ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ: ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಭರವಸೆ
ಅತಿ ಶೀಘ್ರದಲ್ಲೇ ಕರ್ನಾಟಕ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸಲಿದೆ. ಕಲಬುರಗಿ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭಿಸಬೇಕು ಎನ್ನುವ ಬೇಡಿಕೆ ಇದ್ದು, ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ.
ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರ ಮನವಿ ಮೇರೆಗೆ ಕಲಬುರಗಿ - ಬೆಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾರಂಭಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದು, ಅತಿ ಶೀಘ್ರದಲ್ಲೇ ರೈಲು ಸೇವೆ ಪ್ರಾರಂಭವಾಗುವ ಸಾಧ್ಯತೆ ಇದೆ.

ಜುಲೈ 14, ಶನಿವಾರ ನವದೆಹಲಿಯಲ್ಲಿ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದಕ್ಕೆ ಅಶ್ವಿನ್ ವೈಷ್ಣವ್ ಕೂಡ ಉತ್ತಮವಾಗಿ ಸ್ಪಂದಿಸಿದ್ದಾರೆ.
ಸಂಸದ ಜಾಧವ್ ಇಟ್ಟ ಬೇಡಿಕೆಗಳು ಏನು?
ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭಿಸುವುದರ ಜೊತೆಗೆ, ಮುಂಬೈ-ಸೋಲಾಪುರ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಕಲಬುರಗಿವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು.
ಕಲಬುರಗಿ ಜಿಲ್ಲೆಯಲ್ಲಿ ತೈಲ್ವೆ ಸೇವೆಗಾಗಿ ಆಗ್ರಹಿಸಿ ನಡೆದ ಪ್ರತಿಭಟನೆಗಳ ಬಗ್ಗೆ ರೈಲ್ವೆ ಸಚಿವರ ಗಮನಕ್ಕೆ ತಂದ ಸಂಸದ ಉಮೇಶ್ ಜಾಧವ್ ಈ ಬಗ್ಗೆ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಮಾಡಿದರು. ಬೆಂಗಳೂರು-ಕಲಬುರಗಿ ನಡುವೆ ಪ್ರತಿದಿನ ಸಾವಿರಾರು ಜನ ಪ್ರಯಾಣ ಮಾಡುತ್ತಿದ್ದು, ರೈಲು ಬೋಗಿಗಳಲ್ಲಿ ಕಿಕ್ಕಿರಿದು ಪ್ರಯಾಣ ಮಾಡುತ್ತಿದ್ದಾರೆ.
ಒಂದು ತಿಂಗಳಲ್ಲಿ ಎರಡು ನಗರಗಳ ನಡುವೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ರೈಲಿನಲ್ಲಿ ಸಂಚಾರ ಮಾಡಿದ್ದಾರೆ. ರೈಲುಗಳಲ್ಲಿ ನಿಲ್ಲಲು ಜಾಗವಿಲ್ಲದೆ ಜನ ಪ್ರಯಾಣ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು ಆಕ್ರೋಶ ವ್ಯಕ್ತಪಡಿಸಿದ್ದರು.
ಶಹಬಾದ್ ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಒತ್ತಾಯ
ಕಲಬುರಗಿ ಜಿಲ್ಲೆಯ ಶಹಾಬಾದ್‌ನಲ್ಲಿ ಪ್ರಮುಖ ಐದು ರೈಲುಗಳನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಕೊನಾರ್ಕ್ ಎಕ್ಸ್‌ಪ್ರೆಸ್, ಮುಂಬೈ-ನಾಗರ್ಕೋಯಿಲ್ ಎಕ್ಸ್‌ಪ್ರೆಸ್, ಚೆನ್ನೈ-ಎಗ್ಮೋರ್ ಎಕ್ಸ್‌ಪ್ರೆಸ್, ಮುಂಬೈ -ಹೈದರಾಬಾದ್ ಎಕ್ಸ್‌ಪ್ರೆಸ್, ಹೈದರಾಬಾದ್-ವಿಜಯಪುರ ಎಕ್ಸ್‌ಪ್ರೆಸ್, ಜಾಲನಾ ತಿರುಪತಿ ಸ್ಪೆಷಲ್ ಎಕ್ಸ್‌ಪ್ರೆಸ್, ಸೋಲಾಪುರ್- ಮುಂಬೈ ಎಕ್ಸ್‌ಪ್ರೆಸ್, ಸೋಲಾಪುರ್- ತಿರುಪತಿ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲುಗಳನ್ನು ಕಡ್ಡಾಯವಾಗಿ ಕಮಲಾಪುರ್ ರೈಲ್ವೆ ಸ್ಟೇಷನ್ನಲ್ಲಿ ನಿಲ್ಲಿಸಲು ಮನವಿ ಮಾಡಿದರು.
ಚಿತ್ತಾಪುರ ರೈಲ್ವೆ ನಿಲ್ದಾಣದಲ್ಲಿ ಸೋಲಾಪುರ ಇಂಟರ್ ಸಿಟಿ ಎಕ್ಸ್‌ಪ್ರೆಸ್ ನಿಲುಗಡೆ ನೀಡುವಂತೆ ಕೋರಿದರು. ಕೋವಿಡ್ ಸಾಂಕ್ರಾಮಿಕದ ಮೊದಲು ಇದ್ದಂತೆ ಹಲವು ರೈಲುಗಳ ಸೇವೆಯನ್ನು ಮತ್ತೆ ಆರಂಭಿಸುವಂತೆ ಕೋರಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಕಲಬುರಗಿ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications