ರಷ್ಯಾ-ಯುಕ್ರೇನ್ ಯುದ್ಧ; ಕಾಂಗ್ರೆಸ್ ನಾಯಕರ ಪಾದಯಾತ್ರೆ ಗೌಣ?
ಬೆಂಗಳೂರು, ಮಾರ್ಚ್ 03: ರಷ್ಯಾ ಮತ್ತು ಉಕ್ರೇನ್ ಯುದ್ಧದತ್ತ ಎಲ್ಲರ ಗಮನ ನೆಟ್ಟ ಕಾರಣ ಮತ್ತು ಅಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಿ, ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರುವತ್ತ ಗಮನ ಕೇಂದ್ರೀಕೃತ ಗೊಂಡಿದ್ದರಿಂದಾಗಿ ಸ್ಥಳೀಯ ವಿದ್ಯಮಾನಗಳು ಮುನ್ನಲೆಗೆ ಬರಲಿಲ್ಲ.
ಇದರ ನಡುವೆ ಕಾಂಗ್ರೆಸ್ ಮೇಕೆದಾಟು ಯೋಜನೆಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪಾದಯಾತ್ರೆ 2.0 ಹೆಚ್ಚು ಗಮನಸೆಳೆಯಲೇ ಇಲ್ಲ. ಆ ಬಗ್ಗೆ ದೊಡ್ಡ ಸುದ್ದಿಯೂ ಆಗಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಮೊದಲ ಬಾರಿಗೆ ಜನವರಿ 9ರಂದು ಪಾದಯಾತ್ರೆ ಆರಂಭಿಸಲಾಗಿತ್ತು.
Recommended Video
ಇದೇ ವೇಳೆಯಲ್ಲಿ ರಾಜ್ಯದಲ್ಲಿ ಕೊರೊನಾ ಆರ್ಭಟ ಜೋರಾಗಿತ್ತು. ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಹಲವು ಮುಖಂಡರು ಕೊರೊನಾಗೆ ತುತ್ತಾದರು. ಈ ವೇಳೆ ಸಾರ್ವಜನಿಕ ವಲಯದಲ್ಲಿಯೂ ಆರೋಪ ಪ್ರತ್ಯಾರೋಪಗಳು ಆರಂಭವಾದವು. ಕಾಂಗ್ರೆಸ್ ನಾಯಕರ ಮೇಲೆ ಕೋವಿಡ್ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾದವು.
ಆದರೆ ಅದ್ಯಾವುದಕ್ಕೂ ಸೊಪ್ಪು ಹಾಕದೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮುಂದುವರೆಸಿದ್ದರು. ಕನಕಪುರದ ಮೂಲಕ ರಾಮನಗರಕ್ಕೆ ಪಾದಯಾತ್ರೆ ತಲುಪುವ ಹೊತ್ತಿಗೆ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸಿದವು. ಕೊರೊನಾ ಆರ್ಭಟವೂ ಹೆಚ್ಚಾಗಿತ್ತು. ಹೀಗಾಗಿ ಅನ್ಯ ಮಾರ್ಗವಿಲ್ಲದೆ ಪಾದಯಾತ್ರೆಯನ್ನು ಮೊಟಕುಗೊಳಿಸಲಾಯಿತು.

ಆರಂಭದಿಂದಲೂ ಪಾದಯಾತ್ರೆಗೆ ವಿಘ್ನ
ಹಾಗೆ ನೋಡಿದರೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಆರಂಭದಿಂದಲೂ ವಿಘ್ನವೇ ಎದುರಾಗಿತ್ತು. ಆದರೂ ಪಾದಯಾತ್ರೆಗೆ ಉತ್ತಮವಾದ ಸ್ಪಂದನೆ ವ್ಯಕ್ತವಾಗುವುದರೊಂದಿಗೆ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನಕ್ಕೂ ಇದೊಂದು ವೇದಿಕೆಯಾಯಿತು. ರಾಜ್ಯದ ಎಲ್ಲ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳುವುದರೊಂದಿಗೆ ಒಗ್ಗಟ್ಟಿನ ಮಂತ್ರವೂ ಪಠನವಾಯಿತು. ಆದರೆ ಕಾಂಗ್ರೆಸ್ ಅಂದುಕೊಂಡಂತೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಲಿಲ್ಲ. ಕಾರಣ ಅವತ್ತು ಜನ ಕೊರೊನಾದ ಭೀತಿಯಲ್ಲಿದ್ದರು. ಅದರ ಬಗ್ಗೆ ತಲೆಕೆಡಿಸಿಕೊಂಡರೇ ವಿನಃ ಬೇರೆ ಯಾವುದರ ಬಗ್ಗೆ ಯೋಚಿಸುವ ಗೋಜಿಗೆ ಯಾರೂ ಹೋಗಲಿಲ್ಲ.

