ರೈತರಿಂದ ಮೆಕ್ಕೆಜೋಳ ಖರೀದಿ: ಜಿಲ್ಲಾಧಿಕಾರಿ ದಿವ್ಯ ಪ್ರಭು ಗುಡ್‌ನ್ಯೂಸ್
ಹುಬ್ಬಳ್ಳಿ - ಧಾರವಾಡ: ರೈತರಿಂದ ಮೆಕ್ಕೆಜೋಳ ಖರೀದಿಗೆ ಸಂಬಂಧಿಸಿದಂತೆ ಧಾರವಾಡದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ರೈತರಿಂದ ಮೆಕ್ಕೆಜೋಳ ಖರೀದಿಯಲ್ಲಿ ಪಾರದರ್ಶಕತೆ ಇರಲಿ. ದಲ್ಲಾಳಿ, ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದಿರುವ ಅವರು, ಗ್ರಾಮ ಹಾಗೂ ಹೋಬಳಿ ಮಟ್ಟದಲ್ಲಿ ರೈತರಿಗೆ ನೋಂದಣಿ ಮತ್ತು ಖರೀದಿ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ದಿವ್ಯ ಪ್ರಭು ಅವರು ನಿರ್ದೇಶನ ನೀಡಿದ್ದಾರೆ.
ರೈತರು ನೇರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಗೆ ಬಂದು ನೋಂದಣಿ ಮಾಡಿಕೊಳ್ಳಬೇಕು. ರೈತರಲ್ಲಿ ಮೆಕ್ಕೆಜೋಳ ಖರೀದಿ ಕುರಿತು ಅರಿವು ಮೂಡಿಸಿ, ಬ್ಯಾನರ್‍ಗಳನ್ನು ಅಳವಡಿಸಬೇಕು. ರೈತರಿಂದ ಮೆಕ್ಕೆಜೋಳ ಖರೀದಿ ಪಾರದರ್ಶಕವಾಗಿರಲಿ. ದಲ್ಲಾಳಿ ಅಥವಾ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಲಾಭ ರೈತರಿಗೆ ಸಿಗುವಂತೆ ಅಧಿಕಾರಿಗಳು ನಿಗಾವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಅಮರಗೋಳದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಆರಂಭಿಸಿರುವ ಮೆಕ್ಕೆಜೋಳ ನೋಂದಣಿ ಮತ್ತು ಖರೀದಿ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ರೈತರ ಹಿತದೃಷ್ಟಿಯಿಂದ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ವಯ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದೆ. ಖರೀದಿ ಕೇಂದ್ರಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು. ಮೆಕ್ಕೆಜೋಳ ಉತ್ಪನ್ನವನ್ನು ಜಿಲ್ಲಾ ವ್ಯಾಪ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ, ಉಪ ಮಾರುಕಟ್ಟೆಗಳಲ್ಲಿ ಯುನಿಫೈಡ್ ಮಾರ್ಕೆಟ್ ಪ್ಲಾಟ್‌ಫಾರ್ಮ್ (ಯುಎಂಪಿ) ಮೂಲಕ ಖರೀದಿ ಮಾಡಬೇಕು.
ಮೆಕ್ಕೆಜೋಳ ಉತ್ಪನ್ನ ಪ್ರಚಲಿತ ಮಾರುಕಟ್ಟೆಗಳಲ್ಲಿ ಸರಾಸರಿ ಮಾದರಿ ಧಾರಣಿ ಪ್ರತಿ ಕ್ವಿಂಟಾಲ್‍ಗೆ ರೂ.1900 ದರದಲ್ಲಿ ವಹಿವಾಟು ಆಗುತ್ತಿದ್ದು, ಮಾರುಕಟ್ಟೆ ಮಧ್ಯ ಪ್ರವೇಶ ದರ (ಎಂಐಎಸ್-Market Intervention scheme) ಪ್ರತಿ ಕ್ವಿಂಟಾಲ್‍ಗೆ ಗರಿಷ್ಠ ರೂ.2150 ನಿಗದಿ ಪಡಿಸಲಾಗಿದೆ. ಪ್ರತಿ ಎಕರೆಗೆ 12 ಕ್ವಿಂಟಾಲ್‍ನಂತೆ ಗರಿಷ್ಠ 50 ಕ್ವಿಂಟಾಲ್ ಮೆಕ್ಕೆಜೋಳವನ್ನು ಫ್ರುಟ್ಸ್ ತಂತ್ರಾಂಶದಲ್ಲಿನ ರೈತರು ಹೊಂದಿರುವ ಜಮೀನಿನ ವಿಸ್ತ್ರೀರ್ಣಕ್ಕನುಗುಣವಾಗಿ ಪ್ರತಿ ರೈತರಿಂದ ಖರೀದಿಸಬಹುದು ಎಂದಿದ್ದಾರೆ.
