ಸಂಸ್ಕೃತ ಮತ್ತು ಸಂಸ್ಕೃತಿ ಪೋಷಿಸುತ್ತಿದೆ ಶೃಂಗೇರಿ ಕಾಲೇಜು

By: ತೇಜಶಂಕರ ಸೋಮಯ್ಯಾಜಿ, ಶೃಂಗೇರಿ
Subscribe to Oneindia Kannada

ಪ್ರಪಂಚದ ಎಲ್ಲಾ ಸಂಸ್ಕೃತಿಗಳಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣವಾದುದು ನಮ್ಮ ಭಾರತೀಯ ಸನಾತನ ಸಂಸ್ಕೃತಿ. ನಮ್ಮ ಸಂಸ್ಕೃತಿಯು ಆದಿ-ಅಂತ ರಹಿತವಾದುದು. ನಮ್ಮ ಸಂಸ್ಕೃತಿಯು ವೇದಶಾಸ್ತ್ರಗಳಿಂದ ಸ್ಮೃತಿಪುರಾಣಗಳಿಂದ ಪ್ರತಿಪಾದಿಸಲ್ಪಡುತ್ತದೆ. ಈ ನಮ್ಮ ಸಂಸ್ಕೃತಿಯ ಮೂಲಭಾಷೆ ಸಂಸ್ಕೃತ.

ಹಲವಾರು ಜನರು ಇಂದು ಮೃತಭಾಷೆ ಎಂದು ಭ್ರಮಿಸಿರುವ ಈ ಸಂಸ್ಕೃತ ಭಾಷೆ ನಿಜವಾಗಿಯೂ ನಮ್ಮ ಮಾತೃಭಾಷೆ. ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿದ ಈ ಭಾಷೆ ಅಗ್ರಸ್ಥಾನದಲ್ಲಿ ಎಂದೂ ಚಿರಸ್ಥಾಯಿ. ಹಿಂದಿನ ಶತಮಾನದಲ್ಲಿ ಮೂಲೆಗುಂಪಾಗಿದ್ದ ಈ ಸಂಸ್ಕೃತ ಭಾಷೆಯು ಇಂದು ಹಿಮವಂತ ಋತುವಿನಲ್ಲಿ ಕಮರಿ ಮತ್ತೆ ವಸಂತದಲ್ಲಿ ಚಿಗುರುವ ಮಹಾನ್ ವೃಕ್ಷದಂತೆ ಮೈಗೊಡವಿ ಮೇಲೇಳುತ್ತಿದೆ.

ಶ್ರೀಶಂಕರಭಗವತ್ಪಾದರಿಂದ ಸ್ಥಾಪಿಸಲ್ಪಟ್ಟ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠವು ಅಲೌಕಿಕವಾಗಿ ಅಧ್ಯಾತ್ಮಿಕವಾಗಿ ಸಂಸ್ಕೃತ ಸಾಹಿತ್ಯವನ್ನು ಪೋಷಿಸುತ್ತಿದೆ. ಲೌಕಿಕವಾಗಿ ಸಂಸ್ಕೃತವನ್ನು ಸಂರಕ್ಷಿಸುವ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಒಂದು ಶಾಖೆಯಾದ ರಾಜೀವ ಗಾಂಧಿ ಪರಿಸರ ಶೃಂಗೇರಿಯಲ್ಲಿ ಪ್ರಸಿದ್ಧವಾಗಿದೆ.

1992ರಲ್ಲಿ ಶೃಂಗೇರಿ ಜಗದ್ಗುರುಗಳವರ ಅಪ್ಪಣೆ ಮೇರೆಗೆ ಪ್ರಾರಂಭವಾದ ಈ ಪರಿಸರವು ಸಂಸ್ಕೃತವನ್ನು ಪ್ರಚುರಪಡಿಸುತ್ತಿದೆ. ಈ ಪರಿಸರದಲ್ಲಿ ಶಾಸ್ತ್ರಗಳಾದ ವೇದಾಂತ ನ್ಯಾಯ ವ್ಯಾಕರಣ ಮೀಮಾಂಸ ಮುಂತಾದವುಗಳಲ್ಲಿ ಉನ್ನತ ವ್ಯಾಸಂಗಕ್ಕೆ ಮುಕ್ತ ಅವಕಾಶವಿದ್ದು, ಪ್ರೌಢ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ಇಲ್ಲಿಗೆ ಸೇರಲು ಅರ್ಹರು. ಪ್ರಾಕ್ ಶಾಸ್ತ್ರೀ ( 2nd pu), ಶಾಸ್ತ್ರೀ( b.a) ಆಚಾರ್ಯ ( m.a) ಎಂಬ ಹಂತದಲ್ಲಿ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ.

