Government Employee; OPS ಜಾರಿ ಕರ್ನಾಟಕ ಸರ್ಕಾರದ ಮಹತ್ವದ ಹೆಜ್ಜೆ
ಬೆಂಗಳೂರು, ಡಿಸೆಂಬರ್ 08; ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನು ಪುನಃ ಜಾರಿಗೆ ತರಬೇಕು ಎಂದು ಕರ್ನಾಟಕ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಸಹ ಈ ನಿಟ್ಟಿನಲ್ಲಿ ಕಾರ್ಯವನ್ನು ಆರಂಭಿಸಿದೆ.
ಹಳೆಯ ಪಿಂಚಣಿ ವ್ಯವಸ್ಥೆ (OPS) ಜಾರಿಗಾಗಿ ಸರ್ಕಾರ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ ಕುರಿತು ಅಧ್ಯಯನ ನಡೆಸಲು ರಚಿಸಿದ್ದ ಸಮಿತಿಯನ್ನು ಪುನಾರಚನೆ ಮಾಡಲಾಗುತ್ತದೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಉತ್ತರವನ್ನು ನೀಡಿದ್ದಾರೆ. 10 ದಿನದಲ್ಲಿ ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರ ನೀಡಿದ್ದಾರೆ.

ಎರಡು ದಿನಗಳ ಹಿಂದೆ ವಿಧಾನಸಭೆಯಲ್ಲಿ ತರೀಕೆರೆಯ ಶಾಸಕ ಶ್ರೀನಿವಾಸ ಜಿ. ಹೆಚ್. ಎನ್‌ಪಿಎಸ್ ಬಗ್ಗೆ ಕೇಳಿದ್ದ ಪ್ರಶ್ನೆಗೆ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದರು. ಸರ್ಕಾರದ ಆದೇಶ ದಿನಾಂಕ 1/3/2023ರಲ್ಲಿ ರಾಜ್ಯದಲ್ಲಿ ಜಾರಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದುಪಡಿಸುವ ಸಂಬಂಧ ಈಗಾಗಲೇ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಿರುವ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆದೇಶಿಸಿದೆ ಎಂದು ತಿಳಿಸಿದ್ದರು.
ಕಂದಾಯ ಸಚಿವರ ಉತ್ತರ; ಸಚಿವ ಕೃಷ್ಣಬೈರೇಗೌಡ ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ರಚಿಸಲಾಗಿರುವ ಅಧ್ಯಯನ ಸಮಿತಿಯನ್ನು ಶೀಘ್ರ ಪುನಾರಚನೆ ಮಾಡಲಾಗುತ್ತದೆ ಎಂದರು.
ಈಗಿರುವ ಅಧ್ಯಯನ ಸಮಿತಿಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಇದ್ದಾರೆ. ಇನ್ನೂ ನಾಲ್ಕೈದು ಅಧಿಕಾರಿಗಳನ್ನು 10 ದಿನದಲ್ಲಿ ನೇಮಕ ಮಾಡಲಾಗುತ್ತದೆ. ಎಸಿಎಸ್ ನೇತೃತ್ವದ ಸಮಿತಿಯು ಏಕ ಸದಸ್ಯರನ್ನು ಒಳಗೊಂಡಿದೆ. ಆದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಚಟುವಟಿಕೆ ನಡೆದಿಲ್ಲ. ಆದ್ದರಿಂದ ಸಮಿತಿಗೆ ನಾಲ್ಕೈದು ಹೊಸ ಸದಸ್ಯರನ್ನು ನೇಮಕ ಮಾಡಲಾಗುತ್ತದೆ.
