• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎನ್‌ಸಿಸಿ ಗೊತ್ತಿಲ್ಲ ಎಂದ ರಾಹುಲ್ ಬಗ್ಗೆ ವ್ಯಂಗ್ಯ: ದಿನದ 11 ಬೆಳವಣಿಗೆಗಳು

By Sachhidananda Acharya
|

ಮೈಸೂರು, ಮಾರ್ಚ್ 24: ನಾಡದೇವತೆ ಚಾಮುಂಡಿಗೆ ಕೈ ಮುಗಿದ ರಾಹುಲ್ ಗಾಂಧಿ.. ವಿದ್ಯಾರ್ಥಿನಿಯರ ಜೊತೆಗಿನ ಸಂವಾದದಲ್ಲಿ ಎನ್‌ಸಿಸಿ ಬಗ್ಗೆ ಹೆಚ್ಚು ಗೊತ್ತಿಲ್ಲ ಎಂದ ಕಾಂಗ್ರೆಸ್ ಅಧ್ಯಕ್ಷರು.. ಚಾಮರಾಜನಗರ ಜನಾಶೀರ್ವಾದ ಯಾತ್ರೆಯಲ್ಲಿ ಮೋದಿ ವಿರುದ್ಧ ವಾಗ್ದಾಳಿ... ಕೊಳ್ಳೇಗಾಲದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ... ಯಳಂದೂರು, ಕೊಳ್ಳೇಗಾಲದಲ್ಲಿ ಭರ್ಜರಿ ರೋಡ್ ಶೋ..

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಹೀಗೆ ಇಂದು ಬೆಳಗ್ಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿ ನಂತರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಭರ್ಜರಿ ಪ್ರಚಾರದಲ್ಲಿ ಪಾಲ್ಗೊಂಡರು.

20 ವರ್ಷದ ಯುವತಿಯರಿಗೆ ಅರ್ಥವಾಗಿದ್ದು, ಪ್ರಧಾನಿಗೆ ಅರ್ಥವಾಗಿಲ್ಲ: ರಾಹುಲ್

ದೇವಸ್ಥಾನದಲ್ಲಿ ಪೂಜೆ, ಸಂವಾದ, ಭಾಷಣ, ರೋಡ್ ಶೋ, ಉದ್ಘಾಟನೆ ಎನ್ನುತ್ತಾ ಚುನಾವಣೆಯನ್ನು ಎದುರು ನೋಡುತ್ತಿರುವ ಕರ್ನಾಟಕದಲ್ಲಿಂದು ರಾಹುಲ್ ಗಾಂಧಿ ಮಿಂಚಿನ ಸಂಚಾರ ನಡೆಸಿದರು. ಈ ಅವಧಿಯಲ್ಲಿ ಅವರ ಎನ್‌ಸಿಸಿ ಬಗೆಗಿನ ಹೇಳಿಕೆ ರಾಷ್ಟ್ರೀಯ ಚರ್ಚೆಗೂ ಗ್ರಾಸವಾಯಿತು.

In Pics: ರಾಣಿ 'ಮಹಾರಾಣಿ'ಯರ ಜತೆ ಸೆಲ್ಫಿ ತೆಗೆಸಿಕೊಂಡ ಕಾಂಗ್ರೆಸ್ ಮಹಾರಾಜ

ಕರ್ನಾಟಕಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರ ಇಡೀ ದಿನದ ಪ್ರವಾಸದ ಪಕ್ಷಿನೋಟ ಇಲ್ಲಿದೆ.

ನಾಡ ಅಧಿದೇವತೆಗೆ ನಮನ

ನಾಡ ಅಧಿದೇವತೆಗೆ ನಮನ

ಬೆಳಿಗ್ಗೆ 9 ಗಂಟೆಗೆ ದೆಹಲಿಯಿಂದ ಬಂದ ರಾಹುಲ್ ಗಾಂಧಿ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಮೂಲಕ ಸಿಎಂ ತವರಿಗೆ ಕಾಲಿಟ್ಟರು. ತಮ್ಮ ಊರಿಗೆ ಬಂದ ಕಾಂಗ್ರೆಸ್ ಅಧ್ಯಕ್ಷರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆದರದಿಂದ ಬರಮಾಡಿಕೊಂಡರು.

