ರಾಮಜನ್ಮಭೂಮಿ ಹೋರಾಟ ಕೇಸ್ ತನಿಖೆ ಬಗ್ಗೆ ಜಿ.ಪರಮೇಶ್ವರ ಹೇಳಿದ್ದೇನು?
ಬೆಂಗಳೂರು, ಜನವರಿ 01: ರಾಮಜನ್ಮಭೂಮಿ ಹೋರಾಟ ಪ್ರಕರಣಕ್ಕೆ ಮರುಜೀವ ಬಂದಿದೆ. ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತರು ಬಂಧನ ಭೀತಿ ಎದುರಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್ ಅವರು ಇದರಲ್ಲಿ ದುರುದ್ದೇಶ ಇಲ್ಲ. ಯಾರನ್ನು ನಾವು ಟಾರ್ಗೆಟ್ ಮಾಡಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಳೇ ಪ್ರಕರಣಗಳನ್ನು ಕ್ಲಿಯರ್ ಮಾಡಲು ಸಂದೇಶ ಕೊಟ್ಟಿದ್ದೇವೆ. ರಾಜ್ಯದಲ್ಲಿರುವ ಎಲ್ಲಾ ಹಳೇ ಕೇಸ್ ಗಳನ್ನೆಲ್ಲ ವರ್ಷಾನುಗಟ್ಟಲೇ ಇಟ್ಟುಕೊಂಡು, ತನಿಖೆ ಮಾಡದೆ ಇಟ್ಟು ಕೊಂಡಿರುವ ಬಗ್ಗೆ ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್ ಕೊಟ್ಟಿದೆ. ಹೀಗಾಗಿ ಪ್ರಕರಣಗಳನ್ನು ಕೈಗೊಂಡಿದ್ದೇವೆ. ಅದರಲ್ಲಿ ಈ ಪ್ರಕರಣವು ಒಂದು ಇದೆ.

ಹುಬ್ಬಳ್ಳಿಯಲ್ಲಿ 32 ಕೇಸ್‌ಗಳು ಬಾಕಿ ಉಳಿದಿವೆ. ಈ ಎಲ್ಲ ಪ್ರಕರಣಗಳನ್ನು ವಿಲೇವಾರಿ ಮಾಡುವಂತೆ ಸೂಚನೆ ಇದೆ. ಈ 32 ಪ್ರಕರಣಗಳಲ್ಲಿ ಹಿಂದೂ ಕಾರ್ಯಕರ್ತರ ಹೋರಾಟವು ಒಂದಾಗಿದೆ. ಎಲ್ಲ ಪ್ರಕರಣಗಳಂತೆ ಇದನ್ನು ಪರಿಗಣಿಸಲಾಗುವುದು. ಇದಕ್ಕೆ ಬಣ್ಣ ಕಟ್ಟುವುದು ಸರಿಯಲ್ಲ ಎಂದು ತಿಳಿಸಿದರು.
ಸರ್ಕಾರ ಯಾರನ್ನು ಟಾರ್ಗೆಟ್ ಮಾಡುತ್ತಿಲ್ಲ
ಹೀಗೆ ಪ್ರಕರಣಗಳ ತನಿಖೆಯಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ. ಹಿಂದೂ ಕಾರ್ಯಕರ್ತರು ಬೇರೆ ಸಂಘಟನೆ ಕಾರ್ಯಕರ್ತರು ಎಂದು ನಾವೇನು ಟಾರ್ಗೆಟ್ ಮಾಡಿಲ್ಲ. ಕಾನೂನು ಮೀರಿ ಏನು ಮಾಡಲಾಗುವುದಿಲ್ಲ. ಕಾನೂನು ಪ್ರಕಾರ ಏನು ಸಾಧ್ಯವೂ ಅದನ್ನು ಪೊಲೀಸ್ ಇಲಾಖೆ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಆಕಸ್ಮಿಕ ಆಗಿರುವ ಪ್ರಕರಣಗಳಿದ್ದು, ಯಾವುದೇ ಉದ್ದೇಶಪೂರ್ವಕವಾಗಿ ಆಗಿರುವುದಲ್ಲ. ಇದೊಂದೇ ಪ್ರಕರಣವನ್ನು ರಿಓಪನ್ ಮಾಡಿದ್ದರೆ ಉದ್ದೇಶಪೂರ್ವಕ ಎಂದು ಹೇಳಬಹುದಿತ್ತು ಬೇರೆ ಪ್ರಕರಣಗಳನ್ನು ತನಿಖೆ ಕೈಗೊಳ್ಳಲಾಗಿದೆ.
ಬೇರೆ ಬೇರೆ ಹಳೆ ಪ್ರಕರಣಗಳನ್ನು ಕ್ಲಿಯರ್ ಮಾಡುವ ಸಂದರ್ಭದಲ್ಲಿ ಈ ಪ್ರಕರಣವು ಒಂದು ಬಂದಿದೆ. ಹಳೆ ಪ್ರಕರಣಗಳೆಲ್ಲವನ್ನು ಶೀಘ್ರವೇ ತೆರವು ಮಾಡುವ ಬಗ್ಗೆ ಸರ್ಕಾರದ ಸೂಚನೆ ನೀಡಿದೆ. ರಾಜ್ಯದಲ್ಲಿ ಸುಮಾರು ಪ್ರಕರಣಗಳು ಕಾರಣಾಂತರಗಳಿಂದ ಹಾಗೆಯೇ ಬಾಕಿ ಉಳಿದಿವೆ ಎಂದು ಅವರು ಮಾಹಿತಿ ನೀಡಿದರು.