ಕೆಲವು ರಾಜ್ಯಗಳು ಈಗಾಗಲೇ ಎನ್‌ಪಿಎಸ್ ರದ್ದುಗೊಳಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಅಳವಡಿಕೆ ಮಾಡಿಕೊಂಡಿವೆ. ಸಮಿತಿಗೆ ಇಂತಹ ರಾಜ್ಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗುತ್ತದೆ. ಒಪಿಎಸ್ ಜಾರಿ ಕುರಿತು ಒಂದು ಸಭೆಯನ್ನು ನಡೆಸಲಾಗಿಲ್ಲ ಎಂದು ಸಚಿವರು ಸಭಾಪತಿಗಳ ಪ್ರಶ್ನೆಗೆ ಉತ್ತರ ಕೊಟ್ಟರು.
ಬಿಜೆಪಿ ಸದಸ್ಯ ಎಸ್. ವಿ. ಸಂಕನೂರ ಮಾತನಾಡಿ ಕಾಂಗ್ರೆಸ್ ನೀಡಿರುವ ಭರವಸೆಯಂತೆ ಹಳೆ ಪಿಂಚಣಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಪ್ರತಿಯೊಬ್ಬ ನೌಕರನಿಗೂ ಪಿಂಚಣಿ ಸಿಗಬೇಕು ಎನ್ನುವುದನ್ನು ಸಂವಿಧಾನದಲ್ಲಿಯೇ ಹೇಳಲಾಗಿದೆ ಎಂದು ಒತ್ತಾಯಿಸಿದರು.
ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ; ಸಚಿವರು ಪರಿಷತ್ತಿಗೆ ನೀಡಿರುವ ಉತ್ತರದಲ್ಲಿ ರಾಜಸ್ಥಾನ ಸೇರಿ ಕೆಲ ರಾಜ್ಯಗಳಲ್ಲಿ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ ಮರುಜಾರಿಗೆ ಆದೇಶ ಹೊರಡಿಸಿದ್ದಾರೆ. ಆದರೆ ಒಂದಷ್ಟು ತಾಂತ್ರಿಕ ತೊಡಕಿನಿಂದಾಗಿ ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ ಎಂದರು.
ಹೊಸ ಪಿಂಚಣಿ ಯೋಜನೆಗೆ ಸರ್ಕಾರಿ ನೌಕರರು ಹಣ ಸಂದಾಯ ಮಾಡಿದ್ದಾರೆ. ಆದರೆ ಈ ಹಣ ವಾಪಸ್ ಪಡೆಯುವುದು ಕಷ್ಟದ ಕೆಲಸ. ಕೇಂದ್ರ ಸರ್ಕಾರಕ್ಕೆ ಈ ಕುರಿತು ಪತ್ರವನ್ನು ಬರೆಯಲಾಗಿದೆ. ಹಣ ವಾಪಸ್ ಕೊಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಉತ್ತರ ಬಂದಿದೆ. ಇದರಿಂದಾಗಿ ಸರ್ಕಾರಿ ನೌಕರರಿಗೆ ಗೊಂದಲ ಉಂಟಾಗುತ್ತಿದೆ ಎಂದು ವಿವರಣೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ನೀಡಿದ ಉತ್ತರದಂತೆ ರಾಜ್ಯವು ಕೂಡಾ ಸರ್ಕಾರದ ಆದೇಶ 31/03/2006 ರನ್ವಯ ದಿನಾಂಕ 01/04/2006ರಂದು ಮತ್ತು ತದನಂತರ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದೆ.
ರಾಜ್ಯದ ಸ್ವಾಯತ್ತ ಸಂಸ್ಥೆಗಳು, ನಿಗಮ-ಮಂಡಳಿಗಳು, ಸಂಘಗಳು, ವಿಶ್ವವಿದ್ಯಾನಿಲಯಗಳು, ರಾಜ್ಯದ ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೂ ಸಹ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ದಿನಾಂಕ 01/04/2006ರಿಂದ ಜಾರಿಗೆ ಬರುವಂತೆ ವಿಸ್ತರಣೆ ಮಾಡಲಾಗಿದೆ.












Click it and Unblock the Notifications