Ram Mandir; ಈಗಲೂ ಕಾಲಮಿಂಚಿಲ್ಲ ಸಿದ್ದರಾಮಯ್ಯ, ವಿಜಯೇಂದ್ರ ಟ್ವೀಟ್
ಬೆಂಗಳೂರು, ಜನವರಿ 21: ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜನವರಿ 22ರ ಸೋಮವಾರ ಶ್ರೀ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ವಿವಿಧ ರಾಜ್ಯ ಸರ್ಕಾರಗಳು ಸೋಮವಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿವೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರ ರಜೆ ಘೋಷಣೆ ಮಾಡಿಲ್ಲ. ರಜೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರಿನಲ್ಲಿ ಭಾನುವಾರ ಹೇಳಿಕೆ ನೀಡಿದ್ದಾರೆ. ಆದರೆ ಪ್ರತಿಪಕ್ಷ ಬಿಜೆಪಿ ರಜೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಲೇ ಇದೆ.

ಭಾನುವಾರ ಸಂಜೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 'ನಾಳೆ ರಜೆ ಘೋಷಿಸಿ ಬಿಡಿ, ಅಪವಾದದಿಂದ ದೂರವಿರಿ' ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
ಬಿ. ವೈ. ವಿಜಯೇಂದ್ರ ಪೋಸ್ಟ್; ಬಿ. ವೈ. ವಿಜಯೇಂದ್ರ ತಮ್ಮ ಪೋಸ್ಟ್‌ನಲ್ಲಿ 'ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಹಿಮಾಚಲ ಪ್ರದೇಶದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ರಾಮಶ್ರದ್ಧೆಯ ಹೃದಯಗಳ ನಿರೀಕ್ಷೆಗೆ ಅಲ್ಲಿನ ಮುಖ್ಯಮಂತ್ರಿಗಳು ತಮ್ಮ ವಿವೇಚನೆಯ ಬಾಗಿಲು ತೆರೆದು ಸಾರ್ವತ್ರಿಕ ರಜೆ ಘೋಷಿಸಿ ರಾಷ್ಟ್ರೀಯತೆ ಗೌರವಿಸಿದ್ದಾರೆ' ಎಂದು ಹೇಳಿದ್ದಾರೆ.
'ನಿಮ್ಮ ಸರ್ಕಾರದ ರಾಮ ವಿರೋಧಿ ಮನಸ್ಸುಗಳ ವರ್ತನೆ ಹಾಗೂ ನಿಂದನೆಗಳ ಪರಿಣಾಮ ಈಗಾಗಲೇ ಕಳಂಕದ ಭಾರ ನಿಮ್ಮ ಹೆಗಲೇರಿದೆ. ಈಗಲೂ ಕಾಲಮಿಂಚಿಲ್ಲ, ನಿಮ್ಮ ಮೈಸೂರಿನಿಂದಲೇ ಬಾಲ ರಾಮ ಅಯೋಧ್ಯೆಗೆ ತೆರಳಿದ್ದಾನೆ. ಶತಕೋಟಿ ಜನರ ಹೃದಯಗಳ ನಾಳೆ ಆವರಿಸಿಕೊಳ್ಳಲಿದ್ದಾನೆ' ಎಂದು ತಿಳಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿ @siddaramaiah ಅವರೇ,
— Vijayendra Yediyurappa (@BYVijayendra) January 21, 2024
ಹಿಮಾಚಲ ಪ್ರದೇಶದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ರಾಮಶ್ರದ್ಧೆಯ ಹೃದಯಗಳ ನಿರೀಕ್ಷೆಗೆ ಅಲ್ಲಿನ ಮುಖ್ಯಮಂತ್ರಿಗಳು ತಮ್ಮ ವಿವೇಚನೆಯ ಬಾಗಿಲು ತೆರೆದು ಸಾರ್ವತ್ರಿಕ ರಜೆ ಘೋಷಿಸಿ ರಾಷ್ಟ್ರೀಯತೆ ಗೌರವಿಸಿದ್ದಾರೆ.
