ಜಾತಿಗಣತಿ ವರದಿ ಬರೋಬ್ಬರಿ 150 ಕೋಟಿ ಖರ್ಚು: ತನಿಖೆಗೆ ಆಗ್ರಹ
ಬೆಂಗಳೂರು,ಏಪ್ರಿಲ್15: ಜಾತಿ ಗಣತಿ ವರದಿಯು ಸಿದ್ದರಾಮಯ್ಯ ಅವರಿಂದ ಸಿದ್ದರಾಮಯ್ಯ ಅವರಿಗಾಗಿ ಸಿದ್ದರಾಮಯ್ಯನವರೇ ಮಾಡಿಕೊಂಡ ವರದಿ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಲೇವಡಿ ಮಾಡಿದರು. ಕಾಂತರಾಜು ಆಯೋಗದ ವರದಿಗೆ ₹150 ಕೋಟಿ ಖರ್ಚು ಮಾಡಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಆಯೋಗ ಯಾರ ಮನೆಗೂ ಹೋಗಿ ಸಮೀಕ್ಷೆ ಮಾಡಿಲ್ಲ ಎಂದು ಜನರೇ ಹೇಳುತ್ತಿದ್ದಾರೆ ಎಂದು ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ನಾಲ್ಕು ಗೋಡೆಗಳ ಮಧ್ಯೆ ಸೃಷ್ಟಿಯಾದ ವರದಿ ಇದು. ಹಾಗಾದರೆ, ಇಷ್ಟು ಮೊತ್ತವನ್ನು ಎಲ್ಲಿ ಖರ್ಚು ಮಾಡಿದ್ದಾರೆ. ಯಾರ ಮನೆಗೆ ಹೋಗಿದ್ದಾರೆ? ಯಾಕೆ ಇಷ್ಟು ಹಣ ಖರ್ಚು ಮಾಡಿದ್ದಾರೆ? ಲೆಕ್ಕ ಬೇಕಲ್ಲವೇ? ಇದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು. ಸೋರಿಕೆ ಆಗಿರುವ ಈ ವರದಿಯಲ್ಲಿ ಇವೆ ಎನ್ನಲಾದ ಅಂಕಿ ಅಂಶಗಳನ್ನು ಒಮ್ಮೆ ನೋಡಿದರೆ ಈ ವರದಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಕ್ಷೇಮಕ್ಕಾಗಿ ತಯಾರು ಮಾಡಿಸಿಕೊಂಡಿರುವ ವರದಿ ಎಂದು ವಾಗ್ದಾಳಿ ನಡೆಸಿದರು.

ನಮ್ಮ ರಾಜ್ಯದಲ್ಲಿ ಏಳು ಕೋಟಿ ಕನ್ನಡಿಗರು ಇದ್ದಾರೆ. ಸಮೀಕ್ಷೆ ನಡೆಸಿದವರು ಎಷ್ಟು ಮನೆಗಳಿಗೆ ಹೋಗಿದ್ದಾರೆ ಎಂಬ ದಾಖಲೆಗಳು ಇರಬೇಕು. ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು ಆಗಿರುವ ನಮ್ಮ ತಂದೆಯ ಮನೆಗೆ ಯಾರೂ ಬಂದು ಸಮೀಕ್ಷೆ ಮಾಡಿಲ್ಲ. ಅದೇ ರೀತಿ ನಮ್ಮ ಅಜ್ಜ, ಈ ದೇಶದ ಮಾಜಿ ಪ್ರಧಾನಿಗಳು. ಅವರ ಮನೆಗೂ ಯಾರೂ ಭೇಟಿ ಕೊಟ್ಟು ಸಮೀಕ್ಷೆ ಮಾಡಿಲ್ಲ. ಇಂಥ ಅಸಂಖ್ಯಾತ ಉದಾಹರಣೆಗಳನ್ನು ಕೊಡಬಲ್ಲೆ. ನನಗೆ ಗಣತಿ ನಡೆದಿರುವ ಬಗ್ಗೆಯೇ ಅನುಮಾನವಿದೆ. ಗಣತಿ ವೈಜ್ಞಾನಿಕವಾಗಿ, ಪ್ರತಿಯೊಂದು ಕುಟುಂಬದ ಮನೆ ಬಾಗಿಲಿಗೆ ಹೋಗಿ ಮಾಡಬೇಕಿತ್ತು. ಆ ರೀತಿ ಆಗಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು.
