20 ಸ್ಥಾನ ಗೆಲ್ಲದಿದ್ರೆ ರಾಜೀನಾಮೆ ಕೊಡ್ತೀರಾ ಸಿಎಂ ಸಿದ್ದರಾಮಯ್ಯನವರೇ?: ಆರ್ ಅಶೋಕ ಸವಾಲ್
ಬೆಂಗಳೂರು, ಮಾರ್ಚ್ 20: ತಮ್ಮ ಆಪ್ತ ಸಚಿವ ಕೆಎನ್ ರಾಜಣ್ಣ ಅವರು ಹೇಳಿದಂತೆ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಾ ಸಿಎಂ ಸಿದ್ದರಾಮಯ್ಯನವರೇ? ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಅವರು, ಇದು ವೀಕ್ ಪಿಎಂ, ಸ್ಟ್ರಾಂಗ್ ಸಿಎಂ ಎಂದು ಸಿದ್ದರಾಮಯ್ಯನವರ ಲೇವಡಿಗೆ ವಿಪಕ್ಷ ನಾಯಕ ಆರ್ ಅಶೋಕ್ ಅವರು ಹಾಕಿರುವ ಸವಾಲು. ರಾಜ್ಯದ 20 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದಲ್ಲಿ ಮಾತ್ರ ಸರ್ಕಾರ ನಡೆಸಲು ನೈತಿಕತೆ ಇರುತ್ತದೆ ಎಂಬ ಸಚಿವ ಕೆಎನ್ ರಾಜಣ್ಣ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಅವರು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾವು ಸ್ಟ್ರಾಂಗ್ ಮುಖ್ಯಮಂತ್ರಿನೋ ಅಥವಾ ವೀಕ್ ಮುಖ್ಯಮಂತ್ರಿನೋ ಅಂತ ಜೂನ್ 4ರಂದು ಗೊತ್ತಾಗಲಿದೆ. ಸಿಎಂ ಸಿದ್ದರಾಮಯ್ಯನವರೇ, ಕರ್ನಾಟಕ ಕಂಡ ಅತ್ಯಂತ ದುರ್ಬಲ, ಅಸಹಾಯಕ ಮುಖ್ಯಮಂತ್ರಿ ತಾವು. ಬಿ ಕೆ ಹರಿ ಪ್ರಸಾದ್ ಅವರು ತಮ್ಮ ಮೇಲೆ ಪದೇ ಪದೇ ವಾಗ್ದಾಳಿ ನಡೆಸಿದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗದಷ್ಟು, ಕನಿಷ್ಠ ಪಕ್ಷ ಪ್ರತ್ಯುತ್ತರ ಕೂಡ ನೀಡಲಾಗದಷ್ಟು ಅಸಹಾಯಕರ ತಾವು.
ಡಿಸಿಎಂ ಶಿವಕುಮಾರ್ ಅವರ ಬಣ ಅವಕಾಶ ಸಿಕ್ಕಾಗಲೆಲ್ಲಾ ಬಂಡಾಯದ ಬಾವುಟ ಹಾರಿಸಿ ತಮ್ಮ ಕುರ್ಚಿಯ expiry date ಮುಗಿಯುತ್ತದೆ ಎಂದು ಕಾಲೆಳೆಯುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ನಿಮ್ಮದು. ಪ್ರಧಾನಿ ಮೋದಿ ಅವರೇ ಮತ್ತೊಮ್ಮೆ ಮುಂದಿನ ಐದು ವರ್ಷ ಈ ದೇಶದ ಸ್ಟ್ರಾಂಗ್ ಪ್ರಧಾನಿ ಆಗಿ ಮುಂದುವರೆಯುತ್ತಾರೆ ಎಂದು ವಿಶ್ವಾಸದಿಂದ ಹೇಳುವ ಧೈರ್ಯ ನನಗಿದೆ ಎಂದು ಹೇಳಿದ್ದಾರೆ.
ತಮ್ಮ ಆಪ್ತ ಸಚಿವ ಶ್ರೀ @KNRajanna_Off
— R. Ashoka (ಮೋದಿ ಅವರ ಕುಟುಂಬ) (@RAshokaBJP) March 20, 2024
ಅವರು ಹೇಳಿದಂತೆ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೀರಾ ಸಿಎಂ @siddaramaiah ನವರೇ?
ತಾವು ಸ್ಟ್ರಾಂಗ್ ಮುಖ್ಯಮಂತ್ರಿನೋ ಅಥವಾ ವೀಕ್ ಮುಖ್ಯಮಂತ್ರಿನೋ ಅಂತ ಜೂನ್ 4ರಂದು ಗೊತ್ತಾಗಲಿದೆ. pic.twitter.com/Rd997fejEf
ನಿಮಗೆ ತಾಕತ್ತಿದ್ದರೆ, ನೀವು ಹೇಳಿಕೊಳ್ಳುವಂತೆ ತಾವು ಸ್ಟ್ರಾಂಗ್ ಮುಖ್ಯಮಂತ್ರಿಯೇ ಆಗಿದ್ದರೆ, "ನಾನೇ ಐದು ವರ್ಷ ಮುಖ್ಯಮಂತ್ರಿ" ಎಂದು ಒಮ್ಮೆ ಹೇಳಿ ನೋಡೋಣ. ನಿಮಗೆ ಖಂಡಿತ ಹೇಳಲು ಆಗಲ್ಲ. ಅದಕ್ಕೆ ತಮ್ಮನ್ನು ಈ ರಾಜ್ಯ ಕಂಡ ಅತ್ಯಂತ ವೀಕ್ ಮುಖ್ಯಮಂತ್ರಿ ಎಂದು ಜನ ಮಾತಾಡಿಕೊಳ್ಳುವುದು.
