ರಾಜ್ಯದ ಮಹಿಳಾ ವೈದ್ಯಕೀಯ ಸಿಬ್ಬಂದಿಗೆ ಇನ್ಮುಂದೆ ಹಗಲು-ರಾತ್ರಿ ಸರ್ಪಗಾವಲು!
ರಾಜ್ಯದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಹಾಗೂ ಮಹಿಳಾ ಸಿಬ್ಬಂದಿಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ʼರಕ್ಷಾ ಕೋಟೆʼ ನಿರ್ಮಿಸಲಾಗಿದ್ದು, ಇದಕ್ಕಾಗಿ ಮಾಜಿ ಸೇನಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ರಾಜ್ಯದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಮಹಿಳಾ ವೈದ್ಯಕೀಯ ಸಿಬ್ಬಂದಿಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಮಾಜಿ ಸೇನಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿದ್ದು, ಇವರು ದಿನದ 24 ಗಂಟೆಯೂ ಕೆಲಸ ಮಾಡಲಿದ್ದಾರೆ. ನಿಯಂತ್ರಣ ಕೊಠಡಿಗಳನ್ನೂ ಅವರೇ ನಿರ್ವಹಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿನ ಪ್ರಮುಖವಾದ ಸ್ಥಳಗಳು, ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ನಿಯಂತ್ರಣ ಕೊಠಡಿಯಲ್ಲಿ ಕುಳಿತು ಪ್ರತಿಕ್ಷಣದ ದೃಶ್ಯಾವಳಿಯನ್ನು ವೀಕ್ಷಿಸಲಾಗುತ್ತದೆ. ಅನುಮಾನಾಸ್ಪದ ಚಲನವಲನ, ಘಟನೆಗಳು ಕಂಡುಬಂದರೆ ತಕ್ಷಣ ತುರ್ತು ಸಂದೇಶ ರವಾನಿಸಲಾಗುತ್ತದೆ ಎಂದಿದ್ದಾರೆ.
ಪ್ರತಿ ಆಸ್ಪತ್ರೆಯಲ್ಲೂ ರಚಿಸಲಾಗುವ ಭದ್ರತಾ ಸಮಿತಿಯು ಸ್ಥಳೀಯ ಪೊಲೀಸರನ್ನು ಒಳಗೊಂಡಿರುತ್ತದೆ. ಮಹಿಳಾ ದೌರ್ಜನ್ಯದ ಪ್ರಕರಣಗಳ ಸುಳಿವು ಸಿಕ್ಕ ತಕ್ಷಣ ರಕ್ಷಣಾ ತಂಡ ನೆರವಿಗೆ ಧಾವಿಸುತ್ತದೆ ಎಂದು ವಿವರಿಸಿದ್ದಾರೆ.
ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ: ಮಹಿಳಾ ವೈದ್ಯಕೀಯ ಸಿಬ್ಬಂದಿಗಳ ವಸತಿ ಗೃಹಗಳು ಅಥವಾ ಹಾಸ್ಟೆಲ್, ಆಸ್ಪತ್ರೆ ಅಥವಾ ಕಾಲೇಜಿನ ಕ್ಯಾಂಪಸ್ ಒಳಗೆ ಇದ್ದರೂ ಕೆಲವೊಮ್ಮೆ ವಿಶಾಲವಾದ ಕ್ಯಾಂಪಸ್‌ಗಳ ಒಳಗೆ ನಡೆದು ಹೋಗುವಾಗ ಅಪಾಯಗಳು ಎದುರಾಗುವ ಸಂಭವ ಇರುತ್ತದೆ. ಅದಕ್ಕಾಗಿ ವಾಹನ ವ್ಯವಸ್ಥೆ ಕಲ್ಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಸುರಕ್ಷತಾ ಸಮಿತಿ: ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮಹಿಳಾ ಸುರಕ್ಷತೆಯ ಕೇಂದ್ರ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಪ್ರತಿ ತಿಂಗಳು ಸಭೆ ಸೇರಿ ಮಹಿಳಾ ವೈದ್ಯರು ಹಾಗೂ ಸಿಬ್ಬಂದಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು, ಕೈಗೊಂಡ ಕ್ರಮಗಳು, ದೌರ್ಜನ್ಯ ತಡೆಗೆ ಅನುಸರಿಸಿದ ಮಾರ್ಗ, ನಿಯಮಗಳ ಪಾಲನೆ ಕುರಿತು ಪರಾಮರ್ಶೆ ನಡೆಸಲಿದೆ. ಪ್ರತಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಿಗೆ ಅಗತ್ಯ ಸಲಹೆ, ಸಹಕಾರ ನೀಡಲಿದೆ ಎಂದು ಮಾಹಿತಿ ನೀಡಿದ್ದಾರೆ.
ದೂರು ನೀಡಲು ಪಿಂಕ್ ಬೂತ್: ವೈದ್ಯಕೀಯ ವಿದ್ಯಾರ್ಥಿನಿಯರು, ಮಹಿಳಾ ಸಿಬ್ಬಂದಿ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಕಿರುಕುಳ, ಲಿಂಗ ಆಧಾರಿತ ತಾರತಮ್ಯ ಪ್ರಕರಣಗಳಲ್ಲಿ ದೂರು, ಮಾಹಿತಿ ನೀಡಲು ಹಿಂದೇಟು ಹಾಕುವ ಮಹಿಳೆಯರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಪತ್ರದ ಮೂಲಕ ತಿಳಿಸಲು ಪ್ರತಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಪಿಂಕ್ ದೂರು ಪೆಟ್ಟಿಗೆಗಳನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.

ಮಹಿಳಾ ವೈದ್ಯಕೀಯ ಸಿಬ್ಬಂದಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ದಿನದ 24 ಗಂಟೆಯೂ ನಿಗಾ ಇಡಲಾಗುತ್ತಿದೆ. ಆಸ್ಪತ್ರೆ, ಹಾಸ್ಟೆಲ್ ನಡುವೆ ದಾರಿಯುದ್ದಕ್ಕೂ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಲು ಹಾಗೂ ಸಿಸಿಟಿವಿ ಕ್ಯಾಮರಾ ಅಳವಡಿಸಲು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯಕೀಯ ಸಿಬ್ಬಂದಿ ಮೇಲೆ ನಡೆದಿದ್ದ ಭೀಕರ ಅತ್ಯಾಚಾರ ಪ್ರಕರಣದಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.












Click it and Unblock the Notifications