ಬೀಗ ಜಡಿಯಲು ಬಂದವರಿಗೆ 'ನೀರು ಕುಡಿಸಿದ' ಜನರು!

By: ರಾಮನಗರ ಪ್ರತಿನಿಧಿ
Subscribe to Oneindia Kannada

ರಾಮನಗರ, ಮೇ 11 : ಮಾಜಿ ನಗರಸಭಾ ಸದಸ್ಯರೊಬ್ಬರ ಮಾಲೀಕತ್ವದ ಶುದ್ಧ ಕುಡಿಯುವ ನೀರಿನ ತಯಾರಿಕಾ ಘಟಕವೊಂದಕ್ಕೆ ಬೀಗ ಮುದ್ರೆ ಹಾಕಲು ಬಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಯೊಬ್ಬರು ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಬರಿಗೈಯ್ಯಲ್ಲಿ ತೆರಳಿದ ಘಟನೆ ನಡೆದಿದೆ.

ರಾಮನಗರ ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ಮಾಜಿ ನಗರಸಭಾ ಸದಸ್ಯ ಜಿ.ನಾಗರಾಜು ಮಾಲೀಕತ್ವದಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಪ್ಯಾಕೇಜ್ ಡ್ರಿಂಕಿಂಗ್ ವಾಟರ್ ಸರಬರಾಜು ಮಾಡುವ (ಫ್ಯೂಚರ್ ಮಿನರಲ್ ವಾಟರ್) ಕೈಗಾರಿಕಾ ಘಟಕದ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿ ಡಿ.ಅನುಸೂಯ ಅವರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಮಂಗಳವಾರ ದಾಳಿ ನಡೆಸಿದ್ದರು.

ಈ ವಿಷಯ ತಿಳಿದು ನೀರಿನ ಘಟಕದ ಬಳಿ ಜಮಾಯಿಸಿದ ಬಡಾವಣೆಯ ನಾಗರಿಕರು ಅಧಿಕಾರಿಗಳ ಕ್ರಮವನ್ನು ಖಂಡಿಸಿ ವಾಗ್ದಾಳಿಗಿಳಿದರಲ್ಲದೆ, ಘಟಕವನ್ನು ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. [ನಕಲಿ ದಾಖಲೆ ಮೂಲಕ ಬಿಡದಿಯಲ್ಲಿ ಭೂಮಿ ಗುಳುಂ!]

Ramanagara residents send back govt officials

ಈ ವೇಳೆ ಘಟಕದ ಮಾಲೀಕ ಜಿ.ನಾಗರಾಜು ಘಟಕದಲ್ಲಿ ಮಿನರಲ್ ವಾಟರ್ ತಯಾರು ಮಾಡಲು ಬೇಕಾದ ಎಲ್ಲಾ ಸಲಕರಣೆಗಳು, ಸಂಬಂಧಪಟ್ಟ ಅಂತಾರಾಷ್ಟ್ರೀಯ ಟಿ.ವಿ.ಇ ಪ್ರಮಾಣ ಪತ್ರ, ಅರ್ಹತಾ ಪರೀಕ್ಷಾ ಪ್ರಮಾಣ ಪತ್ರ, ನಗರಸಭೆಯಿಂದ ದೃಢೀಕರಣ ಪತ್ರ, ಜಿಲ್ಲಾ ಜಂಟಿ ನಿರ್ದೇಶಕರಿಂದ ಉದ್ದಿಮೆದಾರರ ಜ್ಞಾಪನಾ ವಿವರಣಾ ಪತ್ರ ಹಾಗೂ ಸರ್ಕಾರಕ್ಕೆ ಕಾಲ ಕಾಲಕ್ಕೆ ಸಂಬಂಧಪಟ್ಟ ತೆರಿಗೆಗಳನ್ನು ಪಾವತಿಸಿದ ದಾಖಲೆ ತೋರಿಸಿದರು.

ಯಾವ ತಂಟೆ ತಕರಾರು ಇಲ್ಲದೇ ಘಟಕವನ್ನು ನಡೆಸುತ್ತಿದ್ದರೂ ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು. 2013ರಲ್ಲಿ ತಮ್ಮ ಪರ ಕೋರ್ಟಿನಲ್ಲಿ ಡಿಕ್ರಿಯಾಗಿರುತ್ತದೆ, ಸದರಿ ತೀರ್ಪಿನಲ್ಲಿ ಪ್ರತಿವಾದಿಗಳಾಗಲಿ ಅಥವಾ ಇತರೆ ಯಾರೇ ಆಗಲಿ ಫ್ಯೂಚರ್ ಮಿನರಲ್ ವಾಟರ್ ಉದ್ದಿಮೆಗೆ ಯಾವುದೇ ತೊಂದರೆ ನೀಡದಂತೆ ನ್ಯಾಯಾಲಯದ ಆದೇಶ ನೀಡಿರುವ ದಾಖಲೆಗಳನ್ನು ಪ್ರದರ್ಶಿಸಿದರು. [ಕುಮಾರಣ್ಣ ಬೇಕಾದ್ರೆ ಒಂದೇಟು ಹೊಡೀಲಿ, ಅದು ಬಿಟ್ಟು..]

ಘಟಕದ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದೆ ಅಲ್ಲದೇ ಕಾನೂನಿನ ಪ್ರಕಾರ ಯಾವುದೇ ಘಟಕದ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾದರೆ 7 ದಿನಗಳ ಮುನ್ನವೇ ಸಂಬಂಧಪಟ್ಟ ಘಟಕದ ಮಾಲೀಕರಿಗೆ ನೋಟಿಸ್ ಜಾರಿ ಮಾಡಬೇಕು. ಹೀಗಿದ್ದರೂ ತಾವು ನೋಟಿಸ್ ಏಕೆ ಜಾರಿ ಮಾಡಿಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಇದರಿಂದ ಕೊಂಚ ವಿಚಲಿತರಾದ ಅಧಿಕಾರಿ ತಾವು ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ನೋಟಿಸ್ ಜಾರಿ ಮಾಡಿದ ನಂತರವೇ ಕ್ರಮ ಕೈಗೊಳ್ಳುವುದಾಗಿ ಹೇಳಿ ಅಲ್ಲಿಂದ ನಿರ್ಗಮಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Residents of Ramanagara have sent back Food Safety and Standard department official when he came to check the quality of drinking water supplied by Future Mineral Water unit owned by G Nagaraju, former city corporation member.
Please Wait while comments are loading...