಾಗಿಸಿದೆ. ಅಗಲಿದ ಮಹಾಚೇತನಕ್ಕೆ ನನ್ನ ನಮನಗಳು. ಸಾಲುಮರದ ತಿಮ್ಮಕ್ಕನವರ ನಿಧನದಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬವರ್ಗಕ್ಕೆ ನನ್ನ ಸಂತಾಪಗಳು ಎಂದಿದ್ದಾರೆ.
ಗೃಹ ಸಚಿವರ ಸಂತಾಪ
ನಾಡಿನ ಹಿರಿಯಚೇತನ, ವೃಕ್ಷಮಾತೆ ಪದ್ಮಶ್ರೀ ಶ್ರೀ ಸಾಲುಮರದ ತಿಮ್ಮಕ್ಕ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖವಾಯಿತು. ಅವರಿಗೆ ನನ್ನ ಭಾವಪೂರ್ಣ ನಮನಗಳು ಎಂದು ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಸಿಗಳನ್ನೇ ಮಕ್ಕಳೆಂದು ಭಾವಿಸಿ, ನೀರು ಎರೆದು ಅವುಗಳನ್ನು ಪೋಷಿಸಿ ಸಾವಿರಾರು ಮರಗಳನ್ನು ಬೆಳೆಸುವ ಮುಖೇನ ವಿಶ್ವಕ್ಕೆ ಮಾದರಿಯಾಗಿದ್ದರು. ಯಾವುದೇ ಸ್ವಾರ್ಥ, ಫಲಾಪೇಕ್ಷೆಯಿಲ್ಲದೆ ಪರಿಸರ ಮತ್ತು ಜೀವಸಂಕುಲವನ್ನು ಸಂರಕ್ಷಿಸಿದ ಮಾತೆ ಸಾಲುಮರದ ತಿಮ್ಮಕ್ಕನವರ ಕೊಡುಗೆ ಅವಿಸ್ಮರಣೀಯ. ಅವರ ಅಗಲಿಕೆಯು ನಾಡಿಗೆ ಮತ್ತು ಪರಿಸರ ಲೋಕಕ್ಕೆ ತುಂಬಲಾಗದ ನಷ್ಟ. ನಾಡು ಅವರನ್ನು ಸದಾ ಸ್ಮರಿಸಲಿದೆ. ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ. ದುಃಖತಪ್ತ ಅವರ ಕುಟುಂಬವರ್ಗ, ಅಭಿಮಾನಿಗಳ ಬಳಗ ಹಾಗೂ ಪರಿಸರ ಪ್ರೇಮಿಗಳಿಗೆ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ ಎಂದು ತಿಳಿಸಿದರು.
ಪರಿಸರ ಪೋಷಕ ಮತ್ತು ರಾಯಭಾರಿ
ವೃಕ್ಷಮಾತೆ ಎಂದೇ ಮನೆಮಾತಾಗಿದ್ದ ಸಾಲುಮರದ ತಿಮ್ಮಕ್ಕ ಅವರ ನಿಧನದಿಂದ ನಾಡು ಪರಿಸರ ಪೋಷಕ ಮತ್ತು ರಾಯಭಾರಿಯೊಬ್ಬರನ್ನು ಕಳೆದುಕೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸಂತಾಪ ವ್ಯಕ್ತಪಡಿಸಿದ್ದಾರೆ. ಗ್ರಾಮಾಂತರ ಪ್ರದೇಶದ ತಿಮ್ಮಕ್ಕನವರು ಗಿಡಮರಗಳನ್ನು ಮಕ್ಕಳೆಂದು ಭಾವಿಸಿದ್ದರು. ಅವರಿಂದಾಗಿ ಪರಿಸರಪ್ರಿಯತೆಗೆ ನಿಸರ್ಗ ಸಹಜವಾದ ನಿರಾಭರಣ ಆಯಾಮವೊಂದು ದಕ್ಕಿತು. ಅವರು ಕಿರಿಯ ತಲೆಮಾರುಗಳಲ್ಲಿ ತಮ್ಮ ಸಹಜತೆಯ ಮೂಲಕ ನಿಸರ್ಗ ಪ್ರೀತಿ ಹುಟ್ಟಿಸಿದ್ದರು. ಅವರಿಂದಾಗಿ ಕರ್ನಾಟಕಕ್ಕೂ ಖ್ಯಾತಿ ಸಿಕ್ಕಿತ್ತು ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ಕಂಬನಿ ಮಿಡಿದಿದ್ದಾರೆ.
ಸಾಲುಮರದ ತಿಮ್ಮಕ್ಕ ಅವರು ಸಮಾಜದ ಒಳಿತಿನ ಬಗ್ಗೆಯೂ ಕಳಕಳಿ ಇಟ್ಟುಕೊಂಡಿದ್ದರು. ಅವರ ನಿಧನದಿಂದ ನಮ್ಮ ನಾಡಿನ ಸಾತ್ತ್ವಿಕ ಪ್ರಭೆಯೊಂದು ನಂದಿದಂತಾಗಿದೆ. ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಈ ನೋವನ್ನು ಭರಿಸಿಕೊಳ್ಳುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.
-
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral












Click it and Unblock the Notifications