ʼಕಾಂಗ್ರೆಸ್ ಸರ್ಕಾರಕ್ಕೆ ವಿಘ್ನ ವಿನಾಯಕನ ಶಾಪ ತಟ್ಟುತ್ತೆ..ʼ ಹೀಗಂದಿದ್ಯಾರು?
ಇನ್ನೇನು ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಇದೆ. ಈ ಸಮಯದಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ವಿಘ್ನ ಎದುರಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ವಿಪಕ್ಷ ನಾಯಕ ಆರ್.ಅಶೋಕ್. ರಾಜ್ಯದ ಕೆಲವೆಡೆ ಹಾಲಿನ ದರವನ್ನು ಕಡಿತಗೊಳಿಸಿರುವ ಬಗ್ಗೆ ಆರ್.ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಗಣೇಶ ಹಬ್ಬಕ್ಕೆ ಹಾಲಿನ ದರ ಖರೀದಿ ಕಡಿತದ ಉಡುಗೊರೆ ನೀಡಿರುವ ಸರ್ಕಾರಕ್ಕೆ ವಿಘ್ನ ವಿನಾಯಕನ ಶಾಪ ತಟ್ಟದೇ ಇರದುʼ ಎಂದೂ ಆಕ್ರೋಶ ಹೊರಹಾಕಿದ್ದಾರೆ.
ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು (RBKMUL) ನಷ್ಟದಲ್ಲಿದೆ ಎಂದು ಕಾರಣ ನೀಡಿ ಹಾಲು ಉತ್ಪಾದನೆ ಮಾಡುವ ರೈತರು ಹಾಗೂ ಹೈನುಗಾರಿಕೆ ನಡೆಸುವವರಿಗೆ ನೀಡುವ ಹಾಲಿನ ಖರೀದಿ ದರದಲ್ಲಿ 1.5 ರೂಪಾಯಿ ಕಡಿತಗೊಳಿಸಿದೆ. ಇನ್ನು ಒಕ್ಕೂಟದ ಈ ನಿರ್ಧಾರಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಆರ್.ಅಶೋಕ್, ಹಾಲಿನ ಖರೀದಿ ಬೆಲೆ ಕಡಿಮೆ ಮಾಡಿದ ಸರ್ಕಾರ, ರೈತರಿಗೆ ಕಾಂಗ್ರೆಸ್ ಸರ್ಕಾರದಿಂದ ಗೌರಿ-ಗಣೇಶ ಹಬ್ಬದ ಗಿಫ್ಟ್ ಎಂದು ವ್ಯಂಗ್ಯವಾಡಿದ್ದಾರೆ. ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿ ಈಗಾಗಲೇ ರಾಜ್ಯದ ರೈತರು ತೀವ್ರ ಸಂಕಷ್ಟದಲ್ಲಿದ್ದರೆ, ಕಾಂಗ್ರೆಸ್ ಸರ್ಕಾರ ಹಾಲಿನ ಖರೀದಿ ಬೆಲೆಯನ್ನು ಒಂದೂವರೆ ರೂಪಾಯಿ ಕಡಿತ ಮಾಡುವ ಮೂಲಕ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ದೂರಿದ್ದಾರೆ.
ʼಒಂದೆಡೆ ಕೇಂದ್ರ ಸರ್ಕಾರ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂಬ ಉದ್ದೇಶದಿಂದ ಉದ್ದು, ಸೂರ್ಯಕಾಂತಿ, ಸೋಯಾಬಿನ್‌ಗೆ ಬೆಂಬಲ ಬೆಲೆ ಹೆಚ್ಚಿಸಿ, ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡಿದೆ. ಮತ್ತೊಂದೆಡೆ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ರೈತರಿಗೆ ನೀಡುವ ಹಾಲಿನ ದರದಲ್ಲಿ ಕಡಿತ ಮಾಡಿ ರೈತರಿಗೆ ದ್ರೋಹ ಬಗೆದಿದೆʼ ಎಂದು ತಿರುಗೇಟು ನೀಡಿದ್ದಾರೆ.