ಇದರ ಜೊತೆಗೆ ಶಿಕ್ಷಾ ಶಾಸ್ತ್ರೀ ( b.ed) ವಿಭಾಗವೂ ಇದ್ದು, ಪರಿಸರವು ಸಮಾಜಕ್ಕೆ ಸುಸಂಸ್ಕೃತರಾದ ಸಂಸ್ಕೃತ ವಿದ್ವಾಂಸರನ್ನು ಪರಿಚಯಿಸುತ್ತಿದೆ. ಕೇವಲ ಶಾಸ್ತ್ರಗಳ ಅಧ್ಯಯನವಲ್ಲದೆ ಶಲಾಕಸ್ಪರ್ಧೆ -ಭಾಷಣಸ್ಪರ್ಧೆ- ನಾಟಕಸ್ಪರ್ಧೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಸ್ಪರ್ಧಿಸುವುದಷ್ಟೇ ಅಲ್ಲದೆ ಭಾರತಾದಾದ್ಯಂತ ತಮ್ಮ ಪಾರುಪತ್ಯ ಸ್ಥಾಪಿಸಿದ್ದಾರೆಂದರೆ ತಪ್ಪಾಗಲಾರದು.

ಸುಮಾರು 500 ವಿದ್ಯಾರ್ಥಿಗಳು, 50-60 ಜನರ ಅಧ್ಯಾಪಕ ಸಿಬ್ಬಂದಿ ವರ್ಗವನ್ನು ಹೊಂದಿರುವ ಈ ಪರಿಸರ, ಸಂಸ್ಕೃತವನ್ನು ತನ್ನ ವ್ಯಾವಹಾರಿಕ ಭಾಷೆಯಾಗಿಸಿಕೊಂಡಿದೆ. ವಿದ್ಯಾರ್ಥಿಗಳೂ ಕೂಡ ಸಂಸ್ಕೃತದಲ್ಲಿಯೇ ಸಂಭಾಷಿಸುವುದು ಆಶ್ಚರ್ಯವಾದರೂ ಸತ್ಯ. ಸಂಸ್ಕೃತವಷ್ಟೇ ಅಲ್ಲದೆ ಸಂಸ್ಕೃತಿಗೂ ಈ ಪರಿಸರದ ಪಾಲಕತ್ವ ಇದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಮ್ಮ ದೇಶದ ಈಶಾನ್ಯ ರಾಜ್ಯದಿಂದಲೂ ವಿದ್ಯಾರ್ಥಿಗಳು ಅಧ್ಯಯನಕ್ಕೆ ಇಲ್ಲಿ ಬರುತ್ತಾರೆ. ಸ್ಥಳೀಯ ವಿದ್ಯಾರ್ಥಿಗಳೂ ಸೇರಿ ಪರಸ್ಪರರ ಆಚರಣೆಯನ್ನು ಗೌರವದಿಂದ ಆಚರಿಸುತ್ತಾರೆ.

"ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ" ಎನ್ನುತ್ತಿದ್ದ ನಮ್ಮ ಸಂಸ್ಕೃತಿಯನ್ನು ಮರೆತು, ಪಾಶ್ಚಾತ್ಯರ ಸೂಟು ಬೂಟಿನ ಸಮವಸ್ತ್ರದೊಂದಿಗೆ ಶೂಗಳಿರದೆ ಅಧ್ಯಯನವಿಲ್ಲ ಎನ್ನುವ ಈಗಿನ ಕಾಲದಲ್ಲೂ ತರಗತಿಯ ಹೊರಗೆ ಪಾದರಕ್ಷೆಗಳನ್ನು ಬಿಟ್ಟು ಇಲ್ಲಿ ಅಧ್ಯಯನ ಮಾಡಬೇಕು. ವಿದ್ಯಾರ್ಜನೆಯೂ ಪೂಜೆಯಷ್ಟೇ ಪವಿತ್ರ ಎನ್ನುವುದು ಇಲ್ಲಿರುವ ನಮ್ಮೆಲ್ಲರಲ್ಲಿರಬೇಕಾಗಿದ್ದ ಸಾಮಾನ್ಯ ಜ್ಞಾನ.