ತಮ್ಮ ಪ್ರವಾಸದುದ್ದಕ್ಕೂ ದೇವಸ್ಥಾನಗಳಿಗೆ ಭೇಟಿ ನೀಡುವ ಸಂಪ್ರದಾಯವನ್ನು ಇಲ್ಲೂ ರಾಹುಲ್ ಗಾಂಧಿ ಮುಂದುವರಿಸಿದರು. ನಾಡ ಅಧಿದೇವತೆ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ರಾಹುಲ್ ಗಾಂಧಿಯವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಸಚಿವ ಮಹದೇವಪ್ಪ, ಡಿ.ಕೆ ಶಿವಕುಮಾರ್ ಸೇರಿದಂತೆ ಹಲವರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಟ್ಟೀಟ್ ಮಾಡಿ ಕಾಲೆಳೆಸಿಕೊಂಡ ಯಡಿಯೂರಪ್ಪ

ರಾಹುಲ್ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡಿದ್ದನ್ನು ವ್ಯಂಗ್ಯ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರನ್ನು ನೆಟಿಜನ್ ಗಳನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿದ್ದರಾಮಯ್ಯ ಆರತಿ ತೆಗೆದುಕೋಳ್ಳುತ್ತಿರುವ, ರಾಹುಲ್ ಗಾಂಧಿ ಚಾಮುಂಡೇಶ್ವರಿ ದೇವಿ ಮುಂದೆ ಸಂಕಲ್ಪ ಮಾಡುತ್ತಿರುವ ಫೋಟೋ ಹಾಕಿದ್ದ ಯಡಿಯೂರಪ್ಪ, "ವೋಟು ನಿಮಿತ್ತಂ ಬಹುಕೃತ ವೇಷಂ !!" ಎಂದು ಟ್ಟೀಟ್ ಮಾಡಿದ್ದರು.

ಇದರ ವಿರುದ್ಧ ಮುಗಿಬಿದ್ದ ಸಿದ್ದರಾಮಯ್ಯ ಅಭಿಮಾನಿಗಳು, ಯಡಿಯೂರಪ್ಪ ಕೇಂದ್ರ ಬಿಜೆಪಿ ನಾಯಕರ ಮುಂದೆ ತಲೆ ಬಾಗಿರುವ ಫೋಟೋಗಳನ್ನು ಹಾಕಿ ಕಾಲೆಳೆದಿದ್ದಾರೆ. ಜೊತೆಗೆ ಯಡಿಯೂರಪ್ಪ ಈ ಹಿಂದೆ ಮುಸ್ಲಿಂ ಟೋಪಿ ಹಾಗೂ ಟಿಪ್ಪು ಪೋಷಾಕು ಹಾಕಿದ ಫೋಟೋಗಳನ್ನು ಹಾಕಿ ಅವರನ್ನು ಮತ್ತಷ್ಟು ವ್ಯಂಗ್ಯ ಮಾಡಿದ್ದಾರೆ.

ಇದಲ್ಲದೆ ಸಿದ್ದರಾಮಯ್ಯನವರು ಈ ಹಿಂದೆಯೂ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಫೋಟೋಗಳನ್ನು ಹಾಕಿ ಸಿದ್ದರಾಮಯ್ಯನವರ ದೇವಸ್ಥಾನ ಭೇಟಿಯನ್ನು ಅವರ ಅಭಿಮಾನಿಗಳು ಸ್ವಾಗತಿಸಿದ್ದಾರೆ.

ಹೀಗೆ ತಾವೇ ಟ್ಟೀಟ್ ಮಾಡಿ ಕಾಲೆಳಿಸಿಕೊಂಡಿದ್ದಾರೆ ಯಡಿಯೂರಪ್ಪ.

ತಡಬಡಾಯಿಸಿದ ರಾಹುಲ್

ತಡಬಡಾಯಿಸಿದ ರಾಹುಲ್

ಚಾಮುಂಡಿ ಬೆಟ್ಟದಿಂದ ವಾಪಾಸಾದ ರಾಹುಲ್ ಗಾಂಧಿ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರ ಜತೆ ಸಂವಾದದಲ್ಲಿ ಭಾಗವಹಿಸಿದರು. ಆಗ ವಿದ್ಯಾರ್ಥಿನಿಯೊಬ್ಬರು ಕನ್ನಡದಲ್ಲಿ ಪ್ರಶ್ನೆ ಕೇಳಿದರು. "ಯೋಜನೆಗಳನ್ನು ಸಮುದಾಯದ ಆಧಾರದಲ್ಲಿ ಯಾಕೆ ಜಾರಿಗೆ ತರುತ್ತೀರಿ. ಎಲ್ಲರೂ ಒಂದೇ ಅಲ್ಲವೆ?" ಎಂಬ ಪ್ರಶ್ನೆ ಕೇಳಿದರು.

ಆಗ ಕನ್ನಡದಲ್ಲಿ ಕೇಳಿದ್ದರಿಂದ ರಾಹುಲ್ ಗಾಂಧಿಯವರಿಗೆ ಪ್ರಶ್ನೆ ಅರ್ಥವಾಗಲಿಲ್ಲ. ನಾನು ಪರಮೇಶ್ವರ್ ಸಹಾಯ ತೆಗೆದುಕೊಳ್ಳುತ್ತೇನೆ. ಕನ್ನಡದಲ್ಲಿ ಪ್ರಶ್ನೆ ಕೇಳಿ ಪರವಾಗಿಲ್ಲ ಎಂದರು ರಾಹುಲ್ ಗಾಂಧಿ.

ಆಗ ಪರಮೇಶ್ವರ್ ಪ್ರಶ್ನೆಯನ್ನು ಅನುವಾದ ಮಾಡಿ ರಾಹುಲ್ ಗಾಂಧಿ ಮುಂದಿಟ್ಟರು. ಒಂದು ಕ್ಷಣ ರಾಹುಲ್ ತಡಬಡಾಯಿಸಿ, ಇಂದು 'ಕೇಂದ್ರಕ್ಕೋ ರಾಜ್ಯಕ್ಕೋ?' ಎಂದು ಕೇಳಿದರು.

ರಾಜ್ಯಕ್ಕೆ ಎಂದಾಗ ಅವರಲ್ಲಿ ಉತ್ತರವಿರಲಿಲ್ಲ. ಆಗ ಸಹಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬರಬೇಕಾಯಿತು. ನಂತರ ಸಿಎಂ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದರು.

ಮುಂದುವರಿದ ಸೆಲ್ಫಿ

ಮುಂದುವರಿದ ಸೆಲ್ಫಿ

ರಾಹುಲ್ ಗಾಂಧಿ ಜತೆ ಸೆಲ್ಫಿ ತೆಗೆಯುವುದೆಂದರೆ ಅದೇನೋ ಯುವತಿಯರಿಗೆ ಒಂಥರಾ ಕ್ರೇಜ್. ಅವರು ಹೋದಲ್ಲೆಲ್ಲಾ ಯುವತಿಯರು ಮುತ್ತಿಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಈ ಸರಣಿ ಕರ್ನಾಟಕದಲ್ಲಿಯೂ ಮುಂದುವರಿಯಿತು.

ಸಂವಾದದ ವೇಳೆ, 'ನಾನು ನಿಮ್ಮ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಬೇಕೆಂದಿದ್ದೇನೆ. ತೆಗೆದುಕೊಳ್ಳಲಾ?' ಎಂದು ವಿದ್ಯಾರ್ಥಿನಿಯೊಬ್ಬರು ಕೇಳಿಕೊಂಡರು. ವಿದ್ಯಾರ್ಥಿನಿ ಮನವಿಗೆ 'ಎಸ್' ಎಂದು ಸ್ಪಂದಿಸಿದ ರಾಹುಲ್ ಗಾಂಧಿ ವಿದ್ಯಾರ್ಥಿನಿ ಜತೆ ಸೆಲ್ಫಿ ತೆಗೆಸಿಕೊಂಡರು. ರಾಹುಲ್ ಗಾಂಧಿ ಜೊತೆ ಸೆಲ್ಫಿ ತೆಗೆದುಕೊಂಡು ವಿದ್ಯಾರ್ಥಿನಿ ಖುಷಿಪಟ್ಟರು.