ನಾಡಿನ ರೈತರ ನೆಮ್ಮದಿ, ಸಂತೋಷಕ್ಕೆ ಕಾಂಗ್ರೆಸ್ ಸರ್ಕಾರವೇ ದೊಡ್ಡ ವಿಘ್ನವಾಗಿದ್ದು, ಗೌರಿ-ಗಣೇಶ ಹಬ್ಬಕ್ಕೆ ಹಾಲಿನ ದರ ಖರೀದಿ ಕಡಿತದ ಉಡುಗೊರೆ ನೀಡಿರುವ ಸರ್ಕಾರಕ್ಕೆ ವಿಘ್ನ ವಿನಾಯಕನ ಶಾಪ ತಟ್ಟದೇ ಇರದು ಎಂದು ಹಿಡಿಶಾಪ ಹಾಕಿದ್ದಾರೆ.
ಸದ್ಯ ಒಕ್ಕೂಟವು ತೀವ್ರ ನಷ್ಟದಲ್ಲಿರುವುದರಿಂದ ಈ ಸಮಸ್ಯೆಯನ್ನು ಸರಿದೂಗಿಸಲು ರೈತರಿಂದ ಖರೀದಿಸುತ್ತಿರುವ ಹಾಲಿನ ದರ ಕಡಿತ ಮಾಡಲಾಗಿದೆ. ಇದು ತಾತ್ಕಾಲಿಕವಷ್ಟೇ ಎಂದು ಒಕ್ಕೂಟ ಹೇಳಿದೆ. ದೇಶದಲ್ಲಿರುವ ಎಲ್ಲ ಒಕ್ಕೂಟಗಳಲ್ಲೂ ಇದು ಸಾಮಾನ್ಯ. ಒಕ್ಕೂಟಕ್ಕೆ ಹಾಲಿನ ಮಾರಾಟ ದರ ಏರಿಸಲು ಅವಕಾಶವಿಲ್ಲ. ಹಾಗಾಗಿ ನಷ್ಟ ಎದುರಾಗುತ್ತದೆ. ದರ ಇಳಿಸದೇ ಹೋಗಿದ್ದಿದ್ದರೆ ನಷ್ಟ ಬೆಳೆಯುತ್ತಾ ಹೋಗುತ್ತದೆ. ಬೇರೆ ಒಕ್ಕೂಟಗಳಲ್ಲಿ ದರ ನಮಗಿಂತ ಕಡಿಮೆಯೇ ಇದೆ ಎಂದು ಒಕ್ಕೂಟ ಸ್ಪಷ್ಟನೆ ನೀಡಿದೆ.
ಇತ್ತ ಕಳೆದ ಜುಲೈನಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ಕೂಡ ರೈತರಿಗೆ ನೀಡುತ್ತಿದ್ದ ಹಾಲು ಖರೀದಿ ದರದಲ್ಲಿ 2 ರೂಪಾಯಿ ಕಡಿತ ಮಾಡಿತ್ತು. ಈ ಮೂಲಕ ರೈತರ ಜೇಬಿಗೆ ಕತ್ತರಿ ಹಾಕಿದೆ ಎಂದು ವಿರೋಧಿಸಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಹಿಂದೆ ಕೋಚಿಮುಲ್ ರೈತರಿಂದ ಹಾಲು ಖರೀದಿ ಮಾಡುವಾಗ ಒಂದು ಲೀಟರ್‌ಗೆ 35.85 ರೂಪಾಯಿ ನೀಡುತ್ತಿತ್ತು. ಈಗ ಹಾಲು ಖರೀದಿ ದರದಲ್ಲಿ 2 ರೂಪಾಯಿ ಇಳಿಕೆ ಮಾಡಲಾಗಿದೆ. ಹಾಗಾಗಿ, ಪ್ರತಿ ಲೀಟರ್‌ಗೆ 35.85 ರೂಪಾಯಿ ಬದಲಿಗೆ ಪರಿಷ್ಕೃತ ದರ 33.85 ರೂಪಾಯಿಯಂತೆ ನೀಡಲು ನಿರ್ಧಾರ ತೆಗೆದುಕೊಂಡಿತ್ತು.












Click it and Unblock the Notifications