Bhaskar Rao: ಪೊರಕೆ ಬಿಟ್ಟು ಬಿಜೆಪಿ ಸೇರ್ಪಡೆಯಾದ ಭಾಸ್ಕರ್ ರಾವ್; ಯಾವ ಕ್ಷೇತ್ರದಿಂದ ಕಣಕ್ಕೆ?
ಎಎಪಿ ಕರ್ನಾಟಕದಲ್ಲಿ ಬೆಳೆಯುತ್ತಿಲ್ಲ ಎಂದು ಹೇಳಿರುವ ಎಎಪಿ ನಾಯಕ ಭಾಸ್ಕರ್ ರಾವ್ ಇಂದು ಬಿಜೆಪಿ ಸೇರ್ಪಡೆಯಾದರು.
ಬೆಂಗಳೂರು,ಮಾರ್ಚ್ 1: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಐಪಿಎಸ್ ಅಧಿಕಾರಿ, ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದ ಭಾಸ್ಕರ್ ರಾವ್ ಅವರು ಕೇಸರಿ ಕೋಟೆಯತ್ತ ಮುಖ ಮಾಡಿದ್ದು, ಇಂದು(ಬುಧವಾರ) ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮರ್ ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಬಿಜೆಪಿ ಪಕ್ಷದ ಶಾಕು ಹಾಕಿ,ಧ್ವಜ ನೀಡಿ ಭಾಸ್ಕರ್ ರಾವ್ ಹಾಗೂ ಅವರ ಬೆಂಬಲಿಗರನ್ನ ನಳಿನ್ ಕುಮಾರ್ ಕಟೀಲ್ ಪಕ್ಷಕ್ಕೆ ಬರಮಾಡಿಕೊಂಡರು. ಎಎಪಿಯಲ್ಲಿ ಪ್ರಬಲ ಹಾಗೂ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿರುವ ಭಾಸ್ಕರ್ ರಾವ್ ಅವರು ಕಳೆದ ಕೆಲ ದಿನಗಳಿಂದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಪದ್ಮನಾಭನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ರಾಜ್ಯ ಕಚೇರಿಗೆ ಕೂಡಾ ಭೇಟಿ ಹಲವು ನಾಯಕರ ಜೊತೆಗೆ ಮಾತುಕತೆಯನ್ನ ನಡೆಸಿದ ಬಳಿಕ ಇಂದು ಬಿಜೆಪಿ ಪಕ್ಷವನ್ನ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಸೇರ್ಪಡೆ ಬಳಿಕ ಭಾಸ್ಕರ್ ರಾವ್ ಮಾಧ್ಯಮಗಳ ಜೊತೆಗೆ ಮಾತನಾಡಿ, ಎಎಪಿ ಕರ್ನಾಟಕದಲ್ಲಿ ಬೆಳೆಯುತ್ತಿಲ್ಲ. ಅವರ ಕಾರ್ಯವೈಖರಿ ಶೈಲಿಯಿಂದ ಅದು ಸಾಧ್ಯವಾಗುತ್ತಿಲ್ಲ, ಈಗ ನಾನು ಸನಾತನ ಧರ್ಮದ ಪಕ್ಷ, ರಾಷ್ಟ್ರೀಯತೆಯನ್ನ ಅಳವಾಗಿ ಮೈಗೂಡಿಸಿಕೊಂಡಿರುವ ಪಕ್ಷ ಬಿಜೆಪಿ. ಬಾಲ್ಯದಿಂದಲೂ ಸನಾತನ ಧರ್ಮ, ರಾಷ್ಟ್ರೀಯತೆಗೆ ನಾನು ಬದ್ಧವಾಗಿದ್ದೇನೆ. ಹಾಗಾಗಿ ನಾನು ಬಿಜೆಪಿ ಸೇರ್ಪಡೆ ಆಗಿದ್ದೇನೆ ಎಂದು ಹೇಳಿದರು.
ಈಗಾಗಲೇ ಭಾಸ್ಕರ್ ರಾವ್ ಅವರು ಬಸವನಗುಡಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.ಆದರೆ ಇದೀಗ ಬಸವನಗುಡಿ ಬಿಜೆಪಿಯ ಭದ್ರಕೋಟೆಯಾಗಿದ್ದು, ಬಸವನಗುಡಿಯಲ್ಲಿ ಈಗಾಗಲೇ ಬಿಜೆಪಿಯ ಹಾಲಿ ಶಾಸಕ ರವಿ ಸುಬ್ರಹ್ಮಣ್ಯ ಇರುವುದರಿಂದ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಭಾಸ್ಕರ್ ರಾವ್ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಪ್ಲಾನ್ ಇದೆ ಎಂದು ಹೇಳಲಾಗಿದೆ.
