ಬೆಂಗಳೂರನ್ನು ಕೊಂಡಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
ಬೆಂಗಳೂರು, ಏಪ್ರಿಲ್ 08 : ಕಾಂಗ್ರೆಸ್ ಪಕ್ಷದ 'ಜನಾಶೀರ್ವಾದ ಯಾತ್ರೆ'ಯ ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ ಭಾನುವಾರ ನಡೆಯಿತು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಿದರು.
'ಜನಾಶೀರ್ವಾದ ಯಾತ್ರೆ' ಹೆಸರಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ 6 ಹಂತಗಳಲ್ಲಿ ರಾಜ್ಯ ಪ್ರವಾಸ ಮಾಡಿದರು. ರಾಜ್ಯಾದ್ಯಂತ ಪ್ರವಾಸ ಮಾಡಿ, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
In Pics: ಶ್ರೀ ನಿರ್ಮಲಾನಂದನಾಥ ಸ್ವಾಮಿಯವರ ಆಶೀರ್ವಾದ ಪಡೆದ ರಾಹುಲ್ ಗಾಂಧಿ
ಭಾನುವಾರ ಅರಮನೆ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಡಾ.ಜಿ.ಪರಮೇಶ್ವರ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿಪಾಲ್ಗೊಂಡಿದ್ದರು.

ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು
* ಪ್ರೀತಿ, ವಿಶ್ವಾಸ, ಸಮನ್ವಯತೆಯಿಂದ ಬದುಕುವುದನ್ನು ಬೆಂಗಳೂರಿಗರನ್ನು ನೋಡಿ ಕಲಿಯಬೇಕು. ಬೆಂಗಳೂರಿಗರು ಯಾರಿಂದಲೂ ಏನನ್ನು ಕೇಳುವುದಿಲ್ಲ. ಎಲ್ಲರೂ ಬುದ್ಧಿವಂತರು. ಆದ್ದರಿಂದ, ಬೆಂಗಳೂರು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ.
* ಕಾಂಗ್ರೆಸ್ ನಾಯಕರು ಜನರಿಗಾಗಿ ಹೋರಾಡುತ್ತಾರೆ. ಜನರಿಗೆ ಕೊಟ್ಟ ಭರವಸೆಯಂತೆ ನಡೆದುಕೊಳ್ಳುತ್ತಾರೆ. ಬಸವಣ್ಣ ಅವರ ನುಡಿದಂತೆ ನಡೆ ಎಂಬ ತತ್ವವನ್ನು ಕಾಂಗ್ರೆಸ್ ಪಾಲಿಸುತ್ತದೆ. ಅವರ ತತ್ವವನ್ನು ಗೌರವಿಸುತ್ತದೆ.
* ಪ್ರತಿಯೊಬ್ಬ ಕಾಂಗ್ರೆಸ್ ನಾಯಕರು ಕಳೆದ ಹಲವು ತಿಂಗಳಿನಿಂದ ಒಂದೇ ಒಂದು ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಅದು ಕರ್ನಾಟಕದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಬೇಕು ಎಂದು. ನೀವು ಬೆಂಬಲ ನೀಡಿದರೆ ನಾವು ಪುನಃ ಅಧಿಕಾರ ಪಡೆಯುತ್ತೇವೆ.
* ದೇಶದ ಪ್ರತಿಯೊಬ್ಬರ ಜನರನ್ನು ಗೌರವಿಸುವ ಕಾಂಗ್ರೆಸ್ ಪಕ್ಷ, ಜನರ ಹಿತ ಮರೆತು ಉದ್ಯಮಿಗಳಿಗೆ ಸಹಾಯ ಮಾಡುವ ಬಿಜೆಪಿಯ ಸಿದ್ಧಾಂತಗಳ ನಡುವೆ ಈ ಬಾರಿಯ ಚುನಾವಣೆ ನಡೆಯಲಿದೆ.
* ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ವಿರೋಧ ಪಕ್ಷಗಳನ್ನು ನಾಯಿ, ಬೆಕ್ಕು ಮುಂತಾದ ಪ್ರಾಣಿಗಳಿಗೆ ಹೋಲಿಕೆ ಮಾಡುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷ ಯಾವತ್ತೂ ಸಹ ವಿಪಕ್ಷಗಳ ವಿರುದ್ಧ ಇಂತಹ ಭಾಷೆಯನ್ನು ಬಳಸುವುದಿಲ್ಲ.
* ಕರ್ನಾಟಕದಲ್ಲಿ ಅಮಿತ್ ಶಾ ಮತ್ತು ನರೇಂದ್ರ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ವೇದಿಕೆಯಲ್ಲಿ ಜೈಲಿಗೆ ಹೋಗಿ ಬಂದ ಬಿ.ಎಸ್.ಯಡಿಯೂರಪ್ಪ ಇದ್ದಾರೆ. ಜೈಲಿಗೆ ಹೋಗಿ ಬಂದ ಸಚಿವರಿದ್ದಾರೆ ಎಂಬುದನ್ನು ಮರೆಯಬಾರದು.
* ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದಾಗ ಎಚ್‌ಎಎಲ್ ಹೆಲಿಕಾಪ್ಟರ್ ಖರೀದಿ ಒಪ್ಪಂದ ಏಕೆ ರದ್ದಾಯಿತು. ನೀರವ್ ಮೋದಿ ಮಾಡಿದ್ದೇನು?, ಅಮಿತ್ ಶಾ ಪುತ್ರನ ಕಂಪನಿ ಅಷ್ಟು ಹಣ ಗಳಿಸಿದ್ದು ಹೇಗೆ? ಎಂದು ಮಾತನಾಡಲಿ.
* ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ರೈತರ ಒಂದು ರೂಪಾಯಿ ಸಾಲವನ್ನು ಅವರು ಮನ್ನಾ ಮಾಡಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ರೈತರ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಿದರು. ನಮಗೆ ರೈತರ ಬಗ್ಗೆ ಅಪಾರವಾದ ಕಾಳಜಿ ಇದೆ.
* ನಾನು ಕಳೆದ ಮೂರು ತಿಂಗಳಿನಿಂದ ರಾಜ್ಯದಲ್ಲಿ ಪ್ರವಾಸ ಮಾಡಿದ್ದೇನೆ. ಯುವಕರ, ಮಹಿಳೆಯರ, ರೈತರ ಸಮಸ್ಯೆ ಆಲಿಸಿದ್ದೇನೆ. ಇಂದು ಬೆಳಗ್ಗೆ ನಾನು ಪೌರ ಕಾರ್ಮಿಕರನ್ನು ಭೇಟಿ ಮಾಡಿದೆ. ನೀವು ನೀಡಿದ ಸಲಹೆಗಳು ನನ್ನ ಬಳಿ ಇದೆ. ಇವುಗಳನ್ನು ನಾವು ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸುತ್ತೇವೆ.












Click it and Unblock the Notifications