Ration Card: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಸಚಿವ ರಿಜ್ವಾನ್ ಅರ್ಷದ್ ಭರ್ಜರಿ ಗುಡ್ ನ್ಯೂಸ್
Ration Card: ರಾಜ್ಯದಲ್ಲಿ ರೇಷನ್ ಕಾರ್ಡ್‌ದಾರರಿಗೆ ಅನುಕೂಲ ಆಗುವಂತೆ ಆಹಾರ ಇಲಾಖೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲಿರುತ್ತದೆ. ಹಾಗೆಯೇ ಇದೀಗ ಇ-ಕೆವೈಸಿ ಸಂಬಂಧ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯದ ಪಡಿತರ ಚೀಟಿದಾರರಿಗೆ ಸರ್ಕಾರ ನೆಮ್ಮದಿತ ಸುದ್ದಿಯನ್ನು ನೀಡಿದೆ. ರೇಷನ್ ಕಾರ್ಡ್ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಪಡಬಾರದ ಕಷ್ಟ ಪಡುತ್ತಿದ್ದ ಜನರಿಗೆ ಈಗ ಮುಕ್ತಿ ಸಿಗಲಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಕುಳಿತು ಇ-ಕೆವೈಸಿ ಪೂರ್ಣಗೊಳಿಸಲು ಅನುಕೂಲ ಆಗುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 'ಅನ್ನ ಸೇವೆ' ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.

ಆಹಾರ ಇಲಾಖೆಯಿಂದ ಮಹತ್ವದ ಹೆಜ್ಜೆ
ಇನ್ಮುಂದೆ ಫಲಾನುಭವಿಗಳು ಇ-ಕೆವೈಸಿ ಮಾಡಿಸಲು ಪಡಿತರ ಅಂಗಡಿಗಳಿಗೆ ಅಲೆಯುವ ಅಗತ್ಯವಿಲ್ಲ. ತಮ್ಮ ಮೊಬೈಲ್ ಫೋನ್ ಮೂಲಕವೇ ಅತ್ಯಂತ ಸರಳವಾಗಿ ಮನೆಯಲ್ಲೇ ಕುಳಿತು ಕೆಲವೇ ನಿಮಿಷಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಡಿಜಿಟಲ್ ತಂತ್ರಜ್ಞಾನವನ್ನು ಸಾಮಾನ್ಯ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
8 ಜಿಲ್ಲೆಗಳಲ್ಲಿ ಹೊಸ ಆ್ಯಪ್ ಸೇವೆ ಆರಂಭ
ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪದೇ ಪದೇ ಎದುರಾಗುತ್ತಿದ್ದ ಸರ್ವರ್ ತಾಂತ್ರಿಕ ತೊಂದರೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 'ಅನ್ನ ಸೇವೆ' ಎಂಬ ಹೊಸ ಮೊಬೈಲ್ ಆ್ಯಪ್ ಪರಿಚಯಿಸಿದೆ. ಇದನ್ನು ಮೊದಲ ಹಂತದಲ್ಲಿ ಪ್ರಯೋಗಾತ್ಮಕವಾಗಿ ರಾಜ್ಯದ 8 ಜಿಲ್ಲೆಗಳಲ್ಲಿ ಮಾತ್ರ ಆರಂಭ ಮಾಡಲಾಗಿದೆ.
ಯಾವೆಲ್ಲಾ ಜಿಲ್ಲೆಗಳಲ್ಲಿ ಹೊಸ ಆ್ಯಪ್ ಸೇವೆ?
* ಬೆಂಗಳೂರು ನಗರ
* ಬೆಂಗಳೂರು ಗ್ರಾಮಾಂತರ
* ಉಡುಪಿ
* ಹಾವೇರಿ
* ಕಾರವಾರ (ಉತ್ತರ ಕನ್ನಡ)
* ಬಳ್ಳಾರಿ
* ಬೀದರ್
* ಕೊಪ್ಪಳ
ಈ ಜಿಲ್ಲೆಗಳ ಪಡಿತರದಾರರು ತಕ್ಷಣವೇ ಈ ಆ್ಯಪ್ ಬಳಸಿ ಇ-ಕೆವೈಸಿ ಮಾಡಿಕೊಳ್ಳಬಹುದು. ಮುಂದಿನ 20 ದಿನಗಳ ಕಾಲ ಈ ಪೈಲಟ್ ಯೋಜನೆಯ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುತ್ತದೆ. ನಂತರ ರಾಜ್ಯದ ಉಳಿದೆಲ್ಲ ಜಿಲ್ಲೆಗಳಿಗೂ ಅಧಿಕೃತವಾಗಿ ಈ ವಿಸ್ತರಿಸಲಾಗುವುದು ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.
ಸಚಿವ ರಿಜ್ವಾನ್ ಅರ್ಷದ್ ಚಾಲನೆ
ಬೆಂಗಳೂರಿನ ಶಿವಾಜಿನಗರ ಕ್ಷೇತ್ರದ ರಾಜೀವ್ ಗಾಂಧಿ ಕಾಲೋನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಅವರು ಈ 'ಅನ್ನ ಸೇವಾ' ಇ-ಕೆವೈಸಿ ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, 'ರಾಜ್ಯದ 8 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಇದು ಜಾರಿಗೆ ಬಂದಿದ್ದು, ಸಾರ್ವಜನಿಕರ ಸಮಯ ಹಾಗೂ ಅಲೆದಾಟವನ್ನು ತಪ್ಪಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ,' ಎಂದು ಹೇಳಿದರು.
'ಫಲಾನುಭವಿಗಳಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೆ, ಪಡಿತರ ಸೇವೆಗಳಲ್ಲಿ ತಂತ್ರಜ್ಞಾನ, ಪಾರದರ್ಶಕತೆ ಮತ್ತು ವೇಗವನ್ನು ಮತ್ತಷ್ಟು ಹೆಚ್ಚಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ಪಡಿತರ ಸೇವೆಯನ್ನು ಜನರಿಗೆ ಇನ್ನಷ್ಟು ಹತ್ತಿರವಾಗಿಸುವ ಸಂಕಲ್ಪ ನಮ್ಮ ಸರ್ಕಾರದ್ದಾಗಿದೆ,' ಎಂದು ಸಚಿವರು ತಿಳಿಸಿದ್ದಾರೆ.
ಹೊಸ ಆ್ಯಪ್‌ನ ಉದ್ದೇಶ ಹಾಗೂ ಅನುಕೂಲಗಳು
* ಪಡಿತರ ತಲುಪಿಸುವ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರುವುದು ಮತ್ತು ಇ-ಕೆವೈಸಿ ಪ್ರಕ್ರಿಯೆಗೆ ವೇಗ ನೀಡುವುದು ಈ ಯೋಜನೆಯ ಪ್ರಮಖ ಉದ್ದೇಶವಾಗಿದೆ.
* ತಂತ್ರಜ್ಞಾನದ ಗರಿಷ್ಠ ಬಳಕೆಯ ಮೂಲಕ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬ ನಾಗರಿಕನ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ.
* ಕೂಲಿ ಕಾರ್ಮಿಕರು, ಹಿರಿಯ ನಾಗರಿಕರು ಮತ್ತು ಮಹಿಳೆಯರು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯುವುದು ತಪ್ಪಲಿದೆ.
* ಸರ್ಕಾರದ ಈ ಹೊಸ ಹೆಜ್ಜೆಯಿಂದಾಗಿ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ನಿರಾಳತೆ ಸಿಕ್ಕಂತಾಗಿದೆ.


Click it and Unblock the Notifications
