ದಲಿತ ಮಂತ್ರಿ ರಾಜಣ್ಣಗೆ ರಾಜೀನಾಮೆ ಭಾಗ್ಯ, ಕಾಂಗ್ರೆಸ್‌ಗೆ ಸತ್ಯ ಅಂದ್ರೆ ಅಲರ್ಜಿ: ಅಶೋಕ್
ಇಂದು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಭಾವಿ ರಾಜಕಾರಣಿಯೂ ಆಗಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಅತೀ ಆಪ್ತರೂ ಆಗಿದ್ದ ರಾಜಣ್ಣ ಅವರ ದಿಢೀರ್ ರಾಜೀನಾಮೆಯು ಅಚ್ಚರಿ ಮೂಡಿಸಿದೆ. ಈ ಬಗ್ಗೆ ವಿರೋಧ ಪಕ್ಷದ ಬಿಜೆಪಿ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ಸುಳ್ಳಿಗೆ ಕನ್ನಡಿ ಹಿಡಿದ ದಲಿತ ಮಂತ್ರಿಗೆ ರಾಜೀನಾಮೆ ಗ್ಯಾರೆಂಟಿ ಭಾಗ್ಯ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಸತ್ಯ ಎಂದರೆ ಅಲರ್ಜಿ, ಸುಳ್ಳು ಎಂದರೆ ಎನರ್ಜಿ. 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೇ ಮತದಾರರ ಪಟ್ಟಿ ಸಿದ್ಧಪಡಿಸಿದ್ದು ಎಂಬ ಸರಳ ಸತ್ಯವನ್ನು ಹೇಳಿದ್ದೇ ಸಚಿವ ರಾಜಣ್ಣನವರಿಗೆ ಮುಳುವಾಗಿರುವುದು ಅತ್ಯಂತ ದುರದೃಷ್ಟಕರ. ರಾಹುಲ್ ಗಾಂಧಿ ಅವರ ಮತಗಳ್ಳತನ ಸುಳ್ಳಿಗೆ ಕನ್ನಡಿ ಹಿಡಿದಿದ್ದೆ ಸಚಿವ ರಾಜಣ್ಣನವರ ತಪ್ಪಾ? ಎಂದು ಪ್ರಶ್ನಿಸಿದ್ದಾರೆ.

ಸತ್ಯ ಹೇಳಿದ್ದಕ್ಕೆ ರಾಜೀನಾಮೆ ಶಿಕ್ಷೆನಾ? ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಸತ್ಯಕ್ಕಿಂತ, ದಲಿತ ಸಚಿವರೊಬ್ಬರ ಗೌರವಕ್ಕಿಂತ ಹೈಕಮಾಂಡ್ ಗುಲಾಮಗಿರಿಯೇ ಹೆಚ್ಚಾಗಿದ್ದು ದುರಂತ. ಸಚಿವ ರಾಜಣ್ಣನವರನ್ನು ಈ ರೀತಿ ಅಗೌರವವಾಗಿ ಸಂಪುಟದಿಂದ ವಜಾ ಮಾಡಿರುವುದು, ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ಮನಸ್ಥಿತಿಗೆ ಮತ್ತೊಂದು ತಾಜಾ ಉದಾಹರಣೆ ಅಷ್ಟೇ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೇ ಸೋಲಿಸಿದ ಕಾಂಗ್ರೆಸ್‌ನವರು ರಾಜಣ್ಣ ಅವರ ಸತ್ಯವನ್ನು ಸಹಿಸುತ್ತಾರಾ? ಟೀಕಿಸಿದ್ದಾರೆ.
ಕಾಂಗ್ರೆಸ್‌ನ ಡರ್ಟಿ ಪಾಲಿಟಿಕ್ಸ್: ಯತ್ನಾಳ್
ರಾಜಣ್ಣ ಅವರ ರಾಜೀನಾಮೆ ವಿಚಾರವನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಖಂಡಿಸಿದ್ದಾರೆ. ಸಹಕಾರ ಸಚಿವ ಕೆ.ರಾಜಣ್ಣ ಅವರು ಸತ್ಯವನ್ನು ಹೇಳಿದ್ದಕ್ಕೆ, ರಾಹುಲ್ ಗಾಂಧಿ ಅವರ ಸುಳ್ಳನ್ನು ಬಯಲು ಮಾಡಿದ್ದಕ್ಕಾಗಿ ಅವರ ತಲೆದಂಡವಾಗಿದೆ. ಪರಿಶಿಷ್ಟ ವರ್ಗದ ಹಿರಿಯ ನಾಯಕರಾದ ರಾಜಣ್ಣ ಅವರನ್ನು ಕಾಂಗ್ರೆಸ್ ಅವಮಾನಿಸಿದೆ. ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವಿರುವ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲದಿರುವುದು ನಿಜಕ್ಕೂ ಶೋಚನೀಯ ಎಂದು ಹರಿಹಾಯ್ದಿದ್ದಾರೆ.
ಕಾಂಗ್ರೆಸ್ "ವ್ಯಕ್ತಿ ಕೇಂದ್ರಿತ" ಆಡಳಿತ ಮಾಡುತ್ತಿದೆ, ಸತ್ಯವನ್ನು ಎತ್ತಿ ಹಿಡಿದು, ಧೈರ್ಯವಾಗಿ ಹಾಗೂ ಕಾನೂನಾತ್ಮಕವಾಗಿ ಮಾತನಾಡಿದ ರಾಜಣ್ಣ ಅವರ ರಾಜೀನಾಮೆ ಪಡೆದಿರುವುದು ನಿಜಕ್ಕೂ ದುರಂತ. ಮತದಾರರ ಕರಡು ಪ್ರತಿಯನ್ನು ರಾಜಕೀಯ ಪಕ್ಷಗಳಿಗೆ ನೀಡಿದ್ದಾಗ ಕಾಂಗ್ರೆಸ್ ಪಕ್ಷವು ಇದರಲ್ಲಿ ಇದ್ದ ತಪ್ಪುಗಳನ್ನು ಏಕೆ ಗಮನಿಸಲಿಲ್ಲ? ಎಂದು ರಾಜಣ್ಣ ಪ್ರಬುದ್ಧವಾಗಿ ಪಕ್ವಾವಾಗಿ ಮಾತನಾಡಿದ್ದರು ಎಂದು ಸಹಮತ ವ್ಯಕ್ತಪಡಿಸಿದ್ದಾರೆ.

ರಾಜಣ್ಣ ಅವರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದ ಡರ್ಟಿ ಟ್ರಿಕ್ಸ್ ಡಿಪಾರ್ಟ್‌ಮೆಂಟ್‌ನ ಜಂಗಾಬಲವೇ ಅಡಗಿದಂತಾಗಿದೆ. ಅವರ ಸುಳ್ಳಿನ ಕೋಟೆಯನ್ನು ಭೇದಿಸಿದ ರಾಜಣ್ಣ ಅವರ ದಿಟ್ಟ ನುಡಿಗೆ ಅವರ ರಾಜೀನಾಮೆಯನ್ನು ಪಡೆಯಬಹುದು. ಆದರೆ ತನ್ಮೂಲಕ ತಮ್ಮ ಆಷಾಢಭೂತಿತನವನ್ನು ರಾಷ್ಟ್ರಕ್ಕೆ ಪ್ರದರ್ಶಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications