Breaking: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ: ಅಮೃತ್ ಪೌಲ್ IPS ಬಂಧನ
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈಗಾಗಲೇ ಮೂರು ಸಲ ವಿಚಾರಣೆ ನಡೆಸಿರುವ ಸಿಐಡಿ ಅಧಿಕಾರಿಗಳು ಸೋಮವಾರ ನಾಲ್ಕನೇ ಬಾರಿ ವಿಚಾರಣೆ ಸಂದಭರ್ಭದಲ್ಲಿ ಅವರನ್ನು ಬಂಧನಕ್ಕೆ ಒಳಪಡಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಎರಡು ದಿನ ವಿಚಾರಣೆ ಎದುರಿಸಿದ್ದ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಮೂರನೇ ವಿಚಾರಣೆಗೆ ಗೈರು ಹಾಜರಾಗಿದ್ದರು. ಅನಾರೋಗ್ಯದ ಕಾರಣ ನೀಡಿ ವಿಚಾರಣೆಯಿಂದ ದೂರ ಉಳಿದಿದ್ದರು. ಮೇಲಾಧಿಕಾರಿಗಳ ಸಲಹೆ ಮೇರೆಗೆ ಪೌಲ್ ವಿಚಾರಣೆಗೆ ಲಭ್ಯವಿರುವ ಸಾಕ್ಷಾಧಾರಗಳ ಆಧಾರದ ಮೇಲೆ ಪ್ರಶ್ನಾವಳಿ ಸಿದ್ದಪಡಿಸಿಕೊಂಡಿದ್ದರು. ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ದೃಢಪಟ್ಟ ಕಾರಣ ಅವರನ್ನು ಬಂಧನ ಮಾಡಲಾಗಿದೆ.
ಮೊದಲ ಬಾರಿಗೆ ಹಿರಿಯ ಅಧಿಕಾರಿ ಬಂಧನ:
ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಎಡಿಜಿಪಿ ಹಂತದ ಅಧಿಕಾರಿಯೊಬ್ಬರನ್ನು ಬಂಧಿಸಿರುವುದು ಇದೇ ಮೊದಲು. ಈ ಮೂಲಕ ಅಕ್ರಮದ ತನಿಖೆಗೆ ಮತ್ತೆ ಜೀವ ಬಂದಂತಾಗಿದೆ.

ಪಿಎಸ್ಐ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿದಂತೆ ಹಲವು ಸಿಬ್ಬಂದಿ ಬಂಧನಕ್ಕೆ ಒಳಗಾಗಿದ್ದರು. ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಶ್ರೀಧರ್ ಮನೆಯಲ್ಲಿ ಒಂದೂವರೆ ಕೋಟಿ ರೂ. ಹಣ ಪತ್ತೆಯಾಗಿತ್ತು. ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್ ನಲ್ಲಿ ಅಕ್ರಮ ನಡೆದಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಪೊಲೀಸ್ ಕಮೀಷನರ್ ಹುದ್ದೆ ನಿರೀಕ್ಷೆಯಲ್ಲಿದ್ದ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಆಂತರಿಕ ಭದ್ರತೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಆರಂಭದಲ್ಲಿ ಅಮೃತ್ ಪೌಲ್ ಕೈವಾಡದ ಬಗ್ಗೆ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿರಲಿಲ್ಲ. ಡಿವೈಎಸ್ಪಿ ಶಾಂತಕುಮಾರ್ ಬಂಧನದ ಬಳಿಕ ನೇಮಕಾತಿ ವಿಭಾಗದಲ್ಲಿ ನಡೆದಿರುವ ಅಕ್ರಮ ಬೆಳಕಿಗೆ ಬಂದಿತ್ತು.
ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಅಮೃತ್ ಪೌಲ್ ಮಾರ್ಗದರ್ಶನದಲ್ಲಿಯೇ ಅಕ್ರಮ ನಡೆದಿದೆ. ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್ ನಲ್ಲಿಯೇ ಒಎಂಆರ್ ಶೀಟ್‌ಗಳನ್ನು ತಿದ್ದುಪಡಿ ಮಾಡಲಾಗಿದೆ. ಕಿಂಗ್‌ಪಿನ್‌ಗಳು ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಅವರ ಜತೆ ನಿರಂತರ ಸಂಪರ್ಕದಲ್ಲಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಸದ್ಯ ಬಂಧನಕ್ಕೆ ಒಳಗಾಗಿರುವ ಶಾಂತಕುಮಾರ್ ಮತ್ತು ನೇಮಕಾತಿ ವಿಭಾಗದ ಮುಖ್ಯಸ್ಥರ ನಡುವೆ ಅನೇಕ ದೂರವಾಣಿ ಕರೆಗಳ ವಿನಿಮಯ ಆಗಿರುವುದನ್ನು ಸಿಐಡಿ ಪತ್ತೆ ಮಾಡಿದೆ. ಹೀಗೆ ಸತತ ವಿಚಾರಣೆ ಎದುರಿಸಿರುವ ಅಮೃತ್ ಪೌಲ್ ಪಾಲಿಗೆ ಪಿಎಸ್ಐ ನೇಮಕಾತಿ ಅಕ್ರಮ ಜೈಲಿನ ಕಂಬಿ ಎಣಿಸುವಂತೆ ಮಾಡಿದೆ.












Click it and Unblock the Notifications