ಇದಾದ ಬಳಿಕ ಹಲವು ವಿದ್ಯಾರ್ಥಿನಿಯರು ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.

ಎನ್‌ಸಿಸಿ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ

ಎನ್‌ಸಿಸಿ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ

ಈ ವೇಳೆ, "ಎನ್‌ಸಿಸಿ (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ನಲ್ಲಿ 'ಸಿ' ಪ್ರಮಾಣ ಪತ್ರ ಪಡೆದ ನಂತರ ನೀವು ನಮಗೆ ಏನು ಸೌಲಭ್ಯ ನೀಡುತ್ತೀರಿ?" ಎಂದು ವಿದ್ಯಾರ್ಥಿನಿಯೊಬ್ಬರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ಮುಂದಾದ ರಾಹುಲ್ ಗಾಂಧಿ ನನಗೆ, "ಎನ್‌ಸಿಸಿಯ ತರಬೇತಿ, ಪ್ರಮಾಣಪತ್ರಗಳ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲ. ಆದ್ದರಿಂದ ಈ ಪ್ರಶ್ನೆಗೆ ನನಗೆ ಉತ್ತರಿಸಲಾಗುತ್ತಿಲ್ಲ," ಎಂದು ಹೇಳಿದ ಘಟನೆಯೂ ನಡೆಯಿತು.

ಆದರೆ ನಿಮಗೆ ನಾನು ಉತ್ತಮ ಭವಿಷ್ಯ ಒದಗಿಸುವ, ಯಶಸ್ವೀ ಶಿಕ್ಷಣ ನೀಡುವ ಭರವಸೆ ನೀಡುತ್ತೇನೆ ಎಂದು ಹೇಳಿದರು.

ಆದರೆ ಎನ್‌ಸಿಸಿ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲ ಎಂದಿದ್ದೇ ವಿವಾದಕ್ಕೆ ಕಾರಣವಾಯಿತು.

ರಾಹುಲ್ ವಿರುದ್ಧ ವ್ಯಂಗ್ಯ

ರಾಹುಲ್ ಹೇಳಿಕೆಯ ಬಗ್ಗೆ ಟ್ಟೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, "ಮಿಟಿಟರಿ ತರಬೇತಿಗೆ ಸಂಬಂಧಿಸಿದಂತೆ ಅದು ಹೇಗೆ ನೀವು ಈ ಪ್ರಶ್ನೆ ಕೇಳುತ್ತೀರಿ? ಅದೂ ಬ್ರಿಟೀಷರ ವಿರುದ್ಧ ಒಂದು ಹುಲ್ಲನ್ನೂ ಎತ್ತದ ಕುಟುಂಬದವರಲ್ಲಿ?" ಎಂದು ಛೇಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಡೆಟ್ ಹಾರ್ದಿಕ್ ದಹಿಯಾ ಎಂಬವರು, "ಎನ್‌ಸಿಸಿ ಎನ್ನುವುದು ಎರಡನೇ ಸೇನೆ ಇದ್ದ ಹಾಗೆ. ದೇಶದಲ್ಲಿ ನಾವು 15 ಲಕ್ಷ ಜನರಿದ್ದೇವೆ. ಸಿ ಪ್ರಮಾಣಪತ್ರ ಪಡೆದ ನಂತರ ದೇಶಕ್ಕೆ ಮತ್ತಷ್ಟು ಹೆಮ್ಮೆ ತರಲು ನಮಗೆ ಅವಕಾಶಗಳು ಬೇಕಾಗಿವೆ. ಅವರು ಕನಿಷ್ಠ ಆ ಬಗ್ಗೆ ತಿಳಿದಿರಬೇಕಾಗಿತ್ತು," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಮತ್ತು ಬಿಜೆಪಿ ಮುಖಂಡ ರಾಜ್ಯವರ್ಧನ್ ಸಿಂಗ್ ರಾಥೋಡ್, "ಸಾವಿರಾರು ಜನ ಇಷ್ಟಪಡುವ ಎನ್‌ಸಿಸಿ ಬಗ್ಗೆ ರಾಹುಲ್ ಗಾಂಧಿಗೆ ಏನೂ ಗೊತ್ತಿಲ್ಲವಂತೆ! ಶಾಲೆ ಮತ್ತು ಕಾಲೇಜುಗಳಲ್ಲಿ ಎನ್‌ಸಿಸಿ ಬಗ್ಗೆ ಹೆಮ್ಮೆಯಿತ್ತು. ಅದೇ ನಮಗೆ ಶಿಸ್ತನ್ನೂ, ದೇಶಭಕ್ತಿಯನ್ನೂ ಕಲಿಸಿದ್ದು. ಆದರೆ ಅದರ ಬಗ್ಗೆ ಗೊತ್ತಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆ ನಿಜಕ್ಕೂ ವಿಪರ್ಯಾಸ" ಎಂದಿದ್ದಾರೆ.

ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಚಾಮರಾಜನಗರದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಮೊದಲಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

"ನರೇಂದ್ರ ಮೋದಿ, ನಾನು ಚೌಕೀದಾರ. ದೇಶದ ಜನರ ಹಣಕ್ಕೆ ಭದ್ರತೆ ನೀಡುತ್ತೇನೆ ಎಂದ್ರಿ. ಆದರೆ ಲಲಿತ್ ಮೋದಿ 22,000 ಕೋಟಿ ರೂಪಾಯಿ ಲೂಟಿ ಹೊಡೆದು ವಿದೇಶಕ್ಕೆ ಓಡಿ ಹೋದರು. ಚೌಕಿದಾರರಾಗಿ ಏನು ಮಾಡಿದ್ರಿ ನರೇಂದ್ರ ಮೋದಿಯವರೇ?" ಎಂದು ಪ್ರಶ್ನಿಸಿದರು. ವಿಜಯ ಮಲ್ಯ 9 ಸಾವಿರ ಕೋಟಿ ರೂಪಾಯಿ ದೋಚಿದರು, ಲಲಿತ್ ಮೋದಿ ಹೊರಟು ಹೋದ್ರು. ಚೌಕಿದಾರರಾಗಿ ನೀವು ಯಾಕೆ ತಡೆಯಲಿಲ್ಲ? ಯಾಕೆ ಹಿಡಿಯಲಿಲ್ಲ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಲೋಕಪಾಲ ನೇಮಿಸಿಲ್ಲ, ಅಚ್ಛೇ ದಿನ್ ಬಂದಿಲ್ಲ, 2 ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ, ಸಾಲ ಮನ್ನಾ ಮಾಡಿಲ್ಲ ಎಂದು ಒಂದೇ ಸಮನೆ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು.

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಿ. ರಾಹುಲ್ ಗಾಂಧಿ ಕೈ ಬಲಪಡಿಸಿ. 2019ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗುವಂತಾಗಲಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.

ದಾರ್ಶನಿಕ ಟಿಪ್ಪು

ದಾರ್ಶನಿಕ ಟಿಪ್ಪು

ಜನಾಶೀರ್ವಾದ ಯಾತ್ರೆಯಲ್ಲಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ ಮೊದಲಿಗೆ ಸ್ಥಳೀಯ ದಂತಕಥೆಗಳನ್ನು ನೆನಪು ಮಾಡಿಕೊಳ್ಳಲು ಸಮಯ ಮೀಸಲಿಟ್ಟರು.

ಈ ವೇಳೆ ಈ ನಾಡಿನ ದಾರ್ಶನಿಕರಾದ ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್, ಕುವೆಂಪು, ವಿಶ್ವೇಶ್ವರಯ್ಯರನ್ನು ಸ್ಮರಣೆ ಮಾಡುತ್ತಿದ್ದೇನೆ. ಮತ್ತು ಅವರ ಕೊಡುಗೆಗಳಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.

