ಮಸೀದಿ, ಚರ್ಚ್ ಕಟ್ಟುವ ಬಗ್ಗೆ ಎಂದಾದರೂ ಮಾತನಾಡಿದ್ದಾರಾ?
ಬೆಂಗಳೂರು, ಫೆ. 18: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಕೀಲಾಗಿದ್ದವರು. ಸುಪ್ರೀಂಕೋರ್ಟ್ ಸ್ಪಷ್ಟವಾದ ತೀರ್ಪು ಕೊಟ್ಟಿದೆ. ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಅವರಿಗೆ ನಂಬಿಕೆ ಇಲ್ಲವಾ? ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ. ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಕುರಿತು ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಕೊಟ್ಟಿರುವ ಹೇಳಿಕೆಗಳನ್ನು ಕಂದಾಯ ಸಚಿವ ಆರ್. ಅಶೋಕ್ ಅವರು ವಿಧಾನಸೌಧದಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.
ಇಷ್ಟ ಇದ್ದರೆ ದೇಣಿಗೆ ಕೊಡಲಿ, ಇಲ್ಲದೇ ಇದ್ದರೆ ಸುಮ್ಮನಿರಿ. ದೇಣಿಗೆ ಕೊಡಬಾರದು ಅಂತಾ ಯಾಕೆ ಹೇಳಬೇಕು? ಅವರು ರಾಮಮಂದಿರವಾದರೂ ಕಟ್ಟಲಿ, ಅಲ್ಲಾ ಮಂದಿರವಾದರೂ ಕಟ್ಟಲಿ. ಮಸೀದಿ, ಚರ್ಚ್ ಕಟ್ಟುವ ಬಗ್ಗೆ ಏನಾದರೂ ಮಾತನ್ನಾಡಿದ್ದಾರಾ? ಹಿಂದೂಗಳನ್ನು ಹಿಯಾಳಿಸೋದೆ ಅವರ ಚಾಳಿಯಾಗಿದೆ ಎಂದು ಸಿದ್ದರಾಮಯ್ಯ ಅವರ ಮೇಲೆ ಅಶೋಕ್ ಹರಿಹಾಯ್ದಿದ್ದಾರೆ.
ಬೆದರಿಕೆ ಹಾಕ್ತಾರೆ ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಮಾತನಾಡಿ, ರಾಮಮಂದಿರ ನಿರ್ಮಾಣಕ್ಕೆ ಕುಮಾರಸ್ವಾಮಿ ಒಂದು ಪೈಸೆಯನ್ನೂ ನೀಡಿಲ್ಲ. ದೇಣಿಗೆ ಲೆಕ್ಕದಲ್ಲಿ ಅವ್ಯವಹಾರ ಆಗಿದ್ದರೆ ತೋರಿಸಲಿ. ರಾಜ್ಯದಲ್ಲಿ ಯಾರಾದರೂ ಕುಮಾರಸ್ವಾಮಿ ಅವರಿಗೆ ಧಮಕಿ ಹಾಕಲು ಆಗುತ್ತಾ? ಅವರೇ ಇನ್ನೊಬ್ಬರಿಗೆ ಧಮಕಿ ಹಾಕುತ್ತಾರೆ. ಶಾಸಕರಿಗೆ ಅವರೇ ಧಮಕಿ ಹಾಕುತ್ತಾರೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರ ಪಕ್ಷದ ಶಾಸಕರು ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಟ್ಟಿದ್ದಾರೆ. ಅವರ ಮಾತನ್ನು ಅವರ ಪಕ್ಷದ ಶಾಸಕರೇ ಕೇಳುವುದಿಲ್ಲ. ಆರ್‌ಟಿಜಿಎಸ್, ಚೆಕ್, ಆನ್‌ಲೈನ್ ಮೂಲಕ ದೇಣಿಗೆ ನೀಡುವ ವ್ಯವಸ್ಥೆ ಇದೆ. ಅದ್ಯಾವುದರಲ್ಲಿಯೂ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಆರ್. ಅಶೋಕ್ ಹೇಳಿದ್ದಾರೆ.
ನಾನು ದೇಣಿಗೆ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಹೇಳಿಕೆ ನೀಡಿದ್ದರು. ಜೊತೆಗೆ ಲೆಕ್ಕ ಕೊಡುವಂತೆಯೂ ಅವರು ಆಗ್ರಹಿಸಿದ್ದರು. ಜೊತೆಗೆ ಒತ್ತಾಯ ಪೂರ್ವಕವ ಆಗಿ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಆರೋಪಿಸಿದ್ದರು.