ಬೊಮ್ಮಾಯಿ ರಾಜೀನಾಮೆ ವದಂತಿ: 'ಬೊಮ್ಮಣ್ಣಾ..ಕೇಶವಕೃಪಾ ನಂಬಿದರೆ ಚೊಂಬೇ'
ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿಯವರು ರಾಜೀನಾಮೆ ನೀಡಲಿದ್ದಾರೆ ಎನ್ನುವುದು ಊಹಾಪೋಹ ಸುದ್ದಿ ಎಂದು ಬಿಜೆಪಿಯ ಕೆಲವು ಸಚಿವರು ಸ್ಪಷ್ಟನೆಯನ್ನು ಕೊಟ್ಟಿದ್ದರೂ, ಅದರ ಸುತ್ತ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ಸಿನವರು ಬಿಜೆಪಿ ಸರಕಾರದ ವಿರುದ್ದ ತಿರುಗಿಬಿದ್ದ ವೇಳೆ, ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಯವರು, ರಾಜ್ಯ ಹಿಂದಿನ ಬಿಜೆಪಿ ಸರಕಾರದಂತೆ ಮೂವರು ಮುಖ್ಯಮಂತ್ರಿಗಳನ್ನು ನೋಡಲಿದ್ದಾರೆ ಎನ್ನುವ ಹೇಳಿಕೆಯನ್ನು ನೀಡಿದ್ದರು.
ಕಳೆದ ತಿಂಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೂಡ ಬೊಮ್ಮಾಯಿ ರಾಜೀನಾಮೆ ಬಗ್ಗೆ ಮಾತನಾಡಿದ್ದರು. ಜೊತೆಗೆ, ಬೊಮ್ಮಾಯಿ ಸಂಪುಟದ ಸದಸ್ಯರಿಗೆ ಅವರ ಮೇಲೆ ನಂಬಿಕೆ, ವಿಶ್ವಾಸವಿಲ್ಲ, ಅವರೇ ರಾಜೀನಾಮೆ ನೀಡಬೇಕೆಂದೂ ಡಿಕೆಶಿ ಒತ್ತಾಯಿಸಿದ್ದರು.
ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿಯವರು ಭಾವನಾತ್ಮಕವಾಗಿ ಭಾಷಣ ಮಾಡಿರುವುದಕ್ಕೆ ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ತಮ್ಮದೇ ಎಂದಿನ ಶೈಲಿಯಲ್ಲಿ ವ್ಯಂಗ್ಯವಾಡಿದ್ದಾರೆ.

ಶಿಶುನಾಳ ಶರೀಫರ ಅಳಬ್ಯಾಡ ತಂಗಿ ಅಳಬ್ಯಾಡ ಎನ್ನುವ ಹಾಡು
ಬೆಳಗಾವಿಯಲ್ಲಿ ಮಾತನಾಡುತ್ತಿದ್ದ ಇಬ್ರಾಹಿಂ, ಶಿಶುನಾಳ ಶರೀಫರ ಅಳಬ್ಯಾಡ ತಂಗಿ ಅಳಬ್ಯಾಡ ಎನ್ನುವ ಹಾಡಿನ ಮೂಲಕ ಬೊಮ್ಮಾಯಿ ಭಾಷಣವನ್ನು ವಿಶ್ಲೇಷಣೆ ಮಾಡಿದ್ದಾರೆ. "ಅಳಬ್ಯಾಡ ತಂಗಿ ಅಳಬ್ಯಾಡ, ಬೊಮ್ಮಣ್ಣ ಅಳಬೇಡ. ಈಗ ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ. ಜಾಗ ಖಾಲಿ ಮಾಡುವ ಎನ್ನುವ ಸೂಚನೆ ಸಿಕ್ಕಿದೆ, ಅದಕ್ಕೆ ಯಾವುದೂ ಶಾಸ್ವತವಲ್ಲ ಎಂದು ಅವರು ಹೇಳುತ್ತಿದ್ದಾರೆ" ಎಂದು ಬೊಮ್ಮಾಯಿ ಭಾಷಣವನ್ನು ಇಬ್ರಾಹಿಂ ಲೇವಡಿ ಮಾಡಿದ್ದಾರೆ.

