ರನ್ಯಾ ರಾವ್ ಕೇಸ್: ಸದನದಲ್ಲಿ ರಿವೀಲ್ ಆಗುತ್ತಾ ಆ ಇಬ್ಬರು ಸಚಿವರ ಹೆಸರು? ಯಾರಿಗೆಲ್ಲ ಟೆನ್ಶನ್
ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಇಬ್ಬರು ಸಚಿವರ ಪಾತ್ರವಿದೆ ಎಂದು ತನಿಖೆ ವೇಳೆ ತಿಳಿದುಬಂದಿದ್ದು, ಇದೇ ವಿಚಾರವಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಈ ಕೇಸ್‌ನಲ್ಲಿ ತಮ್ಮ ಪಕ್ಷದ ನಾಯಕರ ಪಾತ್ರವಿಲ್ಲ ಎಂದು ತಿರುಗೇಟು ನೀಡುತ್ತಿದ್ದಾರೆ. ಅಚ್ಚರಿಯೆಂದರೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಈ ಕೇಸ್‌ನಲ್ಲಿ ರನ್ಯಾ ರಾವ್ ಜೊತೆ ನಂಟು ಹೊಂದಿರುವ ಆ ಇಬ್ಬರು ಸಚಿವರ ಹೆಸರು ಗೊತ್ತಿದೆ ಎಂದು ಬಾಂಬ್ ಸಿಡಿಸಿದ್ದಾರೆ. ಸೋಮವಾರದ ಸದನದಲ್ಲೇ ಸಚಿವರ ಹೆಸರು ಬಹಿರಂಗಪಡಿಸುತ್ತೇನೆ ಎಂದು ಸವಾಲ್ ಕೂಡ ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೂ ಟೆನ್ಶನ್ ಶುರುವಾಗಿದೆ.
ನಟಿ ರನ್ಯಾ ರಾವ್ ಕೇಸ್‌ನಲ್ಲಿ ಪ್ರಭಾವಿಗಳ ಹೆಸರು ಕೂಡ ತಳುಕು ಹಾಕಿಕೊಂಡಿದೆ. ರನ್ಯಾ ಹಲವು ರಾಜಕಾರಣಿಗಳ ಜೊತೆ ಸಂಪರ್ಕದಲ್ಲಿದ್ದರು. ಮುಖ್ಯವಾಗಿ ಇಬ್ಬರು ಸಚಿವರ ಜೊತೆ ನಿರಂತರ ನಂಟು ಹೊಂದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ನಾಯಕರ ನಡುವೆ ಕೆಚರೆರಚಾಟ ಕೂಡ ನಡೆಯುತ್ತಿದೆ. ಈಗ ಯತ್ನಾಳ್ ಹೊಸ ಬಾಂಬ್ ಸಿಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಈ ಕೇಸ್ ವಿಚಾರವಾಗಿ ನಿನ್ನೆ ಮಾತನಾಡಿದ್ದ ಯತ್ನಾಳ್ ಅವರು ರನ್ಯಾ ರಾವ್ ಜೊತೆ ನಂಟು ಹೊಂದಿರುವ ಸಚಿವರು ಯಾರೆಂದು ಗೊತ್ತಿದೆ. ಈ ಕೇಸ್ ಬಗ್ಗೆ ಸೋಮವಾರ ನಡೆಯುವ ಸದನದಲ್ಲಿ ಸುಧೀರ್ಘವಾಗಿ ಮಾತನಾಡುತ್ತೇನೆ. ರನ್ಯಾ ರಾವ್ ಜೊತೆ ಯಾವ ಸಚಿವರು ಸಂಪರ್ಕದಲ್ಲಿದ್ದರು ಎಂಬುದು ನಮಗೆ ಗೊತ್ತಿದೆ. ಈ ಬಗ್ಗೆ ಮಾಧ್ಯಮಗಳ ಮುಂದೆ ನಾನು ಏನೂ ಮಾತನಾಡಲ್ಲ. ಸದನದಲ್ಲೇ ಈ ಬಗ್ಗೆ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ, ಆ ಇಬ್ಬರ ಹೆಸರನ್ನು ಕೂಡ ಹೇಳುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ. ಹಾಗಾಗಿ ಎಲ್ಲರ ಚಿತ್ತ ಇಂದಿನ ಸದನದತ್ತ ಇದೆ.
