ರಾಜ್ಯಸಭೆ ಚುನಾವಣೆ: ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತದಾನ
ಬೆಂಗಳೂರು, ಜೂನ್ 10: ರಾಜ್ಯಸಭೆ ಚುನಾವಣೆಯ ಹಿನ್ನೆಲೆ ವಿಧಾನಸೌಧದಲ್ಲಿ ಬಿರುಸಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ.
ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಶುಕ್ರವಾರ ಬೆಳಗ್ಗೆ 9 ಗಂಟೆಗೆ ಮತದಾನ ಪ್ರಕ್ರಿಯೆಯನ್ನು ಶುರು ಮಾಡಲಾಯಿತು. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ತಂಡೋಪತಂಡವಾಗಿ ವಿಧಾನಸೌಧದತ್ತ ಹರಿದು ಬಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಭಾರತೀಯ ಜನತಾ ಪಕ್ಷದ ಶಾಸಕರು ಮತದಾನ ಮಾಡಿದರು. ಅದೇ ರೀತಿ ಕಾಂಗ್ರೆಸ್ ಶಾಸಕರು ಮತ್ತು ಜೆಡಿಎಸ್ ಶಾಸಕರು ಸಹ ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಗೆಲುವಿನ ಲೆಕ್ಕಾಚಾರ: ಕರ್ನಾಟಕದಲ್ಲಿ ಒಬ್ಬ ಅಭ್ಯರ್ಥಿ ಗೆಲುವಿಗೆ ಕನಿಷ್ಠ 45 ಮತಗಳು ಅಗತ್ಯವಾಗಿದೆ. ಬಿಜೆಪಿಯು 121 ಶಾಸಕರನ್ನು ಹೊಂದಿದ್ದು, ರಾಜ್ಯಸಭೆಯ ಮೂರು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. 70 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ಪಕ್ಕಾ ಆಗಿದೆ.
ಜೆಡಿಎಸ್ ಪಕ್ಷದಿಂದ ಅಖಾಡಕ್ಕಿಳಿದ ಕುಪೇಂದ್ರ ರೆಡ್ಡಿ; ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆಲುವು ಬಹುತೇಕ ಖಚಿತವಾಗಿದೆ. ಇನ್ನೊಂದು ಮಗ್ಗಲಿನಲ್ಲಿ ಎರಡನೇ ಅಭ್ಯರ್ಥಿ ನಟ ಜಗ್ಗೇಶ್ ಹಾಗೂ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಅಖಾಡಕ್ಕೆ ಧುಮುಕಿದ್ದಾರೆ.
Recommended Video
ಕಾಂಗ್ರೆಸ್ ಪಕ್ಷದಿಂದ ಮೊದಲ ಅಭ್ಯರ್ಥಿಯಾಗಿ ಜಯರಾಮ್ ರಮೇಶ್ ಮತ್ತು ಎರಡನೇ ಅಭ್ಯರ್ಥಿ ಆಗಿ ಮನ್ಸೂರ್ ಅಲಿ ಖಾನ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದರ ಮಧ್ಯೆದಲ್ಲಿ 32 ಶಾಸಕರನ್ನು ಹೊಂದಿರುವ ಜೆಡಿಎಸ್ ಉಳಿದ ನಾಲ್ಕನೇ ಸ್ಥಾನಕ್ಕಾಗಿ ಕುಪೇಂದ್ರ ರೆಡ್ಡಿಯನ್ನು ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಸಿದೆ.












Click it and Unblock the Notifications