RCB: ಇ.ಡಿ ದಾಳಿ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಪರ ನಿಂತ ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ
Vijay Mallya: ಕರ್ನಾಟಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಕಚೇರಿಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಕುರಿತು ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಹತ್ವದ ಸಂದೇಶವನ್ನು ಹಂಚಿಕೊಂಡಿದ್ದು, ಸಚಿವರ ಪರ ಬ್ಯಾಟ್ ಬೀಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ಕುಟುಂಬಕ್ಕೆ ಸೇರಿದ 21 ಸ್ಥಳಗಳಲ್ಲಿ ಇ.ಡಿ ಶೋಧಕಾರ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಪ್ರಕಟಣೆ ಮೂಲಕ ಹಂಚಿಕೊಂಡಿದ್ದು, ಲೋಕೋಪಯೋಗಿ ಇಲಾಖೆಯಲ್ಲೂ ಅವ್ಯವಹಾರ ನಡೆದಿರೋದನ್ನ ಬಹಿರಂಗಪಡಿಸಿದೆ. ಈ ಮಾಹಿತಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಆರ್‌ಸಿಬಿ ಮಾಜಿ ಮಾಲೀಕ ಹಾಗೂ ಉದ್ಯಮಿ ವಿಜಯ್ ಮಲ್ಯ ಅವರು ಸತೀಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿ ಗಮನ ಸೆಳೆದಿದ್ದಾರೆ.

ವಿಜಯ್ ಮಲ್ಯ ಟ್ವಿಟರ್ ಪೋಸ್ಟ್‌ಗೆ ವಿಶ್ರ ಪ್ರತಿಕ್ರಿಯೆ
'ಇ.ಡಿ ಇದನ್ನ ದೊಡ್ಡ ಸಾಧನೆಯಂತೆ ಬಿಂಬಿಸುತ್ತಿದೆ. ಆದರೆ, ಯಾವುದೇ ದೋಷಾರೋಪ ಪಟ್ಟಿ ಇಲ್ಲ, ವಿಚಾರಣೆಯೂ ಇಲ್ಲ. ಸಾರ್ವಜನಿಕವಾಗಿ ಕೇವಲ ಚಾರಿತ್ರ್ಯ ಹರಣ ನಡೆಯುತ್ತಿದೆ. ಬೇರೆ ಯಾವುದೇ ದೇಶದಲ್ಲಿ ಹೀಗೆ ನಡೆಯುವುದಿಲ್ಲ. ದಯವಿಟ್ಟು ನೀವೇ ಸ್ವತಃ ಯೋಚನೆ ಮಾಡಿ,' ಎಂದು ಬರೆದುಕೊಂಡಿದ್ದಾರೆ. ಮಲ್ಯ ಅವರ ಟ್ವಿಟರ್ ಪೋಸ್ಟ್‌ಗೆ ವಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಅಸಮಾಧಾನ ಹೊರಹಾಕಿದ ವಿಜಯ್ ಮಲ್ಯ
ಪ್ರಕರಣದ ತನಿಖೆ ಇನ್ನೂ ಪೂರ್ಣಗೊಳ್ಳುವ ಮುನ್ನ ಹಾಗೂ ನ್ಯಾಯಾಲಯಕ್ಕೆ ಯಾವುದೇ ಚಾರ್ಜ್‌ಶೀಟ್ ಸಲ್ಲಿಕೆಯಾಗುವ ಮೊದಲೇ, ತನಿಖಾ ಸಂಸ್ಥೆಯು ಸಾರ್ವಜನಿಕವಾಗಿ ತನಿಖೆಯ ಸೂಕ್ಷ್ಮ ವಿವರಗಳನ್ನು ಬಹಿರಂಗಪಡಿಸುತ್ತಿರುವುದು ಸರಿಯೇ ಎಂದು ಮಲ್ಯ ಪ್ರಶ್ನಿಸಿದ್ದಾರೆ. ಯಾವುದೇ ವ್ಯಕ್ತಿಯ ವಿರುದ್ಧ ಆರೋಪ ಸಾಬೀತಾಗುವ ಮೊದಲು ಅಥವಾ ನ್ಯಾಯಾಲಯದಲ್ಲಿ ದೋಷಾರೋಪ ಸಲ್ಲಿಕೆಯಾಗುವ ಮುನ್ನ ಆತನ ವ್ಯವಹಾರಿಕ ವಿವರಗಳನ್ನು ಸಾರ್ವಜನಿಕಗೊಳಿಸುವುದು ಅವರ ತನಿಖಾ ಹಕ್ಕು ಹಾಗೂ ಗೌರವಕ್ಕೆ ಧಕ್ಕೆ ತರುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
