₹5,00,00,000 ಕೋಟಿ ವೆಚ್ಚದ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಸೆಪ್ಟಂಬರ್ 06: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಬಸ್ ನಿಲ್ದಾಣ, ಘಟಕಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದೀಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ವ್ಯಾಪ್ತಿಯಲ್ಲಿ ಬಹುಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಈ ಸಂಬಂಧ ಕಾಮಗಾರಿಗೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (KKRTC) ನಿಗಮದಿಂದ ಆಳಂದ ಪಟ್ಟಣ ಬಸ್ ನಿಲ್ದಾಣದಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿಗೆ ಭಾನುವಾರ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕರ್ನಾಟಕ ಸಾರಿಗೆ ಇಲಾಖೆ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಒತ್ತು ನೀಡಿದೆ. 2,736 ಅಧಿಕಾರಿ-ನೌಕರರ ನೇಮಕಾತಿಗೆ ಅನುಮತಿ ಕೋರಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

ಸಾರಿಗೆ ನಿಮಗಳಿಗೆ ಚಾಲಕರು, ನಿರ್ವಾಹಕರೇ ಬೆನ್ನೆಲುಬು. ಅವರಿಂದಲೇ ಬಸ್ ಕಾರ್ಯಾಚರಣೆ ಸೇವೆ ಸಾಧ್ಯವಾಗುತ್ತಿದೆ. 2016 ರಿಂದ 2023ರವರೆಗೆ ನೇಮಕಾತಿ ಮಾಡದ ಕಾರಣ ಮಾನವ ಸಂಪನ್ಮೂಲ ಸಮಸ್ಯೆ ಉಂಟಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರವು 1,000 ಅನುಕಂಪ ಸೇರಿ ಇದುವರೆಗೆ 10 ಸಾವಿರ ನೌಕರರ ನೇಮಕಾತಿ ಮಾಡಿಕೊಂಡಿದೆ. ಎಲ್ಲವು ಪಾದರ್ಶಕವಾಗಿ ನಡೆದಿದೆ ಎಂದು ಮಾಹಿತಿ ಕೊಟ್ಟರು.
ಐದು ಕೋಟಿ ಅನುದಾನದಲ್ಲಿ ಆಳಂದಾದಲ್ಲಿ ಬಸ್ ನಿಲ್ದಾಣ ನಿರ್ಮಿಸುತ್ತಿದ್ದೇವೆ. ಇದಕ್ಕೆ ಇಷ್ಟು ಹಣ ಸಾಕಾಗಲ್ಲ. ಮುಂದಿನ ದಿನಗಳಲ್ಲಿ ಅನುದಾನ ಸಹ ನೀಡಲಾಗುವುದು. ಕಳೆದ ಎರಡು ವರ್ಷದ ಅವಧಿಯಲ್ಲಿ ಈ ಸಂಸ್ಥೆಗೆ 1,031 ಬಸ್ ನೀಡಿದ್ದೇವೆ. ಅದೇ ರೀತಿ 2025ರಲ್ಲಿ KSRTC ಗೆ 900 ಬಸ್‌ಗಳು, NWKRTCಗೆ 700, ಕಲ್ಯಾಣ ಕರ್ನಾಟಕ ಸಾರಿಗೆಗೆ 400 ಬಸ್ ನೀಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ 36 ಮೃತ ಸಿಬ್ಬಂದಿ ಅವಲಂಬಿತರಿಗೆ ಅನುಕಂಪ ಆಧಾರದ ಹುದ್ದೆಗಳಿಗೆ ನೇಮಕಾತಿ ಆದೇಶವನ್ನು ವಿತರಿಸಲಾಯಿತು. ಬಸ್ ಅಪಘಾತದಲ್ಲಿ ಮೃತಪಟ್ಟ ಇಬ್ಬರು ಪ್ರಯಾಣಿಕರ ಕುಟುಂಬದವರಿಗೆ ರೂಪಾಯಿ 10 ಲಕ್ಷಗಳ ಚೆಕ್ ಅನ್ನು ವಿತರಣೆ ಮಾಡಲಾಯಿತು. KSRTC ಯಲ್ಲಿ 1.50 ಕೋಟಿ ರೂಪಾಯಿ ಮತ್ತು ಉಳಿದ ಸಂಸ್ಥೆಗಳಲ್ಲಿ 1 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಗ್ರ್ಯಾಚುಟಿ ಮೊತ್ತ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.












Click it and Unblock the Notifications