ಮೆಕ್ಕೆಜೋಳದ ಎಫ್.ಎ.ಕ್ಯೂ ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸಿ ದೃಢಪಡಿಸಿಕೊಳ್ಳಬೇಕು. ನೋಡಲ್ ಅಧಿಕಾರಿಗಳಾಗಿ ಉಪವಿಭಾಗಾಧಿಕಾರಿ ಹಾಗೂ ಎಲ್ಲ ತಹಶಿಲ್ದಾರರನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನೇಮಿಸಲಾಗಿದೆ. ಅವರು ಮೆಕ್ಕೆಜೋಳ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಕರ್ತವ್ಯದಲ್ಲಿ ಲೋಪದೋಷಗಳು ಕಂಡು ಬಂದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಬೆಲೆ ಕೊರತೆ ವ್ಯತ್ಯಾಸ ಪಾವತಿ (PDPS-Price deficiency payment scheme) (ಖರೀದಿ) ಕೇಂದ್ರಗಳನ್ನು ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ, ಧಾರವಾಡ, ಕಲಘಟಗಿ ಮತ್ತು ಕುಂದಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದಲ್ಲಿ ತೆರೆಯಲಾಗಿದೆ. ಮೆಕ್ಕೆಜೋಳ ಖರೀದಿ ಹಾಗೂ ರೈತರ ನೋಂದಣಿ ಕಾರ್ಯವು ಜನವರಿ 8ರಿಂದ ಆರಂಭವಾಗಿ ಫೆಬ್ರವರಿ 7, 2026ಕ್ಕೆ ಮುಕ್ತಾಯಗೊಳ್ಳಲಿದೆ. ಜಿಲ್ಲೆಯಲ್ಲಿ 1.85 ಲಕ್ಷ ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ಸರ್ಕಾರವು ಅನುಮತಿ ನೀಡಿದೆ. ಈಗಾಗಲೇ 120 ಜನ ರೈತರು ನೋಂದಣಿಯಾಗಿದ್ದು, 399 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಯಿಂದ ರೈತರಿಗೆ ಅನುಕೂಲವಾಗಬೇಕು. ಮಧ್ಯವರ್ತಿಗಳ ಹಾವಳಿ ಯಾವುದೇ ಕಾರಣಕ್ಕೂ ಕಂಡು ಬರಬಾರದು. ಉತ್ಪನ್ನ ಖರೀದಿಯ ಹಣ ನೇರವಾಗಿ ರೈತರ ಖಾತೆಗಳಿಗೆ ಜಮೆ ಆಗಬೇಕು. ಪ್ರತಿ ಹಂತದಲ್ಲೂ ಪಾರದರ್ಶಕತೆಯನ್ನು ಕಾಪಾಡಬೇಕಿದೆ. ಯುಎಂಪಿ ವೆಬ್ ಸೈಟ್‌ನಲ್ಲಿ ಯಾವುದೇ ರೀತಿಯ ತಾಂತ್ರಿಕ ದೋಷಗಳು ಉಂಟಾದಲ್ಲಿ ಮೇಲಾಧಿಕಾರಿಗಳಿಗೆ ತಿಳಿಸಬೇಕು. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಲಾಗುತ್ತದೆ ಎಂದೂ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.












Click it and Unblock the Notifications