• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಂದಾಯ ಸಚಿವ ಆರ್. ಅಶೋಕ್‌ಗೆ ಮತ್ತೆ ಬೆಂಗಳೂರಿನ ಸಾಮ್ರಾಟ ಪಟ್ಟ?

|

ಬೆಂಗಳೂರು, ಜೂ. 26: ಬೆಂಗಳೂರಿನಲ್ಲಿ ಮತ್ತೆ ಯಾವುದೇ ಲಾಕ್‌ಡೌನ್ ಇರುವುದಿಲ್ಲ ಎಂದು ಹೇಳಿಕೆ ಕೊಡುವ ಮೂಲಕ ಮಾಜಿ ಡಿಸಿಎಂ, ಹಾಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಬೆಂಗಳೂರಿನ ಜನರಿಗಿಂತ ಬೆಂಗಳೂರಿನ ಬಿಜೆಪಿ ನಾಯಕರಿಗೆ ಬಹುದೊಡ್ಡ ಸಂದೇಶವನ್ನು ಕೊಟ್ಟಿದ್ದಾರೆ.

   Railway service to be cancelled till August 12th | Oneindia Kannada

   ಹೌದು, ಸರ್ಕಾರದ ಪ್ರಯತ್ನಗಳ ಹೊರತಾಗಿಯೂ ಬೆಂಗಳೂರಿನಲ್ಲಿ ಕೊರೊನಾ ವೈರಸ್‌ ಕಂಟ್ರೋಲ್‌ಗೆ ಸಿಗುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಳಗ್ಗೆ ವಿಧಾನಸೌಧದಲ್ಲಿ ಹೇಳಿಕೆ ಕೊಟ್ಟಿದ್ದರು. ಹಾಗೇ ಹೇಳಿಕೆ ಕೊಡುವಾಗ ತಮ್ಮ ಪಕ್ಕದಲ್ಲಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ತೋರಿಸಿ ನಾವು, ನಮ್ಮ ಅಶೋಕ್‌ ಅವರು ಸಭೆಯಲ್ಲಿ ಕೋವಿಡ್ ಕಂಟ್ರೋಲ್ ಮಾಡುವುದರ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದರು. ಅದಾದ ಬಳಿಕ ರಾಜ್ಯ ಸಚಿವ ಸಂಪುಟ ಸಭೆ ಹಾಗೂ ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣದ ಸಭೆಗಳು ನಡೆದವು. ಅದಾದ ಬಳಿಕ ಬೆಂಗಳೂರಿನ ಕುರಿತು ತೆಗೆದುಕೊಂಡಿದ್ದ ನಿರ್ಧಾರಗಳನ್ನು ಆರ್. ಅಶೋಕ್‌ ಮಾಧ್ಯಮಗಳಿಗೆ ಮಾಹಿತಿ ಕೊಟ್ಟರು. ಇದರಲ್ಲಿಯೇ ವಿಶೇಷ ಇರುವುದು.