ನಿಮ್ಮ ಸರ್ಕಾರದ ರಾಮ ವಿರೋಧಿ ಮನಸ್ಸುಗಳ ವರ್ತನೆ ಹಾಗೂ… pic.twitter.com/Qyut9sRUgd
'ಈ ಪವಿತ್ರ ಕ್ಷಣಗಳನ್ನು ಕಣ್ತುಂಬಿಕೊಂಡು ದಿನವಿಡೀ ರಾಮ ಸ್ಮರಣೆ ಮಾಡಲು ಹಂಬಲಿಸುತ್ತಿರುವ ಜನರ ಭಾವನೆಗಳನ್ನು ಗೌರವಿಸಲು ನಾಳೆ ರಜೆ ಘೋಷಿಸಿ ಬಿಡಿ, ಅಪವಾದದಿಂದ ದೂರವಿರಿ' ಎಂದು ಪೋಸ್ಟ್ ಹಾಕಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ; ಜನವರಿ 22ರ ಸೋಮವಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಭಾನುವಾರ ತುಮಕೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಮಾತನಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾಳೆ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆದರೆ ಸರ್ಕಾರಿ ರಜೆ ಇಲ್ಲ. ದೇಗುಲಗಳಲ್ಲಿ ದಾಸೋಹ, ಪಾನಕ, ಫಲಹಾರ ವ್ಯವಸ್ಥೆ ಬಗ್ಗೆ ನನಗೆ ಮಾಹಿತಿ ಇಲ್ಲ" ಎಂದರು.
"ಸೋಮವಾರ ಮಹದೇವಪುರದಲ್ಲಿ ರಾಮನ ದೇವಸ್ಥಾನ ಉದ್ಘಾಟನೆ ಮಾಡುತ್ತಿದ್ದೇನೆ. ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ದೇಗುಲ ಉದ್ಘಾಟಿಸುತ್ತೇನೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಭಾನುವಾರ ಪ್ರತಿಪಕ್ಷ ನಾಯಕ ಆರ್. ಅಶೋಕ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಜನವರಿ 22ರಂದು ಅಯೋಧ್ಯೆಯಲ್ಲಿ ನೂತನ ರಾಮಮಂದಿರದ ಉದ್ಘಾಟನೆ ಹಾಗೂ ಬಾಲರಾಮನ ಪ್ರಾಣ ಪ್ರತಷ್ಠಾಪನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಬ್ಬದ ವಾತಾವರಣವಿದ್ದು, ರಾಜ್ಯದ ಜನತೆಯ ಈ ಸಂಭ್ರಮಾಚರಣೆಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಬೇಕೆಂದು ಮನವಿ ಮಾಡಿದ್ದರು.
500 ವರ್ಷಗಳ ಹೋರಾಟ, ತ್ಯಾಗದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗಿ ಜನವರಿ 22ರಂದು ವಿಗ್ರಹ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಈ ದಿನದಂದು ಪ್ರತಿ ಮನೆಗಳಲ್ಲಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ದೀಪ ಬೆಳಗುವುದು, ಭಜನೆ, ಶ್ರೀರಾಮನ ಆರಾಧನೆ ನಡೆಯುತ್ತಿದೆ. ಇಡೀ ರಾಜ್ಯದಲ್ಲಿ ಸಂಭ್ರಮ, ಸಡಗರದ ಆಚರಣೆ ನಡೆಯಲಿದೆ. ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕೂಡ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ್ದು, ಈಗಾಗಲೇ ಕೇಂದ್ರ ಸರ್ಕಾರದ ಕಚೇರಿಗಳಿಗೆ ಅರ್ಧ ದಿನದ ರಜೆ ಘೋಷಿಸಿದ್ದಾರೆ ಎಂದು ಪತ್ರದಲ್ಲಿ ಆರ್. ಅಶೋಕ ಹೇಳಿದ್ದಾರೆ.
ರಾಜ್ಯದಲ್ಲೂ ದೊಡ್ಡ ಮಟ್ಟದ ಆಚರಣೆ ನಡೆಯುತ್ತಿದ್ದು, ಆ ದಿನ ಕೆಲಸ ಮಾಡುವುದರಿಂದ ಆಚರಣೆಗೆ ತೊಡಕು ಉಂಟಾಗಬಹುದು. ಆದ್ದರಿಂದ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು, ಸಾರ್ವಜನಿಕ ಉದ್ದಿಮೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಅನುಕೂಲವಾಗುವಂತೆ ಜನವರಿ 22ರಂದು ಒಂದು ದಿನದ ಮಟ್ಟಿಗೆ ಸರ್ಕಾರಿ ರಜೆಯನ್ನು ಘೋಷಿಸಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಅಶೋಕ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.












Click it and Unblock the Notifications