"ರಾಹುಲ್ ಗಾಂಧಿಗೆ ಎಲ್ಲ ಬಕೆಟ್ ಹಿಡಿದರೆ, ಹರಿಪ್ರಸಾದ್ ಸಿಂಟೆಕ್ಸ್ ಟ್ಯಾಂಕ್ ಹಿಡಿಯುತ್ತಿದ್ದಾರೆ"
ಸುಪ್ರೀಂಕೋರ್ಟ್ ನ್ಯಾಯಾಧೀಶರು ರಾಹುಲ್ ಗಾಂಧಿ ಅವರಿಗೆ ನೀವು ನಿಜವಾದ ಭಾರತೀಯರಾ? ಎಂದು ಕೇಳಿರುವುದನ್ನು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಟೀಕಿಸಿದ್ದಾರೆ. ಈ ವಿಚಾರವಾಗಿ ಬಿಕೆ ಹರಿಪ್ರಸಾದ್ ಅವರನ್ನು ರಾಜ್ಯ ಬಿಜೆಪಿ ಗೇಲಿ ಮಾಡಿದೆ. ರಾಹುಲ್ ಗಾಂಧಿಗೆ ಯಾರು ಅತಿ ಹೆಚ್ಚು "ಬಕೆಟ್" ಹಿಡಿಯುತ್ತಾರೆ ಎಂಬ ಕಾಂಪಿಟೇಶನ್ ಕರ್ನಾಟಕ ಕಾಂಗ್ರೆಸ್‌ನಲ್ಲಿ ಆರಂಭವಾಗಿದೆ. ಎಲ್ಲರೂ ಬಕೆಟ್ ಹಿಡಿಯುತ್ತಿದ್ದರೆ, ಬಿಕೆ ಹರಿಪ್ರಸಾದ್ ಅವರು ʼಸಿಂಟೆಕ್ಸ್ ಟ್ಯಾಂಕ್ ಹಿಡಿಯುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದೆ. ಬಿ.ಕೆ.ಹರಿಪ್ರಸಾದ್ ಅವರೇ, ರಾಹುಲ್ ಗಾಂಧಿ ಮೆಚ್ಚಿಸಲು ನೀವು ನ್ಯಾಯಾಂಗ ವ್ಯವಸ್ಥೆಯನ್ನೇ ನಿಂದಿಸುವ ಮಟ್ಟಕ್ಕೆ ಇಳಿದಿದ್ದೀರಿ ಎಂದರೆ, ನಿಮಗೆ ಈ ದೇಶದ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ, ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲ ಎಂದರ್ಥ ಎಂದು ಟೀಕಿಸಿದೆ.
ನೀವು ರಾಹುಲ್ ಗಾಂಧಿ ಅವರಿಗೆ ಎಷ್ಟೇ ಬಕೆಟ್, ಸಿಂಟೆಕ್ಸ್ ಟ್ಯಾಂಕ್ ಹಿಡಿದರೂ, ಬೋಸರಾಜುರನ್ನು ತೆರವುಗೊಳಿಸಿ ಆ ಸ್ಥಾನಕ್ಕೆ ನಿಮ್ಮನ್ನು ಕನಸಿನಲ್ಲಿಯೂ ಕೂರಿಸುವುದಿಲ್ಲ ನೆನಪಿಡಿ. ಆ ದಿನಗಳ ನಿಮಗೆ ಪೊಲೀಸರ ಲಾಠಿ ಏಟು, ಥರ್ಡ್ ಡಿಗ್ರಿ ಟಾರ್ಚರ್ ಹೊಸದಲ್ಲ ಎಂದು ನಮಗೆ ತಿಳಿದಿದೆ. ಆದರೆ ಈ ಇಳಿ ವಯಸ್ಸಿನಲ್ಲಿ ನ್ಯಾಯಾಂಗವನ್ನು ನಿಂದಿಸುವ ಮೂಲಕ ಮತ್ತೊಮ್ಮೆ ಪೊಲೀಸರ ಅತಿಥಿ ಆಗದಿರಲಿ ಎಂಬುದಷ್ಟೆ ನಮ್ಮ ಕಾಳಜಿ ಎಂದು ಲೇವಡಿ ಮಾಡಿದೆ.

ಹರಿಪ್ರಸಾದ್ ಹೇಳಿದ್ದೇನು?
