ಜೆಡಿಎಸ್- ಕಾಂಗ್ರೆಸ್ ಸಂಧಾನ ವಿಫಲ: ರಂಗೇರಿದ ರಾಜ್ಯಸಭಾ ಚುನಾವಣೆ ಕಣ
ಬೆಂಗಳೂರು, ಜೂ. 04: ಕರ್ನಾಟಕ ವಿಧಾನ ಮಂಡಲದಿಂದ ರಾಜ್ಯಸಭೆಗೆ ಚುನಾವಣೆ ಜೂ. 10 ರಂದು ನಡೆಯಲಿದೆ. ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಯಾರೂ ಸಹ ವಾಪಸು ಪಡೆದಿಲ್ಲ. ಹೀಗಾಗಿ ಕಣದಲ್ಲಿ ಅರು ಅಭ್ಯರ್ಥಿಗಳು ಉಳಿದುಕೊಂಡಿದ್ದು, ಗೆಲುವಿನ ಪ್ರತಿಷ್ಠೆಗಾಗಿ ಹೊಸ ತಂತ್ರಗಳನ್ನು ಹೆಣೆಯುತ್ತಿವೆ.
Recommended Video
ಜೂ. 10 ರಂದು ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದೆ. ಅದೇ ದಿನ ಸಂಜೆ 05 ಗಂಟೆಗೆ ಮತ ಎಣಿಕೆ ನಡೆಯಲಿದ್ದು ಅದೇ ದಿನ ಫಲಿತಾಂಶ ಪ್ರಕಟ ಮಾಡುವುದಾಗಿ ವಿಧಾನಸೌಧದಲ್ಲಿ ಚುನಾವಾಣಾಧಿಕಾರಿ ವಿಶಾಲಾಕ್ಷಿ ತಿಳಿಸಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತದ ಮತ ಪಡೆಯಲಿರುವ ಅಭ್ಯರ್ಥಿಗಳು ಅನಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ. ಉಳಿಕೆ ಪ್ರಥಮ ಪ್ರಾಶಸ್ತ್ಯ ಮತಗಳ ಜತೆಗೆ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಯಾರು ಹೆಚ್ಚು ಪಡೆಯುತ್ತಾರೋ ಅವರ ಗೆಲುವು ಪಕ್ಕಾ ಆಗಲಿದೆ. ಇನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಸಂಧಾನ ಮೈತ್ರಿ ಫಲ ಕೊಟ್ಟಿಲ್ಲ ಹೀಗಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಇದೀಗ ಮೂರು ಪಕ್ಷಗಳಿಗೆ ನಾಲ್ಕನೇ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಜೆಡಿಎಸ್‌ಗೆ ಟಾಂಗ್ ಕೊಟ್ಟ ಕಾಂಗ್ರೆಸ್
ತನ್ನ ಸಾಂಪ್ರದಾಯಕ ವೈರಿ ಪಕ್ಷ ಜೆಡಿಎಸ್‌ಗೆ ಬುದ್ಧಿ ಕಲಿಸಲು ಸಿದ್ದು ಕಾಂಗ್ರೆಸ್ ಪಕ್ಷದ ವತಿಯಿಂದ ಮನ್ಸೂರ್ ಆಲಿಖಾನ್ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕುಪೇಂದ್ರರೆಡ್ಡಿ ಕೂಡ ಕಣದಲ್ಲಿ ಉಳಿದುಕೊಂಡಿದ್ದಾರೆ. ಕಾಂಗ್ರೆಸ್ ಎರಡನೇ ಅಭ್ಯರ್ಥಿ ನಾಮಪತ್ರ ವಾಪಸು ಪಡೆಯುವ ಸಂಬಂಧ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸೋನಿಯಾ ಸಂಧಾನ ಸಭೆಗೆ ಸಿದ್ದು ಟೀಮ್ ಸೊಪ್ಪು ಹಾಕಿಲ್ಲ. ಹೀಗಾಗಿ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಮನ್ಸೂರ್ ಆಲಿಖಾನ್ ಕಣದಲ್ಲಿಯೇ ಉಳಿದುಕೊಂಡಿದ್ದಾರೆ. ಮನ್ಸೂರ್ ನಾಮಪತ್ರ ವಾಪಸು ಪಡೆಯದ ಕಾರಣ ಕಾಂಗ್ರೆಸ್‌ನ ಉಳಿಕೆ ಮತಗಳು ಜೆಡಿಎಸ್ ಗೆ ಬೀಳುವ ಸಾಧ್ಯತೆ ತಪ್ಪಿದೆ.

