Siddaramaiah meets PM Modi: ಕ್ಷುಲ್ಲಕ ರಾಜಕೀಯ ಬಿಟ್ಟು ಮುತ್ಸದ್ಧಿತನ ತೋರಲಿ: ಆರ್.ಅಶೋಕ್
ಬೆಂಗಳೂರು, ಡಿಸೆಂಬರ್ 18: ಪ್ರಧಾನಿಮಂತ್ರಿ ನರೇಂದ್ರ ಮೋದಿಯನ್ನು ಭೇಟಿಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಅವಕಾಶ ಸಿಕ್ಕಿದೆ. ಮಂಗಳವಾರ ದೆಹಲಿಗೆ ಸಿದ್ದರಾಮಯ್ಯ ತೆರಳಲಿದ್ದಾರೆ. ಈ ಮಧ್ಯೆ ವಿಧಾನಮಂಡಲ ಅಧಿವೇಶನದಲ್ಲಿ ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ಅವರು ಮಾತನಾಡಿದ್ದನ್ನು ವಿಪಕ್ಷ ನಾಯಕ ಆರ್. ಅಶೋಕ್ ಅವರು ಪ್ರಸ್ತಾಪಿಸಿ ಕೆಲವು ಇತಿ ಮಿತಿಗಳ ಕುರಿತು ತಿಳಿಸಿದ್ದಾರೆ.
ಇತ್ತೀಚಿನ ಚಳಿಗಾಲ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸಿಎಂ ಸಿದ್ದರಾಮಯ್ಯನವರು ರೋಷಾವೇಶ ಗಮನಿಸಿದರೆ ರಾಜ್ಯದ ಜನತೆಯ ಹಿತರಕ್ಷಣೆಗಿಂತ ತಮ್ಮ ಕಾಂಗ್ರೆಸ್ ಹೈಕಮಾಂಡ್ ಅನ್ನು ಮೆಚ್ಚಿಸುವುದೇ ಅವರ ಉದ್ದೇಶವೆಂದು ಅನ್ನಿಸುತ್ತದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.

ಈ ವಿಚಾರ ಪ್ರಸ್ತಾಪಿಸಿದ ಆರ್. ಅಶೋಕ್ ಸೋಮವಾರ ಸರಣಿ ಟ್ವೀಟ್ ಮಾಡಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದ ಜೊತೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವುದು ಒಬ್ಬ ಜವಾಬ್ದರಿಯುತ ಮುಖ್ಯಮಂತ್ರಿಗೆ ಇರಬೇಕಾದ ಪ್ರಮುಖ ಲಕ್ಷಣ ಮಾತ್ರವಲ್ಲ ಅದು ಕರ್ತವ್ಯ ಕೂಡ ಹೌದು.
ಪಿಎಂ ಮೇಲೆ ಸಿಎಂ ರಾಜಕೀಯ ಪ್ರೇರಿತ ಆರೋಪ
ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯದ ಹಿತಾಸಕ್ತಿ ಕಾಪಾಡುವುದಕ್ಕಿಂತ ಪ್ರಧಾನಮಂತ್ರಿಗಳ ಮೇಲೆ, ಕೇಂದ್ರ ಸರ್ಕಾರದ ಮೇಲೆ ಇಲ್ಲಸಲ್ಲದ, ರಾಜಕೀಯ ಪ್ರೇರಿತ ಆರೋಪ ಮಾಡುವುದೇ ದೊಡ್ಡ ಕೆಲಸವಾದಂತಿದೆ ಎಂದು ಆರ್. ಅಶೋಕ್ ಸಿಎಂ ನಡೆಯನ್ನು ಟೀಕಿಸಿದ್ದಾರೆ.
