RSS ತಾಲಿಬಾನ್ ಸಂಘಟನೆಗಿಂತಲೂ ಹೆಚ್ಚು ಅಪಾಯಕಾರಿ: ಬಿ ಕೆ ಹರಿಪ್ರಸಾದ್ ಹೀಗೆ ಹೇಳಿದ್ಯಾಕೆ?
ಬೆಂಗಳೂರು, ಆಗಸ್ಟ್ 18: ಆರ್‌ಎಸ್‌ಎಸ್ ನವರು ದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾನು ಆರ್‌ಎಸ್‌ಎಸ್ ಅನ್ನು ತಾಲಿಬಾನ್‌ಗೆ ಹೋಲಿಸುತ್ತೇನೆ. ಅವರು ಭಾರತೀಯ ತಾಲಿಬಾನ್‌ಗಳು ಮತ್ತು ಪ್ರಧಾನಿ ಅವರನ್ನು ಕೆಂಪು ಕೋಟೆಯಿಂದ ಶ್ಲಾಘಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಿಕೆ ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್‌ಎಸ್‌ಎಸ್ ಹೊಗಳಿದ್ದಕ್ಕಾಗಿ ಮಾಧ್ಯಮಗಳ ಜೊತೆಗೆ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಅವರು ಮಾತನಾಡಿ, ನೊಂದಣಿ ಆಗಿರುವ ಸಂಘಟನೆ ಅಲ್ಲ. ಇಡೀ ದೇಶದಲ್ಲಿ ದೊಡ್ಡ ಸಂಘಟನೆ ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ, ಅವರಿಗೆ ಹಣ ಎಲ್ಲಿಂದ ಬರುತ್ತೆ. ಇತಿಹಾಸವನ್ನು ತಿರುಚುವುದರಲ್ಲಿ ಆರ್ ಎಸ್ಎಸ್ ಹಾಗೂ ಬಿಜೆಪಿಯವರು ಪ್ರವೀಣರು. ಕಳೆದ 52 ವರ್ಷಗಳಿಂದ ಆರ್ ಎಸ್ಎಸ್ ಕಚೇರಿ ಮೇಲೆ ತ್ರಿವರ್ಣಧ್ವಜ ಹಾರಿಸಿಲ್ಲ ಏಕೆ? ಎಂದು ಪ್ರಶ್ನಿಸಿದರು.

ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿ, ಧರ್ಮದ ಅಫೀಮನ್ನು ಯುವಜನರಲ್ಲಿ ತುಂಬುವ, ಸಮಾಜದ ವಿಚ್ಛಿದ್ರಕಾರಿ ಸಂಘಟನೆ ಆರ್ ಎಸ್ ಎಸ್ ತಾಲಿಬಾನ್ ಸಂಘಟನೆಗಿಂತಲೂ ಹೆಚ್ಚು ಅಪಾಯಕಾರಿ. ನನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ಸಂಘ ಪರಿವಾರದ ಆಳ ಅಗಲ ಅಷ್ಟೇ ಅಲ್ಲ, ಅದರ ಸುತ್ತಳತೆಯನ್ನೂ ಬಲ್ಲೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರೇ.. ಆರ್.ಎಸ್.ಎಸ್. ನೂರು ವರ್ಷಗಳಲ್ಲಿ ನಡೆಸಿರುವ ಸಮಾಜ ಸೇವೆಯ ಎಣಿಕೆಯ ಲೆಕ್ಕ ನಂತರ ಕೊಡುವಿರಂತೆ, ಸಂಘ ನಡೆಸಿದ ಸಮಾಜ ಘಾತುಕ ಕೃತ್ಯಗಳ ದಾಖಲೆಗಳೇ ಹೇಳುವ ಲೆಕ್ಕಾ ಗೊತ್ತಾ? ಸಮಾಜ ಸೇವೆ ಎಂಬುವುದು ಕೇವಲ ಮುಖವಷ್ಟೇ, ಅದರ ಹಿಂದಿನ ಮುಖವಾಡಗಳು ಸಂವಿಧಾನಬಾಹೀರ ಚಟುವಟಿಕೆಗಳಿಗೆ ಲೆಕ್ಕವಿಲ್ಲ. ಅಗೆದಷ್ಟು, ಬಗೆದಷ್ಟು ಕರಾಳವಾಗಿದೆ.
