Rakshit Shetty Post: ಅನಂತ್ ನಾಗ್‌ಗೆ ವಿಶ್ ಮಾಡಿ ಪೇಚಿಗೆ ಸಿಲುಕಿದ ನಟ ರಕ್ಷಿತ್ ಶೆಟ್ಟಿ: ಕನ್ನಡಿಗರ ಡಿಮ್ಯಾಂಡ್ ಏನು
ಹಿರಿಯ ನಟ ಅನಂತ್ ನಾಗ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ ಅನಂತ್ ನಾಗ್ ಅವರಿಗೆ ಶುಭಕೋರಿರುವ ನಟ ರಕ್ಷಿತ್ ಶೆಟ್ಟಿ ಅವರು ಇದೀಗ ಕನ್ನಡಿಗರು, ಕನ್ನಡ ಸಿನಿಮಾ ಪ್ರಿಯರಿಂದ ಪೇಚಿಗೆ ಸಿಲುಕಿದ್ದಾರೆ. ಪ್ರೀತಿಯಿಂದಲೇ ರಕ್ಷಿತ್ ಶೆಟ್ಟಿ ಅವರಿಗೆ ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇಷ್ಟಕ್ಕೂ ನಟ ಅನಂತ್ ನಾಗ್ ಅವರ ಬಗ್ಗೆ ರಕ್ಷಿತ್ ಶೆಟ್ಟಿ ಅವರು ಮಾಡಿದ ಟ್ವೀಟ್ ಏನು, ನೆಟ್ಟಿಗರು ಏನು ಹೇಳುತ್ತಿದ್ದಾರೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ನಟ ಅನಂತ್‌ನಾಗ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದು, ಕನ್ನಡಿಗರು ಸಂಭ್ರಮಿಸಿದ್ದಾರೆ. ಇದೇ ಸಮಯದಲ್ಲಿ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ನಟ ರಕ್ಷಿತ್ ಶೆಟ್ಟಿ ಅವರು ಅನಂತ್‌ನಾಗ್ ಅವರಿಗೆ ಶುಭಕೋರಿದ್ದಾರೆ. ಈ ಅದ್ಭುತ ಪ್ರಯಾಣವನ್ನು ಅವರು ನಡೆಸಿಕೊಂಡು ಬಂದಿರುವ ಅನುಗ್ರಹ ಯಾವಾಗಲೂ ಸ್ಫೂರ್ತಿದಾಯಕವಾಗಿದೆ. ಅನಂತ್ ನಾಗ್ ಸರ್, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು. ಕನ್ನಡ ಚಿತ್ರರಂಗದ ದಂತಕಥೆಗೆ ಸಲ್ಲಬೇಕಾದ ಗೌರವ ♥ ಅಂತ ಹೇಳಿದ್ದಾರೆ. ಈ ಒಂದೇ ಒಂದು ಪೋಸ್ಟ್ ಬೆನ್ನಲ್ಲೇ ಕನ್ನಡಿಗರು ರಕ್ಷಿತ್ ಶೆಟ್ಟಿಗೆ ಸಿಕ್ಕಾಪಟ್ಟೆ ಕ್ಲಾಸ್ ತಗೊಂಡಿದ್ದಾರೆ. ಇದರಲ್ಲಿ ವಿನಯಪೂರ್ವಕ ಮನವಿಯೂ ಇದೆ, ಕಿವಿ ಮಾತೂ ಇದೆ. ಮಗುವಿಗೆ ಗದರಿ ಹೇಳುವಂತಹ ಮುದ್ದಾದ ಮಾತುಗಳೂ ಇವೆ.

