Get Updates
Get notified of breaking news, exclusive insights, and must-see stories!

Ranya Rao: ಒಂದೇ ವರ್ಷದಲ್ಲಿ 127.287 ಕೆಜಿ ಚಿನ್ನ ಸಾಗಿಸಿದ ರನ್ಯಾ ರಾವ್ ಮತ್ತು ತಂಡ; ಹವಾಲಾ ಹಣ ಬಳಕೆ - ED

ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್ ಮತ್ತು ಆಕೆಯ ಸಹಚರರು ನಡೆಸುತ್ತಿದ್ದ ಬೃಹತ್ ಚಿನ್ನ ಕಳ್ಳಸಾಗಣೆ (Gold Smuggling) ಜಾಲದ ಸ್ಫೋಟಕ ಮಾಹಿತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಬಯಲು ಮಾಡಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಈ ಗ್ಯಾಂಗ್ ಬರೋಬ್ಬರಿ 102.55 ಕೋಟಿ ರೂಪಾಯಿ ಮೌಲ್ಯದ 127.287 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ತಂದಿರುವ ಬಗ್ಗೆ ಇ.ಡಿ ಅಧಿಕಾರಿಗಳು ಬುಧವಾರ ನ್ಯಾಯಾಲಯಕ್ಕೆ ಅಧಿಕೃತವಾಗಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಬೆಂಗಳೂರಿನ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ವಿಶೇಷ ನ್ಯಾಯಾಲಯದಲ್ಲಿ ಈ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ನಟಿ ರನ್ಯಾ ರಾವ್ ಜೊತೆಗೆ ಆಕೆಯ ಪ್ರಮುಖ ಸಹಚರರಾದ ತರುಣ್ ಕೊಂಡೂರು ಮತ್ತು ಸಾಹಿಲ್ ಸಕಾರಿಯಾ ಜೈನ್ ಅವರ ಹೆಸರುಗಳನ್ನು ಆರೋಪಿಗಳಾಗಿ ಉಲ್ಲೇಖಿಸಲಾಗಿದೆ.

Ranya Rao

ಹವಾಲಾ ಜಾಲ ಮತ್ತು ಕಪ್ಪು ಹಣ ಬಿಳಿಯಾದದ್ದು ಹೇಗೆ?

ಮಾರ್ಚ್ 2024 ರಿಂದ ಮಾರ್ಚ್ 2025ರ ನಡುವಿನ ಕೇವಲ ಹನ್ನೆರಡು ತಿಂಗಳ ಅವಧಿಯಲ್ಲಿ ಈ ಜಾಲವು 127 ಕೆ.ಜಿ.ಗೂ ಅಧಿಕ ಚಿನ್ನವನ್ನು ವಿದೇಶದಿಂದ ವ್ಯವಸ್ಥಿತವಾಗಿ ಕಳ್ಳಸಾಗಣೆ ಮಾಡಿದೆ. "ವಿದೇಶದಿಂದ ಅಕ್ರಮವಾಗಿ ತಂದ ಚಿನ್ನವನ್ನು ಸ್ಥಳೀಯ ಜ್ಯುವೆಲ್ಲರಿ ಅಂಗಡಿಗಳು ಮತ್ತು ಹ್ಯಾಂಡ್ಲರ್‌ಗಳ ಜಾಲದ ನೆರವಿನಿಂದ ದೇಶೀಯ ಮಾರುಕಟ್ಟೆಯಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಇದರಿಂದ ಉತ್ಪತ್ತಿಯಾದ ಕೋಟ್ಯಂತರ ರೂಪಾಯಿ ನಗದನ್ನು ಹವಾಲಾ ಮಾರ್ಗದ ಮೂಲಕ ಭಾರತ ಮತ್ತು ವಿದೇಶಗಳಲ್ಲಿ ವರ್ಗಾವಣೆ ಮಾಡಲಾಗುತ್ತಿತ್ತು" ಎಂದು ಇ.ಡಿ ತನ್ನ ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟಪಡಿಸಿದೆ.

ಕಳ್ಳಸಾಗಣೆಯಿಂದ ಬಂದ ಕಪ್ಪು ಹಣವನ್ನು ಕಾನೂನುಬದ್ಧ ವ್ಯಾಪಾರದ ಆದಾಯವೆಂದು ಬಿಂಬಿಸಲು, ಆರೋಪಿಗಳು ಅನೇಕ ನಕಲಿ ಬ್ಯಾಂಕ್ ಖಾತೆಗಳು ಮತ್ತು ಶೆಲ್ ಸಂಸ್ಥೆಗಳ ಮೂಲಕ ಅಕ್ರಮ ಹಣ ವರ್ಗಾವಣೆ (Money laundering) ಮಾಡುತ್ತಿದ್ದರು ಎಂಬುದು ವಿಸ್ತೃತ ತನಿಖೆಯಿಂದ ದೃಢಪಟ್ಟಿದೆ. "ಇಂತಹ ಅಕ್ರಮ ಚಟುವಟಿಕೆಗಳು ಕೇವಲ ಕಾನೂನುಬದ್ಧ ವ್ಯಾಪಾರ ಮತ್ತು ಆರ್ಥಿಕ ವ್ಯವಸ್ಥೆಯನ್ನು ಹಾಳುಮಾಡುವುದಲ್ಲದೆ, ಗಡಿಯಾಚೆಗಿನ ವಹಿವಾಟುಗಳನ್ನು ನಿಯಂತ್ರಿಸುವ ಸಾಂಸ್ಥಿಕ ವ್ಯವಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುತ್ತವೆ" ಎಂದು ಇ.ಡಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ ನಟಿ

ಕಳೆದ ಮಾರ್ಚ್ 3, 2025 ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದಿದ್ದರು. ಈ ವೇಳೆ ಆಕೆಯ ಬಳಿ ಅಡಗಿಸಿಟ್ಟುಕೊಂಡಿದ್ದ 12.56 ಕೋಟಿ ರೂ. ಮೌಲ್ಯದ 14.213 ಕೆ.ಜಿ. ವಿದೇಶಿ ಮೂಲದ ಚಿನ್ನ ಪತ್ತೆಯಾಗಿತ್ತು.

ನಂತರ ರನ್ಯಾ ರಾವ್ ಮತ್ತು ಆಕೆಯ ಸಹಚರರ ಮನೆ, ಕಚೇರಿಗಳ ಮೇಲೆ ನಡೆದ ಸರಣಿ ಶೋಧ ಕಾರ್ಯದಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ 2.67 ಕೋಟಿ ರೂ. ನಗದು ಪತ್ತೆಯಾಗಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ, ಮೇ 21 ಮತ್ತು 22, 2025 ರಂದು ಕರ್ನಾಟಕದಾದ್ಯಂತ 16 ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಹಲವು ಮಹತ್ವದ ಡಿಜಿಟಲ್ ಸಾಧನಗಳು, ದೋಷಾರೋಪಣಾ ದಾಖಲೆಗಳು, ಭಾರತೀಯ ನಗದು ಹಾಗೂ ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಿದ್ದರು. ತನಿಖೆಯ ವೇಳೆ ಹಲವರ ಹೇಳಿಕೆಗಳನ್ನು ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 50ರ ಅಡಿಯಲ್ಲಿ ದಾಖಲಿಸಿಕೊಳ್ಳಲಾಗಿದೆ.

34 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಕಸ್ಟಮ್ಸ್ ಕಾಯ್ದೆ 1962ರ ಸೆಕ್ಷನ್ 135ರ ಅಡಿಯಲ್ಲಿ ಡಿಆರ್‌ಐ ದಾಖಲಿಸಿದ್ದ ದೂರಿನ ಆಧಾರದ ಮೇಲೆ, ಸಿಬಿಐ ಮಾರ್ಚ್ 7, 2025 ರಂದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿತ್ತು. ಇದರ ಬೆನ್ನಲ್ಲೇ ಇ.ಡಿ ತನ್ನ ಪ್ರತ್ಯೇಕ ತನಿಖೆಯನ್ನು ಆರಂಭಿಸಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಡಿ ಜುಲೈ 4, 2025 ರಂದು ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 5(1)ರ ಅಡಿಯಲ್ಲಿ ರನ್ಯಾ ರಾವ್ ಹೆಸರಿನಲ್ಲಿದ್ದ ಸುಮಾರು 34.12 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಇ.ಡಿ ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.

ಸದ್ಯ ನಟಿ ರನ್ಯಾ ರಾವ್ ಮತ್ತು ಆಕೆಯ ಪ್ರಮುಖ ಸಹಚರರ ವಿರುದ್ಧ ಅತ್ಯಂತ ಕಟ್ಟುನಿಟ್ಟಿನ 'ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ'ಯಡಿ (COFEPOSA - 1974) ಪ್ರಕರಣ ದಾಖಲಿಸಲಾಗಿದ್ದು, ಎಲ್ಲ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+