   ಬೆಂಗಳೂರು ಲಾಕ್‌ಡೌನ್? ಅಥವಾ ಸೀಲ್‌ಡೌನ್? ಸಚಿವರ ಸ್ಪಷ್ಟನೆ

   ಮಾಜಿ ಡಿಸಿಎಂಗೆ ಕಂದಾಯ ಇಲಾಖೆ

   ಮಾಜಿ ಡಿಸಿಎಂಗೆ ಕಂದಾಯ ಇಲಾಖೆ

   ಕಳೆದ ಬಿಜೆಪಿ ಸರ್ಕಾರದಲ್ಲಿ ಡಿಸಿಎಂ ಹುದ್ದೆಗೆ ಏರಿದ್ದ ಸಚಿವ ಆರ್. ಅಶೋಕ್ ಅವರಿಗೆ ಈ ಸಲ ಕಂದಾಯ ಇಲಾಖೆಯ ಹೊಣೆ ಕೊಡಲಾಗಿದೆ. ಕಳೆದ ಬಾರಿಯಂತೆ ಈ ಸಲ ಡಿಸಿಎಂ ಸ್ಥಾನ ಸಿಗದಿದ್ದರೂ, ಬೆಂಗಳೂರು ನಗರ ಉಸ್ತುವಾರಿ ಸಚಿವ ಸ್ಥಾನಕ್ಕೆ ಅಶೋಕ್ ಅವರು ಬೇಡಿಕೆ ಇಟ್ಟಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಅಶೋಕ್‌ ಅವರಿಗೆ ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಯಾವುದೇ ಮಹತ್ವದ ಜವಾಬ್ದಾರಿಯನ್ನೂ ಕೊಡಲಿಲ್ಲ. ಕೊನೆಗೆ ಅಶೋಕ್ ಅವರಿಗೆ ಮಂತ್ರಿಸ್ಥಾನವೂ ಇಲ್ಲವಂತೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಹರಿದಾಡಿದ್ದವು. ಅದಕ್ಕೆ ಹಲವು ಕಾರಣಗಳೂ ಇದ್ದವು. ಅವು ಮುಂದಿವೆ.

   ಬಿಬಿಎಂಪಿ ಚುನಾವಣೆ

   ಬಿಬಿಎಂಪಿ ಚುನಾವಣೆ

   ಕಳೆದ 2015ರಲ್ಲಿ ನಡೆದಿದ್ದ ಬಿಬಿಎಂಪಿ ಚುನಾವಣೆ ಮುಗಿಯುವವರೆಗೆ ಅಶೋಕ್ ಅವರು ಬಿಜೆಪಿಯಲ್ಲಿ ಅಕ್ಷರಶಃ ಬೆಂಗಳೂರಿನ ಸಾಮ್ರಾಟರೇ ಆಗಿದ್ದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ 24 ವಿಧಾನಸಭಾ ಕ್ಷೇತ್ರಗಳಿಗೆ, ಬಿಬಿಎಂಪಿಯ 198 ವಾರ್ಡ್‌ಗಳಿಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಅಶೋಕ್ ಅವರು ಹೇಳಿದಂತೆ ನಡೆಯುತ್ತಿತ್ತು.

   ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳುವಂತೆ ಬಿಜೆಪಿ ಇತಿಹಾಸದಲ್ಲಿಯೇ ಯಡಿಯೂರಪ್ಪ ಅವರು ಬೆಂಗಳೂರು ಹಾಗೂ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕೈಹಾಕಿಲ್ಲವಂತೆ. ಅದೇನಿದ್ದರೂ ದಿ. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಆರ್. ಅಶೋಕ್ ಅವರಿಗೆ ಬಿಟ್ಟ ವಿಚಾರ. ಹೀಗಾಗಿ ಅವರೊಂದಿಗೆ ಚರ್ಚಿಸಿ ಎನ್ನುತ್ತಿದ್ದರಂತೆ ಯಡಿಯೂರಪ್ಪ ಅವರು. ಹೀಗಾಗಿ ಬೆಂಗಳೂರು ವಿಚಾರದಲ್ಲಿ ಆರ್. ಅಶೋಕ್ ಹಾಗೂ ದಿ. ಅನಂತ್ ಕುಮಾರ್ ಅವರೇ ಬಿಜೆಪಿ ಸಂಪೂರ್ಣ ಉಸ್ತುವಾರಿಗಳಾಗಿದ್ದರು. ಆದರೆ ಬಿಬಿಎಂಪಿ ಚುನಾವಣೆಯ ಫಲಿತಾಂಶದ ನಂತರದ ಒಂದು ಸಣ್ಣ ಉದಾಸೀನ ಆರ್. ಅಶೋಕ್ ಅವರ ಉಸ್ತುವಾರಿಗೆ ಚ್ಯುತಿ ತಂದಿತು ಎಂದರೂ ತಪ್ಪಾಗಲಿಕ್ಕಿಲ್ಲ.

   ಬೆಂಗಳೂರಿನ ಆಸ್ಪತ್ರೆಗಳಲ್ಲಿ 2 ಸಾವಿರ ಬೆಡ್ ಇದೆ- ಆರ್ ಅಶೋಕ್

   ಅತಿದೊಡ್ಡ ಪಕ್ಷ

   ಅತಿದೊಡ್ಡ ಪಕ್ಷ

   ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಬಿಜೆಪಿಗೆ ಬಂದ ಬಳಿಕ ಬಿಜೆಪಿ ನಾಯಕರು ಹೊಸ ಹುರುಪಿನಿಂದಲೇ ಬಿಬಿಎಂಪಿ ಚುನಾವಣೆಯನ್ನು ಒಗ್ಗಟ್ಟಾಗಿಯೆ ಮಾಡಿದರು. ಭರ್ಜರಿ ಜಯ ಕೂಡ ಒಲಿಯಿತು. ಈಗ ಕೇಂದ್ರ ಸಚಿವರಾಗಿರುವ ಪ್ರಲ್ಹಾದ್ ಜೋಶಿ ಅವರು ಆಗ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿದ್ದರು. ಬಿಬಿಎಂಪಿ ಚುನಾವಣೆ ಫಲಿತಾಂಶದ ದಿನ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ, ಬಿಬಿಎಂಪಿಯ 198 ವಾರ್ಡ್‌ಗಳ ಪೈಕಿ 100 ವಾರ್ಡ್‌ಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.

   ಉಳಿದಂತೆ ಕಾಂಗ್ರೆಸ್, ಜೆಡಿಎಸ್ ಹಾಗೂ 7 ಪಕ್ಷೇತರ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿದ್ದರು. ಚುನಾವಣೆಯಲ್ಲಿ ಗೆದ್ದಿದ್ದ ಪಕ್ಷೇತರರ ಪೈಕಿ 4 ಕಾರ್ಪೊರೇಟರ್‌ಗಳು ಬಿಜೆಪಿಗೆ ಸೇರ್ಪಡೆ ಆಗುವ ಮೂಲಕ ಬೇಷರತ್ ಬೆಂಬಲ ಕೊಡಲು ಸ್ವತಃ ಮಲ್ವೇಶ್ವರದ ಬಿಜೆಪಿ ಕಚೇರಿಗೆ ಆಗಮಿಸಿದ್ದರು.

   ಆದರೆ ಆಗಲೇ ಸಂಪೂರ್ಣ ಬಹುಮತ ಪಡೆದಿದ್ದೇವೆ, ಇನ್ಯಾಕೇ ಪಕ್ಷೇತರ ಕಾರ್ಪೊರೇಟರ್‌ಗಳ ಬೆಂಬಲ ಎಂದುಕೊಂಡಂತಿದ್ದ ಅಶೋಕ್ ಅವರು ಅವರನ್ನು ಸರಿಯಾಗಿ ಮಾತನಾಡಿಸಲೂ ಇಲ್ಲ. ಆಗ ಅಖಾಡಕ್ಕೆ ಇಳಿದಿದ್ದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು. ಅವರಿಗೂ ಬೆಂಗಳೂರಿನಲ್ಲಿ ಆರ್. ಅಶೋಕ್ ಪ್ರಭಾವ ಕಡಿಮೆ ಮಾಡಬೇಕು ಅನಿಸಿತ್ತೊ ಏನೋ? ಬಿಜೆಪಿ ಗೆಲುವಿನ ಸಂಭ್ರಮ ಬಹಳಷ್ಟು ಹೊತ್ತು ಇರಲಿಕ್ಕೆ ದೇವೇಗೌಡರು ಬಿಡಲಿಲ್ಲ.

   ಕಾಂಗ್ರೆಸ್-ಜೆಡಿಎಸ್ ಅಧಿಕಾರಕ್ಕೆ

   ಕಾಂಗ್ರೆಸ್-ಜೆಡಿಎಸ್ ಅಧಿಕಾರಕ್ಕೆ

   ಬಿಬಿಎಂಪಿ ಮೇಯರ್ ಆಯ್ಕೆಗೆ ಬೆಂಗಳೂರಿನಲ್ಲಿ ಮತದಾರರ ಚೀಟಿ ಹೊಂದಿರುವ ಸಂಸದರು, ಶಾಸಕರು, ಪರಿಷತ್‌ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರಿಗೆ ಹಕ್ಕಿದೆ ಎಂಬುದನ್ನು ಬಿಜೆಪಿ ನಾಯಕರು ಮರೆತಿದ್ದರು. ಆಗ ರಾಜಕೀಯ ತಂತ್ರಗಾರಿಕೆ ಮೆರೆದಿದ್ದ ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಒಟ್ಟಾಗಿ ಬಿಬಿಎಂಪಿ ಅಧಿಕಾರ ಹಿಡಿಯುವಂತೆ ರಾಜಕೀಯ ತಂತ್ರಗಾರಿಕೆ ಮಾಡಿದ್ದರು.

