ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಹತ್ಯೆ; ಕೊಲೆಗಡುಕರನ್ನು ಗಲ್ಲಿಗೇರಿಸಲಿ ಎಂದ ಮಾಜಿ ಸಿಎಂ
ಬೆಂಗಳೂರು, ಮೇ 16: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಹತ್ಯೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದ್ದಕ್ಕೆ ಸಾಕ್ಷಿ. ಇಂತಹ ಹೇಯ ಕೃತ್ಯ ಯಾರೇ ಮಾಡಿರಲಿ ಅವರನ್ನು ತಂದು ಗಲ್ಲಿಗೇರಿಸಿ, ಶಿಕ್ಷೆ ಕೊಡಿಸಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಹಾಡಹಗಲೇ ಇಂತಹ ಘೋರ ಕೃತ್ಯ ನಡೆದರೂ ಪೊಲಿಸರು ರಾಜಕಾರಣದ ಪ್ರಕರಣಗಳು ಜಾತಿನಿಂದನೆ ಪ್ರಕರಣ ದಾಖಲಿಸುವುದು ಕ್ಲಬ್ ನಡೆಸುವುದರಲ್ಲಿ ಮಗ್ನರಾಗಿದ್ದಾರೆ. ಈ ರೀತಿಯಲ್ಲಿ ಕೊಲೆ, ಅತ್ಯಾಚಾರಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ರಾಜ್ಯ ಸರಕಾರವೇ ಮುಂದೆ ನಿಂತು ಕುಮ್ಮಕ್ಕು ನೀಡುವುದನ್ನು ನಾನು ನೋಡಿರಲಿಲ್ಲ. ಇದೊಂದು ಜನವಿರೋಧಿ ಸರಕಾರ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರಕಾರ ಕೇಂದ್ರ ಸರಕಾರ ನೀಡಿದ ಬರ ಪರಿಹಾರದಲ್ಲಿ 2 ಸಾವಿರ ರೂ. ಕಡಿತ ಮಾಡಿ ನೀಡುತ್ತಿದ್ದು, ಬರ ಪರಿಹಾರವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿ ರೈತರಿಗೆ ದೊಡ್ಡ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ರಾಜ್ಯ ಸರಕಾರ ಬರ ಪರಿಹಾರವಾಗಿ ಕೊಟ್ಟಿದ್ದೆ ಜುಜಬಿ 2 ಸಾವಿರ, ಈಗ ಅದನ್ನೇ ಕಟ್ ಮಾಡಿ ರೈತರ ಖಾತೆಗೆ ಹಣ ನೀಡುತ್ತಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಪರಿಹಾರ ನೀಡಿರುವ ಹಣವನ್ನು ರೈತರ ಸಾಲಕ್ಕೆ ಹೊಂದಾಣಿಕೆ ಮಾಡುತ್ತಿದ್ದಾರೆ. ರೈತರು ಸಂಕಷ್ಟದಲ್ಲಿ ಇದ್ದಾರೆ ಎನ್ನುವ ಕಾರಣಕ್ಕೆ ಪರಿಹಾರ ನೀಡುವುದು. ಅದನ್ನು ಸಾಲಕ್ಕೆ ಹೊಂದಾಣಿಕೆ ಮಾಡಿದರೆ, ಅದು ಹೇಗೆ ಪರಿಹಾರವಾಗುತ್ತದೆ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರಕ್ಕೆ ರೈತರಿಗೆ ಸಹಾಯ ಮಾಡುವ ಮನಸಿದ್ದರೆ, ಕಾಂಗ್ರೆಸ್ ಚುನಾವಣಾ ಘೋಷಣಾ ಪತ್ರದಲ್ಲಿ ಹೇಳಿರುವಂತೆ ರೈತರ ಸಾಲ ಮನ್ನಾ ಮಾಡಲಿ, ಕಾಂಗ್ರೆಸ್ ಘೋಷಣಾ ಪತ್ರ ಕರ್ನಾಟಕದಿಂದ ಪ್ರಾರಂಭವಾಗಲಿ ಎಂದು ಆಗ್ರಹಿಸಿದರು.
ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ಎರಡು ಪಟ್ಟು ಪರಿಹಾರ ನೀಡಿದ್ದೇವು. ಇವರು ಪರಿಹಾರವಾಗಿ ಕೊಟ್ಟಿರುವುದೇ ಜುಜುಬಿ ಎರಡು ಸಾವಿರ ರೂಪಾಯಿ, ಅದನ್ನೂ ಕಡಿತಗೊಳಿಸಿ ರೈತರಿಗೆ ನೀಡುತ್ತಿರುವುದು ಘೋರ ಅನ್ಯಾಯ, ಇದನ್ನು ರಾಜ್ಯ ಸರ್ಕಾರ ತಕ್ಷಣವೇ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಹುಬ್ಬಳ್ಳಿಯಲ್ಲಿ ಯುವತಿ ಕೊಲೆ: ಲಕ್ಷ್ಮೀ ಹೆಬ್ಬಾಳಕರ್ ದಿಗ್ಭ್ರಮೆ
ಹುಬ್ಬಳ್ಳಿಯ ವೀರಾಪುರ ಓಣಿಯ ಯುವತಿ ಕೊಲೆ ಪ್ರಕರಣದ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಆರೋಪಿಯ ಬಂಧನ ಸೇರಿದಂತೆ ತುರ್ತು ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ನೇಹಾ ಕೊಲೆ ಪ್ರಕರಣ ಮರೆಯುವ ಮುನ್ನವೇ ಮತ್ತೊಂದು ಹೇಯ ಕೃತ್ಯ ನಡೆದಿದೆ. ಇದೊಂದು ಅತ್ಯಂತ ದುರದೃಷ್ಟಕರ ಘಟನೆ. ಪ್ರೀತಿ, ಪ್ರೇಮದ ಹೆಸರಿನಲ್ಲಿ ಯುವ ಜನಾಂಗ ಇಂತಹ ದುಷ್ಕೃತ್ಯಕ್ಕಿಳಿಯುತ್ತಿರುವುದು ತೀವ್ರ ನೋವುಂಟು ಮಾಡಿದೆ.
ಈ ಪ್ರಕರಣದ ಸುದ್ದಿ ತಿಳಿದ ತಕ್ಷಣ ಹಿರಿಯ ಅಧಿಕಾರಿಗಳ ಜೊತೆಗೆ ಮಾತನಾಡಿ, ಘಟನೆ ಕುರಿತು ತುರ್ತು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಆರೋಪಿಯ ಬಂಧನದ ಜೊತೆಗೆ, ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು. ಯುವತಿಯ ಕುಟುಂಬದ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.












Click it and Unblock the Notifications