ಬಿಜೆಪಿಗೆ ಒಂದು ಸೀಟು ಹೆಚ್ಚಿಸುವುದು ಬೇಡ
ಬಿಜೆಪಿಗೆ ಒಂದು ಸೀಟು ಹೆಚ್ಚುವರಿ ಗೆಲುವು ಕೊಡುವುದು ಬೇಡ ಎಂಬ ಕಾರಣ ನೀಡಿ ಮಲ್ಲಿಕಾರ್ಜುನ ಖರ್ಗೆ ಮೂಲಕ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ಮನೆ ಕದ ತಟ್ಟಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಹಿಂಪಡೆಯಲು ನಿರಾಕರಿಸಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್, ಜೆಡಿಎಸ್ ಅಭ್ಯರ್ಥಿಯೇ ಈ ಬಾರಿ ಕಣದಿಂದ ವಾಪಸು ಸರಿಯಲಿ ಎಂದು ಹೇಳಿದ್ದಾರೆ. ಈ ಮೂಲಕ ಜೆಡಿಎಸ್ ನ ಆಸೆಗೆ ಕಾಂಗ್ರೆಸ್ ನಾಯಕರು ತಣ್ಣೀರು ಎರಚಿದ್ದಾರೆ.

ಮುಸ್ಲಿಂ ಅಭ್ಯರ್ಥಿ ಹಿಂಪಡೆದರೆ ಬೇರೆ ಸಂದೇಶ ರವಾನೆ
ಕಾಂಗ್ರೆಸ್ ಅಭ್ಯರ್ಥಿ ಹಿಂಪಡೆದರೆ ಬೇರೆ ಸಂದೇಶ ರವಾನೆ ಆಗುತ್ತದೆ. ಮುಸ್ಲಿಂ ಸಮುದಾಯ ಮತ್ತೆ ಕಾಂಗ್ರೆಸ್ ಮೇಲೆ ಮುನಿಸಿಕೊಳ್ಳುತ್ತದೆ. ಜೆಡಿಎಸ್ ಬೆಂಬಲಿಸಿದರೆ ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಮತಗಳಿಗೆ ಪೆಟ್ಟು ಬೀಳಲಿದೆ. ಕಾಂಗ್ರೆಸ್ ಬಳಸಿಕೊಂಡು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿರುವ ಜೆಡಿಎಸ್ ಗೆ ಅವಕಾಶ ಕೊಡುವುದು ಬೇಡ. ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ಬದಲಿಸುವ ಜೆಡಿಎಸ್ ತನ್ನ ನಿರ್ಧರ ಬದಲಿಸಿದರೆ ಕೆಟ್ಟ ಸಂದೇಶ ರವಾನೆ ಅಗುತ್ತದೆ.ಕಳೆದ ಬಾರಿ ದೇವೇಗೌಡರನ್ನು ಬೆಂಬಲಿಸಿದ್ದೆವು. ಈ ಭಾರಿ ಜೆಡಿಎಸ್ ಪಕ್ಷವೇ ಕಾಂಗ್ರೆಸ್ ನ್ನು ಬೆಂಬಲಿಸಲಿ. ಜಾತ್ಯತೀತ ತತ್ವ ಅವರಿಗೆ ಮುಖ್ಯ ಎನ್ನುವುದಾದರೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾವಣೆ ಮಾಡಲಿ ಎಂಬ ಸಂದೇಶವನ್ನೇ ಸಿದ್ದು ಕೇಂದ್ರ ವರಿಷ್ಠರಿಗೆ ರವಾನಿಸಿದ್ದಾರೆ.

ವಿಧಾನಸಭಾ ಚುನಾವಣೆಗೂ ಇದು ಸಂದೇಶ
ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಜೆಡಿಎಸ್ ಬೆಂಬಲವೂ ಬೇಡ. ಸ್ವತಂತ್ರ್ಯವಾಗಿಯೇ ಕಾಂಗ್ರೆಸ್ ಚುನಾವಣೆ ಎದುರಲಿಸಿದೆ ಎಂದು ಸ್ಪಷ್ಟ ಸಂದೇಶವನ್ನು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಾಂಗ್ರೆಸ್ ಹೈ ಕಮಾಂಡ್ ಕಳುಹಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಬಾಂಧವ್ಯ ಕಡಿತದಿಂದ ಮೂರು ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಉಳಿಯಲಿದ್ದಾರೆ. ಜೂ. 10 ರಂದು ರಾಜಕೀಯ ತಂತ್ರಗಾರಿಕೆಯ ಅಸಲಿ ಚಿತ್ರಣ ಗೊತ್ತಾಗಲಿದೆ.












Click it and Unblock the Notifications