ರಾಜ್ಯ ಸರ್ಕಾರ ಏನು ಮಾಡಬಹುದು?
ಮೇಕೆದಾಟು ಯೋಜನೆ ಅನುಷ್ಠಾನದಿಂದ ಬೆಂಗಳೂರಿಗರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದನ್ನು ಅನುಷ್ಠಾನ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೂ ಇಲ್ಲ. ಆದರೆ ಆ ಸಂಬಂಧ ಬೇಕಾದ ಪ್ರಕ್ರಿಯೆಗಳನ್ನಷ್ಟೆ ಮಾಡಬಹುದಾಗಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಈ ವಿಚಾರ ನ್ಯಾಯಾಲಯದಲ್ಲಿದೆ. ಇದೆಲ್ಲವೂ ಕಾಂಗ್ರೆಸ್ ನಾಯಕರಿಗೂ ಗೊತ್ತಿದೆ. ಆದರೆ ಇವತ್ತಿನ ,ಮಟ್ಟಿಗೆ ಕಾಂಗ್ರೆಸ್ ಗೆ ಪಕ್ಷವನ್ನು ಸಂಘಟಿಸುವ ಮತ್ತು ಒಗ್ಗಟ್ಟಾಗಿ ಕರೆದೊಯ್ಯಲು ಒಂದು ವೇದಿಕೆ ಬೇಕಾಗಿತ್ತು. ಅದನ್ನು ಮೇಕೆದಾಟು ಯೋಜನೆ ಅನುಷ್ಠಾನದ ಆಗ್ರಹದ ಪಾದಯಾತ್ರೆ ಮೂಲಕ ಮಾಡಿದೆ ಎಂಬ ಆರೋಪ ಇತರೆ ಪಕ್ಷಗಳ ನಾಯಕರದ್ದಾಗಿದೆ.

ಹೆಚ್ಚು ಟೀಕಿಸಿದ್ದೇ ಕುಮಾರಸ್ವಾಮಿ
ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭಿಸುತ್ತಿದ್ದಂತೆಯೇ ಈ ಯೋಜನೆ ಕುರಿತಂತೆ ಚರ್ಚೆಗಳು ಮುನ್ನಲೆಗೆ ಬಂದವು. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆಗಳು ಆರಂಭವಾದವು. ಕಾಂಗ್ರೆಸ್ ಪಾದಯಾತ್ರೆಯನ್ನು ಬಿಜೆಪಿಗಿಂತ ಹೆಚ್ಚಾಗಿ ಟೀಕಿಸಿದ್ದು ಜೆಡಿಎಸ್ ಎನ್ನುವುದಂತು ಸತ್ಯ.
ಈ ಯೋಜನೆ ಕುರಿತಂತೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎಳೆ ಎಳೆಯಾಗಿ ಬಿಚ್ಚಿಡುವುದರೊಂದಿಗೆ ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಪ್ರೇರಿತ ಎಂಬುದನ್ನು ಸಾರ್ವಜನಿಕವಾಗಿ ಬಿಂಬಿಸುವ ಪ್ರಯತ್ನ ಮಾಡಿದರು. ಮತ್ತೊಂದೆಡೆ ಪರಿಸರವಾದಿಗಳು ಎದ್ದು ನಿಂತರು. ಈ ಯೋಜನೆಯಿಂದ ಪರಿಸರದ ಮೇಲಾಗ ಬಹುದಾದ ಪರಿಣಾಮಗಳನ್ನು ತೆರೆದಿಟ್ಟರು.

ಆತ್ಮವಿಶ್ವಾಸ ಮೂಡಿಸಿದ ಪಾದಯಾತ್ರೆ
ಇದೆಲ್ಲದರ ನಡುವೆ ಮೇಕೆದಾಟು ಯೋಜನೆ ಸಂಬಂಧದ ಪಾದಯಾತ್ರೆ ಜನಹಿತ ಪಾದಯಾತ್ರೆಯಾಗಲೇ ಇಲ್ಲ. ಇದಕ್ಕೆ ಕಾಂಗ್ರೆಸ್ ಹೊರತುಪಡಿಸಿ ಕನ್ನಡಪರ ಸಂಘಟನೆಗಳಾಗಲೀ, ಇನ್ನಿತರ ಯಾವುದೇ ಸಂಘ ಸಂಸ್ಥೆಗಳು ಬೆಂಬಲ ನೀಡಲೇ ಇಲ್ಲ. ಆದರೂ ಮೊದಲ ಹಂತದ ಪಾದಯಾತ್ರೆಗೆ ದೊರೆತ ಸ್ಪಂದನೆ ನಾಯಕರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಂತು ನಿಜ. ಹೀಗಾಗಿ ಪಾದಯಾತ್ರೆ ಅರ್ಧಕ್ಕೆ ಮೊಟಕುಗೊಂಡರೂ ನಂತರ ಎರಡನೇ ಹಂತದಲ್ಲಿ ಪೂರ್ಣಗೊಳಿಸುವ ವಾಗ್ದಾನ ಮಾಡಿದ್ದರು.

ಬೃಹತ್ ಸಮಾವೇಶ ನಡೆಯುತ್ತಿದೆ
ಎರಡನೇ ಹಂತದ ಪಾದಯಾತ್ರೆ ಫೆಬ್ರವರಿ 27ರಂದು ರಾಮನಗರದಿಂದ ಆರಂಭಗೊಂಡು ಗುರುವಾರ ಮುಕ್ತಾಯವಾಗುತ್ತಿದೆ. ಈ ಸಂಬಂಧ ಬೃಹತ್ ಸಮಾವೇಶವೂ ನಡೆಯುತ್ತಿದೆ. ಆದರೆ ರಷ್ಯಾ-ಉಕ್ರೇನ್ ಯುದ್ಧ ಮತ್ತು ಅಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು, ಇಲ್ಲಿರುವ ಪೋಷಕರ ಅಳಲು ಎಲ್ಲವೂ ಮುನ್ನಲೆಯಲ್ಲಿವೆ. ಹೀಗಾಗಿ ಸದ್ಯದ ಸ್ಥಿತಿಯಲ್ಲಿ ಮೇಕೆದಾಟು ಪಾದಯಾತ್ರೆ ಹೆಚ್ಚಿನ ಗಮನಸೆಳೆಯದೆ ಮುಕ್ತಾಯಗೊಳ್ಳುತ್ತಿದೆ ಎನ್ನುವುದಂತು ನಿಜ.












Click it and Unblock the Notifications