ಆರ್.ಎಸ್.ಎಸ್ ಶಾಖೆಯಲ್ಲಿ ಮಾತ್ರ ಪ್ರವೇಶ ಇರುವ ವಿಜಯೇಂದ್ರ ಅವರೇ ಸಂಘವನ್ನು ಸಮರ್ಥಿಸುವ ಮೊದಲು ನನ್ನ ಪ್ರಶ್ನೆಗೆ ಉತ್ತರಿಸುವ ಧೈರ್ಯ ಮಾಡಿ.ಮೂಲಭೂತವಾಗಿ ಆರ್.ಎಸ್.ಎಸ್. ಎನ್ನುವುದು ಏನು? ಅದೊಂದು ಸಾಂಸ್ಕೃತಿಕ ಸಂಘಟನೆಯೇ? ಸಾಮಾಜಿಕ ಸೇವಾ ಸಂಸ್ಥೆಯೇ? ಸಾರ್ವಜನಿಕ ದತ್ತಿಯೇ? ಗುಪ್ತ ರಾಜಕೀಯ ಉದ್ದೇಶ ಹೊಂದಿರುವ ಕಾರ್ಯಕರ್ತರ ಕೂಟವೇ? ಇಲ್ಲವೇ, ಕೇವಲ ಹಿಂದೂ ಸಂಘಟನೆಯೇ.? ಎಂದು ಬಿ ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸಮಾಜ ಸೇವೆಯ ಮುಖ ಹೊತ್ತಿರುವ ಆರ್.ಎಸ್.ಎಸ್. ನೊಂದಣಿ ಸಂಘಟನೆಯೇ? ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಸಂಘಟನೆಯ ಹಣದ ಮೂಲ ಯಾವುದು? ಜನರು ನೀಡುವ ದೇಣಿಗೆಯ ಲೆಕ್ಕಪತ್ರ ಒಮ್ಮೆಯಾದರೂ ಬಹಿರಂಗಗೊಳಿಸಿದ್ದೀರಾ? ಚೆಕ್ ಮೂಲಕ ಲಂಚ ಪಡೆಯುವ ನಿಮಿಗೆ ಸಂಘದ ಲೆಕ್ಕಪತ್ರ ಕೇಳುವ ಧೈರ್ಯ ಎಲ್ಲಿಂದ ಬರಬೇಕು ಬಿಡಿ. ಹಿಂದೂ ನಾವೆಲ್ಲ ಒಂದು ಎನ್ನುತ್ತಲೇ ಚಾತುರ್ವರ್ಣ ವ್ಯವಸ್ಥೆಯನ್ನು ಪಾಲಿಸುವ ಸಂಘಕ್ಕೆ ಹಿಂದೂ ಎನ್ನುವುದು ಕೇವಲ ರಾಜಕೀಯದ ಲಾಭ ಪಡೆಯಲು ಬಳಸುವ ಆಯುಧ ಅಷ್ಟೇ.
ನಮಗೆ ರಾಜಕೀಯ ಎದುರಾಳಿ ಬಿಜೆಪಿ ಅಲ್ಲವೇ ಅಲ್ಲ, ರಾಜಕೀಯದ ಮುಖವಾಡ ಹೊಂದಿರುವ ಆರ್.ಎಸ್.ಎಸ್. ನಮ್ಮ ಸೈದ್ದಾಂತಿಕ ವಿರೋಧಿ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆರ್.ಎಸ್.ಎಸ್ ಬಗ್ಗೆ ಮಾತಾಡುವುದಕ್ಕೆ ಧೈರ್ಯ ಮಾತ್ರವಲ್ಲ, ಪ್ರಮಾಣಿಕತೆಯೂ ಇದೆ. ಅದರ ಹಿಡನ್ ಅಜೆಂಡಾಗಳನ್ನ ಸ್ಷಷ್ಟವಾಗಿ ಅರಿತಿದ್ದೇನೆ. ಸಂಘದ ಬಗ್ಗೆ ಮಾತಾಡಲು ಪ್ರೇರೇಪಿಸಿ ನನ್ನ ಮುಂದೆ ಸೈದ್ದಾಂತಿಕವಾಗಿ ಬೆತ್ತಲಾಗಬೇಡಿ. ರಾಜಕೀಯದ ಎಳಸುಗಾರಿಕೆ ಬಿಟ್ಟು ಒಂದಿಷ್ಟು ಪ್ರಬುದ್ಧತೆಗೆ ತೆರೆದುಕೊಳ್ಳಿ ಎಂದು ಹೇಳಿದರು.












Click it and Unblock the Notifications