Ramya Divya Spandana: ಮೈಸೂರು ದಸರಾ ಆನೆಗಳ ಬಗ್ಗೆ ಪೋಸ್ಟ್ - ವಿಡಿಯೋ ಹಂಚಿಕೊಂಡ ನಟಿ ರಮ್ಯಾ, ಹೇಳಿದ್ದೇನು
ಮೈಸೂರು: ಮೈಸೂರು ದಸರಾ ಆನೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ನಟಿ, ಮಾಜಿ ಸಂಸದೆ ರಮ್ಯಾ / ದಿವ್ಯಸ್ಪಂದನಾ ಅವರು ಮಾಡಿರುವ ಟ್ವೀಟ್ ಇದೀಗ ಭಾರೀ ಚರ್ಚೆಗೆ ನಾಂದಿ ಹಾಡಿದೆ. ಈಚೆಗೆ ಮಧ್ಯರಾತ್ರಿ ಕೆಲವರು ಪಟಾಕಿ ಸಿಡಿಸುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಅವರು ಪೋಸ್ಟ್ ಹಂಚಿಕೊಂಡಿದ್ದರು. ಆನೆಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ರಮ್ಯಾ ಮಾತನಾಡಿದ್ದಾರೆ. ಈಚೆಗೆ ಶಿವಮೊಗ್ಗ ದಸರಾ ಉತ್ಸವದಲ್ಲಿ ಆನೆಗೆ ಸಮಸ್ಯೆ ಆಗಿರುವ ಬಗ್ಗೆಯೂ ನಟಿ ರಮ್ಯಾ ಅವರು ಮಾತನಾಡಿದ್ದರು.
ಮೈಸೂರು ದಸರಾದಲ್ಲಿ ಭಾಗವಹಿಸುವ ಆನೆಗಳ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ರಮ್ಯಾ ಅವರು, ವಿಡಿಯೋ ಹಾಗೂ ಬರಹವನ್ನು ಹಂಚಿಕೊಂಡಿದ್ದಾರೆ. ಲಾರಿಯಲ್ಲಿ ಸಾಗಿಸುತ್ತಿರುವ ಆನೆಯ ಬಗ್ಗೆ ಮಾತನಾಡಿರುವ ರಮ್ಯಾ, ಆ ಆನೆ ನೃತ್ಯ ಮಾಡುತ್ತಿಲ್ಲದಿರಬಹುದು. ಸೆರೆಯಲ್ಲಿರುವ ಆನೆಯು ತನ್ನ ತಲೆಯನ್ನು ಪದೇ ಪದೇ ಅಲುಗಾಡಿಸಿದಾಗ ಅಥವಾ ಅದೇ ಮಾದರಿಯಲ್ಲಿ ತನ್ನ ದೇಹವನ್ನು ಅಲುಗಾಡಿಸಿದಾಗ, ಅದು ಸ್ಟೀರಿಯೊಟೈಪಿಕ್ ನಡವಳಿಕೆಯನ್ನು ಪ್ರದರ್ಶಿಸುತ್ತಿರಬಹುದು - ಒತ್ತಡ ಮತ್ತು ದುರ್ಬಲ ಯೋಗಕ್ಷೇಮಕ್ಕೆ ಸಂಬಂಧಿಸಿದ ಪುನರಾವರ್ತಿತ ಚಲನೆಗಳು ಆಗಿರಬಹುದು ಅಂತ ಹೇಳಿದ್ದಾರೆ.

ಆ ಆನೆಯ ಈಗಿನ ವರ್ತನೆಯ ಹಿಂದೆ ಆಘಾತ ಮತ್ತು ಒತ್ತಡವನ್ನು ಅನುಭವಿಸಿರಬಹುದು. ಅದರ ಪರಿಸ್ಥಿತಿ ಸುಧಾರಿಸಿದ ನಂತರವೂ ಇಂತಹ ವರ್ತನೆ ಮುಂದುವರಿಯಬಹುದು. ನಾವು ಮಾಡುವ ದೊಡ್ಡ ತಪ್ಪುಗಳಲ್ಲಿ ಒಂದು, ಪ್ರಾಣಿಗಳು ತಮ್ಮ ಭಾವನೆಗಳನ್ನು ಮನುಷ್ಯರಂತೆಯೇ ವ್ಯಕ್ತಪಡಿಸುತ್ತವೆ ಎಂದು ಭಾವಿಸುವುದು. ನಮಗೆ ಆನೆ ಕುಣಿಯುತ್ತಿರುವಂತೆ ಕಂಡರೂ, ಅದು ಸಂತೋಷದಿಂದಿದೆ ಎಂದರ್ಥವಲ್ಲ.
ಆನೆಯ ವಿಡಿಯೋ ಚಿತ್ರೀಕರಿಸುವ ಮೊದಲು, ಅದಕ್ಕೆ ಸಂಗೀತ ಸೇರಿಸುವ ಮೊದಲು ಅಥವಾ "ಕುಣಿಯುವ ಆನೆ" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೊದಲು ಸ್ವಲ್ಪ ಯೋಚಿಸಿ. ನೀವು ಆನೆಯ ಸಂಕಟದ ಲಕ್ಷಣವೊಂದನ್ನು ಮನರಂಜನೆಯಾಗಿ ಬದಲಾಯಿಸುತ್ತಿರಬಹುದು. ಇಂತಹ ವರ್ತನೆಯನ್ನು ಗುರುತಿಸಲು ಕಲಿಯಿರಿ. ಆನೆ ಸಂತೋಷದಿಂದಿದೆ ಎಂಬುದಕ್ಕೆ ಸಾಕ್ಷಿಯಾಗಿ ಈ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ ಎಂದೂ ನಟಿ ರಮ್ಯಾ ಅವರು ಹೇಳಿದ್ದಾರೆ.