ಗುರು ಬೇಗ ಬಾ ಪ್ಲೀಸ್! ಎಂದ ನೆಟ್ಟಿಗರು
ಅನಂತ್‌ನಾಗ್ ಅವರಿಗೆ ಶುಭಕೋರಿ ನಟ ರಕ್ಷಿತ್ ಶೆಟ್ಟಿ ಅವರು ಮಾಡಿರುವ ಪೋಸ್ಟ್ ರಕ್ಷಿತ್ ಅವರ ಬಗ್ಗೆಯೇ ಹೆಚ್ಚು ಚರ್ಚೆಗೆ ಕಾರಣವಾಗುವಂತೆ ಆಗಿದೆ. ಗುರು ಎಲ್ಲಿದ್ದಿಯಾ, ಕನ್ನಡ ಇಂಡಸ್ಟ್ರಿಗೆ ನಿಮ್ಮ ಅವಶ್ಯಕತೆ ಇದೆ. ಬೇಗ ಬಾ ಗುರು ಬಾ ಪ್ಲೀಸ್ ಅಂತ ಕನ್ನಡಿಗರು ಕಾಮೆಂಟ್ ಮಾಡಿದ್ದಾರೆ. ನಿಜ ಹೇಳಬೇಕೆಂದರೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ನಿಮ್ಮ ಮತ್ತು ನಿಮ್ಮ ನಿರ್ಮಾಣ ಸಂಸ್ಥೆಯ ಅಗತ್ಯವಿದೆ ಎಂದು ನೆಟ್ಟಿಗರು ಹೇಳಿದ್ದಾರೆ. ಅಣ್ಣ Richard Anthony ಬಂದಿಲ್ಲ ಅಂದ್ರು ಪರ್ವಾಗಿಲ್ಲ, ಆದರೆ ದಯವಿಟ್ಟು ಸಿನಿಮಾ ಮಾಡು ಗುರು ಅಂತ ಹಲವರು ಹೇಳಿದ್ದಾರೆ.
ಏನ್ ಗುರು ನೀನು, ನೀವು ಪ್ರೊಡ್ಯೂಸ್ ಮಾಡೋ ಸಿನಿಮಾನು ಬರ್ತಾ ಇಲ್ಲ, ನಿಮ್ಮ ಸಿನಿಮಾನು ಬರ್ತಾ ಇಲ್ಲ. ಸಿನಿಮಾದಿಂದ ವಿದಾಯ ತೊಗಂಡ್ ಇದ್ದೀನಿ ಅಂತ ಒಂದ್ ಪೋಸ್ಟ್ ಮಾಡಿ, ನಾವು ನಿನಗೋಸ್ಕರ ಕಾಯೋದು ಬಿಟ್ಟು ಬಿಡುತ್ತೇವೆ. ಅಪರೂಪಕ್ಕೆ ಒಂದ್ ಟ್ವೀಟ್ ಮಾಡಿ ತೀರ್ಥ ಪ್ರಸಾದ್ ಕೊಟ್ಟು ಹೋಗೋ ಕೆಲಸ ಮಾಡ್ತಾ ಇದ್ದಿಯಾ ಅಂತ ಕನ್ನಡಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಶೆಟ್ರೇ ಫ್ಯಾನ್ಸ್‌ನ ಇಷ್ಟೊಂದು ಕಾಯಿಸಬಾರದು ಅಂತಲೂ ನೆಟ್ಟಿಗರು ಹೇಳಿದ್ದಾರೆ.
ಸಿನೆಮಾಗಳ ನಡುವೆ ಸ್ವಲ್ಪ ಸಮಯ ತೆಗೆದುಕೊಳ್ಳುವುದು ಅರ್ಥವಾಗುವಂತಹದ್ದೇ, ಆದರೆ ಮೂರು ವರ್ಷಗಳ ಕಾಲ ಯಾವುದೇ ಸಿನಿಮಾ ಬಿಡುಗಡೆಯಾಗದೆ ಚಿತ್ರರಂಗದಿಂದ ದೂರ ಉಳಿಯುವುದು ಯಾವುದೇ ಚಲನಚಿತ್ರ ನಿರ್ಮಾಪಕರಿಗೆ ದೀರ್ಘ ಅಂತರವಾಗಿದೆ. ಪ್ರೇಕ್ಷಕರು ಸಂಪರ್ಕದಲ್ಲಿರಲು ಮತ್ತು ಚಿತ್ರಮಂದಿರಗಳಿಗೆ ಬರುತ್ತಲೇ ಇರಲು ನಿಯಮಿತವಾಗಿ ಸಿನಿಮಾ ಮಾಡಬೇಕಾತ್ತದೆ. ಮತ್ತೆ ಕಾರ್ಯಪ್ರವೃತ್ತರಾಗುವುದರ ಮಹತ್ವವನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ಕೆಎಫ್‌ಐಗೆ ನಿಮ್ಮ ಅಗತ್ಯವಿದೆ - ಉತ್ತಮ ಚಿತ್ರದೊಂದಿಗೆ ಶೀಘ್ರದಲ್ಲೇ ಹಿಂತಿರುಗಿ ಅಂತ ನೆಟ್ಟಿಗರೊಬ್ಬರು ಹೇಳಿದ್ದಾರೆ.


Click it and Unblock the Notifications