ಸಿದ್ದರಾಮಯ್ಯ ಹೇಳಿದ್ದೇನು?
ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರೇ, ಕಾಂಗ್ರೆಸ್ ಪಕ್ಷದಲ್ಲಿ ಸೂಪರ್ ಸಿಎಂ, ಶ್ಯಾಡೋ ಸಿಎಂ ಗಳಿದ್ದಾರೆ ಎಂದು ಶಿವಮೊಗ್ಗದ ನಿಮ್ಮ ಪಕ್ಷದ ಸಭೆಯಲ್ಲಿ ನೀವು ಗೇಲಿ ಮಾಡಿದ್ದೀರಿ! ನಮ್ಮಲ್ಲಿ ಸೂಪರ್ರೂ ಇಲ್ಲ, ಶ್ಯಾಡೋನೂ ಇಲ್ಲ, ಇರುವುದು ಒಬ್ಬರೇ ಸಿಎಂ ಅದು ''ಸ್ಟ್ರಾಂಗ್ ಸಿಎಂ'', ನಿಮ್ಮ ಹಾಗೆ ನಾನು ''ವೀಕ್ ಪಿಎಂ'' ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೋದಿಯವರೇ ನಿಮ್ಮನ್ನು ನೀವು 56 ಇಂಚಿನ ಎದೆಯುಳ್ಳವನು ಎಂದು ಬಣ್ಣಿಸಿಕೊಳ್ಳುತ್ತೀರಿ, ನಿಮ್ಮ ಅಭಿಮಾನಿಗಳು ನಿಮ್ಮನ್ನು ವಿಶ್ವಗುರು ಎಂದು ಕೊಂಡಾಡುತ್ತಾರೆ. ಆದರೆ ನೀವೊಬ್ಬ ''ವೀಕ್ ಪಿಎಂ'' ಎಂದು ಮತ್ತೆ ಮತ್ತೆ ತೋರಿಸಿಕೊಡುತ್ತಿದ್ದೀರಿ. ಬಿ.ಎಸ್ ಯಡಿಯೂರಪ್ಪನವರು ಒಂದು ಕಾಲದಲ್ಲಿ ನಿಮ್ಮ ನಾಯಕತ್ವದ ವಿರುದ್ಧವೇ ಬಂಡಾಯ ಎದ್ದವರು, ನಿಮ್ಮನ್ನು ಹೀನಾಯವಾಗಿ ನಿಂದಿಸಿದವರು. ಅಂತಹವರ ಕಾಲಿಗೆ ಬಿದ್ದು ಮತ್ತೆ ಪಕ್ಷಕ್ಕೆ ಕರೆತಂದು ಮೆರವಣಿಗೆ ಮಾಡುವ ಮೂಲಕ ನೀವೊಬ್ಬ ''ವೀಕ್ ಪಿಎಂ'' ಎಂದು ನೀವೇ ತೋರಿಸಿಕೊಟ್ಟಂತಾಗಲಿಲ್ಲವೇ? ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ನಿಮ್ಮ ನಾಯಕತ್ವದ ವಿರುದ್ಧ ಅರ್ಧ ಡಜನ್ ನಾಯಕರು ಬಂಡೆದಿದ್ದಾರೆ. ಟಿಕೆಟ್ ಪಡೆಯಲು ಅಸಮರ್ಥರಾದ ನಿಮ್ಮ ಪಕ್ಷದ ನಾಯಕರು ಹಾದಿ ಬೀದಿಲಿ ಹೊಡೆದಾಡಿಕೊಳ್ಳುತ್ತಿದ್ದಾರೆ, ಪರಸ್ಪರ ಕೆಸರೆರಚಾಟ ನಡೆಸುತ್ತಿದ್ದಾರೆ. ನಿಮ್ಮ ಯಾವ ಮನವಿಗೂ ಅವರು ಕಿವಿಕೊಟ್ಟಿಲ್ಲ. ಇವರಲ್ಲಿ ಕೆಲವರು ನಮ್ಮನ್ನೂ ಸಂಪರ್ಕಿಸುತ್ತಿದ್ದಾರೆ. ಶಿಸ್ತಿನ ಪಕ್ಷದಲ್ಲಿ ಇದೆಂತಹ ಅಶಿಸ್ತಿನ ತಾಂಡವ. ಇದಕ್ಕೆಲ್ಲ ಕಾರಣ ನೀವೊಬ್ಬ ''ವೀಕ್ ಪಿಎಂ'' ಆಗಿರುವುದಲ್ಲವೇ? ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ಪ್ರಶ್ನಿಸಿದ್ದಾರೆ.












Click it and Unblock the Notifications