ಇದೇ ವೇಳೆ ಎಂದಿನಂತೆ ಅವರು ಜಗಜ್ಯೋತಿ ಬಸವಣ್ಣನನ್ನು ನೆನೆದರು. ಮತ್ತು 'ನುಡಿದಂತೆ ನಡೆ' ಎಂದು ಪ್ರಧಾನಿ ಮೋದಿಯವರಿಗೆ ತಾಕೀತು ಮಾಡಿದರು.

ಪ್ರಧಾನಿಗೆ ಇನ್ನೂ ಅರ್ಥವಾಗಿಲ್ಲ!

ಪ್ರಧಾನಿಗೆ ಇನ್ನೂ ಅರ್ಥವಾಗಿಲ್ಲ!

ಕೆಲವೇ ಕ್ಷಣದ ಮುಂದೆ ನಾನು ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಗಳ ಜತೆ ಸಂವಾದ ಮುಗಿಸಿ ಬಂದೆ. ಇಲ್ಲಿ ವಿದ್ಯಾರ್ಥಿಯರು ನನಗೆ ನೋಟ್ ಬ್ಯಾನ್, ಉದ್ಯೋಗ ಸೃಷ್ಟಿ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ನೋಟ್ ಬ್ಯಾನ್ ಮಾಡಿದ್ದರಿಂದ ಜನರಿಗೆ ಸಾಕಷ್ಟು ತೊಂದರೆ ಉಂಟಾಯಿತು. 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿದ್ದರು. ಆದರೆ ಇದರಿಂದ ಏನೂ ಆಗಿಲ್ಲ ಎಂಬುದು 20 ವರ್ಷದ ವಿದ್ಯಾರ್ಥಿನಿಯರಿಗೆ ಅರ್ಥವಾಗಿದೆ. ಪ್ರಧಾನಿ ಮಾತ್ರ ಅರ್ಥವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಇದೇ ಸಂದರ್ಭದಲ್ಲಿ ಕಿಡಿಕಾರಿದರು.

15 ಲಕ್ಷದ ಬದಲು 10 ರೂಪಾಯಿಯನ್ನೂ ನಿಮ್ಮ ಖಾತೆಗೆ ಹಾಕಿದ್ದಾರಾ ಎಂದು ನಾನು ಕೇಳುತ್ತಿದ್ದೇನೆ. 10 ಪೈಸೆಯನ್ನೂ ಹಾಕಲಿಲ್ಲ. ಅದರ ಬದಲು 500, 1000 ರೂಪಾಯಿ ನೋಟುಗಳನ್ನು ನಿಷೇಧಿಸಿ ನಿಮ್ಮನ್ನು ಬ್ಯಾಂಕ್ ಮುಂದೆ ಸಾಲು ನಿಲ್ಲುವಂತೆ ಮಾಡಿದರು. ರೈತರ ಸಾಲ ಮನ್ನಾ ಮಾಡಲಿಲ್ಲ. ಇದೀಗ ಬಿಜೆಪಿಯವರು ಸಂವಿಧಾನ ಬದಲಾಯಿಸುತ್ತೇನೆ ಎನ್ನುತ್ತಿದ್ದಾರೆ. ಆದರೆ ನಾವು ಸಂವಿಧಾನ ಬದಲಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕೊಳ್ಳೇಗಾಲದಲ್ಲಿ ರೋಡ್ ಶೋ

ಕೊಳ್ಳೇಗಾಲದಲ್ಲಿ ರೋಡ್ ಶೋ

ಜನಾಶೀರ್ವಾದ ಸಮಾವೇಶ ಮುಗಿಸಿದ ನಂತರ ರಾಹುಲ್ ಗಾಂಧಿ ಕಾಂಗ್ರೆಸ್ ಭದ್ರಕೋಟೆ ಚಾಮರಾಜನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.

ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕಿನಲ್ಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರೊಂದಿಗೆ ರೋಡ್ ಶೋ ನಡೆಸಿದರು. ಜನಾಶೀರ್ವಾದ ಯಾತ್ರೆಗೆಂದೇ ಸಿದ್ದಪಡಿಸಿದ ವಿಶೇಷ ಬಸ್ ನಲ್ಲಿ ಅವರು ರಸ್ತೆಯುದ್ದಕ್ಕೂ ತೆರಳಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಅಸಂಖ್ಯಾತ ಜನರು ರಾಹುಲ್ ಗಾಂಧಿ ಕಂಡು, ಕೈ ಕುಲುಕಿ ಸಂತಸಪಟ್ಟರು.

ರೋಡ್ ಶೋ ನಡುವೆ ಕೊಳ್ಳೇಗಾಲದಲ್ಲಿ ರಾಹುಲ್ ಗಾಂಧಿ ಇಂದಿರಾ ಕ್ಯಾಂಟೀನ್ ಕಟ್ಟಡವನ್ನೂ ಉದ್ಘಾಟಿಸಿದರು. ನಂತರ ಅವರು ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಲು ಮಂಡ್ಯದ ಮಳವಳ್ಳಿಗೆ ಪ್ರಯಾಣ ಬೆಳೆಸಿದರು.

ಮತ್ತೆ ಗೂಡಂಗಡಿಗೆ ನುಗ್ಗಿದ ರಾಹುಲ್

ಮತ್ತೆ ಗೂಡಂಗಡಿಗೆ ನುಗ್ಗಿದ ರಾಹುಲ್

ಉತ್ತರ ಕರ್ನಾಟಕ ಪ್ರವಾಸದ ವೇಳೆ ರಸ್ತೆ ಬದಿಯ ಅಂಗಡಿಗೆ ನುಗ್ಗಿ ಮಿರ್ಚಿ ಬಜ್ಜಿ ಸವಿದಿದ್ದ ರಾಹುಲ್ ಗಾಂಧಿ ಕರಾವಳಿ ಪ್ರವಾಸದ ವೇಳೆ ನೀರು ದೋಸೆ ಸೀಗಡಿ ಸಾಂಬಾರು ಹೊಟ್ಟೆಗಿಳಿಸಿದ್ದರು.

ಈ ಬಾರಿಯೂ ಅವರು ಗೂಡಂಗಡಿಗೆ ಹೊಕ್ಕಿದ್ದಾರೆ. ಮಂಡ್ಯದ ಮಳವಳ್ಳಿಗೆ ತೆರಳುವ ರಸ್ತೆ ಮಧ್ಯೆ ಅಂಗಡಿಗೆ ತೆರಳಿ ಚಹಾ ಹಾಗೂ ಬಿಸ್ಕೆಟ್ ಅನ್ನು ಸೇವಿಸಿದರು.

ರಾಹುಲ್ ಗಾಂಧಿ ಅವರೊಂದಿಗೆ ಕೆ.ಸಿ. ವೇಣುಗೋಪಾಲ್, ಡಾ॥ ಜಿ. ಪರಮೇಶ್ವರ್, ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್, ದಿನೇಶ್ ಗುಂಡೂರಾವ್, ಕೆ.ಎಚ್. ಮುನಿಯಪ್ಪ, ಸ್ಥಳೀಯ ಶಾಸಕ ನರೇಂದ್ರ ಸ್ವಾಮಿ ಹಾಗೂ ಇತರ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಳವಳ್ಳಿಯ ಕಾರ್ಯಕ್ರಮ ಮುಗಿದ ನಂತರ ಮೈಸೂರಿಗೆ ತೆರಳಿ ವಾಸ್ತವ್ಯ ಮಾಡಲಿದ್ದಾರೆ. ನಂತರ ನಾಳೆ ಅಂದರೆ ಭಾನುವಾರ ಮೈಸೂರು ಸುತ್ತ ಮುತ್ತ ಮತ್ತೊಂದು ಸುತ್ತಿನ ಬಿರುಸಿನ ಪ್ರಚಾರ ನಡೆಸಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress president Rahul Gandhi's Mysuru and Chamarajanagar tour ahead of Karnataka assembly elections 2018: Importand developments of the Day. He has visited Chamundeswari temple in the morning, participated in an interaction with Maharani College students and conducted road show in Kollegal and Yelandur.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more