ಗಲಭೆ ಕೇಸ್: ಸಚಿವ ಜಿ.ಪರಮೇಶ್ವರ, ಪೊಲೀಸರ ಮೇಲೆ ಮೊದಲು FIR ಹಾಕಬೇಕು!: ಆರ್.ಅಶೋಕ್
ಬೆಂಗಳೂರು, ಸೆಪ್ಟಂಬರ್ 19: ತಪ್ಪು ಮಾಡಿದ ಮತಾಂಧರ ವಿರುದ್ಧ ಕ್ರಮ ಕೈಗೊಂಡು ಹೆಡೆಮುರಿ ಕಟ್ಟಬೇಕಾದ ರಾಜ್ಯದ ಗೃಹ ಸಚಿವ ಡಾ.ಜಿ.ಪರಮರೇಶ್ವರ ಅವರು ವಿಪಕ್ಷ ನಾಯಕರ ಮೇಲೆ ಎಫ್ಐಆರ್ ಹಾಕಿರುವುದು ಹೇಡಿತನದ ಪರಮಾವಧಿ . ಅವರೊಬ್ಬ ಅಸಮರ್ಥ ನಾಯಕ ಎಂದು ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು ನಾನು ಸುಳ್ಳು ಮಾಹಿತಿ ನೀಡಿಲ್ಲ ಎಂದು ತಿಳಿಸಿದರು.
ನಾಗಮಂಗಲ ಗಲಭೆ ಸಂಬಂಧ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ರಾಜ್ಯ ಪಲಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಆರ್.ಅಶೋಕ್ ಅವರು, ಗಲಭೆ ಮಾಡಿದವರನ್ನು ಪತ್ತೆ ಮಾಡಿ ಹೆಡೆಮುರಿ ಕಟ್ಟದೇ ನಮ್ಮ ಮೇಲೆ ಕೇಸು ದಾಖಲಿಸುತ್ತಿದ್ದಾರೆ. 'ಕೈಲಾಗದವನು ಮೈಪರಚಿಕೊಂಡ' ಎಂದು ಗೃಹ ಸಚಿವರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಗಲಭೆ ಸ್ಥಳಕ್ಕೆ ಗೃಹ ಸಚಿವರು ಬೇಟಿ ನೀಡಿಲ್ಲ
ಪೋಸ್ಟ್ ನಲ್ಲಿ ಅವರು, ಅಸಮರ್ಥ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ, ಕಳೆದ ಬುಧವಾರ ರಾತ್ರಿ ಬೆಂಗಳೂರಿನಿಂದ ಕೇವಲ 130 ಕಿಮೀ ದೂರದಲ್ಲಿರುವ ನಾಗಮಂಗಲದಲ್ಲಿ ರಾಜ್ಯವೇ ಬೆಚ್ಚಿಬೀಳುವಂತಹ ಘಟನೆ ನಡೆದಿದೆ. ಒಂದು ವಾರ ಕಳೆದಿದ್ದರೂ ಈವರೆಗೂ ತಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಕೆಲಸ ಮಾಡಿಲ್ಲ.
ಘಟನಾ ಸ್ಥಳಕ್ಕೆ ಹೋಗಿ ಅಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡು, ಭಯಭೀತರಾಗಿರುವ ಸ್ಥಳೀಯರ ಅಳಲು, ದುಮ್ಮಾನ, ಆತಂಕ, ಆಕ್ರೋಶ ಕೇಳಿದ್ದಿದ್ದರೆ ತಮಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತಿತ್ತು. ಆದರೆ ತಮಗೆ ಕರ್ತವ್ಯ ಪ್ರಜ್ಞೆಯೇ ಇಲ್ಲ ಎಂದು ದೂರಿದರು.

ಸುಳ್ಳು ಮಾಹಿತಿ ಹಂಚಿಕೊಂಡಿಲ್ಲ
ನನ್ನ ಮೇಲೆ ಎಫ್ಐಆರ್ ಹಾಕಿ ಏನು ಸಾಧಿಸಲು ಹೊರಟಿದ್ದೀರಿ? ನಾನು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳೀಯರು, ಪ್ರತ್ಯಕ್ಷದರ್ಶಿಗಳು, ಪತ್ರಕರ್ತರು ವ್ಯಕ್ತಪಡಿಸಿರುವ ಅನುಮಾನವನ್ನು ನನ್ನ X ಖಾತೆಯಲ್ಲಿ ಪೋಸ್ಟ್ ಮಾಡಿದ್ದೇನೆ. ಈ ಮೂಲಕ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆಯೇ ಹೊರತು, ಯಾವುದೇ ಸುಳ್ಳು ಮಾಹಿತಿ ಹಂಚಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇಷ್ಟಕ್ಕೂ ಎಫ್ಐಆರ್ ಹಾಕಿರುವ ಪೊಲೀಸರು ನನ್ನ ಪೋಸ್ಟ್ ನಲ್ಲಿರುವ ಮಾಹಿತಿಯನ್ನು ಪೂರ್ತಿಯಾಗಿ ಓದಿದ್ದಾರೋ ಇಲ್ಲವೋ ಅಥವಾ ಅವರಿಗೆ ಕನ್ನಡ ಸರಿಯಾಗಿ ಬರುತ್ತೋ ಇಲ್ಲವೋ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಪೊಲೀಸರ ವಿರುದ್ಧವು ಅಸಮಾಧಾನ ಹೊರ ಹಾಕಿದರು.
