ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಸಂಸದ
ವಿಜಯಪುರ, ಸೆಪ್ಟೆಂಬರ್ 08: ರಾಜ್ಯದಲ್ಲಿ ಮುಡಾ ಹಗರಣ ಸಾಕಷ್ಟು ಸದ್ದು ಮಾಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಇದೊಂದೇ ಕೇಸ್ ಅಲ್ಲ. ಇನ್ನೂ ಬಹಳ ಇವೆ ಎಂದು ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೊಸ ಬಾಂಬ್ ಹಾಕಿದ್ದಾರೆ.
ಈ ಕುರಿತು ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ಸಿದ್ದರಾಮಯ್ಯನವರದ್ದು ಇದೊಂದೇ ಕೇಸ್ ಅಲ್ಲ. ಈ ಕೇಸ್ನಲ್ಲಿ ಏನಾಗುತ್ತದೆ ಆಗುತ್ತದೆ. ಇಲ್ಲವಾದರೆ ಸಿದ್ದರಾಮಯ್ಯನವರದ್ದು ಇನ್ನೂ ಬಹಳ ಕೇಸ್ ಇವೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದರಲ್ಲಿ ಬಿಜೆಪಿಯವರ ಪಾತ್ರವಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಯಾವ ಕೇಸ್ ಎಂದು ಗೊತ್ತಿಲ್ಲ. ಅವರಿವರು ಕರೆ ಮಾಡಿ ಹೇಳುತ್ತಿದ್ದಾರೆ. ಕೇಸ್ ಆಗುವುದಂತೂ ಸತ್ಯ. ಇದೆಲ್ಲಾ ಬಿಜೆಪಿ ಪ್ಲ್ಯಾನ್ ಅಲ್ಲ. ಅವರ ಜನರೇ ಪ್ಲ್ಯಾನ್ ಹಾಕುತ್ತಾರೆಂದು ಬಾಂಬ್ ಸಿಡಿಸಿದ್ದಾರೆ. ಇದರಲ್ಲಿ ಬಿಜೆಪಿಯವರ ಪಾತ್ರವಿಲ್ಲ. ಅವರ ಪಾರ್ಟಿಯವರದ್ದೇ ಪಾತ್ರವಿದೆ. ಸಿಎಂ ವಿರುದ್ದದ ಮಾಹಿತಿಯನ್ನು ಕಾಂಗ್ರೆಸ್ನವರೇ ನಮಗೆ ಮಾಹಿತಿ ನೀಡುತ್ತಿದ್ದಾರೆ. ಅವರು ಕೊಡುತ್ತಾರೆಂದು ನಾವು ರಾಜಕೀಯ ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ವಿರುದ್ದ ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿ ನಾಯಕರು ಬಳಕೆ ಮಾಡಿಕೊಂಡರು ಎಂಬ ವಿಚಾರವಾಗಿ ಮಾತನಾಡಿ, ಮುಡಾದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು ನಿಜ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡಿದ್ದೇವೆ. ಸಿದ್ದರಾಮಯ್ಯ ಒಳ್ಳೆ ಮನುಷ್ಯ, ಆತನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ವಿಚಾರವಾಗಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಹೆಸರಿದೆ, ಆದರೆ ಅವರನ್ನು ಮೂಲೆಗೆ ಕೂರಿಸಿದ್ದಾರೆ. ಅವರ ಹೆಸರನ್ನು ಯಾರೂ ಪ್ರಸ್ತಾಪಿಸುತ್ತಿಲ್ಲ. ಎಂ.ಬಿ.ಪಾಟೀಲ್ ಅಷ್ಟೇ ಯಾಕೆ ಎಲ್ಲರೂ ಮುಖ್ಯಮಂತ್ರಿ ಆಗಬೇಕೆನ್ನುತ್ತಾರೆ. ಇದು ಅವರ ಒಗ್ಗಟ್ಟು ಹೇಗಿದೆ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಸಿಎಂ ಸ್ಥಾನಕ್ಕೆ ಪೈಪೋಟಿ ಅದೆಲ್ಲಾ ನಡೆಯೋದೆ, ಎಲ್ಲರೂ ಸಿಎಂ ಆಗಬೇಕೆಂದು ಹೇಳುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕೆಂದು ಪರಮೇಶ್ವರ್ ಟೀಂ ಇದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರ ಕೂಡ ಒಂದು ತಂಡ ಇದೆ. ಹಿಂದುಳಿದ ವರ್ಗದ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕೆನ್ನುತ್ತಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ. ಆದರೆ ಈ ವಿಷಯದಲ್ಲಿ ಅವರು ಅಧಿಕಾರಕ್ಕೆ ಬೆನ್ನು ಹತ್ತಿದ್ದಾರೆ. ಈ ವಿಚಾರದಲ್ಲಿ ನನಗೂ ಬಹಳ ಕೆಡುಕೆನಿಸುತ್ತದೆ. ಹಿಂದೆ ಫೋನ್ ಕದ್ದಾಲಿಕೆ ವಿಚಾರ ಬಂದಾಗ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದ್ದರು. ಇಂದಿಗೂ ಅವರ ಹೆಸರಿಗೆ ಮುಂದಿನ 50 ವರ್ಷ ಹೆಗಡೆ ಅವರ ಹೆಸರು ಇರುತ್ತದೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರೆ ಅವರದ್ದೂ ಹೆಸರು ಇರುತ್ತಿತ್ತು. ಆದರೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿಲ್ಲ. ಇವರು ಅಧಿಕಾರಕ್ಕೆ ಬೆನ್ನು ಹತ್ತಿದ್ದಾರೆ. ಯಾವುದೇ ತಪ್ಪಿಲ್ಲಾ ಎಂದು ಸಿಎಂ ಹೇಳುತ್ತಿದ್ದಾರೆ. ನಾಳೆ ಕೋರ್ಟ್ ಹೇಳುತ್ತದೆಯಲ್ಲ ಎಂದು ರಮೇಶ್ ಜಿಗಜಿಣಗಿ ಹೇಳಿದ್ದಾರೆ.












Click it and Unblock the Notifications