ಅಷ್ಟೇ ಏಕೆ ಪಂಚೆಯುಟ್ಟು ಬರುವ ವಿದ್ಯಾರ್ಥಿಗಳು ಕೂಡ ಇಲ್ಲಿದ್ದಾರೆ. ರಾಷ್ಟ್ರದ ದೆಹಲಿಯಲ್ಲಿ ಪ್ರಧಾನಶಾಖೆಯನ್ನು ಹೊಂದಿರುವ ಸಂಸ್ಥಾನದ 11 ಶಾಖೆಗಳಲ್ಲಿ ತನ್ನದೇ ಛಾಪನ್ನು ಬಿತ್ತಿರುವ ಪರಿಸರ ಈ ಶೃಂಗೇರಿಯ ಪರಿಸರ‌. ಇಲ್ಲಿನ ವಿದ್ಯಾರ್ಥಿಗಳು ಅಧ್ಯಯನದ ಜೊತೆ ಸಂಸ್ಕೃತ ಭಾರತೀ ಮುಂತಾದ ಸಂಸ್ಥೆಗಳಿಗೆ ಸಹಕಾರವನ್ನು ನೀಡುತ್ತಾ ದೇವಭಾಷೆಗಾಗಿ ಶ್ರಮಿಸುತ್ತಿದ್ದಾರೆ.

ಯಾವ ದೇಶ ತನ್ನ ಸಂಸ್ಕೃತಿ ಮತ್ತು ಇತಿಹಾಸವನ್ನು ಮರೆಯುವುದೋ ಅದರ ಉನ್ನತಿ ಅಸಾಧ್ಯ. ಹಾಗಾಗಿ ನಮ್ಮ ದೇಶದ ಔನ್ನತ್ಯಕ್ಕೆ ಸಂಸ್ಕೃತಾಧ್ಯಯನ ಅತ್ಯವಶ್ಯ. ಬಾಲಕೇಂದ್ರ, ಸಂಭಾಷಣಾ ಶಿಬಿರ ಮುಂತಾದ ಕಾರ್ಯಕ್ರಮಗಳಿಂದ ಶೃಂಗೇರಿಯ ಪರಿಸರ‌ದಲ್ಲಿ ಸಂಸ್ಕೃತ ಲೌಕಿಕವಾಗಿ ವ್ಯಾಪಿಸುತ್ತಿದೆ.

Hebbar Kitchen, Indian Veg Recipees Website

"ತೇನ ವಿನಾ ತೃಣಮಪಿ ನ ಚಲತಿ" ಎನ್ನುವಂತೆ ಈ ಎಲ್ಲ ಕಾರ್ಯಕ್ಕೆ ಸಾಧನೆಗೆ ಸ್ವಪರಿಶ್ರಮದ ಜೊತೆ ಜಗದ್ಗುರುಗಳ ಮತ್ತು ಶಾರದೆಯ ಅನುಗ್ರಹವೇ ಕಾರಣ. ಶಾರದಾ ಚಂದ್ರಮೌಳೀಶ್ವರರ ಮತ್ತು ಜಗದ್ಗುರುಗಳ ಅನುಗ್ರಹದಿಂದ ಸುರಭಾರತಿಯು ಇಲ್ಲಿ ಹೀಗೆಯೇ ಹಸನ್ಮುಖಿಯಾಗಿರಲಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mukta Swadhyaya Peetham, Sringeri, Chikkamagalur. It is a institute of distance education. The Rashtriya Sanskrit Sansthan established Rajiv Gandhi Kendriya Sanskrit Vidyapeetha as its constituent unit at Sringeri (Karnatak) on 13th January, 1992.
Please Wait while comments are loading...