ಕೆಎಟಿ ಮೊರೆ ಹೋದ ಪಿಎಸ್‌ಐ ಅಭ್ಯರ್ಥಿಗಳು: ಅರ್ಜಿಯಲ್ಲಿ ಕೇಳಿದ್ದೇನು?
ಬೆಂಗಳೂರು, ಮೇ 4. ರಾಜ್ಯಾದ್ಯಂತ ತೀವ್ರ ಬಿರುಗಾಳಿ ಎಬ್ಬಿಸಿರುವ ಪಿಎಸ್ ಐಗಳ ನೇಮಕದಲ್ಲಿ ಅಕ್ರಮ ನಡೆದಿದೆ ಎನ್ನುವ ಪ್ರಕರಣ ಇದೀಗ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ- ಕೆಎಟಿ ಮೆಟ್ಟಿಲೇರಿದೆ.
ಪಿಎಸ್‌ಐ ನೇಮಕಾತಿಗಾಗಿ ನಡೆಸಲಾಗಿದ್ದ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಪಡಿಸಿ, ಮರು ಪರೀಕ್ಷೆ ನಡೆಸುವ ಸಂಬಂಧ ಏ.29ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಪವಿತ್ರ ಸೇರಿ 28ಕ್ಕೂ ಅಧಿಕ ಅಭ್ಯರ್ಥಿಗಳು ಕೆಎಟಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅವರು ಪರೀಕ್ಷೆ ರದ್ದುಪಡಿಸಿ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಕಳಂಕಿತ ಹಾಗೂ ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ಈ ಹಿಂದಿನ ಅಧಿಸೂಚನೆಯ ಪ್ರಕಾರವೇ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಒಳಾಡಳಿತ ಇಲಾಖೆ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ನೇಮಕ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡು ಅಂತಿಮ ಹಂತದಲ್ಲಿರುವಾಗ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಅದು ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾದ ಮತ್ತು ಕಾನೂನು ಬಾಹಿರ ನಿರ್ಧಾರವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಕರಣದ ಹಿನ್ನೆಲೆ:
545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು 2022ರ ಜ.21ರಂದು ಅಧಿಸೂಚನೆ ಹೊರಡಿಸಲಾಗಿತ್ತು. 3 ಹಂತದಲ್ಲಿ ನೇಮಕ ಪ್ರಕ್ರಿಯೆ ನಡೆಸಲು ಆದೇಶದಲ್ಲಿ ತಿಳಿಸಲಾಗಿತ್ತು. ಒಟ್ಟು 1.20 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದರು.
ಮೊದಲ ಹಂತದಲ್ಲಿ ದೈಹಿಕ ಪರೀಕ್ಷೆಯ ನಂತರ 54,104 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆಯಾದರು. ಬಳಿಕ ಲಿಖಿತ ಪರೀಕ್ಷೆ ನಡೆಯಿತು. ಅದರಲ್ಲಿ ಎರಡು ಪತ್ರಿಕೆ, ಒಂದು 100 ಅಂಕಗಳಿಗೆ ಮತ್ತು ಮತ್ತೊಂದು 150 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು. ನಂತರ 545 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನಾ ಕಾರ್ಯವೂ ನಡೆಯುತ್ತಿದೆ.
ಈ ಮಧ್ಯೆ, ಕಲಬುರಗಿಯ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯ ವೇಳೆ ಅಕ್ರಮ ನಡೆದಿದೆ ಎಂಬ ದೂರು ಕೇಳಿಬಂದಿತು. ಆ ಬಗ್ಗೆ ವ್ಯಾಪಕ ಪ್ರಾಥಮಿಕ ತನಿಖೆ ನಡೆಸಿದೆ ಅದರಲ್ಲಿ ಸತ್ಯಾಂಶವಿರುವುದ ಸಂಗತಿ ಬಯಲಾಯಿತು. ಆ ಸಂಬಂಧ 22 ಅಭ್ಯರ್ಥಿಗಳ ವಿರುದ್ಧ ಎಫ್ ಐಅರ್ ದಾಖಲಾಗಿ ಹಲವು ಅಭ್ಯರ್ಥಿಗಳು ಮತ್ತು ರಾಜಕೀಯ ಮುಖಂಡರು ಬಂಧನಕ್ಕೆ ಒಳಗಾಗಿದ್ದಾರೆ.
ನೇಮಕ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂ. ಹಣಕಾಸು ವ್ಯವಹಾರ ಹಾಗೂ ಭಾರಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸರಕಾರ ಏ.29ರಂದು ನೇಮಕ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಹೊಸದಾಗಿ ಮರು ಪರೀಕ್ಷೆ ನಡೆಸುವುದಾಗಿ ಆದೇಶಿಸಿದೆ. ಇದರಿಂದಾಗಿ ಆಯ್ಕೆ ಯಾದ ಅಭ್ಯರ್ಥಿಗಳು ಕೆಎಟಿ ಕದ ತಟ್ಟಿದ್ದಾರೆ.












Click it and Unblock the Notifications