ಮೊನ್ನೆ ಸದನದಲ್ಲಿ ಪ್ರಧಾನಿ ಮೋದಿ ಅವರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೋರಿದ ರೋಷಾವೇಶ ಗಮನಿಸಿದರೆ ರಾಜ್ಯದ ಜನತೆಯ ಹಿತರಕ್ಷಣೆ ಇವರ ಮುಖ್ಯ ಅಲ್ಲ ಅನ್ನಿಸುತ್ತದೆ. ಹೈಕಮಾಂಡ್ ಮೆಚ್ಚಿಸುವುದೇ ಸಿದ್ದರಾಮಯ್ಯನವರ ಉದ್ದೇಶ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರಕ್ಕೆ ಸಂವಿಧಾನಬದ್ಧ ಜವಾಬ್ದಾರಿಗಳಿವೆ
ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳಿಗೆ ತಮ್ಮದೇ ಆದ ಸಂವಿಧಾನ ಬದ್ಧ ಜವಾಬ್ದಾರಿಗಳಿವೆ. 12 ವರ್ಷಗಳ ಕಾಲ ಒಂದು ರಾಜ್ಯದ ಮುಖ್ಯಮಂತ್ರಿಗಳಾಗಿ ಅತ್ಯಂತ ಯಶಸ್ವಿಯಾಗಿ ಸೇವೆ ಸಲ್ಲಿಸಿರುವ ಪ್ರಧಾನಿ ಮೋದಿ ಅವರಿಗೆ ರಾಜ್ಯ ಸರ್ಕಾರಗಳ ಇತಿಮಿತಿಗಳು, ಅಗತ್ಯತೆಗಳು, ಅಪೇಕ್ಷೆಗಳ ಬಗ್ಗೆ ಇರುವಷ್ಟು ಅರಿವು, ಅವಗಾಹನೆ, ಸಂವೇದನೆ ಬಹುಶಃ ಹಿಂದಿನ ಬೇರೆ ಯಾವ ಪ್ರಧಾನಮಂತ್ರಿಗೂ ಇರಲಿಲ್ಲ ಎಂದು ಪ್ರಧಾನಿ ಮೋದಿಯನ್ನು ವಿಪಕ್ಷ ನಾಯಕರು ಕೊಂಡಾಡಿದರು.
ಕರ್ನಾಟಕದ ಇಂದಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಅವರ ಭೇಟಿಗೆ ಸಮಯ ಸಿಕ್ಕಿರುವಾಗ ತಮ್ಮ ಕ್ಷುಲ್ಲಕ ರಾಜಕೀಯ ಬದಿಗಿಡಬೇಕು. ರಾಜ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ, ಕನ್ನಡ ನಾಡಿನ ಆರೂವರೆ ಕೋಟಿ ಜನತೆಯ ಹಿತರಕ್ಷಣೆಯ ದೃಷ್ಟಿಯಿಂದ ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಮಾನ್ಯ ಸಿದ್ದರಾಮಯ್ಯನವರು ತಮ್ಮ ಮುತ್ಸದ್ಧಿತನ ಪ್ರದರ್ಶಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಆರ್.ಅಶೋಕ್ ಕಾಲೆಳೆದಿದ್ದಾರೆ.
ಕೇಂದ್ರ ಪರಿಹಾರ ನೀಡಿಲ್ಲ ಎಂದಿದ್ದ ಸಿದ್ದರಾಮಯ್ಯ
ಅಧಿವೇಶನದಲ್ಲಿ ಕರ್ನಾಟಕದ ಬರಗಾಲ ಪರಿಹಾರ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದರೂ ಸಹ ಭೇಟಿಗೆ ಸಮಯಾವಕಾಶ ನೀಡುತ್ತಿಲ್ಲ. ಇಷ್ಟು ದಿನವಾದರೂ ನಯಾಪೈಸೆ ಪರಿಹಾರ ನೀಡಿಲ್ಲ, ಬಿಡುಗಡೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದರು. ಇದೀಗ ಭೇಟಿಗೆ ಅವಕಾಶ ಸಿಕ್ಕಿರುವ ಹಿನ್ನಲೆಯಲ್ಲಿ ವಿಪಕ್ಷ ನಾಯಕ ಅಶೋಕ್ ಅವರು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಕೆಲವು ಸಲಹೆಗಳನ್ನು ನೀಡಿದ್ದಾರೆ.
ಮಂಗಳವಾರ ಸಿಎ -ಪಿಎಂ ಮೋದಿ ಭೇಟಿ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರು ಮಂಗಳವಾರ ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಅವರು ಕರ್ನಾಟಕದಲ್ಲಿ ಬರಗಾಲ, ಸದ್ಯದ ಸ್ಥಿತಿಗತಿ, ಪರಿಹಾರ ಹಾಗೂ ಹೆಚ್ಚುತ್ತಿರುವ ಕೋವಿಡ್ ಕುರಿತು ಚರ್ಚಿಸಿ ಮನವಿ ಮಾಡಲಿದ್ದಾರೆ.
ಮಹಾತ್ಮ ಗಾಂಧಿ ನರೇಗಾ ಯೊಜನೆಯಡಿ ಹಾಲಿ ಮಾನವ 100 ದಿನಗಳನ್ನು 150 ದಿನಗಳಿಗೆ ಹೆಚ್ಚಿಸುವಂತೆ ಅವರು ಮನವಿ ಮಾಡಲಿದ್ದಾರೆ. ಇವುಗಳು ಸೇರಿದಂತೆ ಕರ್ನಾಟಕದ ಕೆಲವು ವಿಚಾರಗಳನ್ನು ಪ್ರಧಾನಿ ಜೊತೆಗೆ ಸಿದ್ದರಾಮಯ್ಯ ಚರ್ಚೆ ಮಾಡುವ ಸಾಧ್ಯತೆಗಳು ಇವೆ.












Click it and Unblock the Notifications