ಜಾತಿ ಗಣತಿ ವರದಿಯವು ಎನ್ನಲಾದ ಕೆಲ ಅಂಕಿ-ಅಂಶ ಸೋರಿಕೆಯಾಗಿದೆ. ಎಲ್ಲಾ ಪತ್ರಿಕೆ, ಸುದ್ದಿವಾಹಿನಿಗಳು ಆ ಅಂಕಿ ಅಂಶಗಳು ಬಿತ್ತರವಾಗಿತ್ತಿವೆ. ಈ ಅಂಕಿ ಅಂಶಗಳನ್ನು ಹೊರ ಹಾಕಿರುವವರು ಅಥವಾ ಸೋರಿಕೆ ಮಾಡಿದವರು ಯಾರು? ವರದಿ ಅಧಿಕೃತವಾಗಿ ಇನ್ನೂ ಬಹಿರಂಗ ಆಗಿಲ್ಲ. ಅಂಕಿ ಅಂಶಗಳು ಎಲ್ಲಾ ಕಡೆ ತೇಲಾಡುತ್ತಿವೆ. ಆದರೆ, ಇದು ಅನಧಿಕೃತ ಮಾಹಿತಿ. ಊಹಾಪೋಹದ ಅಂಕಿ ಅಂಶಗಳು. ಇದು ಸರ್ಕಾರದ ಕಡೆಯಿಂದಲೇ ಸೋರಿಕೆ ಆಗಿರುವ ಅನಧಿಕೃತ ಅಂಕಿ ಅಂಶಗಳು ಎನ್ನುವುದು ನನ್ನ ಅಭಿಪ್ರಾಯ. ಸಾರ್ವಜನಿಕ ವಲಯದಲ್ಲಿ ಯಾವ ರೀತಿ ಚರ್ಚೆ ಬರಬಹುದೆಂದು ನೋಡೋಣ ಎಂದು ಸಿದ್ದರಾಮಯ್ಯ ಅವರು ಟೆಸ್ಟ್ ರನ್ ಮಾಡುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.
ಜಾತಿಗಣತಿ ಆಗಬೇಕಿರೋದು ಆರ್ಥಿಕವಾಗಿ, ಶೈಕ್ಷಣಿಕ, ಸಮಾನತೆ ಜಾತಿಗಣತಿ ಆಗಬೇಕಿತ್ತು. ಅದರೆ ಜಾತಿಗಣತಿ ಒಂದು ದಶಕದ ಹಿಂದೆಯೇ ಕಾಂತರಾಜು ಸಮಿತಿಯನ್ನ ರಚನೆ ಮಾಡಿ ಅವರ ಮೂಲಕ ಸರ್ವೇ ಮಾಡಲು ತೆಗೆದುಕೊಂಡು ತೀರ್ಮಾನ ಇದು ಎಂದು ನಿಖಿಲ್ ತಿಳಿಸಿದರು. ಜಾತಿ ಗಣತಿ ಬಗ್ಗೆ ಕ್ಯಾಬಿನೆಟ್ ನಲ್ಲಿ ಕೆಲ ಸಚಿವರು ಅಸಮಾಧಾನ ಹೊರ ಹಾಕಿದ್ದಾರೆ. ಹಾಗಾಗಿ ಎಲ್ಲಿಯವರೆಗೆ ವರದಿ ಹೊರಗೆ ಬಂದಿಲ್ಲ. ಅಲ್ಲಿಯವರೆಗೆ ನಾವು ಚರ್ಚೆ ಮಾಡೋಕೆ ಆಗಲ್ಲ. ಒಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ರಾಜಕೀಯ ಅಸ್ತಿತ್ವಕ್ಕಾಗಿ ಜಾತಿಗಣತಿ ಮಂಡಿಸುವುದಕ್ಕೆ ಮುಂದಾಗಿದ್ದಾರಾ ಎಂಬ ಅನುಮಾನಗಳು ಚರ್ಚೆ ನಡೆಯುತ್ತಿದೆ ಎಂದರು.
ಒಂದು ಸಮುದಾಯ ಮೆಚ್ಚಿಸುವುದಕ್ಕೆ ಮತ್ತು ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಜಾತಿ ಗಣತಿ ಮಂಡಿಸುತ್ತಿದ್ದಾರೆ. ಒಂದು ಸಲ ಅಂಕಿ ಅಂಶಗಳ ಹೊರ ಹಾಕಲಿ. ಜಾತಿ ಗಣತಿ ಮಾಡಿರುವುದರಲ್ಲಿ ಸ್ಪಷ್ಟತೆ, ಪಾರದರ್ಶಕ ಇಲ್ಲದಿದ್ದರೆ. ನಾವು ಮರುಪರಿಶೀಲನೆಗೆ ಒತ್ತಡ ಹಾಕ್ತೀವಿ. ಪಾರದರ್ಶಕ ಇದೆ, ವೈಜ್ಞಾನಿಕವಾಗಿ ಇದೆ ಸಾರ್ವಜನಿಕ ವಲಯದಲ್ಲಿ ಇಡಲಿ ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.












Click it and Unblock the Notifications