ಇನ್ನು ಯತ್ನಾಳ್ ಅವರು ಖಡಾಖಂಡಿತವಾಗಿ ಇಬ್ಬರ ಹೆಸರು ಬಹಿರಂಗಪಡಿಸುತ್ತೇನೆ ಎಂದು ಸವಾಲು ಹಾಕಿರುವ ಬೆನ್ನಲ್ಲೇ ರಾಜಕಾರಣಿಗಳಿಗೆ ಢವಢವ ಶುರುವಾಗಿದೆ. ಅಲ್ಲದೆ ರನ್ಯಾ ರಾವ್ ಅವರ ಮದುವೆಯಲ್ಲಿ ಕೂಡ ಸಿಎಂ ಸಿದ್ದರಾಮಯ್ಯ ಅವರೂ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಭಾಗಿಯಾಗಿದ್ದರು ಎನ್ನಲಾದ ಫೋಟೋ ಕೂಡ ವೈರಲ್ ಆಗಿದ್ದವು. ಈಗ ಯತ್ನಾಳ್ ಹೇಳಿಕೆಯು ಹಲವರಿಗೆ ಭಯ ಹುಟ್ಟಿಸಿದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಈ ಕೇಸ್‌ನಲ್ಲಿ ಬಿಜೆಪಿ ನಾಯಕರ ಪಾತ್ರ ಇದ್ದಿದ್ದರೆ, ಯತ್ನಾಳ್ ಅವರು ತಮ್ಮ ಪಕ್ಷದ ನಾಯಕರನ್ನು ಬಿಟ್ಟುಕೊಡುವವರಲ್ಲ. ಹಾಗಾಗಿ ಇವರು ಕಾಂಗ್ರೆಸ್ ನಾಯಕರ ಕಡೆಗೇ ಬೊಟ್ಟು ಮಾಡುತ್ತಿರುವುದು ಅಚ್ಚರಿಯೂ ಮೂಡಿಸಿದೆ. ಈ ಕೇಸ್ ಹೊರಬಂದಾಗಿನಿಂದಲೂ ಸಚಿವರ ಹೆಸರುಗಳು ಕೇಳಿಬರುತ್ತಿವೆ. ಆದರೆ ನಿಖರವಾಗಿ ಇವರೇ ಎಂದು ಎಲ್ಲಿಯೂ ಹೇಳಿರಲಿಲ್ಲ. ಆದರೆ ಯತ್ನಾಳ್ ಅವರು ಇಂದು ಸದನದಲ್ಲೇ ಆ ಇಬ್ಬರು ಸಚಿವರ ಹೆಸರನ್ನು ಬಹಿರಂಗಪಡಿಸುತ್ತೇನೆ ಎನ್ನುವ ಮೂಲಕ ಹೊಸ ಟ್ವಿಸ್ಟ್ ನೀಡಿದ್ದಾರೆ.

ಇಂದು ಸದನದಲ್ಲಿ ಯತ್ನಾಳ್ ಅವರು ರನ್ಯಾ ರಾವ್ ಕೇಸ್‌ನಲ್ಲಿ ನಂಟು ಹೊಂದಿರುವ ಆ ಇಬ್ಬರು ಸಚಿವರ ಹೆಸರನ್ನು ಬಹಿರಂಗಪಡಿಸಿದರೆ, ಕೋಲಾಹಲವೇ ಸೃಷ್ಟಿಯಾಗಲಿದೆ. ಮತ್ತೊಂದೆಡೆ ರನ್ಯಾ ಅವರೊಂದಿಗೆ ಸಂಪರ್ಕ ಹೊಂದಿದ್ದ ರಾಜಕಾರಣಿಗಳಿಗೂ ಭೀತಿ ಶುರುವಾಗಿದೆ. ಸದನದಲ್ಲಿ ಏನೆಲ್ಲ ಬೆಳವಣಿಗೆಯಾಗಲಿದೆ ಎಂಬುದು ಇಂದು ತಿಳಿಯಲಿದೆ.












Click it and Unblock the Notifications