ಹುಬ್ಬಳ್ಳಿ ಪೊಲೀಸ್ ಕಮೀಷನರ್ ಹೇಳಿದ್ದೇನು?
ರಾಮ ಜನ್ಮಭೂಮಿ ಹೋರಾಟದ ಪ್ರಕರಣ ಅಂತ ಏನು ಪ್ರತ್ಯೇಕವಾಗಿಲ್ಲ. ಬಹುದಿನಗಳಿಂದ ಬಾಕಿ ಉಳಿದಿದ್ದ ಲಾಂಗ್ ಫೆಂಡಿಂಗ್ ಕೇಸ್ ನಂತೆಯೇ ಇದರಲ್ಲಿಯೂ ಕೂಡ ಕೋರ್ಟ್ ನಿರ್ದೇಶನದ ಮೂಲಕ ಆರೋಪಿ ಒಬ್ಬನನ್ನು ದಸ್ತಗಿರಿ ಮಾಡಲಾಗಿದೆ. ಇದರಲ್ಲಿ ಯಾವುದೇ ಸರ್ಕಾರದ ಒತ್ತಡ ಇಲ್ಲ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಹೇಳಿದರು.
ಸೋಮವಾರ ಕೇಸುಗಳ ರಿಓಪನ್ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಲಾಂಗ್ ಫೆಂಡಿಂಗ್ ಕೇಸ್ ಪತ್ತೆ ಹಚ್ಚುವುದು ಈ ಬಗ್ಗೆ ಕ್ರಮಗಳನ್ನು ಜರುಗಿಸುವುದು ಸಾಮಾನ್ಯ ಪ್ರಕ್ರಿಯೆ ಇದರಲ್ಲಿ ಏನು ಕೂಡ ವಿಶೇಷತೆ ಇಲ್ಲ. ಇದು ಎಲ್ಲಾ ಜಿಲ್ಲೆಯಲ್ಲಿಯೂ ಕೂಡ ನಡೆಯುತ್ತದೆ. ಸುಮಾರು ಇಪ್ಪತ್ತು, ಇಪ್ಪತ್ತೈದು, ಮೂವತ್ತು ವರ್ಷಗಳ ಪ್ರಕರಣಗಳನ್ನು ಚೀಟಿಂಗ್, ಡ್ರಗ್ಸ್, ರಾಬರಿ ಕೇಸ್ ಸಂಬಂಧಿಸಿದಂತೆ ಪ್ರಕರಣ ಪತ್ತೆ ಮಾಡಿದ್ದೇವೆ. ಅದರಂತೆ ಕೋರ್ಟ್ ನಿರ್ದೇಶನದ ಮೇರೆಗೆ ಎಲ್ಒಪಿ ಗಳನ್ನು ಪತ್ತೆ ಮಾಡಲಾಗುತ್ತದೆ ಎಂದರು.
ಇದರಲ್ಲಿ ಯಾವುದೇ ರೀತಿಯ ಒತ್ತಡ . ಇದೆಲ್ಲವೂ ಪೊಲೀಸ್ ಇಲಾಖೆಯಲ್ಲಿ ಕೋರ್ಟ್ ನಿರ್ದೇಶನದ ಮೇರೆಗೆ ನಡೆಯುವ ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದ್ದಾರೆ.
ಏನಿದು, ಇದರ ಹಿನ್ನೆಲೆ ಏನು?
31 ವರ್ಷದ ಬಳಿಕ ರಾಮಜನ್ಮಭೂಮಿ ಹೋರಾಟದ ಪ್ರಕರಣ ಕ್ಕೆ ಮರುಜೀವ ಬಂದಿದ್ದು, ಹೋರಾಟಗಾರರಲ್ಲಿ ನಡುಕ ಶುರುವಾಗಿದೆ. ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಪ್ರಕರಣದ ಮರುತನಿಖೆ ಆರಂಭಿಸಿದ್ದು, ಹುಬ್ಬಳ್ಳಿ ಪೊಲೀಸರಿಂದ ಅಂದಿನ ಆರೋಪಿಗಳಿಗಾಗಿ ಏಕಾಏಕಿ ಹುಡುಕಾಟ ಆರಂಭಿಸಿದ್ದಾರೆ.
31 ವರ್ಷದ ಬಳಿಕ ಓರ್ವ ಆರೋಪಿಯನ್ನ ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದಿನ ವೃದ್ಧರೆ ಅಂದಿನ ಹೋರಾಟಗಾರರು
ಪ್ರಕರಣ ದಾಖಲಾದಾಗ ಆರೋಪಿತ ವ್ಯಕ್ತಿಗಳು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 65-70 ವರ್ಷಗಳಾಗಿವೆ. ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ, ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕರಸೇವೆಗೂ ಮುನ್ನ ಅಂದರೆ ಡಿಸೆಂಬರ್ 5, 1992 ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ ಸಂಭವಿಸಿದ್ದು, ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಸದ್ಯ ಈ ಹಳೆ ಪ್ರಕರಣಕ್ಕೆ ಮರುಜೀವ ಕೊಡಲು ಹುಬ್ಬಳ್ಳಿ ಪೊಲೀಸರು ಮುಂದಾಗಿದ್ದಾರೆ.












Click it and Unblock the Notifications