Enforcement Directorate boasting this. No chargesheet. No trial. Just character assassination in public. This does not happen in any other Country. Please think for yourself. https://t.co/EcuxqeBwWk
— Vijay Mallya (@TheVijayMallya) September 11, 2026
ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಇ.ಡಿ ಪ್ರೆಸ್‌ನೋಟ್ ಬಿಡುಗಡೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. 'ನಮಗೆ ನೋಟಿಸ್ ಕೊಡುತ್ತಾರೆ, ಅವರ ದಾಖಲೆಗಳನ್ನು ಅವರು ಕೊಡುತ್ತಾರೆ. ನಮ್ಮ ದಾಖಲೆಗಳನ್ನು ನಾವು ಕೊಡುತ್ತೇವೆ. ಇನ್ನು ಸಮಯ ಇದೆ, ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ ಅವರ ಪತ್ರಿಕಾ ಪ್ರಕಟಣೆಯಲ್ಲಿ ಶಂಕಿಸಲಾಗಿದೆ ಎಂಬ ಉಲ್ಲೇಖ ಇದೆ,' ಎಂದು ಹೇಳಿದ್ದಾರೆ.
'ಈ ವಿಚಾರದಲ್ಲಿ ಏನೂ ಅಂತಿಮವಾಗಿಲ್ಲ. ಅವರ ಪ್ರಶ್ನೆಗೆ ಅಲ್ಲೇ ಉತ್ತರ ಇದೆ. ಅವರು ನೋಟಿಸ್ ಕೊಟ್ಟು ಕರೆಯಲಿ, ನಾನು ಹೋಗಿ ಎಲ್ಲವನ್ನೂ ಸ್ಪಷ್ಟನೆ ಕೊಡುತ್ತೇನೆ,' ಎಂದರು. ಪಿಡಬ್ಲ್ಯೂಡಿನಲ್ಲಿ ಲಂಚ ತೆಗೆದುಕೊಂಡಿದ್ದೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, 'ಅದೇ ವಿಚಾರವನ್ನು ಶಂಕಿಸಲಾಗಿದೆ ಅಂತ ಹೇಳಿದ್ದಾರೆ ಅಷ್ಟೇ. ಮೊದಲು ವಿಚಾರಣೆ ಮಾಡಲಿ, ಆಮೇಲೆ ನೋಡೋಣ. ಹೋಗಿ ಸ್ಪಷ್ಟೀಕರಣ ನೀಡಿ ಬರುತ್ತೇವೆ,' ಎಂದು ಹೇಳಿದರು.
ಆಫ್ರಿಕಾದ ಗಣಿಗಳಲ್ಲಿ ಶೇರ್ ಇದೆ ಎಂಬ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಅವರು, 'ಇದನ್ನು ಅವರು ಹೇಳಿದ್ದಾರೆ. ಅವರಿಗೆ ದಾಖಲೆ ಇದ್ದರೆ ಸಾಬೀತು ಮಾಡಲಿ. ಆದರೆ ಈ ಪ್ರೆಸ್‌ನೋಟ್ ನನಗೆ ಸಾಧಾರಣವಾಗಿ ಡ್ಯಾಮೇಜ್ ಮಾಡಬಹುದು,' ಎಂದು ಹೇಳಿದರು. 'ನಮಗೆ ಮೊದಲು ಪಬ್ಲಿಕ್ ನಮ್ಮ ನ್ಯಾಯಾಲಯ. ಅವರು ಅವರ ಕೆಲಸ ಮಾಡಲಿ. ದೂರು ಕೊಟ್ಟಿರುವವರ ಬಗ್ಗೆ ಸ್ಪಷ್ಟತೆ ಇದೆ. ಅವರು ಯಾರು ಎಂದು ಗೊತ್ತಿದೆ. ಈ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿದ್ದೇನೆ,' ಎಂದು ಹೇಳಿದರು.


Click it and Unblock the Notifications