ಈ ವೇಳೆಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಭಾಸ್ಕರ್ ರಾವ್, ನಿವೃತ್ತಿ ನಂತರ ಆಪ್ ಸೇರಿ ರಾಜಕೀಯ ಅನುಭವ ಪಡೆದಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಸಾಧ್ಯ ಎಂದು ಪಕ್ಷಕ್ಕೆ ಬಂದಿದ್ದಾರೆ, ಇವತ್ತು ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಬೇರೆ ಬೇರೆ ನಾಯಕರು ಇನ್ನೂ ಬಿಜೆಪಿ ಸೇರಲು ರೆಡಿ ಆಗಿದ್ದಾರೆ, ಅವರ ಆಡಳಿತಾತ್ಮಕ ಅನುಭವ ಗಳನ್ನು ಪಾರ್ಟಿ ಸ್ವೀಕಾರ ಮಾಡುತ್ತದೆ.
ಭಾಸ್ಕರ್ ರಾವ್ ಅವರು ಯಾವುದೇ ಆಸೆ ಆಕಾಂಕ್ಷಿ ಗಳನ್ನು ಇಟ್ಟಿಲ್ಲ ಎಂದು ಹೇಳಿದರು.ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂಬ ನಿರೀಕ್ಷೆ ಮತ್ತು ಜನಬೆಂಬಲ ಕಾಣುತ್ತಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ನಳಿನ್‍ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿಜಿ, ಅಮಿತ್ ಶಾ, ಜೆ.ಪಿ.ನಡ್ಡಾ, ಬಿ.ಎಲ್.ಸಂತೋಷ್, ಯಡಿಯೂರಪ್ಪ, ಕಟೀಲ್, ಪ್ರಲ್ಹಾದ ಜೋಶಿ ಅವರ ಪಕ್ಷದ ಜೊತೆ ಇರಲು ಬಂದಿದ್ದೇನೆ. ಪಕ್ಷದ ಕಾರ್ಯಕ್ರಮಗಳಿಗೆ ಸಹಕರಿಸುವೆ. ಅಖಂಡ ಭಾರತವನ್ನು ಗಟ್ಟಿಯಾಗಿ ಇಡಲು ಇದೊಂದೇ ಪಕ್ಷದಿಂದ ಸಾಧ್ಯ ಎಂದರು.
ಪಕ್ಷ ಕಟ್ಟುವಾಗ ಯುವಕರು, ಮಹಿಳೆಯರಿಗೆ ಆದ್ಯತೆ ಕೊಡುವುದು ಖುಷಿ ಕೊಟ್ಟಿದೆ. ಪಕ್ಷದ ಮುಖಂಡರ ಮಾರ್ಗದರ್ಶನದಂತೆ ಜವಾಬ್ದಾರಿ ವಹಿಸಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.ಪಕ್ಷದ ಹಿರಿಯ ಮುಖಂಡ ಶಂಕರಪ್ಪ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಮ್ ಆದ್ಮಿ ಪಕ್ಷದ ರಾಜ್ಯ ಸಹಕಾರ್ಯದರ್ಶಿ ವಿಜಯ್ ಶಾಸ್ತ್ರಿಮಠ್, ಮಾಜಿ ಮುಖ್ಯವಕ್ತಾರ ಶರತ್ ಖಾದ್ರಿ, ಸಮಾಜಸೇವಕ ಶಿವಶರ್ಮ, ಬಸವನಗುಡಿ ವಿಧಾನಸಭಾ ಕ್ಷೇತ್ರದ ಮುಖಂಡರಾದ ಆರ್ಯನ್, ಅಂಜನ್‍ರಾವ್, ಬೆಂಗಳೂರು ಮಹಾನಗರದ ಪ್ರಧಾನ ಕಾರ್ಯದರ್ಶಿ ದಿಲೀಪ್ ಗೌಡ ಅವರು ಆಪ್ ತೊರೆದು ಬಿಜೆಪಿ ಸೇರಿದರು.












Click it and Unblock the Notifications