ಗೃಹ ಸಚಿವರು, ಪೊಲೀಸರ ಮೇಲೆ FIR ಹಾಕಬೇಕು
ನಾಗಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹಾಕಿರುವ ದೃಶ್ಯಗಳು, ಕಲ್ಲು ಎಸೆದಿರುವ ದೃಶ್ಯಗಳು, ವಾಹನ, ಅಂಗಡಿಗಳನ್ನು ಧ್ವಂಸ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದರೂ ಇದೊಂದು 'ಸಣ್ಣ' ಘಟನೆ, 'ಆಕಸ್ಮಿಕ' ಘಟನೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡಿದ್ದಕ್ಕೆ ಅಸಲಿಗೆ ಗೃಹ ಸಚಿವ ಪರಮೇಶ್ವರ್ ಅವರ ಮೇಲೆ ಮೊದಲು FIR ದಾಖಲಿಸಬೇಕು. ಸಚಿವರಿಗೆ ತಪ್ಪು ಮಾಹಿತಿ ನೀಡಿದ ಪೊಲೀಸರ ಮೇಲೆ ಎಫ್ಐಆರ್ ಹಾಕಬೇಕು.
ಕೋಮು ಗಲಭೆಗಳನ್ನು ತಡೆಯಲಾಗದ ನಾಲಾಯಕ್ ಸರ್ಕಾರ, ಮತಾಂಧರ ಹೆಡೆಮುರಿ ಕಟ್ಟಲಾಗದ ನಿಸ್ತೇಜ ಸರ್ಕಾರ ನನ್ನ ಮೇಲೆ ಎಫ್ಐಆರ್ ಹಾಕಿರುವುದು ಹೇಡಿತನದ ಲಕ್ಷಣ ಎಂದು ದೂರಿದರು.
ವಿಪಕ್ಷವು ಎಚ್ಚರಿಕೆ ನೀಡಿದೆ, ಸುಳ್ಳು ಹೇಳಿಲ್ಲ
ನಾನು ಹಂಚಿಕೊಂಡಿರುವ ದೃಶ್ಯಾವಳಿಗಳು ಚಿಕ್ಕಮಗಳೂರಿನಲ್ಲಿ ಮತಾಂಧರು ಪ್ಯಾಲೆಸ್ಟೈನ್ ಧ್ವಜ ಹಿಡಿದು ಮಾಡಿದ ಪುಂಡಾಟಿಕೆ, ದಾವಣಗೆರೆಯಲ್ಲಿ ಕೇಸರಿ ಧ್ವಜ ಹಾರಿಸಿದ ಹಿಂದೂಗಳ ಮೇಲೆ ಮತಾಂಧರು ಹಲ್ಲೆ ಮಾಡಿರುವ ಘಟನೆಗಳದ್ದು. ನನ್ನ ಪೋಸ್ಟ್ ನಲ್ಲಿ ನಾನು ಅದನ್ನೇ ಉಲ್ಲೇಖ ಮಾಡಿದ್ದೇನೆ.
ರಾಜ್ಯದ ಅನೇಕ ಕಡೆಗಳಲ್ಲಿ ಗಣೇಶೋತ್ಸವವನ್ನೇ ಗುರಿಯಾಗಿಟ್ಟುಕೊಂಡು ನಡೆದಿರುವ ಇಂತಹ ಪ್ರಚೋದನಕಾರಿ ಘಟನೆಗಳ ಹಿಂದೆ ಮತೀಯ ಮೂಲಭೂತವಾದಿ ಸಂಘಟನೆಗಳ ಕೈವಾಡ ಇರಬಹುದು. ಹೀಗೆಂದು ಜವಾಬ್ದಾರಿಯುತ ಪ್ರತಿಪಕ್ಷ ನಾಯಕನಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇನೆಯೇ ಹೊರತು, ನಾನು ಯಾವುದೇ ಸುಳ್ಳು ಮಾಹಿತಿ ಹಂಚಿಕೊಂಡಿಲ್ಲ ಎಂದು ಅವರು ತಿಳಿಸಿದರು.
ನೂರು FIR ಹಾಕಿದರು ಹೆದರಲ್ಲ
ನಮ್ಮ ದೇಶ, ಧರ್ಮದ ರಕ್ಷಣೆ ವಿಚಾರದಲ್ಲಿ, ಹಿಂದೂಗಳ ರಕ್ಷಣೆ ವಿಚಾರದಲ್ಲಿ, ಹಿಂದೂಗಳ ಹಬ್ಬ, ಉತ್ಸವಗಳ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ರಾಮಜನ್ಮಭೂಮಿ ಹೋರಾಟದ ಸಂದರ್ಭದಲ್ಲಿ ದೇಶಕ್ಕಾಗಿ ಧರ್ಮಕ್ಕಾಗಿ ಜೈಲು ವಾಸ ಅನುಭವಿಸಿದವನು ನಾನು. ಇಂತಹ ಒಂದಲ್ಲ ನೂರು ಎಫ್ಐಆರ್ ಹಾಕಿದರೂ ನನ್ನ ದನಿ ಅಡಗಿಸಲು ಸಾಧ್ಯವಿಲ್ಲ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ.












Click it and Unblock the Notifications