   ಆಗ 198 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಿಬಿಎಂಪಿ ಚುಕ್ಕಾಣಿ ಹಿಡಿದಿದ್ದು ಜೆಡಿಎಸ್-ಕಾಂಗ್ರೆಸ್ ಮೈತ್ರಿ. 14 ಜೆಡಿಎಸ್ ಸದಸ್ಯರು, 7 ಪಕ್ಷೇತರ ಸದಸ್ಯರು ಹಾಗೂ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರ ನೆರವು ಪಡೆದು ಜೆಡಿಎಸ್-ಕಾಂಗ್ರೆಸ್ ಜಂಟಿಯಾಗಿ 4 ವರ್ಷಗಳ ಕಾಲ ಬಿಬಿಎಂಪಿಯಲ್ಲಿ ಅಧಿಕಾರ ನಡೆಸಿದವು.

   ಆಗ ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾಗಿದ್ದ ಆರ್. ಅಶೋಕ್ ಅವರ ರಾಜಕೀಯ ಅಪ್ರಬುದ್ಧತೆಯೇ ಬಿಬಿಎಂಪಿಯಲ್ಲಿ ಅಧಿಕಾರ ಕೈತಪ್ಪಲು ಕಾರಣ ಎಂಬ ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್ ಬಂದಿತ್ತು.

   ಪರಿವರ್ತನಾ rally

   ಪರಿವರ್ತನಾ rally

   ಅದಾದ ಬಳಿಕ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿತ್ತು. ಬೆಂಗಳೂರಿನಲ್ಲಿ ಪರಿವರ್ತನಾ rally ಮೂಲಕ ವಿಧಾನಸಭಾ ಚುನಾವಣೆಗೆ ರಣಕಹಳೆ ಊದಲು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಬಂದಿದ್ದರು. ಬೆಂಗಳೂರು ಹೊರ ವಲಯದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC) ಆವರಣದಲ್ಲಿ ಬೃಹತ್ ಬೈಕ್ rally ಹಮ್ಮಿಕೊಳ್ಳಲಾಗಿತ್ತು.

   ಕಾರ್ಯಕ್ರಮದ ಉಸ್ತುವಾರಿ ವಿಚಾರವಾಗಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಆರ್. ಅಶೋಕ್ ಮಧ್ಯೆ ಸಣ್ಣ ವೈಮನಸ್ಸಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಆ ಸಣ್ಣ ವೈಮನಸ್ಸಿನ ದೊಡ್ಡ ಫಲಿತಾಂಶ rallyಯಲ್ಲಿ ಕಂಡು ಬಂದಿತ್ತು. ಒಂದು ಲಕ್ಷ ಬೈಕ್ ಸವಾರರು ಬೈಕ್ ಮೇಲೆ ಕುಳಿತುಕೊಂಡು ಅಮಿತ್ ಶಾ ಅವರ ಭಾಷಣ ಕೇಳಿ ರಾಜ್ಯಾದ್ಯಂತ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ rally ಮಾಡುವುದು ಉದ್ದೇಶವಾಗಿತ್ತು. ಆದರೆ ಒಂದು ಬೈಕ್ ಸವಾರರು ಒತ್ತಟ್ಟಿಗಿರಲಿ, ಸ್ಟೇಜ್ ಎದುರಿಗೆ ಹಾಕಿದ್ದ ಕುರ್ಚಿಗಲೇ ಖಾಲಿ ಖಾಲಿ ಇದ್ದವು.

   ಅಮಿತ್ ಶಾ ಅವರು ವೇದಿಕೆ ಮೇಲೆಯೆ ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದು ಅಶೋಕ್ ಅವರ ಮೇಲೆ ಮತ್ತೊಂದು ರೀತಿಯ ಪರಿಣಾಮಕ್ಕೆ ಕಾರಣವಾಯಿತು. ಆ ವೈಫಲ್ಯದಿಂದಲೇ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ಹೈಕಮಾಂಡ್ ದೂರ ಇಟ್ಟಿದೆ ಎನ್ನಲಾಗುತ್ತಿದೆ.

   ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ

   ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆ

   ನಂತರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಬಿಜೆಪಿ ಮತ್ತೆ ಅಧಿಕಾರ ವಂಚಿತವಾಯಿತು. ಅದಾಗಲೇ ಬೇರೆ ಪಕ್ಷಗಳ ಶಾಸಕರನ್ನು ಸೆಳೆಯುವ ಪ್ರಯತ್ನ ಕೈಗೂಡಲಿಲ್ಲ. ಆಗ ಆರ್. ಅಶೋಕ್ ಅವರು ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ತುಂಬ ಆತ್ಮೀಯವಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದು ಕೂಡ ಬಿಜೆಪಿ ಹೈಕಮಾಂಡ್‌ಗೆ ಸರಿ ಎನಿಸಿರಲಿಲ್ಲ.

   ಆದರೆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಜೆಡಿಎಸ್ ಭದ್ರಕೋಟೆಯ ಮೇಲೆ ಯುದ್ಧ ಸಾರಿದ್ದರು.

   ದಕ್ಷಿಣ ಕರ್ನಾಟಕದ ಉಸ್ತುವಾರಿ

   ದಕ್ಷಿಣ ಕರ್ನಾಟಕದ ಉಸ್ತುವಾರಿ

   ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕರ್ನಾಟಕ ಭಾಗದ ಉಸ್ತುವಾರಿಯನ್ನು ಆರ್. ಅಶೋಕ್ ಪಡೆದುಕೊಂಡರು. ಅನಂತ್ ಕುಮಾರ್ ಅವರ ಅಕಾಲಿಕ ಅಗಲಿಕೆ ಬಿಜೆಪಿ ನಾಯಕರನ್ನು ಕಂಗೆಡಿಸಿತ್ತು. ಅಂಥ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಅಶೋಕ್ ಅವರ ಮೇಲೆ ಬಿಜೆಪಿ ಹೈಕಮಾಂಡ್ ಇಟ್ಟಿದ್ದ ಭರವಸೆ ಕಡಿಮೆಯಾಗದಂತೆ ಅಶೋಕ್ ಅವರು ದಕ್ಷಿಣ ಕರ್ನಾಟಕದ ಭಾಗದಲ್ಲಿ ಹಾಸನ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬಿಟ್ಟು ಉಳಿದ ಎಲ್ಲ ಕ್ಷೇತ್ರಗಳಲ್ಲಿ ಜಯ ದಾಖಲಾಗುವಂತೆ ಮಾಡಿದರು.

   ಬೆಂಗಳೂರು ಉಸ್ತುವಾರಿಗೆ ಪೈಪೋಟಿ

   ಬೆಂಗಳೂರು ಉಸ್ತುವಾರಿಗೆ ಪೈಪೋಟಿ

   ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಬೆಂಗಳೂರಿನ ಬಿಜೆಪಿ ವಕ್ಕಲಿಗ ನಾಯಕರಲ್ಲಿ ಪೈಪೋಟಿ ಉರುವಾಗಿತ್ತು. ಮತ್ತೊಂದೆಡೆ ಬಿಜೆಪಿ ಸರ್ಕಾರ ಬಂದ ಮೇಲೆ ಸಹಜವಾಗಿಯೆ ಬೆಂಗಳೂರು ಉಸ್ತುವಾರಿಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್, ಬೈರತಿ ಬಸವರಾಜು, ಎಸ್.ಟಿ. ಸೋಮಶೇಖರ್, ಎಸ್.ಆರ್. ವಿಶ್ವನಾಥ್ ಸೇರಿದಂತೆ ಹಲವು ಬಿಜೆಪಿ ಶಾಸಕರಿಂದಲೇ ತೀವ್ರ ಪೈಪೋಟಿ ಶುರುವಾಗಿತ್ತು. ಹೀಗಾಗಿ ಬೆಂಗಳೂರು ನಗರಾಭಿವೃದ್ಧಿ ಸೇರುದಂತೆ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿಯನ್ನು ಸ್ವತಃ ಸಿಎಂ ಬಿ.ಎಸ್. ಯಡಿಯೂರಪ್ಪ ಇಟ್ಟುಕೊಂಡಿದ್ದಾರೆ.