ಮಾವುತರೊಂದಿಗೆ ಮಾತನಾಡಿರುವ ರಮ್ಯಾ..
ಇನ್ನು ನಟಿ ರಮ್ಯಾ ಅವರು ಆನೆಯ ಮಾವುತರೊಂದಿಗೆ ಮತನಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆನೆ ಡ್ಯಾನ್ಸ್ ಮಾಡುತ್ತಿದೆಯೇ ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮಾವುತರು, ಇಲ್ಲ ಮೇಡಂ ಅದು ಒತ್ತಡದಿಂದ ಈ ರೀತಿ ಮಾಡುತ್ತದೆ. ಏಳರಿಂದ ಎಂಟು ಗಂಟೆಯ ಅವಧಿ ಬಂಧನದಲ್ಲಿರುತ್ತವೆ. ಸಾಮಾನ್ಯ ಆನೆಯಂತೆ ಇವು ವರ್ತಿಸುವುದಿಲ್ಲ, ಹೀಗಾಗಿ ಈ ರೀತಿ ವರ್ತಿಸುತ್ತವೆ ಹಾಗೂ ಆನೆಗಳು ಗುಂಪಾಗಿ ಇರುತ್ತವೆ. ಆದರೆ ಒಂಟಿಯಾಗಿ ಇರುವಾಗ ಈ ರೀತಿ ವರ್ತಿಸುತ್ತವೆ ಅಂತಲೂ ಹೇಳಲಾಗಿದೆ.
ನೆಟ್ಟಿಗರು ಏನಂದ್ರು ?
ನಟಿ ರಮ್ಯಾ ಅವರ ಪೋಸ್ಟ್‌ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತುಂಬಾ ನಿಜವಾದ ಮಾತು... ನಾವು ಮನುಷ್ಯರ ವರ್ತನೆಗಳನ್ನೇ ಪ್ರಾಣಿಗಳಿಗೂ ಅನ್ವಯಿಸಿ ನೋಡುವುದರಿಂದ, ಅವುಗಳಿಗೆ ಎಷ್ಟು ನೋವು ಮತ್ತು ಮಾನಸಿಕ ಒತ್ತಡ ಉಂಟುಮಾಡುತ್ತೇವೆ ಎಂಬುದು ನಿಜಕ್ಕೂ ದುಃಖಕರ. ಗೋಲ್ಡನ್ ರಿಟ್ರೀವರ್ ಮತ್ತು ಲ್ಯಾಬ್ರಡಾರ್ ನಾಯಿಗಳಿಗೆ ಚಳಿಯಾಗುತ್ತಿದೆ ಎಂದು ಭಾವಿಸಿ ಅವುಗಳಿಗೆ ಸ್ವೆಟರ್‌ಗಳನ್ನು ಹಾಕುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ!
ಮನುಷ್ಯರು ಮಾಡುವ ಅತ್ಯಂತ ಮೂರ್ಖತನದ ಕೆಲಸಗಳಲ್ಲಿ ಇವೂ ಸೇರಿವೆ ಎಂದೂ ಕೆಲವರು ಹೇಳಿದ್ದಾರೆ. ಪ್ರಾಣಿಗಳು ಸಹ ಸ್ವಾತಂತ್ರ್ಯಕ್ಕೆ ಅರ್ಹವಾಗಿವೆ, ನಮ್ಮ ಮನರಂಜನೆಗಾಗಿ ಜೀವಮಾನವಿಡೀ ಸೆರೆಯಲ್ಲಿರಬಾರದು. ಅವುಗಳನ್ನು ಸುತ್ತಾಡಲು, ನೈಸರ್ಗಿಕವಾಗಿ ಬದುಕಲು ಮತ್ತು ಕಾಡಿನಲ್ಲಿ ಮುಕ್ತವಾಗಿರಲು ಬಿಡಿ. ನಿಜವಾದ ಸಂತೋಷವೆಂದರೆ ಅವುಗಳನ್ನು ಕಾಡಿನಲ್ಲಿ ನೋಡುವುದು, ನಮಗಾಗಿ ಪ್ರದರ್ಶನ ನೀಡುವುದಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
That elephant may not be dancing.When a captive elephant repeatedly sways its head or rocks its body in the same pattern, it may be displaying stereotypic behaviour -repetitive movements associated with stress and compromised welfare.That elephant may carry a history of trauma and stress. These behaviours can persist even after conditions improve.One of the biggest mistakes we make is assuming that animals express themselves the way we do. What looks like dancing to us is not necessarily happiness.Before filming, adding music or sharing a “dancing elephant” video, pause. You may be turning a sign of distress into entertainment.Please learn to recognise the behaviour. Don’t circulate it as proof of joy.
— Ramya/Divya Spandana (@divyaspandana) October 27, 2026


Click it and Unblock the Notifications
