HS Venkatesh Murthy: ಕನ್ನಡದ ಖ್ಯಾತ ಸಾಹಿತಿ ಎಚ್ ಎಸ್ ವೆಂಕಟೇಶಮೂರ್ತಿ ನಿಧನ
ಬೆಂಗಳೂರು, ಮೇ 30: ಕನ್ನಡದ ಖ್ಯಾತ ಕವಿ, ನಾಟಕ ರಚನೆ ಕಾರರು, ಸಾಹಿತಿಯಾಗಿರುವ ಎಚ್ ಎಸ್ ವೆಂಕಟೇಶ ಮೂರ್ತಿ ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದ್ದು,
ಕಿರಿಕ್ ಪಾರ್ಟಿ, ಅಮೆರಿಕಾ ಅಮೆರಿಕಾ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಕನ್ನಡದ ಖ್ಯಾತ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ನಿಧನರಾಗಿರುವುದು ಭಾರೀ ನಷ್ಟವಾಗಿದೆ.
ಎಚ್.ಎಸ್. ವೆಂಕಟೇಶಮೂರ್ತಿ 1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನಿಸಿದರು. ಎಚ್.ಎಸ್. ವೆಂಕಟೇಶಮೂರ್ತಿ ಅವರು 100ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ವೆಂಕಟೇಶಮೂರ್ತಿ ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಮತ್ತು ಪ್ರಾಧ್ಯಾಪಕರಾಗಿ ದುಡಿದಿದ್ದಾರೆ. ಇನ್ನೂ ಕನ್ನಡ ಚಿತ್ರರಂಗಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ. ಅವರು ಚಿನ್ನಾರಿ ಮುತ್ತ, ಕೋಟ್ರೇಶಿ ಕನಸು, ಅಮೆರಿಕಾ ಅಮೆರಿಕಾ , ಮೈತ್ರಿ , ಕಿರಿಕ್ ಪಾರ್ಟಿ ಮುಂತಾದ ಚಿತ್ರಗಳಿಗೆ ಹಾಡುಗಳು ಮತ್ತು ಸಂಭಾಷಣೆಗಳನ್ನು ರಚಿಸಿದ್ದಾರೆ.

ಎಚ್ ಎಸ್ ವೆಂಕಟೇಶಮೂರ್ತಿ ನಿಧನಕ್ಕೆ ರಾಜಕೀಯ ಗಣ್ಯದ ಸಂತಾಪ
ಕನ್ನಡದ ಖ್ಯಾತ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಕನ್ನಡದ ಸಾರಸ್ವತ ಲೋಕದ ಸುಪ್ರಸಿದ್ಧ ಕವಿಗಳಾದ ಶ್ರೀ ಹೆಚ್.ಎಸ್. ವೆಂಕಟೇಶಮೂರ್ತಿ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು. ಗದ್ಯ, ಕಾವ್ಯ, ನಾಟಕ, ಚಿತ್ರಗೀತೆ ಸೇರಿ ಅಕ್ಷರ ಜಗತ್ತಿಗೆ ಅನೇಕ ಆಯಾಮಗಳಲ್ಲಿ ಕನ್ನಡಕ್ಕೆ ಚಿರಸ್ಮರಣೀಯ ಕೊಡುಗೆ ನೀಡಿರುವ ಹೆಚ್ಎಸ್‌ವಿ ಅವರ ಅಗಲಿಕೆ ಬಹುದೊಡ್ಡ ನಷ್ಟ.
'ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು..' ದಂತಹ ಅನನ್ಯ ಭಾವಗೀತೆಯನ್ನು ರಚಿಸಿರುವ ಅವರನ್ನು ಮರೆಯಲು ಸಾಧ್ಯವೇ? ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಇನ್ನೂ ಮಾಜಿ ಸಿಎಂ ಹಾಗೂ ಹಾವೇರಿ ಸಂಸದರಾದ ಬಸವರಾಜ್ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ. ಕನ್ನಡದ ಹಿರಿಯ ಕವಿ, ಸಾಹಿತಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ನೋವಾಯಿತು.ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ತಮ್ಮ ಕವನಗಳ ಮೂಲಕ ನಾಡಿನ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.
85 ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಕ್ಕೆ ಪಾತ್ರರಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಬಡವಾದಂತಾಗಿದೆ. ಅವರ ಅಗಲಿಕೆಯ ದುಃಖವನ್ನು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಅವರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ.
ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಅಗಲಿಕೆಗೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಎಚ್.ಎಸ್.ವೆಂಕಟೇಶ ಮೂರ್ತಿ ಅವರು ನೀಡಿರುವ ಕೊಡುಗೆಗಳು ಅತ್ಯಮೂಲ್ಯ. ಲೇಖಕರಾಗಿ, ಚಿಂತಕರಾಗಿ ಅವರು ನಮ್ಮ ಮನಸ್ಸಿನಲ್ಲಿ ಅನಂತವಾಗಿ ಉಳಿಯುತ್ತಾರೆ ಎಂದು ಸಚಿವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.












Click it and Unblock the Notifications