   ಇದೀಗ ಕೋವಿಡ್ ಸೃಷ್ಟಿಸಿರುವ ಸಂಕಷ್ಟದ ಸಮಯದಲ್ಲಿ ಮತ್ತೊಮ್ಮೆ ಬೆಂಗಳೂರು ಉಸ್ತುವಾರಿಯನ್ನು ಆರ್. ಅಶೊಕ್ ಅವರು ಪರೋಕ್ಷವಾಗಿ ವಹಿಸಿಕೊಂಡಿದ್ದಾರೆ.

   ಕೋವಿಡ್ ಸಂಕಷ್ಟದಲ್ಲಿ ಅಶೋಕ್ ಮುನ್ನಲೆಗೆ

   ಕೋವಿಡ್ ಸಂಕಷ್ಟದಲ್ಲಿ ಅಶೋಕ್ ಮುನ್ನಲೆಗೆ

   ಒಂದು ರೀತಿಯಲ್ಲಿ ಕಳೆದ 2015ರಲ್ಲಿ ನಡೆದಿದ್ದ ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಕಳೆದು ಕೊಂಡಿದ್ದನ್ನು ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮರಳಿ ಪಡೆದಂತಾಗಿದೆ.

   ಬೆಂಗಳೂರು ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಲ್ಲ ವಿಚಾರಗಳಿಗೂ ಸಚಿವ ಆರ್. ಅಶೋಕ್ ಅವರ ಅಭಿಪ್ರಾಯ ಪಡೆಯುತ್ತಿದ್ದಾರೆ. ಜೊತೆಗೆ ಬೆಂಗಳೂರಿಗೆ ಕುರಿತಂತೆ ಎಲ್ಲ ನಿರ್ಧಾರಗಳನ್ನು ಕಂದಾಯ ಸಚಿವ ಆರ್. ಅಶೋಕ್ ಅವರೇ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯಿದೆ. ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಸಚಿವರು ಸಿಎಂ ಆಗಿದ್ದರೂ, ನಿರ್ಧಾರಗಳು ಅಶೋಕ್ ಅವರು ಹೇಳಿದಂತೆಯೇ ಆಗುತ್ತಿವೆಯಂತೆ.

   ಕೊರೊನಾ ವೈರಸ್ ಸಂಕಷ್ಟದ ಸಮಯದಲ್ಲಿ ಬೆಂಗಳೂರಿನ ಒಂದು ಕೋಟಿಗೂ ಅಧಿಕ ಜನರನ್ನು ಅಶೋಕ್ ಅವರ ಅನುಭವದಿಂದ ನಿಯಂತ್ರಿಸಲು ಸಿಎಂ ಯಡಿಯೂರಪ್ಪ ಯೋಜನೆ ರೂಪಿಸುತ್ತಿದ್ದಾರೆ. ಹೀಗಾಗಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಮತ್ತೆ ಕಂದಾಯ ಸಚಿವ ಆರ್. ಅಶೋಕ್ ಅವರು ಮತ್ತೆ ಬೆಂಗಳೂರಿನ ರಾಜಕೀಯ ಹಾಗೂ ಇನ್ನಿತರ ವಿಚಾರಗಳಲ್ಲಿ ಹಿಡಿತ ಸಾಧಿಸುತ್ತಿದ್ದಾರೆ.

   ಇವತ್ತು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ, ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ಕೊಡುವಲ್ಲಿ ಆರ್. ಅಶೋಕ್ ಅವರೆ ಮುಂದಿದ್ದರು. ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರು ಹಿಂದಿದ್ದರು ಎಂಬುದನ್ನೂ ಗಮನಿಸಬಹುದು. ಹೀಗಾಗಿ ಆರ್. ಅಶೋಕ್ ಅವರು ಮತ್ತೊಮ್ಮೆ ಬೆಂಗಳೂರಿನ ಮೇಲೆ ಹಿಡಿತ ಸಾಧಿಸಿದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

   English summary
   Revenue Minister R. Ashoka has regained control of Bengaluru in BJP as well as in Karnataka Governmnet,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X