Rameshwaram Cafe Blast: ಶೀಘ್ರ ದುಷ್ಕರ್ಮಿಗಳನ್ನು ಸೆರೆ ಹಿಡಿಯುತ್ತೇವೆ: ಡಿಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು, ಮಾರ್ಚ್ 01: "ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟಕ್ಕೆ ಕಾರಣರಾಗಿರುವ ದುಷ್ಕರ್ಮಿಗಳನ್ನು ಆದಷ್ಟು ಬೇಗ ಪತ್ತೆಹಚ್ಚಿ ಬಂಧಿಸಲಾಗುವುದು" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸ್ಫೋಟ ನಡೆದ ಕೋರಮಂಗಲದ ರಾಮೇಶ್ವರಂ ಕೆಫೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಮಾತನಾಡಿ, ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ್ದು, ಇದೊಂದು ಅಲ್ಪ ತೀವ್ರತೆ ಸ್ಫೋಟವಾಗಿದೆ. ಈ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ಬಾಂಬ್ ನಿಗ್ರಹ ದಳ, ಎಫ್ ಎಸ್ ಎಲ್ ತಂಡ ಪರಿಶೀಲನೆ ನಡೆಸುತ್ತಿದೆ. ಈ ಪ್ರಕರಣದ ತನಿಖೆಗೆ 7-8 ತಂಡಗಳನ್ನು ನೇಮಿಸಲಾಗಿದೆ.

ಈ ಸ್ಫೋಟದಲ್ಲಿ ಯಾರಿಗೂ ತೊಂದರೆ ಆಗಿಲ್ಲ. ಬೆಂಗಳೂರಿನ ನಾಗರೀಕರು ಗಾಬರಿಯಾಗುವ ಅಗತ್ಯವಿಲ್ಲ. ಈ ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದು, ತನಿಖಾಧಿಕಾರಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ."
ಬಿಜೆಪಿ ನಾಯಕರು ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿರುವ ಬಗ್ಗೆ ಕೇಳಿದಾಗ, "ಅವರು ಏನಾದರೂ ಟೀಕೆ, ಆರೋಪ ಮಾಡಲಿ. ನಾವು ನಮ್ಮ ನಗರ ಹಾಗೂ ರಾಜ್ಯದ ಘನತೆ ರಕ್ಷಣೆ ಮಾಡಲು ಪ್ರಯತ್ನಿಸುತ್ತೇವೆ. ಅವರ ಅಧಿಕಾರ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಏನೆಲ್ಲಾ ಆಗಿದೆ ಎಂದು ಎಲ್ಲರಿಗೂ ಗೊತ್ತಿದೆ. ನಾವು ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ. ಆದಷ್ಟು ಬೇಗ ಈ ಪ್ರಕರಣದ ರೂವಾರಿಗಳನ್ನು ಸೆರೆ ಹಿಡಿಯುತ್ತೇವೆ. ಪೊಲೀಸರು ಕಾನೂನು ಪಾಲನೆ ಮಾಡಲಿದ್ದಾರೆ. ಬೆಂಗಳೂರಿನ ಎಲ್ಲೆಡೆ ಕ್ಯಾಮೆರಾಗಳಿದ್ದು ಆದಷ್ಟು ಬೇಗ ಇವರನ್ನು ಪತ್ತೆ ಹಚ್ಚುತ್ತೇವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ" ಎಂದು ತಿಳಿಸಿದರು.
ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟದ ಬಗ್ಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಬೆಂಗಳೂರಿನ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಈ ಸ್ಫೋಟವನ್ನು ಯಾರು, ಯಾವ ಕಾರಣಕ್ಕೆ ಮಾಡಿದ್ದಾರೆ. ಇದು ವ್ಯಾಪಾರದ ವೈರಿಗಳೇ ಮಾಡಿದ್ದೇ ಅಥವಾ ಬೇರೆ ಉದ್ದೇಶದಿಂದ ಮಾಡಿದ್ದಾರೆಯೇ ಎಂದು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.
ರಾಮೇಶ್ವರಂ ಕೆಫೆ ಸುತ್ತಮುತ್ತಲ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳ ವಿಡಿಯೋ ಇದೆ. ಸುಮಾರು 2 ಕಿ.ಮೀ. ವ್ಯಾಪ್ತಿಯಲ್ಲಿ ಯಾರು ಬಂದು ಹೋಗಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆದಿದೆ. ಸದ್ಯಕ್ಕೆ ಯಾರಿಗೂ ತೊಂದರೆ ಆಗಿಲ್ಲ. ಬೆಂಗಳೂರಿನಲ್ಲಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕೆಲವರು ಶಾಂತಿ ಕದಡಲು ಪ್ರಯತ್ನ ಮಾಡುತ್ತಿದ್ದಾರೆ. ನಾವು ರಕ್ಷಣೆ ನೀಡುತ್ತೇವೆ" ಎಂದು ತಿಳಿಸಿದರು.












Click it and Unblock the Notifications