ಕೇಶವಕೃಪಾ ನಂಬಿದರೆ ಚೊಂಬೇ ಗತಿ
"ಪದವಿ ಶಾಶ್ವತವಲ್ಲ ಎಂದು ಬೊಮ್ಮಣ್ಣ ಹೇಳಿದ್ದಾರೆ, ಜೀವನವೇ ಶಾಶ್ವತವಲ್ಲ. ಬಸವರಾಜ ಬೊಮ್ಮಾಯಿಯವರು ಬೊಮ್ಮಾಯಿಯವರಾಗಿಯೇ ಇರಬೇಕು, ಕೇಶವಕೃಪವನ್ನು ನಂಬಿ ಹೋದರೆ, ಅಲ್ಲೂ ಇಲ್ಲೂ ಎಲ್ಲೂ ಇಲ್ಲ, ದೋಬಿಕಾ ಗಧಾ ನ ಘರ್ ಕಾ, ನ ಬಸ್ ಸ್ಟ್ಯಾಂಡ್ಕಾ, ಕೇಶವಕೃಪಾ ನಂಬಿದರೆ ಚೊಂಬೇ ಗತಿ. ಕರ್ನಾಟಕದ ಕನ್ನಡಿಗರ ಬಗ್ಗೆ ಬಿಜೆಪಿಯವರಿಗೆ ಅಭಿಮಾನವಿಲ್ಲ, ಧಮ್ಮು ಕೂಡಾ ಇಲ್ಲ. ವಾಟಾಳ್ ನಾಗರಾಜ್ ಅವರಿಗೆ ಇರುವಷ್ಟು ಧೈರ್ಯ ಇವರಿಗಿಲ್ಲ"ಎಂದು ಸಿ.ಎಂ.ಇಬ್ರಾಹಿಂ ಕಿಡಿಕಾರಿದ್ದಾರೆ.

ಸಿ.ಎಂ.ಇಬ್ರಾಹಿಂ ಪುನರುಚ್ಚರಿಸಿದ್ದಾರೆ
"ಕಾಲಾಯ ತಸ್ಮೇ ನಮ, ನಮ್ಮ ಪೊಲೀಸರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಅವರನ್ನು ಫ್ರೀಯಾಗಿ ಬಿಡಿ. 24 ಗಂಟೆಯಲ್ಲಿ ಅವರು ತಮ್ಮ ಕೆಲಸವನ್ನು ನಿರ್ವಹಿಸಿ, ಕಂಪ್ಲೀಟ್ ಮಾಡಲಿದ್ದಾರೆ" ಎಂದು ಹೇಳಿದ ಸಿ.ಎಂ.ಇಬ್ರಾಹಿಂ, "ಒಂದೇ ದಿನದಲ್ಲಿ ಮುಖ್ಯಮಂತ್ರಿಯವರಿಂದ ರಾಜೀನಾಮೆಯನ್ನು ಬಿಜೆಪಿ ವರಿಷ್ಠರು ಪಡೆದುಕೊಳ್ಳಲಿದ್ದಾರೆ"ಎಂದು ಇಬ್ರಾಹಿಂ ಪುನರುಚ್ಚರಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತವೇ ಹೊರತು, ಅದರ ಹಿಂದಿರೋ ಪದನಾಮಗಳಲ್ಲ
"ನಿಮ್ಮೆಲ್ಲರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಕ್ಷೇತ್ರದ ಹೊರಗಡೆ ಇದ್ದಾಗ ನಾನು ಸಿಎಂ, ಗೃಹ ಸಚಿವನೂ ಆಗಿದೆ. ಆದರೆ ಕ್ಷೇತ್ರದ ಒಳಗಡೆ ಬಂದಾಗ ನಾನು ಬಸವರಾಜ ಬೊಮ್ಮಾಯಿ ಆಗಿ ಉಳಿಯುತ್ತೇನೆ. ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತವೇ ಹೊರತು, ಅದರ ಹಿಂದಿರೋ ಪದನಾಮಗಳು ಶಾಶ್ವತವಲ್ಲ. ಈ ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರುತ್ತೇವೆ ಎಂದು ಗೊತ್ತಿಲ್ಲ, ಸ್ಥಾನಮಾನಗಳು ಶಾಶ್ವತವಲ್ಲ" ಎಂದು ಸಿಎಂ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಹೇಳಿದ್ದನ್ನು ಉಲ್ಲೇಖಿಸಿ ಇಬ್ರಾಹಿಂ ಹೇಳಿಕೆಯನ್ನು ನೀಡಿದ್ದಾರೆ.












Click it and Unblock the Notifications