ಸಾಂವಿಧಾನಿಕ ಹುದ್ದೆಯಲ್ಲಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು "ನೀವು ನಿಜವಾದ ಭಾರತೀಯರಾ" ಎಂದು ಸುಪ್ರೀಂಕೋರ್ಟಿನ ನ್ಯಾಯಾಧೀಶರು ಪ್ರಶ್ನಿಸಿರುವುದು ದೇಶದಲ್ಲಿ ನ್ಯಾಯಾಂಗದ ವ್ಯವಸ್ಥೆಯ ಅಧಃಪತನಕ್ಕೆ ಸಾಕ್ಷಿ ಮಾತ್ರವಲ್ಲ, ಸರ್ವಾಧಿಕಾರಿ ಧೋರಣೆಗೆ ನೀಡಿದ ಬೆಂಬಲ ಎಂದಿದ್ದಾರೆ. ದೇಶದ ವಿಪಕ್ಷ ನಾಯಕರನ್ನು ಈ ದೇಶದ ಸಂವಿಧಾನದ ಶ್ಯಾಡೋ ಪ್ರಧಾನ ಮಂತ್ರಿ ಎಂದು ಗುರುತಿಸುತ್ತದೆ. ಅಂತಹ ರಾಹುಲ್ ಗಾಂಧಿಯಂತಹ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯನ್ನು, ಮತ್ತೊಬ್ಬ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ "ನೀವು ಭಾರತೀಯರಾ? ಎಂದು ಪ್ರಶ್ನಿಸಿರುವುದು ದುರಾದೃಷ್ಟಕರ. ಇದು ದೇಶದ ಸಾಂವಿಧಾನಿಕ ಹುದ್ದೆಗೆ ಮಾಡಿದ ಅಪಚಾರ ಎಂದು ಟೀಕಿಸಿದ್ದಾರೆ.
ಚೀನಾ ದೇಶ ಗಾಲ್ವಾಮಾ ಕಣಿವೆಯಲ್ಲಿ ಎರಡು ಸಾವಿರ ಚದರ ಕಿಲೋಮೀಟರ್‌ಗಿಂತ ಹೆಚ್ಚು ಭೂಪ್ರದೇಶವನ್ನ ಆಕ್ರಮಿಸಿಕೊಂಡಿರುವುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಅವರು ಸ್ಪಷ್ಟನೆ ಕೇಳಿದ್ದರು. ಈ ಕುರಿತು ಸಂಸತ್ತಿನಲ್ಲೇ ಸುದೀರ್ಘ ಚರ್ಚೆ ನಡೆಸಲಾಗಿದೆ. 38 ಸಾವಿರ ಚದರ ಕಿಲೋಮೀಟರ್ ಭೂಪ್ರದೇಶ ಆಕ್ರಮಿಸಿಕೊಂಡಿರುವುದನ್ನು ಸದನದಲ್ಲೇ ಕೇಂದ್ರದ ವಿದೇಶಾಂಗ ರಾಜ್ಯ ಸಚಿವರಾಗಿದ್ದ ಮುರುಳೀಧರನ್ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಇದೇ ವಿಷಯದಲ್ಲಿ ಸುಪ್ರೀಕೋರ್ಟ್ ನ್ಯಾಯಾಧೀಶರು ರಾಜಕೀಯ ನಾಯಕರಂತೆ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ ಎಂದಿದ್ದಾರೆ.
ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು
ದೇಶದ ಸಂವಿಧಾನ ನೀಡಿದ ಸಾಂವಿಧಾನಿಕ ಹುದ್ದೆಯಲ್ಲಿರುವವರು, ಪ್ರಜಾಪ್ರಭುತ್ವದಡಿಯಲ್ಲಿ ಜನರಿಂದ ಆಯ್ಕೆಯಾದ ಸಂಸದರನ್ನು ಸುಪ್ರೀಂಕೋರ್ಟ್ ಅತ್ಯಂತ ಕೀಳುಮಟ್ಟದಿಂದ ವರ್ತಿಸಿರುವುದು ಶೋಭೆಯಲ್ಲ. ಆಳುವ ಸರ್ಕಾರವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ ನಾಯಕರು ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಎತ್ತುವುದೇ ಪ್ರಜಾಪ್ರಭುತ್ವದ ಸೌಂದರ್ಯ. ಸಂವಿಧಾನದ ಪರವಾಗಿ ಹೋರಾಡುತ್ತಾ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸುತ್ತಿರುವ ರಾಹುಲ್ ಗಾಂಧಿ ಅವರ ಹೋರಾಟಕ್ಕ ಸುಪ್ರೀಂಕೋರ್ಟ್ ಬೆನ್ನಿಗೆ ನಿಲ್ಲಬೇಕಿತ್ತು. ಸುಪ್ರೀಂಕೋರ್ಟ್ ಸೇರಿದಂತೆ ಇತ್ತೀಚಿಗೆ ಕೆಲವು ಹೈಕೋರ್ಟ್‌ಗಳು ರಾಜಕೀಯ ಪ್ರೇರಿತ ನಿರ್ದೇಶನ ಹಾಗೂ ನೀಡುತ್ತಿರುವ ತೀರ್ಪುಗಳ ವಿರುದ್ಧ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ, ಸಂವಿಧಾನ ಹಾಗೂ ನ್ಯಾಯಾಂಗ ವ್ಯವಸ್ಥೆಯ ನಂಬಿಕೆ ಉಳಿಸಲಿ ಎಂದು ಒತ್ತಾಯಿಸಿದ್ದಾರೆ.












Click it and Unblock the Notifications